ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌರಿಬಿದನೂರು: ರೈತನ ಮಗಳ ಚಿನ್ನದ ಸಾಧನೆ

ಶ್ವೇತಾಗೆ ಕೃಷಿ ವಿಜ್ಞಾನಿಯಾಗುವ ಆಸೆ
Last Updated 8 ಮಾರ್ಚ್ 2021, 5:18 IST
ಅಕ್ಷರ ಗಾತ್ರ

ಗೌರಿಬಿದನೂರು: ಬಡತನವನ್ನು ಮೆಟ್ಟಿ ನಿಂತು ಸಮಸ್ಯೆಗಳಿಗೆ ಅಂಜದೆ ತನ್ನ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಕಾಲೇಜು ವ್ಯಾಸಂಗವನ್ನು ಸ್ಥಳೀಯ ಸರ್ಕಾರಿ ಶಾಲೆಗಳಲ್ಲೆ ಓದಿ ಕೃಷಿ ವಿಸ್ತರಣಾ ವಿಭಾಗದಲ್ಲಿ ಪಿಎಚ್.ಡಿ ಪದವಿ ಪಡೆಯುವ ಜತೆಗೆ 5 ಚಿನ್ನದ ಪದಕಗಳನ್ನು ತನ್ನದಾಗಿಸಿಕೊಂಡು ತಾಯಿಗೆ ತಕ್ಕ ಮಗಳಾಗಿ ಇಡೀ ತಾಲ್ಲೂಕಿಗೆ ಮಾದರಿಯಾಗಿದ್ದಾರೆ ಎನ್.ವಿ. ಶ್ವೇತಾ.

ಅವರದು ತಾಲ್ಲೂಕಿನ ಅಲಕಾಪುರ ಗ್ರಾ.ಪಂ ವ್ಯಾಪ್ತಿಯ ನಂದಿಗಾನಹಳ್ಳಿ. 1ರಿಂದ 12 ನೇ ತರಗತಿವರೆಗಿನ ಶಿಕ್ಷಣವನ್ನು ಸರ್ಕಾರಿ ಶಾಲೆಗಳಲ್ಲೆ ಮುಗಿಸಿದರು. ತನ್ನ ಪೋಷಕರೊಂದಿಗೆ ಕೃಷಿ ಕಾರ್ಯಗಳಲ್ಲಿ ಆಸಕ್ತಿಯಿಂದ ಕಾರ್ಯ ನಿರ್ವಹಿಸಿದ್ದರು. ಆಕೆಗೆ ರೈತರು ಈ ಕ್ಷೇತ್ರದಲ್ಲಿ ಎದುರಿಸುವ ನೈಜ ಸಮಸ್ಯೆಗಳ ಬಗ್ಗೆ ಅರಿವಿತ್ತು. ಭವಿಷ್ಯದಲ್ಲಿ ಇವರ ಕಷ್ಟಕ್ಕೆ ಪ್ರತಿಫಲವಾಗಿ ಏನನ್ನಾದರೂ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಆಸಕ್ತಿಯಿಂದ ಪದವಿಪೂರ್ವ ಶಿಕ್ಷಣದ ಜತೆಗೆ ಕೃಷಿ ವಿಜ್ಞಾನ ವಿಭಾಗದಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿಯನ್ನು ಪಡೆದು ಬಳಿಕ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ‘ಕೃಷಿ ವಿಸ್ತರಣಾ ವಿಭಾಗ’ದಲ್ಲಿ ಪಿಎಚ್.ಡಿ ಪದವಿ ಪಡೆದರು. ವಿಶ್ವವಿದ್ಯಾಲಯವು ಇವರ ಸಾಧನೆಗೆ ಪ್ರತೀಕವಾಗಿ ಚಿನ್ನದ ಪದಕಗಳೊಂದಿಗೆ ಪ್ರಮಾಣ ಪತ್ರವನ್ನು ನೀಡಿ ಗೌರವಿಸಿದೆ.

ತನ್ನ ಬಾಲ್ಯದಲ್ಲಿ ತಂದೆ ಮತ್ತು ತಾಯಿಯ ಕನಸಿನಂತೆ ಕಷ್ಟಪಟ್ಟು ಓದಿ ಕೃಷಿ ಕ್ಷೇತ್ರದಲ್ಲಿ ಮಹತ್ತರವಾದ ಸಾಧನೆ ಮಾಡಿದ್ದಾರೆ. ಮುಂದೆ ಕೃಷಿ ವಿಭಾಗದಲ್ಲಿ ಮತ್ತಷ್ಟು ಅಭ್ಯಾಸ ನಡೆಸಿ ವಿಜ್ಞಾನಿಯಾಗುವ ಮೂಲಕ ರೈತರ ಬೆನ್ನೆಲುಬಾಗಿ ನಿಲ್ಲುವ ಮಹತ್ತರವಾದ ಕನಸು ಶ್ವೇತಾ ಅರದ್ದಾಗಿದೆ‌. ಆದರೆ, ಮಗಳ ಈ ಸಾಧನೆಯನ್ನು ನೋಡಲು ತಂದೆಯಿಲ್ಲದ ಕೊರಗು ಅವರನ್ನು ಕಾಡುತ್ತಿದ್ದರೂ ತಾಯಿ ಎದೆಗುಂದದೆ ಮಗಳ ಶಿಕ್ಷಣಕ್ಕೆ ಆಸರೆಯಾಗಿ ನಿಂತು ಸಮಾಜದಲ್ಲಿ ಎದುರಾಗುವ ಎಲ್ಲ ಸಮಸ್ಯೆಗಳನ್ನು ಎದುರಿಸಿ ಮಗಳಿಗೆ ಉತ್ತಮ ಶಿಕ್ಷಣ ಕೊಡಿಸುವಲ್ಲಿ ನಿಜವಾದ ಪಾತ್ರವಹಿಸಿದ್ದಾರೆ ತಾಯಿ ಎನ್‌. ಪದ್ಮಾವತಿ‌.

ಮಗಳ ಸಾಧನೆ ಬಗ್ಗೆ ತಾಯಿ ಪದ್ಮಾವತಿ‌ ಅವರನ್ನು ಕೇಳಿದರೆ, ‘ನಮ್ಮ ಬಡತನ ಹಾಗೂ ರೈತಾಪಿ ವರ್ಗವು ಮಕ್ಕಳ ಶಿಕ್ಷಣ ಹಾಗೂ ಅವರ ಸಾಧನೆಗೆ ಎಂದೂ ಅಡ್ಡಿಯಾಗಬಾರದು. ಈ ಉದ್ದೇಶದಿಂದ ಬಾಲ್ಯದಿಂದಲೇ ಅವರಲ್ಲಿ ಆಸಕ್ತಿಗೆ ತಕ್ಕಂತೆ ಕಲಿಕೆಗೆ ಅವಕಾಶ ಕಲ್ಪಿಸಲಾಗಿತ್ತು. ಆಕೆಯೂ ಎಂದಿಗೂ ಎದೆಗುಂದದಂತೆ ಗುರಿಯನ್ನು ಛಲದಿಂದ ಸಾಧಿಸಿದ್ದಾರೆ. ಅವಳ ಸಾಧನೆಯಿಂದ ನಮ್ಮ ಬದುಕಿಗೆ ನೆಮ್ಮದಿ‌ ತರುವ ಜತೆಗೆ ಜೀವನ ಸಾರ್ಥಕಗೊಳಿಸಿದ್ದಾಳೆ’ ಎನ್ನುತ್ತಾರೆ.

‘ಒಂದು ಪುಟ್ಟ ಹಳ್ಳಿಯಲ್ಲಿ ಹುಟ್ಟಿ ಬೆಳೆದು ಶಿಕ್ಷಣ ಪಡೆದರೂ ಎಂದಿಗೂ ನಿರಾಸೆ ಭಾವದಿಂದ ಎದೆಗುಂದದೆ ತಮ್ಮ ಪೋಷಕರ ಆಶಯದಂತೆ ಶ್ರಮವಹಿಸಿ ಓದಿದ್ದಕ್ಕೆ 5 ಚಿನ್ನದ ಪದಕಗಳ ಜತೆಗೆ ಗೌರವ, ಮನ್ನಣೆಗಳೊಂದಿಗೆ ನಮ್ಮ ತಾಯಿಯ ಮೊಗದಲ್ಲಿ ಆತ್ಮವಿಶ್ವಾಸ ಮತ್ತು ಗೆಲುವಿನ‌ ನಗೆ ಕಾಣಲು ಸಾಧ್ಯವಾಗಿದೆ. ಮುಂದೆ ಮತ್ತಷ್ಟು ಅಧ್ಯಯನ ‌ಮಾಡಿ ಕೃಷಿ ಕ್ಷೇತ್ರದಲ್ಲಿ ವಿಜ್ಞಾನಿಯಾಗಬೇಕೆಂಬ ಕನಸಿದೆ. ಅದರಂತೆ ನಿರಂತರ ಪ್ರಯತ್ನ ಹಾಗೂ ಪರಿಶ್ರಮದಿಂದ ಗುರಿ ತಲುಪುತ್ತೇನೆ. ಇದರಿಂದ ಪ್ರತೀ ಸರ್ಕಾರಿ ಶಾಲೆಯಲ್ಲಿ ಓದಿದ ಮಕ್ಕಳು ಸಮಾಜದಲ್ಲಿ ಉತ್ತಮ ಸ್ಥಾನಮಾನ ಪಡೆಯಲು ಸಾಧ್ಯ ಎಂಬುದನ್ನು ನಾನು ಅರಿತಿದ್ದೇನೆ’ ಎನ್ನುತ್ತಾರೆ ಕೃಷಿ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಶ್ವೇತಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT