ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೊಯಿಲಿಗೆ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ನೀಡಿ: ಕಿಸಾನ್ ಕಾಂಗ್ರೆಸ್

ಕಿಸಾನ್ ಕಾಂಗ್ರೆಸ್ ಜಿಲ್ಲಾ ಸಮಿತಿ ಸಭೆಯಲ್ಲಿ ಒತ್ತಾಯ
Published 11 ಡಿಸೆಂಬರ್ 2023, 13:56 IST
Last Updated 11 ಡಿಸೆಂಬರ್ 2023, 13:56 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಕಾಂಗ್ರೆಸ್ ಪಕ್ಷವು 2024ರ ಲೋಕಸಭೆ ಚುನಾವಣೆಯಲ್ಲಿ ಮಾಜಿ ಸಂಸದ ಎಂ.ವೀರಪ್ಪ ಮೊಯಿಲಿ ಅವರಿಗೆ ಟಿಕೆಟ್ ನೀಡಬೇಕು ಎಂದು ನಗರದಲ್ಲಿ ಸೋಮವಾರ ನಡೆದ ಕಾಂಗ್ರೆಸ್ ಕಿಸಾನ್ ಘಟಕದ ಜಿಲ್ಲಾ ಕಾರ್ಯಕಾರಿಣಿಯಲ್ಲಿ ಹಲವು ಮುಖಂಡರು ಒತ್ತಾಯಿಸಿದರು. 

ಸಭೆಯಲ್ಲಿ ಎಂ.ವೀರಪ್ಪ ಮೊಯಿಲಿ ಮಾತನಾಡಿ, ‘ಚಿಕ್ಕಮಗಳೂರು ಮತ್ತು ಮಂಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ‍ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ನನಗೆ ಒತ್ತಾಯಿಸುತ್ತಾರೆ. ಆದರೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ನನಗೆ ರಾಜಕೀಯ ಜೀವದಾನ ನೀಡಿದ ಕ್ಷೇತ್ರ. ಸಾಯುವವರೆಗೂ ನಿಮ್ಮ ಋಣ ನನ್ನ ಮೇಲಿದೆ. ಟಿಕೆಟ್ ಸಿಗುತ್ತದೆಯೊ ಇಲ್ಲವೊ ಅದು ಮುಂದಿನದ್ದು ಆದರೆ ಚಿಕ್ಕಬಳ್ಳಾಪುರವನ್ನು ಎಂದಿಗೂ ಬಿಡುವುದಿಲ್ಲ. ನೀವು ದೂಡಿದರೂ ನಾನು ಇಲ್ಲಿಯೇ ಇರುತ್ತೇನೆ ಎಂದರು. 

ನಾನು ಅಭ್ಯರ್ಥಿ ಎಂದು ಘೋಷಣೆ ಮಾಡಿಕೊಳ್ಳುವುದಲ್ಲ. ಹೈಕಮಾಂಡ್ ಟಿಕೆಟ್ ಬಗ್ಗೆ ತಿಳಿಸುತ್ತದೆ. ನನಗೆ ಅಧಿಕಾರದ ವ್ಯಾಮೋಹ ಇಲ್ಲ. ನನಗೆ ನನ್ನದೇ ಆದ ಯೋಜನೆಗಳು ಇವೆ. ಅಭಿವೃದ್ಧಿಯ ಅಜೆಂಡಾ ಇದೆ ಎಂದು ಹೇಳಿದರು. 

ಚಿಕ್ಕಬಳ್ಳಾಪುರಕ್ಕೆ ನೀರು ತರುವುದಷ್ಟೇ ಅಲ್ಲ ಆ ನೀರನ್ನು ಯಾವ ಮಟ್ಟದಲ್ಲಿ ಉಪಯೋಗಿಸಬೇಕು ಎನ್ನುವ ಬಗ್ಗೆ ಆಲೋಚಿಸಬೇಕಾಗಿದೆ. ನೆರೆಯ ಆಂಧ್ರಪ್ರದೇಶದಲ್ಲಿ ಕೃಷ್ಣಾನದಿ ನೀರು ಹರಿಯುತ್ತಿದೆ. ಈ ಭಾಗಕ್ಕೆ ಕನಿಷ್ಠ 10 ಟಿಎಂಸಿ ಅಡಿ ಕೃಷ್ಣಾ ನೀರು ತರಬೇಕು ಎನ್ನುವುದು ನನ್ನ ಆಲೋಚನೆ. ಮುತುವರ್ಜಿಯಿಂದ ಕೆಲಸ ಮಾಡಿದರೆ ಇದೆಲ್ಲವೂ ಸಾಧ್ಯ ಎಂದರು.

ಗೌರಿಬಿದನೂರಿನಲ್ಲಿ ಕೈಗಾರಿಕಾ ಘಟಕ ತಲೆ ಎತ್ತಿದೆ. ಬಾಗೇಪಲ್ಲಿಯವರೆಗೂ ಕೈಗಾರಿಕೆಗಳು ವಿಸ್ತರಣೆ ಆಗಬೇಕು. ನಾನು ಸಂಸದನಾಗಿದ್ದ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ನಡೆಸಿದ್ದೇನೆ ಎಂದರು. 

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೇಶವರೆಡ್ಡಿ ಮಾತನಾಡಿ, ಎಲ್ಲರ ಶ್ರಮದಿಂದ ಲೋಕಸಭಾ ಚುನಾವಣೆಯಲ್ಲಿ ಪಕ್ಷವು ಗೆಲುವು ಸಾಧಿಸಲಿದೆ. ಈಗಿನ ಸಂಸದರು ಜಿಲ್ಲೆಗೆ ಎಷ್ಟು ಸಲ ಭೇಟಿ ನೀಡಿದ್ದಾರೆ, ಜನರಿಗೆ ಸ್ಪಂದಿಸಿದ್ದಾರೆ ಎನ್ನುವ ಬಗ್ಗೆ ಎಲ್ಲರೂ ತಿಳಿಯಬೇಕು. ಮೊಯಿಲಿ ಅವರು ಸೋತರೂ ಕ್ಷೇತ್ರದ ಜನರ ಜೊತೆ ಸಂಪರ್ಕ ಇಟ್ಟುಕೊಂಡಿದ್ದಾರೆ ಎಂದರು.

ಮಾಜಿ ಶಾಸಕ ಶಿವಾನಂದ್, ವೀರಪ್ಪ ಮೊಯಿಲಿ ಅವರೇ ಚಿಕ್ಕಬಳ್ಳಾಪುರ ಕ್ಷೇತ್ರದ ಅಭ್ಯರ್ಥಿಯಾಗುವುದು ಶೇ 100ರಷ್ಟು ಸತ್ಯ. ಎರಡು ಸಲ ಗೆದ್ದು ಅವರು ಹೇಗೆ ಕೆಲಸ ಮಾಡಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತು. ಈ ಹಿಂದಿನ ಯಾವ ಸಂಸದರು ಸಹ ಇಷ್ಟು ಕೆಲಸ ಮಾಡಿಲ್ಲ. ಇವರನ್ನು ಗೆಲ್ಲಿಸಿಕೊಂಡರೆ ನಾವೂ ಸಹ ಕೆಲಸಗಳನ್ನು ಮಾಡಬಹುದು. ಅವರು ಕೇಂದ್ರ ಸಚಿವರಾಗುವ ಸಾಧ್ಯತೆ ಇದೆ ಎಂದು ಹೇಳಿದರು. 

ಮುಖಂಡರಾದ ಯಲುವಳ್ಳಿ ರಮೇಶ್, ಜಿಲ್ಲಾ ರೈತ ಘಟಕದ ವೆಚ್ಚಕ್ಕೆ ₹ 50 ಸಾವಿರ ನೀಡುವುದಾಗಿ ಪ್ರಕಟಿಸಿದರು. ವೀರಪ್ಪ ಮೊಯಿಲಿ ಅವರು ಸೋತರೂ ಕ್ಷೇತ್ರದಲ್ಲಿ ಓಡಾಡಿದ್ದಾರೆ. ಅವರಿಗೆ ಟಿಕೆಟ್ ನೀಡಿ ಗೆಲ್ಲಿಸಿಕೊಳ್ಳಬೇಕು ಎಂದರು.

ಕಿಸಾನ್ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ರಾಮಕೃಷ್ಣಪ್ಪ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಎಸ್.ಎಂ.ಮುನಿಯಪ್ಪ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಯಾಸ್ಮಿನ್ ತಾಜ್, ರೈತ ಘಟಕದ ಉಸ್ತುವಾರಿ ಪ್ರಶಾಂತ್ ಸಾಗರ್, ಮುಖಂಡರಾದ ಮಮತಾ ಮೂರ್ತಿ, ಎಂ.ಜಯರಾಂ ಇತರರು ಇದ್ದರು. 

ಜನವರಿಯಲ್ಲಿ ರೈತರ ಸಮ್ಮೇಳನ

ಚಿಕ್ಕಬಳ್ಳಾಪುರವು ಕೃಷಿ ಯೋಗ್ಯ ಸ್ಥಳ. ಇಲ್ಲಿ ರೈತರಿಗೆ ಸಂಬಂಧಿಸಿದಂತೆ ಚರ್ಚಿಸಲು ರೈತ ಸಮ್ಮೇಳನ ಮಾಡಬೇಕು. ಈ ಬಗ್ಗೆ ತಾಲ್ಲೂಕು ಮತ್ತು ಜಿಲ್ಲಾ ಘಟಕವು ಸಭೆಗಳನ್ನು ನಡೆಸಬೇಕು. ಜನವರಿಯಲ್ಲಿ ಸಮ್ಮೇಳನ ನಡೆಸುವ ಬಗ್ಗೆ ತೀರ್ಮಾನ ಮಾಡಬೇಕು. ನೀರಾವರಿ ಕೃಷಿ ತಜ್ಞರು  ಸಭೆಯಲ್ಲಿ ಭಾಗವಹಿಸಬೇಕು  ಎಂದು ಎಂ.ವೀರಪ್ಪ ಮೊಯಿಲಿ ತಿಳಿಸಿದರು.   ಒಂದು ವಾರದ ಒಳಗೆ ಈ ಬಗ್ಗೆ ಪ್ರಾಥಮಿಕ ಸಭೆ ನಡೆಸೊಣ. ಕೃಷಿ ಸಚಿವರು ಮುಖ್ಯಮಂತ್ರಿ ಉಪಮುಖ್ಯಮಂತ್ರಿ ಅವರನ್ನು ಸಮ್ಮೇಳನಕ್ಕೆ ಕರೆಸೋಣ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT