ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಂದಾಯ ಸಚಿವರನ್ನು ಭೇಟಿ ಮಾಡಿದ ರೈತರ ನಿಯೋಗ

Published 28 ಮೇ 2024, 14:29 IST
Last Updated 28 ಮೇ 2024, 14:29 IST
ಅಕ್ಷರ ಗಾತ್ರ

ಗೌರಿಬಿದನೂರು: ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಬೆಳೆ ವಿಮೆ ಸಿಗದೆ ಅನ್ಯಾಯಕ್ಕೆ ಒಳಗಾಗಿರುವ ತಾಲ್ಲೂಕಿನ ರೈತರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ತಾಲ್ಲೂಕು ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ರೈತರ ನಿಯೋಗ ಸೋಮವಾರ ಬೆಂಗಳೂರಿನಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಸಂಘಟನೆಯ ತಾಲ್ಲೂಕು ಅಧ್ಯಕ್ಷ ಜಿ.ವಿ.ಲೋಕೇಶ್ ಗೌಡ ಮಾತನಾಡಿ, ಫಸಲ್ ಭೀಮಾ ಯೋಜನೆಯಡಿ 2023-24ನೇ ಸಾಲಿನಲ್ಲಿ ತಾಲ್ಲೂಕಿನ 20 ಸಾವಿರಕ್ಕೂ ಅಧಿಕ ರೈತರು ವಿಮೆ ಕಟ್ಟಿದ್ದಾರೆ. ಆದರೆ, ಬೆಳೆ ಗುಣಮಟ್ಟ ಹಾಗೂ ಇಳುವರಿ ಮಾಡುವಾಗ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಒಂಬತ್ತು ಪಂಚಾಯಿತಿಗಳ 100ಕ್ಕೂ ಹೆಚ್ಚು ಗ್ರಾಮದ ರೈತರಿಗೆ ಬೆಳೆ ವಿಮೆ ದೊರೆಯದೆ ನಷ್ಟ ಅನುಭವಿಸುತ್ತಿದ್ದಾರೆ ಎಂದರು.

ಜಿಲ್ಲೆಯ ಎಲ್ಲಾ ತಾಲ್ಲೂಕುಗಳನ್ನು ಬರ ಪೀಡಿತ ಎಂದು ರಾಜ್ಯ ಸರಕಾರವೇ ಘೋಷಿಸಿದೆ. ಆದರೆ, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಶೇ 80ರಷ್ಟು ಬೆಳೆ ಇಳುವರಿಯಾಗಿದೆ ಎಂದು ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿರುವುದರಿಂದ ಬರದಿಂದ ನಷ್ಟ ಅನುಭವಿಸಿರುವ ರೈತರಿಗೆ ವಿಮೆ ಪಾವತಿಯಾಗುತ್ತಿಲ್ಲ. ಈ ಕುರಿತು ರೈತರು ಹೋರಾಟ ನಡೆಸಿ ಜಿಲ್ಲಾಧಿಕಾರಿ ಪಿ.ರವೀಂದ್ರ ಅವರಿಗೆ ಮನವಿ ಸಲ್ಲಿಸಲಾಗಿತ್ತು. ನೆಪಕ್ಕೆ ಮಾತ್ರ ಅಧಿಕಾರಿಗಳ ಸಮಿತಿ ರಚಿಸಲಾಗಿದೆ. ಆದರೆ, ಜಿಲ್ಲಾಡಳಿತ ಯಾವುದೇ ರೀತಿಯ ಶಿಸ್ತಿನ ಕ್ರಮ ಜರುಗಿಸಿಲ್ಲ. ಆದ್ದರಿಂದ ಜಿಲ್ಲಾಡಳಿತದ ಅಧಿಕಾರಿಗಳೊಂದಿಗೆ ತಾವು ಚರ್ಚಿಸಿ ರೈತರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಮನವಿ ಮಾಡಿದರು.

ಮನವಿ ಸ್ವೀಕರಿಸಿ ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಹಾಗೂ ಜಿಲ್ಲಾಧಿಕಾರಿಗಳಿಂದ ವಿಸ್ಕೃತ ವರದಿ ಪಡೆಯುದು ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಶಶಿಕುಮಾರ್, ತಾರಾನಾಥ್, ನಂಜೇಗೌಡ, ಗೋವಿಂದರಾಜು, ಹರಿಪ್ರಕಾಶ್, ಬಾಬು, ನಾರಾಯಣಪ್ಪ ಮಹೇಶ್, ಗಂಗಾಧರಪ್ಪ ಸೇರಿದಂತೆ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT