ಭಾನುವಾರ, ಮಾರ್ಚ್ 26, 2023
24 °C
ಪ್ರತ್ಯೇಕ ಒಕ್ಕೂಟದ ಕಾರ್ಯಚಟುವಟಿಕೆಗಳ ನೆಲೆಯಲ್ಲಿ ಏನಿದೆ–ಏನಿಲ್ಲ?

ಮೆಗಾ ಡೇರಿ: ಮುಂದಿದೆ ಸವಾಲು

ಡಿ.ಎಂ.ಕುರ್ಕೆ ಪ್ರಶಾಂತ್‌ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ನಂದಿಕ್ರಾಸ್‌ನಲ್ಲಿರುವ ಮೆಗಾ ಡೇರಿಯೇ ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಆಡಳಿತ ಕಚೇರಿ ಮತ್ತು ಪ್ರಧಾನ ಕಚೇರಿ ಆಗಲಿದೆ. ಇಲ್ಲಿಂದಲೇ ಪ್ರತ್ಯೇಕ ಒಕ್ಕೂಟದ ಕಾರ್ಯಚಟುವಟಿಕೆಗಳು ಜರುಗಲಿವೆ. ಪ್ರತ್ಯೇಕ ಒಕ್ಕೂಟಕ್ಕೆ ಮುದ್ರೆ ಬಿದ್ದಿರುವ ಕಾರಣ ಮೆಗಾ ಡೇರಿಯಲ್ಲಿ ಈಗ ಇರುವ ಸೌಲಭ್ಯಗಳನ್ನು ಮತ್ತಷ್ಟು ಹೆಚ್ಚಿಸಬೇಕಾಗಿದೆ. ಎಲ್ಲ ಘಟಕಗಳನ್ನೂ ಮೆಗಾ ಡೇರಿ ಒಳಗೊಳ್ಳಬೇಕಾಗಿದೆ.

14 ಎಕರೆಯಲ್ಲಿ ನಿರ್ಮಾಣವಾಗಿರುವ ಮೆಗಾ ಡೇರಿಯಲ್ಲಿ ಟೆಟ್ರಾ ಪ್ಯಾಕ್, ಫ್ಲೆಕ್ಸಿ ಪ್ಯಾಕ್ ಘಟಕ, ತುಪ್ಪ ಮತ್ತು ಬೆಣ್ಣೆ ತಯಾರಿಕೆಯ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಯಂತ್ರೋಪಕರಣಗಳನ್ನು ಅಳವಡಿಸಿದ್ದರೂ ಪನ್ನೀರ್ ಘಟಕ ಕಾರ್ಯನಿರ್ವಹಿಸುತ್ತಿಲ್ಲ.

ಮೆಗಾ ಡೇರಿಗೆ ನಿತ್ಯ 4 ಟನ್ ಬೆಣ್ಣೆ ಮತ್ತು ತುಪ್ಪ ಉತ್ಪಾದನೆ ಮತ್ತು 100 ಟನ್ ಬೆಣ್ಣೆ ಸಂಗ್ರಹ ಸಾಮರ್ಥ್ಯವಿದೆ. ಮೆಗಾ ಡೇರಿಗೆ ನಿತ್ಯ 2.5 ಲಕ್ಷ ಹಾಲು ಪೂರೈಕೆ ಆಗುತ್ತಿದೆ. ಡೇರಿಯಲ್ಲಿ ನಿತ್ಯ 1.5 ಲಕ್ಷ ಲೀಟರ್ ಹಾಲಿನ ಟೆಟ್ರಾ ಪ್ಯಾಕ್‌ಗಳು, 30ರಿಂದ 50 ಸಾವಿರ ಲೀಟರ್ ಫ್ಲೆಕ್ಸಿ ಹಾಲಿನ ಪ್ಯಾಕ್‌ ಸಿದ್ಧವಾಗುತ್ತಿವೆ. ಇಲ್ಲಿಂದ ಸಿದ್ಧವಾಗುವ ಉತ್ಪನ್ನಗಳು ಶೇ 70ರಷ್ಟು ಆಂಧ್ರಪ್ರದೇಶಕ್ಕೆ ಪೂರೈಕೆ ಆಗುತ್ತಿವೆ. ಈಗ ಸಿದ್ಧವಾಗಿರುವ ಸ್ವಯಂಚಾಲಿಕ ಪನ್ನೀರ್ ಘಟಕ ಚಾಲನೆಗೊಂದರೆ 10 ಟನ್ ಪನ್ನೀರ್ ಉತ್ಪಾದನೆ ಸಾಧ್ಯವಾಗಲಿದೆ. ಇದಕ್ಕೆ ಸರಾಸರಿ 80 ಸಾವಿರ ಲೀಟರ್ ಹಾಲು ಅಗತ್ಯ. 

ಈಗಾಗಲೇ ಹಾಲಿನ ಪೌಚ್ ಘಟಕ ನಿರ್ಮಾಣವಾಗಬೇಕು. ₹ 43 ಕೋಟಿ ವೆಚ್ಚದಲ್ಲಿ ಹಾಲಿನ ಪೌಚ್ (ನಿತ್ಯ ಬಳಕೆಯ ಹಾಲಿನ ಪ್ಯಾಕೆಟ್‌) ಸಿದ್ಧಗೊಳಿಸುವ ಘಟಕಕ್ಕೆ ವಿಸ್ತೃತ ಯೋಜನಾ ವರದಿ
ಸಹ ಸಿದ್ಧವಾಗಿದೆ. 

ಮೆಗಾ ಡೇರಿಯಲ್ಲಿನ ಸೌಲಭ್ಯಗಳನ್ನು ಈಗ ಮತ್ತಷ್ಟು ಹೆಚ್ಚಿಸಬೇಕಾಗಿದೆ. ಸದ್ಯ ಮೆಗಾ ಡೇರಿಯಲ್ಲಿ ಒಂದು ಲಕ್ಷ ಲೀಟರ್ ಹಾಲು ಸಂಗ್ರಹ ಸಾಮರ್ಥ್ಯದ ಸಂಗ್ರಹಾಗಾರಗಳು (ಸೈಲೊ ಘಟಕ) ಇವೆ. ಈ ಘಟಕಗಳಲ್ಲಿ ಹಾಲನ್ನು ಪಾಶ್ಚೀಕರಿಸಿದ ನಂತರ 60 ಸಾವಿರ ಲೀಟರ್ ಸಾಮರ್ಥ್ಯದ ಸಂಗ್ರಹಾಗಾರಗಳಿಗೆ ಹಂಚಿಕೆ ಮಾಡಲಾಗುತ್ತದೆ. ಈಗ 60 ಸಾವಿರ ಲೀಟರ್ ಸಾಮರ್ಥ್ಯದ ಐದು ಸೈಲೊ ಘಟಕಗಳು ಇವೆ.

ಜಿಲ್ಲೆಯಲ್ಲಿ ಸದ್ಯ ನಾಲ್ಕು ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತಿದೆ. ವಿಭಜನೆಯ ಕಾರಣ ಮತ್ತಷ್ಟು ಸೈಲೊ ಘಟಕಗಳು ಅಗತ್ಯವಾಗಿದೆ. ಮೆಗಾ ಡೇರಿಯಲ್ಲಿ ಇಂದಿಗೂ ಸುಸಜ್ಜಿತ ಗೋದಾಮುಗಳಿಲ್ಲ. ಟೆಟ್ರಾ ಪ್ಯಾಕ್‌ಗಳನ್ನು ಸಿದ್ಧಗೊಳಿಸಿದ ನಂತರ ಅದೇ ಆವರಣದಲ್ಲಿ ಇಡಲಾಗುತ್ತಿದೆ. ಹೀಗೆ ಪೌಡರ್ ಸಂಗ್ರಹ, ಉತ್ಪನ್ನಗಳ ಸಂಗ್ರಹ ಇತ್ಯಾದಿಗಳಿಗೆ ಗೋದಾಮುಗಳು ಅಗತ್ಯವಾಗಿವೆ. ಗೋದಾಮುಗಳ ನಿರ್ಮಾಣವೂ ತುರ್ತಾಗಿ ಆಗಬೇಕಾಗಿದೆ. ಸದ್ಯ ಮೆಗಾ ಡೇರಿಯಲ್ಲಿ 1,600 ಕೆ.ವಿ ಸಾಮರ್ಥ್ಯದ ವಿದ್ಯುತ್ ಬಳಕೆ ಆಗುತ್ತಿದೆ. ಸದ್ಯ ನಾಲ್ಕು ಕೊಳವೆಬಾವಿಗಳು ಮೆಗಾ ಡೇರಿಯ ಬಳಕೆಗೆ ಇವೆ. ಇದರಲ್ಲಿ ಎರಡರಲ್ಲಿ ನೀರು ಸಾಧಾರಣ. ಆದ್ದರಿಂದ ನಿತ್ಯ ನೀರನ್ನು ಖರೀದಿಸಲಾಗುತ್ತಿದೆ. ಹೀಗೆ ನೀರು, ವಿದ್ಯುತ್, ಬಾಯ್ಲರ್, ಸೈಲೊ...ಸೇರಿದಂತೆ ಪ್ರತಿ ಘಟಕಗಳ ಸಾಮರ್ಥ್ಯವನ್ನು
ಹೆಚ್ಚಿಸಬೇಕು.

ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ಪ್ರತ್ಯೇಕ ಒಕ್ಕೂಟ ರಚನೆಯಾದರೆ ಹಣ ಬಿಡುಗಡೆ ಆಗುತ್ತದೆ ಎನ್ನುವ ಆಶಾಭಾವ ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು