ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಂದಗೊಂಡ ಬೇಸಿಗೆ ಅರಮನೆ ಆವರಣ

ನಂದಿಗಿರಿಧಾಮ; ನಡಿಗೆ ಪಥ, ಹಲ್ಲು ಹಾಸು ನಿರ್ಮಾಣ
Published 11 ಮೇ 2024, 6:53 IST
Last Updated 11 ಮೇ 2024, 6:53 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಐತಿಹಾಸಿಕ ನಂದಿಗಿರಿಧಾಮಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ವ್ಯೂಪಾಯಿಂಟ್, ಯೋಗ ನಂದೀಶ್ವರ ದೇಗುಲ, ಟಿಪ್ಪು ಡ್ರಾಪ್ ಹೀಗೆ ಕೆಲವು ತಾಣಗಳು ಹೆಚ್ಚು ಗಮನ ಸೆಳೆಯುತ್ತಿದ್ದವು. 

ಗಿರಿಧಾಮದ ಪ್ರವೇಶದಲ್ಲಿಯೇ ಕಾಣುವ ಟಿಪ್ಪು ಬೇಸಿಗೆ ಅರಮನೆಯನ್ನು ಮೂಲಸ್ವರೂಪಕ್ಕೆ ಧಕ್ಕೆ ಬರದಂತೆ ಈಗಾಗಲೇ ನವೀಕರಿಸಲಾಗಿತ್ತು. ಹೀಗಿದ್ದರೂ ಅರಮನೆ ಸುತ್ತಲಿನ ವಾತಾವರಣವು ಮನಸ್ಸಿಗೆ ಹಿತ ಎನಿಸುತ್ತಿರಲಿಲ್ಲ. ಅರಮನೆ ಮುಂಭಾಗದಲ್ಲಿ ಶೆಡ್‌ನಂತಿದ್ದ ಕಟ್ಟಡ, ಕಸಕಡ್ಡಿಗಳು, ಅರೆ ಬರೆಯಾಗಿ ನಿರ್ಮಾಣವಾದ ಕಟ್ಟಡ, ಕಲ್ಲುಗಳ ರಾಶಿ, ಪೊದೆಗಳಂತಿದ್ದ ಗಿಡಗಂಟಿಗಳು ಅರಮನೆ ಅಂದಕ್ಕೆ ಕಪ್ಪು ಚುಕ್ಕಿಯಾಗಿತ್ತು. ಕಸಕಡ್ಡಿಯನ್ನು ತುಳಿಯುತ್ತಲೇ ಅರಮನೆ ಬಳಿಗೆ ಸಾಗಬೇಕಾಗಿತ್ತು. 

ಆದರೆ ಈಗ ಆ ಸ್ಥಿತಿ ಪೂರ್ಣವಾಗಿ ಬದಲಾಗಿದೆ. ಟಿಪ್ಪು ಬೇಸಿಗೆ ಅರಮನೆಯ ಆವರಣ ಕಣ್ಣಿಗೆ ಹಿತ ಮತ್ತು ಮನಸ್ಸಿಗೆ ಮುದ ನೀಡುತ್ತಿದೆ. ಅರಮನೆ ಮುಂಭಾಗದಲ್ಲಿ ನಂದಿ ಗಿರಿಧಾಮ ಸಮಗ್ರ ಅಭಿವೃದ್ಧಿ ಮತ್ತು ನಿರ್ವಹಣಾ ಸಮಿತಿಯು ನಡಿಗೆ ಪಥ ನಿರ್ಮಿಸಿದೆ. ಹಲ್ಲು ಹಾಸು, ಕಲ್ಲು ಬೆಂಜುಗಳ ಅಳವಡಿಸಿದೆ. ಹೀಗೆ ಕಲ್ಲುಗಳು, ಕಸಕಡ್ಡಿ, ಗಿಡಗಂಟಿಗಳು ತೆರವಾಗಿವೆ.  ವಿವಿಧ ಅಭಿವೃದ್ಧಿ ಕೆಲಸಗಳನ್ನು ನಡೆದಿವೆ.

ಅರಮನೆ ಮುಂಭಾಗದಲ್ಲಿನ ಹಿಂದಿನ ಸ್ಥಿತಿ ನೋಡಿದವರಿಗೂ ಮತ್ತು ಈಗ ನಡೆದಿರುವ ಕಾಮಗಾರಿಯನ್ನು ನೋಡಿದರೆ ಹಿತ ಎನಿಸುತ್ತದೆ. 

ಅರಮನೆ ಮುಂಭಾಗದಲ್ಲಿ ಕುಳಿತುಕೊಳ್ಳಲು ಕಲ್ಲಿನ ಬೆಂಚಿನ ವ್ಯವಸ್ಥೆ ಸಹ ಮಾಡಲಾಗಿದೆ. ಜೊತೆಗೆ ಅಪ್ಪಿಕೊ ಚಳವಳಿಯನ್ನು ಪ್ರತಿನಿಧಿಸುವಂತೆ ಎರಡು ಗೊಂಬೆಗಳು ಮರವನ್ನು ತಬ್ಬಿವೆ. ಮತ್ತೊಂದು ಕಡೆ ಎರಡು ಕೈಗಳ ನಡುವೆ ಮರವನ್ನು ಬೆಳೆಸಲಾಗಿದೆ. ಹೀಗೆ ಪರಿಸರದ ಮಹತ್ವವನ್ನು ಈ ಎರಡು ಮಾದರಿಗಳು ಸಾರುತ್ತಿವೆ.

ಟಿಪ್ಪು ಬೇಸಿಗೆ ಅರಮನೆಯ ಸಮೀಪದಲ್ಲಿಯೇ ಐತಿಹಾಸಿಕ ಅಮೃತ ಸರೋವರ ಮತ್ತು ಗವಿ ವೀರಭದ್ರಸ್ವಾಮಿ ದೇವಾಲಯವಿದೆ. ಇವುಗಳನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಈ ಕಾರಣದಿಂದ ಈ ಪ್ರದೇಶವನ್ನು ಅಭಿವೃದ್ಧಿಗೊಳಿಸಲಾಗಿದೆ.

‘ಟಿಪ್ಪು ಬೇಸಿಗೆ ಅರಮನೆಯು ಪುರಾತತ್ವ ಇಲಾಖೆಗೆ ಸೇರಿದ ಜಾಗವಾಗಿದೆ. ಈ ಸ್ಮಾರಕ ಸಹ ಆಕರ್ಷಣಿವಾಗಿ ಕಾಣಬೇಕಾಗಿದೆ. ಇದು ಸಹ ನಂದಿಗಿರಿಧಾಮದಲ್ಲಿ ಪ್ರಮುಖ ಸ್ಥಳ ಎನ್ನುವ ಭಾವನೆ ಪ್ರವಾಸಿಗರಲ್ಲಿ ಬರಬೇಕು. ಈ ಕಾರಣದಿಂದ ಇಲ್ಲಿ ಯಾವುದೇ ಜೀವವೈವಿಧ್ಯ ಮತ್ತು ಸೂಕ್ಷ್ಮ ವಲಯಕ್ಕೆ ಧಕ್ಕೆ ಆಗದ ರೀತಿಯಲ್ಲಿ ಅಭಿವೃದ್ಧಿ ಕೆಲಸಗಳು ನಡೆದಿವೆ’ ಎಂದು ಗಿರಿಧಾಮದಲ್ಲಿನ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಸಿಬ್ಬಂದಿ ತಿಳಿಸುವರು. 

ಗಿರಿಧಾಮದಲ್ಲಿನ ವ್ಯೂ ಪಾಯಿಂಟ್‌ ಮೇಲೆ ಒತ್ತಡ ಹೆಚ್ಚುತ್ತಿದೆ. ಎಲ್ಲ ಪ್ರವಾಸಿಗರು ಇಲ್ಲಿಯೇ ಹೆಚ್ಚು ಕಾಲ ನಿಲ್ಲುವರು. ಇದರಿಂದ ಆ ನಿರ್ಮಾಣದ ಮೇಲೆ ಒತ್ತಡವೂ ಹೆಚ್ಚುತ್ತಿದೆ. ಆದ್ದರಿಂದ ಗಿರಿಧಾಮದ ಮಯೂರ ಹೋಟೆಲ್ ಪಕ್ಕದಲ್ಲಿಯೇ ಸೆಲ್ಫಿ ಪಾಯಿಂಟ್ ಸಹ ಮಾಡಲಾಗಿದೆ. ಇದರಿಂದ ವ್ಯೂ ಪಾಯಿಂಟ್ ಮೇಲಿನ ಒತ್ತಡ ಕಡಿಮೆ ಆಗುತ್ತಿದೆ ಎಂದು ತಿಳಿಸಿದರು. 

ಟಿಪ್ಪು ಬೇಸಿಗೆ ಅರಮನೆ ಮುಂಭಾಗದಲ್ಲಿನ ಈಗಿನ ದೃಶ್ಯ
ಟಿಪ್ಪು ಬೇಸಿಗೆ ಅರಮನೆ ಮುಂಭಾಗದಲ್ಲಿನ ಈಗಿನ ದೃಶ್ಯ
ಟಿಪ್ಪು ಅರಮನೆ ಮುಂಭಾಗದಲ್ಲಿದ್ದ ಈ ಹಿಂದಿನ ಸ್ಥಿತಿ
ಟಿಪ್ಪು ಅರಮನೆ ಮುಂಭಾಗದಲ್ಲಿದ್ದ ಈ ಹಿಂದಿನ ಸ್ಥಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT