ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಒಳಚರಂಡಿ ಕಳಪೆ ಕಾಮಗಾರಿ: ತಪ್ಪದ ಕಿರಿಕಿರಿ

Published 6 ಡಿಸೆಂಬರ್ 2023, 7:02 IST
Last Updated 6 ಡಿಸೆಂಬರ್ 2023, 7:02 IST
ಅಕ್ಷರ ಗಾತ್ರ

ಬಾಗೇಪಲ್ಲಿ: 10 ವರ್ಷಗಳ ಹಿಂದೆ ಪಟ್ಟಣದ ಪುರಸಭಾ ವ್ಯಾಪ್ತಿಯಲ್ಲಿ ₹17 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಮಾಡಿರುವ ಒಳಚರಂಡಿ ಕಾಮಗಾರಿ ಇಂದಿಗೂ ಜನರ ಬಳಕೆಗೆ ಬಾರದಾಗಿದೆ.

ಅಗೆದ ರಸ್ತೆ, ಗುಂಡಿಗಳನ್ನು ಮುಚ್ಚದೇ ಇರುವುದರಿಂದ ಜನ, ವಾಹನ ಸಂಚಾರಕ್ಕೆ ತೊಂದರೆಯಾದರೂ ಪುರಸಭೆ ಹಾಗೂ ರಾಜ್ಯ ಒಳಚರಂಡಿ ಹಾಗೂ ಕುಡಿಯುವ ನೀರಿನ ಸರಬರಾಜು ಮಂಡಳಿ‌ ಅಧಿಕಾರಿಗಳು ತಮಗೇನೂ ಸಂಬಂಧ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ.

ಪುರಸಭೆ ವ್ಯಾಪ್ತಿಯಲ್ಲಿ 23 ವಾರ್ಡ್‍ಗಳು ಇವೆ. ಪಟ್ಟಣದ ನ್ಯಾಷನಲ್ ಕಾಲೇಜಿನಿಂದ ಸಿವಿಲ್ ನ್ಯಾಯಾಲಯದವರೆಗೆ, ಕೊತ್ತಪಲ್ಲಿಯಿಂದ ರಾಮಸ್ವಾಮಿಪಲ್ಲಿ ವರೆಗೆ ವ್ಯಾಪಿಸಿದೆ. ಪಟ್ಟಣದ ಬಹುತೇಕ ವಾರ್ಡ್‍ಗಳಲ್ಲಿ ಒಳಚರಂಡಿ ಕಾಮಗಾರಿ ನಡೆಯುತ್ತಿದೆ. ಯಾವ ವಾರ್ಡ್‍ನಲ್ಲಿಯೂ ಕಾಮಗಾರಿ ಪೂರ್ಣಗೊಂಡಿಲ್ಲ.

ಪಟ್ಟಣದ ವಾರ್ಡ್‍ಗಳಲ್ಲಿ ಮ್ಯಾನ್‌ಹೋಲ್‌ಗಳನ್ನು ನಿರ್ಮಿಸಲಾಗಿದೆ. ಕಳಪೆ ಮಟ್ಟದ ಸಿಮೆಂಟ್, ಇಟ್ಟಿಗೆ ಹಾಗೂ ಪೈಪ್‌ ಜೋಡಿಸಿ ಮುಚ್ಚಿದ್ದಾರೆ. ಸಿಮೆಂಟ್, ಇಟ್ಟಿಗೆ ಅವಶೇಷಗಳು ಮುರಿದಿದೆ. ಕೆಲ ಕಡೆ ಅವೈಜ್ಞಾನಿಕವಾಗಿ ಎತ್ತರದ ಕಡೆ ಪೈಪ್‌ ಅಳವಡಿಸಲಾಗಿದೆ.

ಪಟ್ಟಣದ ವಾಲ್ಮೀಕಿ, ಅಂಬೇಡ್ಕರ್ ನಗರ, ಸಂತೆಮೈದಾನ, ಕೊತ್ತಪಲ್ಲಿ, ಗೂಳೂರು, ಕುಂಬಾರಪೇಟೆ, ಗಂಗಮ್ಮ ದೇವಿ ರಸ್ತೆ ಸೇರಿದಂತೆ ಪಟ್ಟಣದ ವಾರ್ಡ್‍ಗಳಲ್ಲಿ ಒಳಚರಂಡಿ ಕಾಮಗಾರಿಗೆ ರಸ್ತೆ ಅಗೆಯಲಾಗಿದೆ.

ಪಟ್ಟಣಕ್ಕೆ ಒಳಚರಂಡಿ ಕಾಮಗಾರಿ ಅತಿ ಅವಶ್ಯಕ ಆಗಿದೆ. 12 ವರ್ಷಗಳಿಂದ ಒಳಚರಂಡಿ ಕಾಮಗಾರಿಯನ್ನು ಜನರ ಬಳಕೆಗೆ ನೀಡದೆ ಪುರಸಭಾ ಹಾಗೂ ಒಳಚರಂಡಿ ಹಾಗೂ ನಗರ ಕುಡಿಯುವ ನೀರಿನ ಸರಬರಾಜು ಅಧಿಕಾರಿಗಳು ಜಾಣನಿದ್ದೆ ಮಾಡಿದ್ದಾರೆ. ಜಿಲ್ಲಾಧಿಕಾರಿ ಗಮನಹರಿಸಿ ಒಳಚರಂಡಿ ಕಾಮಗಾರಿ ಜನರ ಬಳಕೆಗೆ ತರಿಸಬೇಕು ಎಂದು ಒಂದನೇ ವಾರ್ಡ್ ನಿವಾಸಿ ನಿರ್ಮಲಮ್ಮ ಒತ್ತಾಯಿಸಿದರು.

ಒಳಚರಂಡಿ ಕಾಮಗಾರಿ ಹೆಸರಿನಲ್ಲಿ ಸರ್ಕಾರದ ಲಕ್ಷಾಂತರ ಹಣ ಲೂಟಿ ಆಗಿದೆ. ಕಾಮಗಾರಿಯ ನೆಪದಲ್ಲಿ ಅಧಿಕಾರಿಗಳ, ಗುತ್ತಿಗೆದಾರರ, ಜನಪ್ರತಿನಿಧಿಗಳ ಜೇಬಿಗೆ ಹಣ ಸೇರಿದೆ. ಕಾಮಗಾರಿ ಮಾತ್ರ ಪೂರ್ಣಗೊಂಡಿಲ್ಲ ಎಂದು ಸಿಪಿಎಂ ಟೌನ್ ಸಮಿತಿ ಕಾರ್ಯದರ್ಶಿ ಅಶ್ವತ್ಥಪ್ಪ ದೂರಿದರು.

ಹಿಂದಿನ ಪುರಸಭಾ ಆಡಳಿತ ಮಂಡಳಿ ಸದಸ್ಯರು ಕಾಮಗಾರಿ ಸ್ಥಳಗಳಿಗೆ ಭೇಟಿ ಮಾಡಿ ಪರಿಶೀಲನೆ ಮಾಡಿದ್ದಾರೆ. ಕಳಪೆ, ಅವೈಜ್ಞಾನಿಕವಾಗಿ ಒಳಚರಂಡಿ ಕಾಮಗಾರಿ ಮಾಡಿಸಿರುವ ಒಳಚರಂಡಿ ಹಾಗೂ ಕುಡಿಯುವ ನೀರಿನ ಸರಬರಾಜು ಮಂಡಲಿಯ ಅಧಿಕಾರಿಗಳ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ್ದರು. ಗುತ್ತಿಗೆದಾರರಿಗೆ ಬಿಲ್ ಮಾಡಬಾರದು ಎಂದು ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಗಿದೆ. ಕಾಮಗಾರಿ ಪೂರ್ಣಗೊಳಿಸುವಂತೆ ಪುರಸಭೆ ಮುಖ್ಯಾಧಿಕಾರಿ ನೋಟಿಸ್ ಜಾರಿ ಮಾಡಿದ್ದಾರೆ.

ಪಟ್ಟಣದಲ್ಲಿ ಒಳಚರಂಡಿ ಕಾಮಗಾರಿ ಪ್ರಗತಿಯಲ್ಲಿ ಇದೆ. ಒಳಚರಂಡಿ ಮಂಡಳಿ ಅಧಿಕಾರಿಗಳ ಬಳಿ ಚರ್ಚಿಸಿ, ಪೂರ್ಣಗೊಳಿಸುವಂತೆ ತಿಳಿಸಲಾಗಿದೆ ಎಂದು ಪುರಸಭಾ ಮುಖ್ಯಾಧಿಕಾರಿ ರುದ್ರಮ್ಮಶರಣಯ್ಯ ತಿಳಿಸಿದರು.

ಪಟ್ಟಣದ ಒಳಚರಂಡಿಯ ಮಲಿನ ನೀರಿನ ಸಂಗ್ರಹಣಾ ಘಟಕ ಪ್ರಗತಿಯ ಹಂತದಲ್ಲಿ ಇದೆ. 10 ದಿನಗಳ ಒಳಗೆ ಪೂರ್ಣಗೊಳಿಸಲಾಗುವುದು. ಅನುದಾನದ ಕೊರತೆಯಿಂದ ಕಾಮಗಾರಿ ವಿಳಂಬ ಆಗಿದೆ. ಸರ್ಕಾರಕ್ಕೆ ಅನುದಾನ ನೀಡುವಂತೆ ಪ್ರಸ್ತಾವ ಸಲ್ಲಿಸಲಾಗಿದೆ. ಅನುದಾನ ಬಿಡುಗಡೆ ಆದ ಬಳಿಕ ಒಳಚರಂಡಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಒಳಚರಂಡಿ ಹಾಗೂ ನಗರ ನೀರು ಸರಬರಾಜು ಮಂಡಳಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಲತಾ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT