ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಚಿಮುಲ್| ಏ.28ರಂದು ಚುನಾವಣೆ : 1,772 ಕರಡು ಮತದಾರರು

ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ರಂಗೇರಿದೆ ಸಹಕಾರ ಕಣ; ಮತದಾರರ ಮನವೊಲಿಕೆಯಲ್ಲಿ ಧುರೀಣರು
ಡಿ.ಎಂ.ಕುರ್ಕೆ ಪ್ರಶಾಂತ್
Published 7 ಮಾರ್ಚ್ 2024, 6:31 IST
Last Updated 7 ಮಾರ್ಚ್ 2024, 6:31 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಯ ಸಹಕಾರ ಹಾಲು ಒಕ್ಕೂಟದ ನಿರ್ದೇಶಕ ಸ್ಥಾನಗಳಿಗೆ ಏ.28ರಂದು ಚುನಾವಣೆ ನಡೆಯಲಿದೆ. ಅವಳಿ ಜಿಲ್ಲೆಗಳ ಸಹಕಾರ ವಲಯದ ಧುರೀಣರು ಸ್ಪರ್ಧಿಸಲು ಸಜ್ಜಾಗುತ್ತಿದ್ದಾರೆ. ನಿರ್ದೇಶಕರಾಗಿರುವವರು ಮತ್ತೊಮ್ಮೆ ಕಣಕ್ಕೆ ಇಳಿಯಲು ಉತ್ಸುಕರಾಗಿದ್ದರೆ. ಕಳೆದ ಬಾರಿಯ ಸೋಲಿಗೆ ಪ್ರತಿಪಟ್ಟು ಹಾಕಲು ಧುರೀಣರು ಈಗಾಗಲೇ ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಹೊಸ ಅಭ್ಯರ್ಥಿಗಳು ಸಹ ಅದೃಷ್ಟ ಪರೀಕ್ಷಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ.

ಈ ಎಲ್ಲ ಬೆಳವಣಿಗೆಗಳಿಗೆ ಮತ್ತಷ್ಟು ರಂಗು ತುಂಬಲು ಮತದಾನದ ಹಕ್ಕುಳ್ಳ ಹಾಲು ಉತ್ಪಾದಕರ ಸಹಕಾರ ಸಂಘಗಳ ಕರಡು ಅರ್ಹ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಕರಡು ಮತದಾರರ ಪಟ್ಟಿ ಸಿದ್ಧಗೊಂಡ ನಂತರ ಸಹಕಾರ ವಲಯದ ರಾಜಕಾರಣ ಮತ್ತಷ್ಟು ರಂಗೇರುತ್ತದೆ.

ಕರಡು ಮತದಾರರ ಪಟ್ಟಿಯ ಅಂಕಿ ಸಂಖ್ಯೆಗಳ ಪ್ರಕಾರ ಕೋಲಾರ ಜಿಲ್ಲೆಯಲ್ಲಿ 882 ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 890 ಮಂದಿ ಮತದಾರರು ನಿರ್ದೇಶಕ ಚುನಾವಣೆಯಲ್ಲಿ ಮತ ಚಲಾಯಿಸುವರು.

ಪ್ರತಿ ಹಾಲು ಉತ್ಪಾದಕರ ಸಹಕಾರ ಸಂಘ (ಡೇರಿ)ಗಳ ನಿರ್ದೇಶಕರ ಪೈಕಿ ಒಬ್ಬರು ನಿರ್ದೇಶಕ ಚುನಾವಣೆಯಲ್ಲಿ ಮತದಾನಕ್ಕೆ ಅರ್ಹರಾಗಿರುತ್ತಾರೆ. ಈ ಹಿಂದೆ ಡೇರಿ ಅಧ್ಯಕ್ಷರೇ ನಿರ್ದೇಶಕರ ಚುನಾವಣೆಯಲ್ಲಿ ಮತ ಚಲಾಯಿಸುವ ಹಕ್ಕು ಹೊಂದಿದ್ದರು. ಆದರೆ ಈಗ ನಿಯಮಗಳು ಬದಲಾಗಿವೆ. ಡೇರಿ ನಿರ್ದೇಶಕರು ಸಭೆ ನಡೆಸಿ ಬಹುಮತದ ಆಧಾರದಲ್ಲಿ ಒಬ್ಬ ನಿರ್ದೇಶಕರನ್ನು ಮತದಾರರನ್ನಾಗಿ ಆಯ್ಕೆ ಮಾಡಬಹುದು. ಈಗ ಈ ಆಯ್ಕೆ ಪ್ರಕ್ರಿಯೆಗಳೆಲ್ಲ ಮುಗಿದು ಕರಡು ಮತದಾರರ ಪಟ್ಟಿ ‌ ಪ್ರಕಟವಾಗಿದೆ.

ಕೋಲಾರ ಜಿಲ್ಲಾಧಿಕಾರಿಯೂ ಆದ ಜಿಲ್ಲಾ ಚುನಾವಣಾಧಿಕಾರಿ ಅಕ್ರಂ ಪಾಷಾ ಅವರು ಕೋಚಿಮುಲ್ ಚುನಾವಣೆಗೆ ಚುನಾವಣಾ ಅಧಿಕಾರಿ ಆಗಿದ್ದಾರೆ.

ಅನರ್ಹ ಮತದಾರರು: ಕೆಲವು ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಚುನಾವಣೆ ನಡೆದಿಲ್ಲ. ಇಂತಹ ಡೇರಿಗಳಿಗೆ ಆಡಳಿತಾಧಿಕಾರಿ ನೇಮಿಸಲಾಗಿದೆ. ಹಾಜರಾತಿ ಕಡಿಮೆ, ಹಾಲು ಕಡಿಮೆ, ನೂತನ ಸಂಘ–ಈ ಕಾರಣಗಳಿಂದ ಕೆಲವು ಸಂಘಗಳು ಮತದಾನಕ್ಕೆ ಅನರ್ಹವಾಗಿವೆ. ಇವರನ್ನು ಅನರ್ಹ ಮತದಾರರ ಪಟ್ಟಿಯಲ್ಲಿ ಸೇರಿಸಲಾಗಿದೆ. ಆ ಪ್ರಕಾರ ಕೋಲಾರ ಜಿಲ್ಲೆಯಲ್ಲಿ 67 ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 86 ಡೇರಿಗಳು ಅನರ್ಹ ಮತದಾರರ ಪಟ್ಟಿಯಲ್ಲಿವೆ.

ಒಕ್ಕೂಟದಲ್ಲಿ ಲಭ್ಯವಿರುವ ಸಹಕಾರ ಸಂಘಗಳ ವಿವರಗಳು ಮತ್ತು ದಾಖಲೆಗಳ ಅನ್ವಯ ಕರಡು ಮತದಾರರ ಪಟ್ಟಿ ತಯಾರಿಸಲಾಗಿದೆ. ಚುನಾವಣಾ ದಿನಾಂಕಕ್ಕೆ ಸದಸ್ಯತ್ವ ಪಡೆದು ಒಂದು ವರ್ಷ ಪೂರ್ಣಗೊಳ್ಳದ ಸದಸ್ಯ ಸಹಕಾರ ಸಂಘಗಳನ್ನು ಕರಡು ಮತದಾರರ ಪಟ್ಟಿಗೆ ಸೇರಿಸಿಲ್ಲ. ಒಕ್ಕೂಟದ ಯಾವುದೇ ಅರ್ಹ ಸದಸ್ಯ ಸಹಕಾರ ಸಂಘಗಳ ಹೆಸರನ್ನು ಉದ್ದೇಶ ಪೂರ್ವಕವಾಗಿ ಮತದಾರರ ಪಟ್ಟಿಯಿಂದ ಕೈಬಿಟ್ಟಿಲ್ಲ. ಒಕ್ಕೂಟದ ಸಹ ಸದಸ್ಯರು ಮತ್ತು ನಾಮಮಾತ್ರ ಸದಸ್ಯರನ್ನು ಕರಡು ಮತದಾರ ಪಟ್ಟಿಯಲ್ಲಿ ಸೇರಿಸಿಲ್ಲ.

ಒಕ್ಕೂಟದ ಉಪವಿಧಿ ಮತ್ತು ರಾಜ್ಯ ಸಹಕಾರ ಸಂಘಗಳ ಕಾಯ್ದೆ ಮತ್ತು ನಿಯಮಗಳ ಅನುಸಾರ ಕಳೆದ ಐದು ಮಹಾಸಭೆಗಳಲ್ಲಿ ಎರಡು ಸಭೆಗಳಲ್ಲಿ ಹಾಜರಾಗಿರುವವರನ್ನು ಸದಸ್ಯರನ್ನಾಗಿ ಪರಿಗಣಿಸಲಾಗುತ್ತದೆ ಎಂದು ಕೋಚಿಮುಲ್ ವ್ಯವಸ್ಥಾಪಕ ನಿರ್ದೇಶಕರು ಮತ್ತು ಮತದಾರರ ಪಟ್ಟಿ ಪರಿಶೀಲನಾ ಅಧಿಕಾರಿ ದೃಢೀಕರಿಸಿದ್ದಾರೆ.

ಕೋಲಾರ ಜಿಲ್ಲೆಯಯ ಮತದಾರರು

ಕ್ಷೇತ್ರ; ಅರ್ಹಮತದಾರರ ಸಂಖ್ಯೆ; ಅನರ್ಹ ಮತದಾರರ ಸಂಖ್ಯೆ
ಕೋಲಾರ ಜಿಲ್ಲಾ ಮಹಿಳಾ ಮೀಸಲು ಕ್ಷೇತ್ರ;‌100;5
ಕೋಲಾರ ಉತ್ತರ;109;8
ಕೋಲಾರ ದಕ್ಷಿಣ;114;10
ಬಂಗಾರಪೇಟೆ;114;10
ಮಾಲೂರು;146;12
ಮುಳಬಾಗಿಲು;153;10
ಶ್ರೀನಿವಾಸಪುರ;146;12
ಒಟ್ಟು;882;67

ಅಕ್ರಂ ಪಾಷ
ಅಕ್ರಂ ಪಾಷ

ಅರ್ಹತೆ ಸಾಬೀತು; ದಾಖಲೆ ಸಲ್ಲಿಸಲು ಅವಕಾಶ

ಕರಡು ಮತದಾರರ ಪಟ್ಟಿಯನ್ನು ಈಗಾಗಲೇ ಕೋಚಿಮುಲ್ ಕೇಂದ್ರ ಕಚೇರಿ ಸೇರಿದಂತೆ ಶಿಬಿರ ಕಚೇರಿಗಳ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ. ಅನರ್ಹ ಮತದಾರರ ಪೈಕಿ ಅರ್ಹತೆಯನ್ನು ಹೊಂದುವ ಸದಸ್ಯರು ಕರಡು ಪಟ್ಟಿ ಪ್ರಕಟಗೊಂಡ ದಿನಾಂಕದಿಂದ 30 ದಿನಗಳ ಒಳಗೆ ತಮ್ಮ ಅರ್ಹತೆಯನ್ನು ಸಾಬೀತುಪಡಿಸುವ ದಾಖಲೆ ಮತ್ತು ಪ್ರತಿನಿಧಿ/ಡೆಲಿಗೇಟ್ ನಮೂನೆಗಳೊಂದಿಗೆ ಮತದಾರರ ಪಟ್ಟಿ ಪರಿಶೀಲನಾಧಿಕಾರಿಗಳಿಗೆ ಸಲ್ಲಿಸಬಹುದು. ನಿಯಮ 13–ಡಿ(ಸಿ) ಮತ್ತು (ಡಿ) ರೀತಿ ಅಂತಿಮ ಮತದಾರರ ಪಟ್ಟಿ ಪ್ರಕರಣೆ ಮಾಡಲು ಹಾಗೂ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಲು ನಿಯಮಗಳ ಅನುಸಾರ ಮುಂದಿನ ಕ್ರಮಕ್ಕೆ ಸೂಚಿಸಲಾಗಿದೆ ಎಂದು ಕೋಲಾರ ಜಿಲ್ಲಾಧಿಕಾರಿಯೂ ಆದ ಜಿಲ್ಲಾ ಚುನಾವಣಾಧಿಕಾರಿ ಅಕ್ರಂ ಪಾಷ ಅವರು ತಿಳಿಸಿದ್ದಾರೆ.

ಕಳೆದ ಚುನಾವಣೆಯಲ್ಲಿ 13 ಸ್ಥಾನ; ಈಗ 14
2019ರಲ್ಲಿ ಕೋಚಿಮುಲ್‌ನ 13 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಕಾಂಗ್ರೆಸ್ ಬೆಂಬಲಿತರು ಅಧಿಕಾರ ಹಿಡಿದಿದ್ದಾರೆ.  13 ನಿರ್ದೇಶಕರ ಸ್ಥಾನಗಳ ಪೈಕಿ 4 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿತ್ತು. ಉಳಿದ 9 ಸ್ಥಾನಗಳಿಗೆ ಚುನಾವಣೆ ನಡೆದು ಕಾಂಗ್ರೆಸ್ ಬೆಂಬಲಿತ 6 ಮಂದಿ ಜೆಡಿಎಸ್‌ ಬೆಂಬಲಿತ 2 ಹಾಗೂ ಅಂದಿನ ಮಾಜಿ ಶಾಸಕ ಡಾ. ಎಂ.ಸಿ.ಸುಧಾಕರ್‌ (ಈಗ ಸಚಿವ) ಬಣದ ಒಬ್ಬರು ಗೆಲುವು ಸಾಧಿಸಿದರು. ಅವಿರೋಧ ಆಯ್ಕೆಯಾಗಿದ್ದ 4 ನಿರ್ದೇಶಕರೂ ಕಾಂಗ್ರೆಸ್‌ ಬೆಂಬಲಿತರಾಗಿದ್ದರು. ಆದ್ದರಿಂದ  ಒಕ್ಕೂಟದ ಆಡಳಿತ ಮಂಡಳಿಯಲ್ಲಿ ಕೈ ಪಾಳಯದ ಪಾಲಾಗಿತ್ತು.  ಇಲ್ಲಿಯವರೆಗೂ 13 ಮಂದಿ ಚುನಾವಣೆಯ ಮೂಲಕ ನಿರ್ದೇಶಕರಾಗಿ ಆಯ್ಕೆ ಆಗುತ್ತಿದ್ದರು. ಆದರೆ ಈ ಬಾರಿ 14 ಸ್ಥಾನಗಳಾಗಿವೆ. ಕೋಲಾರ ಕ್ಷೇತ್ರವನ್ನು ಉತ್ತರ ಮತ್ತು ದಕ್ಷಿಣ ಎಂದು ವಿಭಾಗಿಸಲಾಗಿದೆ. ಇಲ್ಲಿಯವರೆಗೂ ಕೋಲಾರ ಕ್ಷೇತ್ರದ ಒಂದು ಸ್ಥಾನಕ್ಕೆ ಚುನಾವಣೆ ನಡೆಯುತ್ತಿತ್ತು. ಈ ಬಾರಿ ಎರಡು ಸ್ಥಾನಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT