ಶುಕ್ರವಾರ, 23 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಣ್ಯ ಇಲಾಖೆ ನರ್ಸರಿ ಜಲಾವೃತ

ಸಸಿಗಳ ಪೋಷಣೆಗೆ ಅನ್ಯ ಸ್ಥಳ ನೀಡಲು ಅರಣ್ಯ ವಲಯ ಕೋರಿಕೆ
Last Updated 29 ಸೆಪ್ಟೆಂಬರ್ 2022, 6:02 IST
ಅಕ್ಷರ ಗಾತ್ರ

ಗೌರಿಬಿದನೂರು: ಕಳೆದ ಕೆಲ ದಿನಗಳ ಹಿಂದೆ ಸುರಿದ ಭಾರಿ ಮಳೆಯಿಂದಾಗಿ ಇಲ್ಲಿನ ಮುದುಗಾನಕುಂಟೆ ಗಂಗಾಭಾಗೀರಥಿ ದೇವಸ್ಥಾನದ ಬಳಿಯಿರುವ ಕೆರೆಯು ಭರ್ತಿಯಾಗಿದ್ದು, ಇದರಿಂದ ಸಮೀಪದಲ್ಲೇ ಇದ್ದ ಸಾಮಾಜಿಕ ಅರಣ್ಯವಿಭಾಗ ನರ್ಸರಿ ಸಂಪೂರ್ಣವಾಗಿ ಮುಳುಗಡೆಯಾಗಿದೆ.

ಕೆರೆಯ ಸಮೀಪದಲ್ಲಿರುವ ಸರ್ಕಾರಿ ಭೂಮಿಯಲ್ಲಿ ದಶಕಗಳ ಕಾಲದಿಂದಲೂ ಸ್ಥಳೀಯ ಸಾಮಾಜಿಕ ‌ಅರಣ್ಯವಲಯದ ನರ್ಸರಿಯಲ್ಲಿ ವಿವಿಧ ತಳಿಯ ಬೀಜಗಳನ್ನು ಪಾಕೆಟ್‌ನಲ್ಲಿ ಬಿತ್ತಿ ಸಸಿಗಳನ್ನು ಬೆಳೆಸಲಾಗುತ್ತಿತ್ತು. ಬಳಿಕ ಅವುಗಳನ್ನು ತಾಲ್ಲೂಕಿನ ವಿವಿಧೆಡೆ ನರೇಗಾ ಯೋಜನೆ ಮೂಲಕ ಸಮುದಾಯ ಕಾರ್ಯಗಳಲ್ಲಿ ಬಳಸಲು ಪೂರೈಸಲಾಗುತ್ತಿತ್ತು.

ಜೊತೆಗೆಸ್ಥಳೀಯ ‌ರೈತರ ಜಮೀನಿನಲ್ಲಿ ಬೆಳೆಸಲು ಗಿಡಗಳನ್ನು ವಿತರಣೆ ಮಾಡಲಾಗುತ್ತಿತ್ತು. ವರ್ಷದ 10 ತಿಂಗಳ ಕಾಲ ಜೋಪಾನವಾಗಿ ಬೆಳೆಸಿ ಮುಂಗಾರು ಆರಂಭದಲ್ಲಿ ಗಿಡಗಳನ್ನು ನಿಗದಿತ ಸ್ಥಳದಲ್ಲಿ ಬೆಳೆಸಲು ಇಲ್ಲಿನ ಸಿಬ್ಬಂದಿ ಶ್ರಮಿಸುತ್ತಿದ್ದರು. ಆದರೆ ಈ ಬಾರಿ ಮುಂಗಾರು ಆರಂಭದ ದಿನಗಳಲ್ಲಿ ‌ಮತ್ತು ನಂತರದಲ್ಲಿ ಉತ್ತಮ‌ ಮಳೆಯಾದ ಕಾರಣ ಸಮೀಪದಲ್ಲಿದ್ದ ಕೆರೆಯು ಮಳೆ ನೀರಿನಿಂದ ತುಂಬಿದ್ದು, ಅದರ ಅಂಚಿನಲ್ಲಿದ್ದ ನರ್ಸರಿ ಸಂಪೂರ್ಣವಾಗಿ ಜಲಾವೃತ
ಗೊಂಡಿದೆ.

ಈ ವಿಚಾರವಾಗಿ ಸಾಮಾಜಿಕ ಸಾಮಾಜಿಕ ಅರಣ್ಯ ಇಲಾಖೆಯ ವಲಯ‌ ಅಧಿಕಾರಿ ಆರ್.ದಿವ್ಯ ಪ್ರತಿಕ್ರಿಯಿಸಿ, ಗಿಡಗಳನ್ನು ಬೆಳೆಸಲು ಆಸರೆಯಾಗಿದ್ದ ಮುದುಗಾನ ಕುಂಟೆಯ‌ ನರ್ಸರಿಯು ಕೆರೆಯ ಹಿನ್ನೀರಿನಲ್ಲಿ ಮುಳುಗಿದೆ. ಇದರಿಂದಾಗಿ ಕೆಲವು ಸಣ್ಣ ಗಿಡಗಳಿಗೆ ಹಾನಿಯಾಗಿದ್ದು, ಈ ಸಂಬಂಧ ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದೇವೆ ಎಂದರು.

ಮುಂದಿನ ವರ್ಷಕ್ಕೆ ಗಿಡ ಬೆಳೆಸಲು ಪರ್ಯಾಯ ವ್ಯವಸ್ಥೆಗೆ ಮುಂದಾಗಿದ್ದೇವೆ. ಸಮೀಪವಿರುವ ಸರ್ಕಾರಿ ಭೂಮಿಯಲ್ಲಿ ಗಿಡಗಳನ್ನು ಬೆಳೆಸಿ ಪೋಷಿಸಲು ಸ್ಥಳಾವಕಾಶವಿದ್ದು, ಇದಕ್ಕೆ ಅವಕಾಶ ನೀಡುವಂತೆ ಸ್ಥಳೀಯ ತಹಶೀಲ್ದಾರ್‌ಗೆ ಮನವಿ ಮಾಡಲಾಗಿದೆ.

ಅವರ ಆದೇಶ ಮತ್ತು ಸ್ಥಳೀಯ ಶಾಸಕರ ಸೂಚನೆಗೆ ಕಾಯುತ್ತಿದ್ದೇವೆ. ಪ್ರಸ್ತುತ ಬೊಮ್ಮಶೆಟ್ಟಹಳ್ಳಿಯಲ್ಲಿರುವ ಇಲಾಖೆಯ ನರ್ಸರಿಯಲ್ಲಿ ಗಿಡಗಳನ್ನು ಬೆಳೆಸಲು ಮುಂದಾಗಿದ್ದೇವೆ ಎಂದರು.

ಸೇವಾ ಪ್ರತಿಷ್ಠಾನ ಕಾರ್ಯ ಶ್ಲಾಘನೀಯ:ದಶಕಗಳ ಕಾಲ ಬರಿದಾಗಿದ್ದ ಮುದುಗಾನಕುಂಟೆ ಕೆರೆಯನ್ನು ಗೌರಿಬಿದನೂರು ಸೇವಾ ಪ್ರತಿಷ್ಠಾನ ಪುನಶ್ಚೇತನಗೊಳಿಸಿದೆ. ಇದರಿಂದಾಗಿ ಬತ್ತಿದ್ದ ಕೆರೆಯು ಈ‌ ಬಾರಿ ತುಂಬಿ ಕೋಡಿ ಹರಿದಿದೆ.

ಪರಿಸರ ಸಂರಕ್ಷಣೆಗೆ ನರ್ಸರಿ ಅಗತ್ಯ

ತಾಲ್ಲೂಕಿನ ವಿವಿಧೆಡೆ ಸಾಮಾಜಿಕ ಅರಣ್ಯ ಇಲಾಖೆಯ ವತಿಯಿಂದ ಸಾಕಷ್ಟು ನೆಡುತೋಪು ಹಾಗೂ ಸರ್ಕಾರಿ ಭೂಮಿಯಲ್ಲಿ ಗಿಡ ನೆಡುವ ಕಾಮಗಾರಿಗಳು ನಡೆದಿದ್ದವು. ಇದು ಪರಿಸರ ಸಂರಕ್ಷಣೆಗೆಸಹಕಾರಿಯಾಗಿತ್ತು. ಮುಂದಿನ ದಿನಗಳಲ್ಲಿ ಮತ್ತಷ್ಟು ಗಿಡಗಳನ್ನು ನೆಟ್ಟು ಪೋಷಿಸಿ ಪರಿಸರ ‌ಸಂರಕ್ಷಣೆ ಮಾಡಲು ಹೆಚ್ಚು ಗಿಡಗಳ ಅವಶ್ಯಕತೆಯಿದೆ ಎಂದು ಸ್ಥಳೀಯರು ಹೇಳಿದ್ದಾರೆ.

ಈ ನಿಟ್ಟಿನಲ್ಲಿ ತಹಶೀಲ್ದಾರ್ ಮತ್ತು ಶಾಸಕರು ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಮುದುಗಾನಕುಂಟೆಯಲ್ಲಿನ ಸರ್ಕಾರಿ ಜಮೀನಿನಲ್ಲಿ ಸಾಮಾಜಿಕ ಅರಣ್ಯ ವಲಯ ಗಿಡ ಬೆಳೆಸಲು ಅವಕಾಶ ಕಲ್ಪಿಸಬೇಕು ಎಂದು ಅವರು ಪ್ರತಿಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT