ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ | 647 ಲಸಿಕಾ ಕೇಂದ್ರ; 1.22 ಲಕ್ಷ ಮಕ್ಕಳಿಗೆ ಗುರಿ

ಪಲ್ಸ್ ಪೋಲಿಯೊ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿ
Published 3 ಮಾರ್ಚ್ 2024, 12:44 IST
Last Updated 3 ಮಾರ್ಚ್ 2024, 12:44 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಮಕ್ಕಳಿಗೆ ಹಾಕುವ ಎರಡು ಹನಿ ಪೋಲಿಯೊ ಲಸಿಕೆಯಿಂದ ಪೋಲಿಯೊ ರೋಗ ಮುಕ್ತ ಸಮಾಜ ನಿರ್ಮಾಣ ಸಾಧ್ಯವಾಗಲಿದೆ ಎಂದು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಭಾನುವಾರ ಪಲ್ಸ್ ಪೋಲಿಯೊ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತಾಡಿದರು.

ರಾಷ್ಟ್ರೀಯ ಪಲ್ಸ್ ಪೋಲಿಯೊ ಅಭಿಯಾನಕ್ಕೆ ಜಿಲ್ಲೆಯಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. 0-5 ವರ್ಷದೊಳಗಿನ 1,22,816 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಪೋಲಿಯೊ ಎಂಬುದು ಅಂಗವಿಕಲತೆ ಉಂಟು ಮಾಡುವ ಸಾಂಕ್ರಾಮಿಕ ರೋಗ. ಇದು ಪೋಲಿಯೊ ಎಂಬ ವೈರಸ್ ನಿಂದ ಹರಡುತ್ತದೆ. ಲಸಿಕೆಯನ್ನು ಹನಿಗಳ ರೂಪದಲ್ಲಿ ಉಚಿತವಾಗಿ 0 ಯಿಂದ 5 ವರ್ಷದೊಳಗಿನ ಮಕ್ಕಳಿಗೆ ನೀಡಲಾಗುತ್ತದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಪೋಲಿಯೊ ಲಸಿಕಾ ಕಾರ್ಯಕ್ರಮಕ್ಕೆ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. 647 ಲಸಿಕಾ ಕೇಂದ್ರಗಳನ್ನು ತೆರೆಯಲಾಗಿದೆ. 2,664 ಲಸಿಕಾ ಸಿಬ್ಬಂದಿ ಭಾಗವಹಿಸಲಿದ್ದಾರೆ. 5 ವರ್ಷದ ಎಲ್ಲಾ ಮಕ್ಕಳಿಗೂ ತಪ್ಪದೇ ಸಮೀಪದ ಲಸಿಕಾ ಕೇಂದ್ರದಲ್ಲಿ ಹನಿ ಹಾಕಿಸಬೇಕು ಎಂದರು.

ಮಾ.6 ರವರೆಗೆ ನಡೆಯಲಿರುವ ಅಭಿಯಾನ ಭಾಗವಾಗಿ ನಗರ ಪ್ರದೇಶಗಳಲ್ಲಿ 4 ದಿನ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 3 ದಿನಗಳ ಕಾಲ ಬೆಳಿಗ್ಗೆ 8ರಿಂದ ಸಂಜೆ 5ರವರೆಗೆ ಲಸಿಕಾ ಕಾರ್ಯಕ್ರಮ ನಡೆಯಲಿದೆ. ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಪೋಲಿಯೊ ಮುಕ್ತ ಜಿಲ್ಲೆಯನ್ನಾಗಿಸಲು ಮಕ್ಕಳ ಪೋಷಕರು, ಸಾರ್ವಜನಿಕರು ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಯೊಂದಿಗೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.

 ಈ ವೇಳೆ ‘ಶ್ರವಣದ ದೋಷ ನಿಯಂತ್ರಣ ಮತ್ತು ನಿವಾರಣ ಕಾರ್ಯಕ್ರಮ’ಕ್ಕೂ ಚಾಲನೆ ನೀಡಿ ಕಿವುಡುತನವನ್ನು ತಡೆಗಟ್ಟುವುದು ಹೇಗೆ ಎಂಬುದರ ಬಗ್ಗೆ ಸಲಹೆ ಸೂಚನೆಗಳು ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಮಹೇಶ್ ಕುಮಾರ್, ಜಿಲ್ಲಾ ಶಸ್ತ್ರ ಚಿಕಿತ್ಸಕಿ ಡಾ.ಮಂಜುಳಾ ದೇವಿ, ನಿವಾಸಿ ವೈದ್ಯಾಧಿಕಾರಿ ಡಾ.ರಮೇಶ್, ತಾಲೂಕು ಆರೋಗ್ಯಾಧಿಕಾರಿ ಡಾ. ಮಂಜುಳಾ, ವೈದ್ಯರಾದ ಡಾ. ಪ್ರಕಾಶ್, ಡಾ ಚಂದ್ರಶೇಖರ್, ಡಾ. ಉಮಾ, ಜಿಲ್ಲಾ ನರ್ಸಿಂಗ್ ಅಧಿಕಾರಿ ಮಿನಾ, ಸರ್ಕಾರಿ ನೌಕರ ಸಂಘದ ಜಿಲ್ಲಾ ಅಧ್ಯಕ್ಷ ಜಿ. ಹರೀಶ್, ಕಾರ್ಯಕಾರಿ ಸಮಿತಿ ಸದಸ್ಯ ಶ್ರೀನಿವಾಸ್ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT