ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾರೇ ಅಭ್ಯರ್ಥಿಯಾದರೂ ಒಗ್ಗೂಡಿ ಕೆಲಸ: ಎಚ್‌.ಡಿ.ಕುಮಾರಸ್ವಾಮಿ

Published 10 ಮಾರ್ಚ್ 2024, 16:35 IST
Last Updated 10 ಮಾರ್ಚ್ 2024, 16:35 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿ ಯಾರೇ ಆದರೂ ಅವರನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನಮ್ಮ ಪಕ್ಷದ ಮೇಲಿದೆ. ಹೀಗಾಗಿ ಮಿತ್ರಪಕ್ಷ ಬಿಜೆಪಿ ಜತೆಗೂಡಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕು’

– ಇದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವರು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ತಮ್ಮ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಗೆ ನೀಡಿದ ಸೂಚನೆ.

ಎಚ್‌ಡಿಕೆ ಅವರ ಬೆಂಗಳೂರಿನ ನಿವಾಸದಲ್ಲಿ ಭಾನುವಾರ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಜೆಡಿಎಸ್ ಮುಖಂಡರ ಸಭೆ ನಡೆಯಿತು. 

ಮೈತ್ರಿ ಧರ್ಮಕ್ಕೆ ಕಟ್ಟುಬಿದ್ದು ಎಲ್ಲರೂ ಅಭ್ಯರ್ಥಿ ಪರವಾಗಿ ಕೆಲಸ ಮಾಡಬೇಕು. ಯಾರೇ ಅಭ್ಯರ್ಥಿಯಾದರೂ ಅವರು ಎನ್‌ಡಿಎ ಅಭ್ಯರ್ಥಿಯೇ ಆಗಿರುತ್ತಾರೆ. ಅವರ ಗೆಲುವಿನ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಬೇಕು ಎಂದು ತಿಳಿಸಿದರು.

ಈ ವೇಳೆ ಮುಖಂಡರು ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸ್ಪರ್ಧಿಸುವಂತೆ ಎಚ್‌.ಡಿ.ಕುಮಾರಸ್ವಾಮಿ ಮತ್ತು ಯುವ ಘಟಕದ ರಾಜ್ಯ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರನ್ನು ಒತ್ತಾಯಿಸಿದ್ದಾರೆ. ಮುಖಂಡರು ಮತ್ತು ಕಾರ್ಯಕರ್ತರ ಈ ಬೇಡಿಕೆ ತಳ್ಳಿ  ಇಬ್ಬರು ನಾಯಕರು ತಳ್ಳಿ ಹಾಕಿದ್ದಾರೆ. 

ಜೆಡಿಎಸ್- ಬಿಜೆಪಿ ಒಂದಾಗಿ ಎದುರಿಸಿದರೆ ಖಚಿತವಾಗಿ ಚಿಕ್ಕಬಳ್ಳಾಪುರ ಕ್ಷೇತ್ರವನ್ನು ಗೆಲ್ಲಬಹುದು. ಹಿಂದೆ ಬಿ.ಎನ್. ಬಚ್ಚೇಗೌಡ ಅವರ ಗೆಲುವಿನಲ್ಲಿ ಜೆಡಿಎಸ್ ಪಾತ್ರ ದೊಡ್ಡದಿತ್ತು. ಆದ್ದರಿಂದ ಈ ಕ್ಷೇತ್ರವನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಡುವಂತೆ ಬಿಜೆಪಿಯನ್ನು ಕೇಳಬೇಕು ಎಂದು ಕುಮಾರಸ್ವಾಮಿ ಅವರ ಮೇಲೆ ಸಭೆಯಲ್ಲಿ ಮುಖಂಡರು ಒತ್ತಡ ಹೇರಿದರು. 

ಈ ಬಗ್ಗೆ ತಾವು ರಾಜ್ಯ ಬಿಜೆಪಿ ನಾಯಕರು, ಕೇಂದ್ರ ಬಿಜೆಪಿ ನಾಯಕರ ಜತೆ ಚರ್ಚಿಸುವುದಾಗಿ ಕುಮಾರಸ್ವಾಮಿ ತಿಳಿಸಿದರು. ಕ್ಷೇತ್ರ ಯಾವ ಪಕ್ಷದ ಪಾಲಾದರೂ ನಾವೆಲ್ಲರೂ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಎಲ್ಲಾ ಹಂತದಲ್ಲಿಯೂ ಮಿತ್ರಪಕ್ಷದ ಕಾರ್ಯಕರ್ತರು, ಮುಖಂಡರ ಜತೆ ವಿಶ್ವಾಸ-ನಂಬಿಕೆಯಿಂದ ದುಡಿಯಬೇಕು.‌ ಅಭ್ಯರ್ಥಿ ಆಯ್ಕೆ ಬಗ್ಗೆ ಮಿತ್ರಪಕ್ಷದ ನಾಯಕರ ಜತೆ ಸಮಾಲೋಚನೆ ನಡೆಸುವೆ ಎಂದರು ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ
ತಿಳಿಸಿದರು.

ಚಿಕ್ಕಬಳ್ಳಾಪುರ, ಗೌರಿಬಿದನೂರು, ಬಾಗೇಪಲ್ಲಿ, ದೊಡ್ಡಬಳ್ಳಾಪುರ,  ದೇವನಹಳ್ಳಿ, ಹೊಸಕೋಟೆ, ಯಲಹಂಕ ಮತ್ತು ನೆಲಮಂಗಲ ವಿಧಾನಸಭಾ ಕ್ಷೇತ್ರದ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು. ಸುದೀರ್ಘವಾಗಿ ನಡೆದ ಸಭೆಯಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಪಕ್ಷದ ಬೆಳವಣಿಗೆ, ಚುನಾವಣೆ ಮತ್ತು ಅಭ್ಯರ್ಥಿಗಳ ವಿಚಾರವಾಗಿ ಚರ್ಚೆ ನಡೆದಿದೆ.

ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾದ ಡಾ.ಕೆ.ಸುಧಾಕರ್ ಮತ್ತು ಅಲೋಕ್ ವಿಶ್ವನಾಥ್ ಅವರ ವಿಚಾರವು ಸಹ ಸಭೆಯಲ್ಲಿ ಚರ್ಚೆಗೆ ಬಂದಿದೆ.  ಜೆಡಿಎಸ್–ಬಿಜೆಪಿ ಒಗ್ಗಟ್ಟಾಗಿ ಚುನಾವಣೆ ಎದುರಿಸಿದರೆ ಖಚಿತವಾಗಿ ಗೆಲ್ಲಬಹುದು. ಕ್ಷೇತ್ರದಲ್ಲಿ ಪಕ್ಷಕ್ಕೆ ಅನ್ಯಾಯ ಆಗದಂತೆ ಎಚ್ಚರಿಕೆ ಹೆಜ್ಜೆ ಇಡಬೇಕು. ಮೈತ್ರಿಯಾದರೂ ಮುಂದಿನ ದಿನಗಳಲ್ಲಿ ಜೆಡಿಎಸ್ ಹಿತದೃಷ್ಟಿ ಮುಖ್ಯ ಎಂದು ಮುಖಂಡರು
ಮನವಿ ಮಾಡಿದ್ದಾರೆ. 

ಚಿಂತಾಮಣಿ ಮಾಜಿ ಶಾಸಕ ಎಂ.ಕೃಷ್ಣಾರೆಡ್ಡಿ, ಯುವ ಜನತಾದಳ ರಾಜ್ಯ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಮಾಜಿ ಶಾಸಕರಾದ ಇ.ಕೃಷ್ಣಪ್ಪ, ಎಚ್.ಎಂ.ರಮೇಶ್ ಗೌಡ, ಡಾ.ಶ್ರೀನಿವಾಸ ಮೂರ್ತಿ, ಚಿಕ್ಕಬಳ್ಳಾಪುರ ಜಿಲ್ಲಾ ಅಧ್ಯಕ್ಷ ಮುನೇಗೌಡ, ಕಾರ್ಯಾಧ್ಯಕ್ಷ ಅಜ್ಜವಾರ ಕೆ.ಆರ್.ರೆಡ್ಡಿ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಮುನೇಗೌಡ, ಬಾಗೇಪಲ್ಲಿಯ ಡಿ.ಜೆ.ನಾಗರಾಜ್ ರೆಡ್ಡಿ, ಗೌರಿಬಿದನೂರಿನ ನರಸಿಂಹ ಮೂರ್ತಿ, ಹರೀಶ್‌ ಗೌಡ , ದೊಡ್ಡಬಳ್ಳಾಪುರದ ಅಪ್ಪಣ್ಣಯ್ಯ, ಮಧು, ಹೊಸಕೋಟೆ ಶ್ರೀಧರ್ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಬಿಜೆಪಿಗೆ ಚಿಕ್ಕಬಳ್ಳಾಪುರ ಕ್ಷೇತ್ರ

ಸಭೆಯಲ್ಲಿ ಡಾ.ಕೆ.ಸುಧಾಕರ್ ಮತ್ತು ಅಲೋಕ್ ವಿಶ್ವನಾಥ್ ಅವರ ಬಗ್ಗೆ ಚರ್ಚೆಗಳು ನಡೆದಿವೆ. ಈ ಇಬ್ಬರು ಮುಖಂಡರ ಬಗ್ಗೆ ಎಚ್‌ಡಿಕೆ ಮಾಹಿತಿ ಪಡೆದಿದ್ದಾರೆ. ಸಭೆಯಲ್ಲಿ ಪಾಲ್ಗೊಂಡಿದ್ದ ಮುಖಂಡರ ಪ್ರಕಾರ ಚಿಕ್ಕಬಳ್ಳಾಪುರ ಕ್ಷೇತ್ರವು ಬಿಜೆಪಿಗೆ ದೊರೆಯುವುದು ಖಚಿತ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT