ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಡಿಸಲು ಕಿತ್ತು ಐದು ವರ್ಷ ಕಳೆದರೂ ಮಂಜೂರಾಗದ ಮನೆ: ಕುಟುಂಬದ ಸ್ಥಿತಿ ಅತಂತ್ರ

Published 9 ಮೇ 2024, 8:42 IST
Last Updated 9 ಮೇ 2024, 8:42 IST
ಅಕ್ಷರ ಗಾತ್ರ

ಸಾದಲಿ: ಗುಡಿಸಲು ಮುಕ್ತ ಗ್ರಾಮ ನಿರ್ಮಾಣಕ್ಕೆ ಸರ್ಕಾರ ಹಲವು ವಸತಿ ಯೋಜನೆ ಜಾರಿಗೊಳಿಸಿದೆ. ಇದೇ ಯೋಜನೆಯನ್ನು ನಂಬಿಕೊಂಡ ಬಡ ಪರಿಶಿಷ್ಟ ಕುಟುಂಬವೊಂದು ಇದ್ದ ಗುಡಿಸಲನ್ನು ಕಿತ್ತು ಹಾಕಿ ಐದು ವರ್ಷ ಕಳೆದಿದೆ. ಆದರೆ ಇದುವರೆಗೆ ಮನೆ ಮಂಜೂರು ಆಗಿಲ್ಲ.

ತಾಲ್ಲೂಕಿನ ಸಾದಲಿ ಹೋಬಳಿ ತಲಕಾಯಲಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಿ.ನಕ್ಕಲಹಳ್ಳಿಯಲ್ಲಿ ಮಂಜುನಾಥ್–ಚೈತ್ರಾ ದಂಪತಿ ಗುಡಿಸಲಿನಲ್ಲಿ ವಾಸವಿದ್ದರೂ, ಪಂಚಾಯಿತಿ ಸದಸ್ಯರೊಬ್ಬರು ವಸತಿ ಯೋಜನೆಯಡಿ ಮನೆ ನಿರ್ಮಾಣಕ್ಕೆ ಸಹಾಯ ಧನ ಕೊಡಿಸುವುದಾಗಿ ಭರವಸೆ ನೀಡಿದ್ದರು. ಇದರಿಂದ ‘ಅರಸನನ್ನು ನಂಬಿಕೊಂಡು ಪುರುಷನನ್ನು ಕೈಬಿಟ್ಟುರು’ ಎಂಬ ಗಾದೆಯಂತೆ ಚೈತ್ರಾ–ಮಂಜುನಾಥ್‌ ಗುಡಿಸಲು ಕಿತ್ತು ಹಾಕಿ, ಮನೆ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದರು.

ಐದು ವರ್ಷದಿಂದ ಸಹಾಯಧನ ಬಾರದ ಕಾರಣ ಅಡಿಪಾಯ ಕಾಮಗಾರಿ ಬಿಟ್ಟರೆ, ಬೇರೇನೂ ಕೆಲಸ ಆಗಿಲ್ಲ. ಪರಿಶಿಷ್ಟ ಪಂಗಡಕ್ಕೆ ಸೇರಿದ ಚೈತ್ರ–ಮಂಜುನಾಥ್ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಕೆಲ ವರ್ಷದಿಂದ ಈ ದಂಪತಿ ತಮ್ಮ ಅತ್ತೆಯ ಮನೆಯಲ್ಲಿ ವಾಸವಿದ್ದಾರೆ. ಈಗ ಅವರು ಮನೆ ಖಾಲಿ ಮಾಡಲು ಹೇಳಿತ್ತಿದ್ದು, ಈಗ ದಂಪತಿಗೆ ಎಲ್ಲಿ ಹೋಗುವುದು ಎಂಬ ಚಿಂತೆ ಶುರುವಾಗಿದೆ.

ದಿಕ್ಕು ತೋಚುತ್ತಿಲ್ಲ: ‘ತಲಕಾಯಲಬೆಟ್ಟ ಗ್ರಾಮ ಪಂಚಾಯಿತಿ ಕರವಸೂಲಿಗಾರರು ಪಾಯ ಹಾಕಿದ್ದ ಸ್ಥಳದ ಜಿಪಿಎಸ್ ಪೋಟೋ ತೆಗೆದು ಕೊಂಡು ಹೋಗಿ ಸುಮಾರು ಐದು ವರ್ಷ ಕಳೆದರೂ ಇದು ವರೆಗೂ ಮನೆ ಮಂಜೂರು ಮಾಡಿಲ್ಲ. ಗ್ರಾಮ ಪಂಚಾಯಿತಿ ಸದಸ್ಯರು ಮನೆ ಮಂಜೂರು ಮಾಡಲು ಸರ್ಕಾರದಿಂದ ಮನೆಗಳು ಬಂದಿಲ್ಲ ಎಂದು ಹೇಳುತ್ತಿದ್ದಾರೆ. ನಾನು ಐದು ವರ್ಷಗಳಿಂದ ನಮ್ಮ ಅತ್ತೆಯವರ ಮನೆಯಲ್ಲಿ ವಾಸ ಇದ್ದೇನೆ. ಈಗ ಮನೆ ಖಾಲಿ ಮಾಡಲು ಹೇಳುತ್ತಿದ್ದಾರೆ. ನಾನು ಎಲ್ಲಿಗೆ ಹೋಗಬೇಕು?. ದಿಕ್ಕು ತೋಚದಂತಾಗಿದೆ’ ಮಂಜುನಾಥ್ ಅಳಲು ತೋಡಿಕೊಂಡರು.

ಜಿ.ನಕ್ಕಲಹಳ್ಳಿಯಲ್ಲಿ ಆರು ವಸತಿ ರಹಿತ ಕುಟುಂಬಗವೆ. ಮನೆಗಳ ಬೇಡಿಕೆ ಇದೆ. ಸದ್ಯಕ್ಕೆ ಮನೆಗಳು ಮಂಜೂರು ಮಾಡಲು ಸರ್ಕಾರ ಮನೆ ಬಿಡುಗಡೆ ಮಾಡಿದರೆ ಚೈತ್ರ‌–ಮಂಜುನಾಥ್ ದಂಪತೊಗೆ ಮಂಜೂರು ಮಾಡಿಸುತ್ತೇನೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಚಿಕ್ಕನರಸಿಂಹಪ್ಪ ತಿಳಿಸಿದರು.

ವಸತಿ ರಹಿತರಿಗೆ ಮೊದಲ ಆದ್ಯತೆ
‘ಸರ್ಕಾರದಿಂದ ಮನೆಗಳು ಬರುತ್ತಿಲ್ಲ. ಫಲಾನುಭವಿಯ ಹೆಸರು ವಸತಿ ರಹಿತರ ಪಟ್ಟಿಯಲ್ಲಿ ಇದ್ದರೆ ಅವರಿಗೆ ಮೊದಲ ಆದ್ಯತೆ ಇರುತ್ತದೆ. ಸರ್ಕಾರ ಮನೆಗಳನ್ನು ಬಿಡುಗಡೆ ಮಾಡಿದ ತಕ್ಷಣ ಜಿ.ನಕ್ಕಲಹಳ್ಳಿ ಗ್ರಾಮದ ಮಂಜುನಾಥ್ ಎಂಬುವವರಿಗೆ ಮನೆ ಮಂಜೂರು ಮಾಡಿಸುತ್ತೇನೆ’ ಎಂದು ತಲಕಾಯಲಬೆಟ್ಟ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT