ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಾಸಕ ಪ್ರದೀಪ್ ಈಶ್ವರ್ ಕಚೇರಿ ಎದುರು ನೀರಾವರಿ ಹೋರಾಟಗಾರರಿಂದ ತಮಟೆ ಚಳವಳಿ

Published 1 ಡಿಸೆಂಬರ್ 2023, 14:06 IST
Last Updated 1 ಡಿಸೆಂಬರ್ 2023, 14:06 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಬೆಳಗಾವಿ ಅಧಿವೇಶನದಲ್ಲಿ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ನೀರಾವರಿ ಸಮಸ್ಯೆಗಳ ಬಗ್ಗೆ ಶಾಸಕರು ಪ್ರಸ್ತಾಪಿಸಬೇಕು. ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಆಗ್ರಹಿಸಿ ಶಾಶ್ವತ ನೀರಾವರಿ ಹೋರಾಟ ಸಮಿತಿ ಸದಸ್ಯರು, ರೈತ ಸಂಘದ ಮುಖಂಡರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಶುಕ್ರವಾರ ನಗರ ತಾಲ್ಲೂಕು ಕಚೇರಿ ಆವರಣದಲ್ಲಿರುವ ಶಾಸಕರ ಕಚೇರಿ ಎದುರು ತಮಟೆ ಚಳವಳಿ ನಡೆಸಿದರು. ಶಾಸಕರ ಸಹಾಯಕರಿಗೆ ಮನವಿ ನೀಡಿದರು. 

ಇತ್ತೀಚೆಗೆ ನೀರಾವರಿ ಹೋರಾಟ ಸಮಿತಿಯು ನಡೆಸಿದ ದುಂದು ಮೇಜಿನ ಸಭೆಯಲ್ಲಿ ಡಿ.1ರಂದು ಮೂರು ಜಿಲ್ಲೆಯ ಎಲ್ಲ ಶಾಸಕರ ಕಚೇರಿ ಎದುರು ತಮಟೆ ಚಳವಳಿ ನಡೆಸಿ ಅವರಿಗೆ ನೀರಾವರಿ ಸಮಸ್ಯೆಗಳ ಮಾಹಿತಿ ನೀಡಲು ತೀರ್ಮಾನಿಸಲಾಗಿತ್ತು. 

ರೈತ ಸಂಘದ ಜಿಲ್ಲಾ ಅಧ್ಯಕ್ಷ ಲಕ್ಷ್ಮಿನಾರಾಯಣ್ ಮಾತನಾಡಿ, ‘ನೀರಿಗಾಗಿ ನಮ್ಮ ಹೋರಾಟ ಮತ್ತೆ ಆರಂಭವಾಗಿದೆ. ಎಷ್ಟೇ ಹೋರಾಟಗಳನ್ನು ನಡೆಸಿದರೂ ನೀರಾವರಿ ಯೋಜನೆಗಳು ಆಮೆಗತಿಯಲ್ಲಿ ಸಾಗುತ್ತಿದೆ. ಈ ನಿಧಾನಗತಿಯನ್ನು ಖಂಡಿಸಬೇಕು’ ಎಂದರು. 

ಬಯಲು ಸೀಮೆಗೆ ಶಾಶ್ವತವಾದ ನೀರಾವರಿ ಯೋಜನೆಗಳು ಇಲ್ಲ. ಕೊಳಚೆ ನೀರನ್ನು ನೀಡುತ್ತಿದ್ದಾರೆ. ಎಚ್‌.ಎನ್.ವ್ಯಾಲಿ ಮತ್ತು ಕೆ.ಸಿ.ವ್ಯಾಲಿ ನೀರನ್ನು ಮೂರು ಹಂತದಲ್ಲಿ ಶುದ್ಧೀಕರಿಸಬೇಕು ಎಂದು ಹೋರಾಟ ಮಾಡಿದರೂ ಸರ್ಕಾರಗಳು ಗಮನ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಬಗ್ಗೆ ಅಧಿವೇಶನದಲ್ಲಿ ಪ್ರಸ್ತಾಪಿಸಬೇಕು ಎಂದು ಶಾಸಕರಿಗೆ ಮನವಿ ನೀಡುತ್ತಿದ್ದೇವೆ. ಗೌರಿಬಿದನೂರು ಶಾಸಕ ಪುಟ್ಟಸ್ವಾಮಿಗೌಡ ಅವರಿಗೆ ಗುರುವಾರ ಮನವಿ ನೀಡಿದ್ದೇವೆ. ಇಲ್ಲಿನ ಶಾಸಕ ಪ್ರದೀಪ್ ಈಶ್ವರ್ ಅವರು ಗೈರಾಗಿದ್ದಾರೆ. ಅವರ ಬಗ್ಗೆ ನಮಗೆ ಆಶಾವಾದವಿದೆ. ಅವರು ಸದನದಲ್ಲಿ ಈ ಬಗ್ಗೆ ಪ್ರಸ್ತಾಪಿಸಬೇಕು ಎಂದು ಆಗ್ರಹಿಸಿದರು. 

ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್.ಆಂಜನೇಯ ರೆಡ್ಡಿ ಮಾತನಾಡಿ,  ಶಾಸಕ ಪ್ರದೀಪ್ ಈಶ್ವರ್ ಅವರು 2018ರ ಚುನಾವಣೆಯ ಸಂದರ್ಭದಲ್ಲಿ ಎಚ್‌.ಎನ್.ವ್ಯಾಲಿ ಮತ್ತು ಕೆ.ಸಿ.ವ್ಯಾಲಿ ಯೋಜನೆಯ ನೀರು ಮೂರು ಹಂತದಲ್ಲಿ ಶುದ್ದೀಕರಣವಾಗಬೇಕು ಎಂದು ಆಗ್ರಹಿಸಿದ್ದರು. ಈಗ ಅವರಿಗೆ ವಿಧಾನಸೌಧದಲ್ಲಿ ಈ ಬಗ್ಗೆ ಪ್ರಸ್ತಾಪಿಸುವ ಅವಕಾಶ ದೊರೆತಿದೆ. ಈ ಬಗ್ಗೆ ಧ್ವನಿ ಎತ್ತಬೇಕು. ರೈತರು ಹಾಗೂ ಜನರ ಸಂಕಟಗಳಿಗೆ ಧ್ವನಿ ಆಗಬೇಕು ಎಂದರು. 

ಈ ಭಾಗದ ಜ್ವಲಂತ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವುದು ಶಾಸಕರ ಜವಾಬ್ದಾರಿ. ದುಂಡು ಮೇಜಿನ ಸಭೆಯಲ್ಲಿ ಮೂರು ಜಿಲ್ಲೆಯ ಯಾವ ಶಾಸಕರೂ ಭಾಗಿ ಆಗಲಿಲ್ಲ. ಡಿ.31ವರೆಗೆ ನಾವು ಗಡುವು ನೀಡುತ್ತಿದ್ದೇವೆ. ಶಾಸಕರು ಈ ಬಗ್ಗೆ ಧ್ವನಿ ಎತ್ತದಿದ್ದರೆ ಹೋರಾಟ ತೀವ್ರಗೊಳಿಸುತ್ತೇವೆ ಎಂದು ಹೇಳಿದರು. 

ಹೋರಾಟಗಾರರಾದ ಲಕ್ಷ್ಮಯ್ಯ, ಪ್ರಭಾ ನಾರಾಯಣಗೌಡ, ಉಷಾ ಆಂಜನೇಯರೆಡ್ಡಿ, ಕನ್ನಡ ಸೇನೆಯ ರವಿ, ಚೊಕ್ಕಹಳ್ಳಿ ರಾಜಣ್ಣ, ಶ್ರೀನಿವಾಸ್, ಗಣೇಶ್, ಜೀವಿಕಾ ರತ್ನಮ್ಮ, ನರಸಿಂಹಯ್ಯ 

ಧ್ವನಿ ಎತ್ತದಿದ್ದರೆ ಶಾಸಕರಿಗೆ ಬಹಿಷ್ಕಾರ
ಮುಖಂಡರಾದ ಸುಷ್ಮಾ ಶ್ರೀನಿವಾಸ್ ಮಾತನಾಡಿ ನಾವು ದುಂಡು ಮೇಜಿನ ಸಭೆ ಮಾಡಿದ ವೇಳೆ ಶಾಸಕ ಪ್ರದೀಪ್ ಈಶ್ವರ್ ತೆಲಂಗಾಣದಲ್ಲಿ ಇದ್ದರು. ಆದರೆ ಈಗ ಅವರ ಆಪ್ತ ಸಹಾಯಕರನ್ನು ಕಳುಹಿಸಿದ್ದಾರೆ. ಶಾಸಕರೇನು ನೀರು ಕುಡಿಯುವುದಿಲ್ಲವೇ? ನೀರಾವರಿ ಬಗ್ಗೆ ಸದನದಲ್ಲಿ ಧ್ವನಿ ಎತ್ತದಿದ್ದರೆ ಅವರ ಕಾರ್ಯಕ್ರಮಗಳನ್ನು ಬಹಿಷ್ಕರಿಸುತ್ತೇವೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT