ಬುಧವಾರ, 17 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಂತಾಮಣಿ: ಶಿಥಿಲ ಕಟ್ಟಡ ನೆಲಸಮ ನನೆಗುದಿ

ಚಿಂತಾಮಣಿ ತಾಲ್ಲೂಕಿನಲ್ಲಿ 400ಕ್ಕೂ ಹೆಚ್ಚು ಶಾಲೆ ದುರಸ್ತಿಗೆ
Published 26 ಜೂನ್ 2024, 6:50 IST
Last Updated 26 ಜೂನ್ 2024, 6:50 IST
ಅಕ್ಷರ ಗಾತ್ರ

ಚಿಂತಾಮಣಿ: ತಾಲ್ಲೂಕಿನಲ್ಲಿ 323 ಸರ್ಕಾರಿ ಪ್ರಾಥಮಿಕ ಶಾಲೆಗಳು ಮತ್ತು 24 ಪ್ರೌಢಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಸರ್ಕಾರಿ ಶಾಲೆಗೆ ದಾಖಲಾಗುವ ಮಕ್ಕಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆ ಆಗುತ್ತಿರುವುದರಿಂದ ಕೊಠಡಿಗಳ ಕೊರತೆ ಅಷ್ಟಾಗಿ ಕಾಡುತ್ತಿಲ್ಲ. ಆದರೆ ಕೆಲವು ಕೊಠಡಿಗಳು ದುರಸ್ಥಿಗೆ ಕಾದಿವೆ.

ಶಾಲೆಗಳಲ್ಲಿ ಹಳೆಯ ಕಟ್ಟಡಗಳು ಹಾಳಾಗುತ್ತಿವೆ. ಅವುಗಳ ನೆಲಸಮವಾಗಬೇಕಿದೆ. ಮಕ್ಕಳು ಕಟ್ಟಡಗಳ ಸಮೀಪ ಹೋದಾಗ ಅನಾಹುತ ಸಂಭವಿಸಿದರೆ ತೊಂದರೆ ಆಗುತ್ತದೆ. ನೆಲಸಮ ಮಾಡಲು ಚಿತ್ರಗಳ ಸಮೇತ ಪ್ರಸ್ತಾವವನ್ನು ಜಿಲ್ಲಾ ಪಂಚಾಯಿತಿಗೆ ಸಲ್ಲಿಸಬೇಕು. ಲೋಕೋಪಯೋಗಿ ಇಲಾಖೆಯು ಪರಿಶೀಲಿಸಿ ತಾಂತ್ರಿಕ ವರದಿ ನೀಡಬೇಕು. ಅವರ ಅನುಮೋದನೆ ನಂತರವೇ ನೆಲಸಮಗೊಳಿಸಬೇಕು ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.

ಕೆಲವು ಹಳೆಯ ಮತ್ತು ತುಂಬಾ ಶಿಥಿಲವಾಗಿರುವ ಕೊಠಡಿಗಳಲ್ಲಿ ಬೋಧನೆ ನಡೆಯತ್ತಿಲ್ಲ. ಆದರೂ ಮಕ್ಕಳು ಸುತ್ತಮುತ್ತ ಅಟವಾಡುವುದರಿಂದ ಯಾವಾಗ ಏನಾಗುತ್ತದೋ ಎನ್ನುವ ಭಯ ಕಾಡುತ್ತದೆ. ನೆಲಸಮಕ್ಕೆ ಪ್ರಸ್ತಾವ ಕಳುಹಿಸಿದರೆ ನೂರೆಂಟು ನೆಪ ಹಾಗೂ ಮಾಹಿತಿ ಕೇಳುತ್ತಾರೆ. ಕಟ್ಟಡಗಳ ಇತಿಹಾಸದ ದಾಖಲೆ ಕೇಳುತ್ತಾರೆ. ದಾಖಲೆಗಳು ಸಿಗದ ಕಾರಣ ಶಿಥಿಲ ಕೊಠಡಿಗಳ ನೆಲಸಮಗೊಳಿಸುವ ಪ್ರಸ್ತಾವ ನನೆಗುದಿಗೆ ಬಿದ್ದಿರುವ ಉದಾಹರಣೆಗಳು ಇವೆ.

ತಾಲ್ಲೂಕಿನಲ್ಲಿ ಕೆಲವು ಶಾಲೆಗಳ ಕೊಠಡಿಗಳಲ್ಲಿ ಚಾವಣಿ ಬಿರುಕು ಬಿಟ್ಟಿದೆ. ಕುಸಿದುಬೀಳುವ ಹಂತದಲ್ಲಿದೆ. ಚಾವಣಿ ಮತ್ತು ಗೋಡೆ ಮುಟ್ಟಿದರೆ ಸಿಮೆಂಟ್ ಉದುರಿ ಬೀಳುತ್ತಿದೆ. ಮಳೆಗಾಲ ಆರಂಭವಾಗಿರುವುದರಿಂದ ಇನ್ನಷ್ಟು ಹಾಳಾಗುವ ಆತಂಕ ಎದುರಾಗಿದೆ.

ತಾಲ್ಲೂಕಿನಲ್ಲಿ ಸಣ್ಣ ಪ್ರಮಾಣದ ದುರಸ್ತಿಗಾಗಿ 399 ಕೊಠಡಿಗಳು, ದೊಡ್ಡಪ್ರಮಾಣದ ದುರಸ್ತಿಗಾಗಿ 154 ಕೊಠಡಿಗಳು ಕಾದಿವೆ. ಹೆಚ್ಚುವರಿಯಾಗಿ 66 ಕೊಠಡಿಗಳಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ಶಿಕ್ಷಣ ಇಲಾಖೆಯು ಕೊಠಡಿಗಳ ದುರಸ್ತಿಗೆ ₹ 54 ಲಕ್ಷದ ಕ್ರಿಯಾ ಯೋಜನೆ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿದೆ.

ಅಲ್ಲಲ್ಲಿ ಸರ್ಕಾರಿ ಶಾಲೆಗಳು ಶಿಥಿಲವಾಗಿವೆ. ಭಯದ ನಡುವೆ ವಿದ್ಯಾರ್ಥಿಗಳು ಪಾಠ ಕಲಿಯುತ್ತಿದ್ದಾರೆ. ಕೆಲವು ಕಟ್ಟಡಗಳು ದುರಸ್ತಿ ಕಂಡಿಲ್ಲ. ಇನ್ನು ಹಲವು ಕಟ್ಟಡಗಳು ದುರಸ್ತಿಗೆ ಸೇರುವ ಸ್ಥಿತಿಯಲ್ಲಿವೆ. ಕಾಮಗಾರಿ ಕೈಗೆತ್ತಿಕೊಳ್ಳಲು ಅನುದಾನ ನಿಗದಿಯಾಗಿಲ್ಲ. ಹೀಗಾಗಿ ಸದ್ಯಕ್ಕೆ ದುರಸ್ತಿ ಇಲ್ಲ. ಯಾವ ಮೂಲದಿಂದಲೂ ದುರಸ್ತಿಗೆ ಅನುದಾನ ಬಂದಿಲ್ಲ ಎನ್ನುತ್ತಾರೆ ಅಧಿಕಾರಿಗಳು.

ತಾಲ್ಲೂಕಿನ ಶಾಲೆಗಳಲ್ಲಿ ಕೊಠಡಿಗಳ ಕೊರತೆ ಇಲ್ಲದಿದ್ದರೂ ಹಲವು ಹಳೆ ಶಾಲೆಗಳ ಕಟ್ಟಡ ದುರಸ್ತಿ ಮಾಡಬೇಕಿದೆ. ಹಳೆ ಕಟ್ಟಡಗಳ ಚಿತ್ರಣ ಬದಲಾಗಬೇಕಿದೆ. ತುಂಬಾ ಹಳೆಯ ಶಾಲೆಗಳ ಕೊಠಡಿಗಳಲ್ಲಿ ನೆಲಹಾಸು ಗುಂಡಿ ಬಿದ್ದಿದೆ. ಚಾವಣಿ ಕುಸಿಯುವ ಹಂತಕ್ಕೆ ತಲುಪಿದೆ. 

ಕೆಲವು ಪ್ರಾಥಮಿಕ ಶಾಲೆಗಳಲ್ಲಿ ಕೊಠಡಿಗಳ ಕೊರತೆಯಿಂದ ತರಗತಿಗಳನ್ನು ಒಂದುಗೂಡಿಸಿ ಬೋಧಿಸಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳ ಕಲಿಕೆಗೆ ಹಿನ್ನಡೆ ಆಗಿದೆ. ಶಾಲಾ ಕಟ್ಟಡ ದುರಸ್ತಿ ಮಾಡುವಂತೆ ಸುಮಾರು ವರ್ಷಗಳಿಂದ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಶಾಲಾಭಿವೃದ್ಧಿ ಸಮಿತಿ ಪದಾಧಿಕಾರಿಗಳು ದೂರುತ್ತಾರೆ.

ಶಾಸಕರ ಪ್ರದೇಶಾಭಿವೃದ್ಧಿ ನಿಧಿ, ಸರ್ವಶಿಕ್ಷಣ ಅಭಿಯಾನ, ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಯೋಜನೆ, ಜಿಲ್ಲಾ ಪಂಚಾಯಿತಿಯ ವಿವಿಧ ಯೋಜನೆಯಡಿ ಶಾಲಾ ಕೊಠಡಿಗಳ ದುರಸ್ತಿಗೆ ಅನುದಾನ ಮಂಜೂರಾತಿಗೆ ಅವಕಾಶವಿದೆ. ಆದರೂ ಅನುದಾನ ಲಭ್ಯವಿಲ್ಲ.

ಬಹುತೇಕ ಪ್ರೌಢಶಾಲೆಗಳಲ್ಲಿ ಕೊಠಡಿಗಳ ಕೊರತೆ ಇಲ್ಲ. ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ದಾಖಲಾತಿ ಕಡಿಮೆ ಆಗುತ್ತಿರುವುದರಿಂದ ಕೊಠಡಿಗಳು ಹೆಚ್ಚುವರಿಯಾಗಿ ದೂಳು ತಿನ್ನುತ್ತಿವೆ. ಹೆಚ್ಚುವರಿ ಕೊಠಡಿಗಳ ಬಾಗಿಲು ತೆರೆಯುವುದಿಲ್ಲ, ಸ್ವಚ್ಛತೆಯೂ ಮಾಡುವುದಿಲ್ಲ. ಯಾವ ಉದ್ದೇಶಕ್ಕಾದರೂ ಬಳಕೆ ಮಾಡಿಕೊಳ್ಳುತ್ತಿಲ್ಲ ಎನ್ನುವ ದೂರುಗಳು ಇವೆ.

ಬಟ್ಲಹಳ್ಳಿ, ಮರಬಹಳ್ಳಿ, ಬುರುಡಗುಂಟೆ, ಮುನುಗನಹಳ್ಳಿ, ಮಾರಪ್ಪನಹಳ್ಳಿ, ಬ್ರಾಹ್ಮಣರದಿನ್ನೆ, ಕೆಂದನಹಳ್ಳಿ, ಆನೂರು, ಕೊಡದವಾಡಿ ಮತ್ತಿತರ ಶಾಲೆಗಳು ಸರ್ವಾಂಗೀಣ ಅಭಿವೃದ್ಧಿಯಾಗಿವೆ. ಶಿಕ್ಷಕರು, ಹಳೆಯ ವಿದ್ಯಾರ್ಥಿಗಳು, ಸಂಘಸಂಸ್ಥೆಗಳ ಸಹಯೋಗದಲ್ಲಿ ಹೊಸ ರೂಪು ಪಡೆದು ಅಭಿವೃದ್ಧಿಯ ಪಥದತ್ತ ಸಾಗಿವೆ.

ಅಪಾಯಕ್ಕೆ ಅವಕಾಶ

ಶಿಥಿಲ ಕೊಠಡಿಗಳನ್ನು ಶೀಘ್ರವಾಗಿ ನೆಲಸಮ ಮಾಡಬೇಕು. ಕಟ್ಟಡ ಸಂಪೂರ್ಣವಾಗಿ ಹಾಳಾಗಿದ್ದು ಯಾವುದೇ ಸಮಯದಲ್ಲಿ ಕುಸಿದುಬೀಳಬಹುದು. ಕೊಠಡಿಗಳಲ್ಲಿ ಬೋಧನೆ ನಡೆಯಲಿದ್ದರೂ ಅದರ ಬಳಿಯಲ್ಲೇ ಮಕ್ಕಳು ಒಡಾಡುವುದರಿಂದ ಅಪಾಯಕ್ಕೆ ಆಸ್ಪದ ನೀಡದಂತೆ ಎಚ್ಚರಿಕೆ ವಹಿಸಬೇಕು - ರಮೇಶ ಪೋಷಕ ಗುಡಮಾರಲಹಳ್ಳಿ

ಉದುರುವ ಸಿಮೆಂಟ್

ಶಿಥಿಲಗೊಂಡಿರುವ ಕಟ್ಟಡದಿಂದ ಮಕ್ಕಳನ್ನು ಶಾಲೆಗೆ ಕಳುಹಿಸಲು ಭಯವಾಗುತ್ತದೆ. ಸೋರುವ ಚಾವಣಿಯಿಂದ ಸಿಮೆಂಟ್ ಉದುರುತ್ತದೆ. ಇದು ಅಪಾಯದ ಎಚ್ಚರಿಕೆ ನೀಡಿದೆ. ಸಾಧ್ಯವಾದಷ್ಟು ಬೇಗ ಕೊಠಡಿಗಳನ್ನು ದುರಸ್ತಿಗೊಳಿಸಬೇಕು ಅಥವಾ ನೆಲಸಮಗೊಳಿಸಬೇಕು - ಮುನಿವೆಂಕಟಪ್ಪ ಮಂಗಾಲಹಳ್ಳಿ ಚಿಂತಾಮಣಿ

ಆಟದ ಮೈದಾನದ ಕೊರತೆ

ನಿವಾರಿಸಬೇಕು ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಗಳು ನಮ್ಮೂರ ಶಾಲೆ ಎಂದು ಗಮನ ಹರಿಸುವುದಿಲ್ಲ. ಸಮುದಾಯವೂ ತಲೆ ಕೆಡಿಸಿಕೊಳ್ಳುವುದಿಲ್ಲ. ಹೀಗಾಗಿ ಅಂತಹ ಶಾಲೆಗಳು ಹಿನ್ನಡೆ ಕಾಣುತ್ತಿವೆ. ಮಕ್ಕಳ ದಾಖಲಾತಿ ಕಡಿಮೆ ಆಗುತ್ತಿದೆ.ಕೆಲವು ಶಾಲೆಗಳಲ್ಲಿ ಆಟದ ಮೈದಾನ ಕಾಂಪೌಂಡ್ ಗ್ರಂಥಾಲಯ ಶೌಚಾಲಯ ಕುಡಿಯುವ ನೀರಿನ ಕೊರತೆ ಎದುರಿಸುತ್ತಿವೆ. ಮಕ್ಕಳ ದೈಹಿಕ ಬೆಳವಣಿಗೆಗೆ ಅಗತ್ಯವಾದ ಆಟದ ಮೈದಾನ ಕೊರತೆ ನಿವಾರಿಸಲು ಆದ್ಯತೆ ನೀಡಬೇಕು - ನರಸಿಂಮೂರ್ತಿ, ಪೋಷಕ ಚಿಂತಾಮಣಿ

ಪೆದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಿಗುವಪಲ್ಲಿ ಸರ್ಕಾರಿ ಶಾಲೆಯ ಕಟ್ಟಡ ಸ್ಥಿತಿ
ಪೆದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಿಗುವಪಲ್ಲಿ ಸರ್ಕಾರಿ ಶಾಲೆಯ ಕಟ್ಟಡ ಸ್ಥಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT