ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮತಗಣಿತ’ದಲ್ಲಿ ಗ್ಯಾರಂಟಿ ಸೆಳೆತ

ಚಿಕ್ಕಬಳ್ಳಾಪುರ ಲೋಕಸಭೆ; ಯಾವ ಕ್ಷೇತ್ರದಲ್ಲಿ ಯಾರಿಗೆ ಎಷ್ಟು ಮತ–ಗರಿಗೆದರಿದ ಲೆಕ್ಕಾಚಾರ
Published 28 ಏಪ್ರಿಲ್ 2024, 6:14 IST
Last Updated 28 ಏಪ್ರಿಲ್ 2024, 6:14 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಮಳೆ ನಿಂತಿದೆ. ಹನಿಗಳು ಬೀಳುತ್ತಿದೆ ಎನ್ನುವಂತಿದೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸ್ಥಿತಿ. ಮತದಾನದ ತರುವಾಯ ಕ್ಷೇತ್ರದಲ್ಲಿ ಈಗ ಸೋಲು ಗೆಲುವಿನ ಚರ್ಚೆ ಜೋರಾಗಿದೆ. ಅದೂ ವಿಧಾನಸಭಾ ಕ್ಷೇತ್ರವಾರು ಮತಗಳಿಕೆಯ ಪಟ್ಟಿಗಳನ್ನು ಹಿಡಿದು ನಮಗೆ ಈ ಕ್ಷೇತ್ರದಲ್ಲಿ ಇಷ್ಟು ಮತ ದೊರೆಯುತ್ತದೆ, ಲೀಡ್ ಬರುತ್ತದೆ, ಆ ಕ್ಷೇತ್ರದಲ್ಲಿ ಇಷ್ಟು ಲೀಡ್ ಬರುತ್ತದೆ ಎಂದು ಮುಖಂಡರು ಲೆಕ್ಕಾಚಾರ ಹಾಕುತ್ತಿದ್ದಾರೆ. 

ಅಂದಹಾಗೆ ಕಳೆದ ಲೋಕಸಭೆ ಚುನಾವಣೆ ಮತ್ತು ಈ ಬಾರಿಯ ಚುನಾವಣೆಯಲ್ಲಿ ಕ್ಷೇತ್ರದ ಮತದಾನದಲ್ಲಿ ಹೇಳಿಕೊಳ್ಳುವಂತಹ ಅಂತರವೇನೂ ಇಲ್ಲ. 2019ರಲ್ಲಿ ಶೇ 76.61 ಮತದಾನವಾಗಿದ್ದರೆ ಈ ಬಾರಿ ಶೇ 76.98ರಷ್ಟು ಮತದಾನವಾಗಿದೆ.

ಲೋಕಸಭೆ ಚುನಾವಣೆಯ ಮತದಾನದ ಜೊತೆಗೆ 11 ತಿಂಗಳ ಹಿಂದೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಮೂರು ಪಕ್ಷಗಳು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಂಟೂ ವಿಧಾನಸಭಾ ಕ್ಷೇತ್ರಗಳಲ್ಲಿ ಗಳಿಸಿದ ಮತಗಳ ಪ್ರಮಾಣದ ಬಗ್ಗೆಯೂ ಚರ್ಚೆಗಳು ಗರಿಗೆದರಿವೆ. 2019ರ ಚುನಾವಣೆಯಲ್ಲಿ ಪಡೆದ ಮತಗಳು, 2023ರ ವಿಧಾನಸಭೆ ಚುನಾವಣೆಯಲ್ಲಿ ಪಡೆದ ಮತಗಳು...ಈಗ ಆಗಿರುವ ಮತದಾನದ ಪ್ರಮಾಣವನ್ನು ತಾಳೆ ಹಾಕುವ ಲೆಕ್ಕಾಚಾರಗಳು ಜೋರಾಗಿ ನಡೆದಿವೆ.  

2023ರ ಮೇ ನಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಎಂಟೂ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷವು 6,10,229 ಮತಗಳನ್ನು ಪಡೆದಿದೆ. ಬಿಜೆಪಿ 5,40,476 ಮತ್ತು ಜೆಡಿಎಸ್ 2,35,389 ಮತಗಳನ್ನು ಪಡೆದಿವೆ.  

ಈ ಕೂಡು ಕಳೆಯುವ ‘ಮತಗಣಿತ’ದ ಒಂದೆಡೆಯಾದರೆ ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್‌ಗೆ ತಂದುಕೊಡುವ ಲಾಭದ ಬಗ್ಗೆಯೂ ಚರ್ಚೆಗಳು ಬಿರುಸಾಗಿವೆ. ‘ಗ್ಯಾರಂಟಿ’ಯು ಮಹಿಳೆಯರ ಮತಗಳನ್ನು ಕಾಂಗ್ರೆಸ್ ಪರವಾಗಿ ಸೆಳೆದಿದೆ. ಆದರೆ ಅದು ಯಾವ ಪ್ರಮಾಣದಲ್ಲಿ ಎನ್ನುವ ಜಾಡು ಹಿಡಿಯುವುದು ಕಷ್ಟ.

ರಾಜ್ಯ ಕಾಂಗ್ರೆಸ್ ಸರ್ಕಾರ ಗೃಹಲಕ್ಷ್ಮಿ ಯೋಜನೆಯಡಿ ನೀಡುತ್ತಿರುವ ₹ 2 ಸಾವಿರದ ಪರಿಣಾಮ ಬಹುಸಂಖ್ಯೆಯ ಮಹಿಳೆಯರು ತಮಗೆ ಮತ ನೀಡಿದ್ದಾರೆ ಎನ್ನುವ ವಿಶ್ವಾಸ ಕಾಂಗ್ರೆಸ್‌ನಲ್ಲಿದೆ. 

ಜೊತೆಗೆ ಸಮುದಾಯವಾರು ಮತಗಳ ಗಳಿಕೆಯ ಲೆಕ್ಕಾಚಾರಗಳು ಸಹ ಗರಿಗೆದರಿವೆ. ಈ ಸಮುದಾಯದ ಗರಿಷ್ಠ ಸಂಖ್ಯೆಯ ಮತಗಳು ‘ಕೈ’ ಪಾಲಾಗಿವೆ. ಈ ಸಮುದಾಯದ ಬಹುಸಂಖ್ಯಾತ ಮತದಾರರು ಕಮಲ ಬೆಂಬಲಿಸಿದ್ದಾರೆ. ಹೀಗೆ ಕ್ಷೇತ್ರದ ಎಲ್ಲೆಡೆ ನಡೆಯುತ್ತಿರುವ ಚರ್ಚೆಗಳಲ್ಲಿ ಈ ವಿಚಾರಗಳು ಸಹ ಪ್ರಮುಖವಾಗಿ ನುಸುಳುತ್ತಿದೆ.

ಕಾಂಗ್ರೆಸ್ ಗ್ಯಾರಂಟಿ, ಮೋದಿ ಅಲೆ, ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯ ಬಲ, ಜಾತ್ಯತೀತವಾದ ಮತಗಳ ಒಗ್ಗಟ್ಟು, ಅಹಿಂದ ಮತಗಳ ಧ್ರುವೀಕರಣ, ವಿಭಜನೆ, ಒಕ್ಕಲಿಗ ಮತಗಳ ಧ್ರುವೀಕರಣ, ವಿಭಜನೆ, ಹಣ, ಪ್ರಭಾವ...ಹೀಗೆ ನಾನಾ ಅಂಶಗಳ ಅಡಿಯಲ್ಲಿ ಚರ್ಚೆ ಜೋರಾಗಿದೆ. 

ಜೂ.4ರವರೆಗೆ ಫಲಿತಾಂಶ ಹೊರ ಬೀಳುವವರೆಗೂ ಈ ಚರ್ಚೆ ನಡೆಯುತ್ತಲೇ ಇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT