ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪ ಚುನಾವಣೆ: ಪುನಃ ನೀತಿ ಸಂಹಿತೆ ಜಾರಿಗೆ

ಗಡುವಿನೊಳಗೆ ಬ್ಯಾನರ್, ಫ್ಲೆಕ್ಸ್‌ ತೆರವುಗೊಳಿಸಲು ಸೂಚನೆ, ಕರ್ತವ್ಯ ಲೋಪ ಎಸಗುವ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮದ ಎಚ್ಚರಿಕೆ
Last Updated 11 ನವೆಂಬರ್ 2019, 19:30 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಮರು ನಿಗದಿಯಾದ ಚಿಕ್ಕಬಳ್ಳಾಪುರ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ ಡಿಸೆಂಬರ್ 5ರಂದು ನಡೆಯಲಿದ್ದು, ಸೋಮವಾರದಿಂದ (ನ.11) ಚುನಾವಣಾ ನೀತಿ ಸಂಹಿತೆ ಜಾರಿಯಾಗಿದೆ. ಪ್ರತಿಯೊಬ್ಬರು ಕಟ್ಟುನಿಟ್ಟಾಗಿ ಅದನ್ನು ಪಾಲಿಸಬೇಕು. ನೀತಿ ಸಂಹಿತೆ ಉಲ್ಲಂಘನೆ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೇಂದ್ರ ಮುಖ್ಯ ಚುನಾವಣಾಧಿಕಾರಿಗಳು ಚುನಾವಣೆ ಘೋಷಣೆ ಮಾಡಿದ್ದು, ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸರ್ಕಾರಿ ಕಚೇರಿಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಿರುವ ಬ್ಯಾನರ್, ಫ್ಲೆಕ್ಸ್‌ಗಳನ್ನು 24 ಗಂಟೆಗಳ ಒಳಗೆ ತೆಗೆದು ಹಾಕಬೇಕು. 72 ಗಂಟೆಗಳ ಒಳಗೆ ಖಾಸಗಿ ಸ್ಥಳಗಳಲ್ಲಿರುವ ಬ್ಯಾನರ್, ಫ್ಲೆಕ್ಸ್‌ಗಳನ್ನು ತೆರವು ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ’ ಎಂದು ಹೇಳಿದರು.

‘ಸೋಮವಾರ ಉಪ ಚುನಾವಣೆ ಅಧಿಸೂಚನೆ ಪ್ರಕಟವಾಗಿದೆ. ನವೆಂಬರ್ 18 ನಾಮಪತ್ರ ಸಲ್ಲಿಸಲು ಕೊನೆಯ ದಿನ. ನ.19 ರಂದು ನಾಮಪತ್ರಗಳ ಪರಿಶೀಲನೆ ಕಾರ್ಯ ನಡೆಯಲಿದೆ. ನಾಮಪತ್ರ ಹಿಂಪಡೆಯಲು ನ.21 ಕೊನೆಯ ದಿನ. ಚುನಾವಣಾಧಿಕಾರಿಯಾದ ಉಪವಿಭಾಗಾಧಿಕಾರಿ ಅವರ ಕಚೇರಿಯಲ್ಲಿ ಬೆಳಿಗ್ಗೆ 11 ರಿಂದ ಮಧ್ಯಾಹ್ನ 3ರ ವರೆಗೆ ನಾಮಪತ್ರಗಳನ್ನು ಸ್ವೀಕರಿಸಲಾಗುತ್ತದೆ’ ಎಂದರು.

‘ಡಿಸೆಂಬರ್ 5ರಂದು ಮತದಾನ, ಡಿ.9 ರಂದು ಮತ ಏಣಿಕೆ ಕಾರ್ಯ ನಡೆದು, ಫಲಿತಾಂಶ ಘೋಷಣೆಯಾಗಲಿದೆ. ನಡೆಯಲಿದೆ. ನ.11ಕ್ಕೆ ಚುನಾವಣಾ ನೀತಿ ಸಂಹಿತೆ ಕೊನೆಗೊಳ್ಳಲಿದೆ. ಈ ಚುನಾವಣೆಯಲ್ಲಿ ಕೂಡ ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಜತೆಗೆ ಮತ ಖಾತರಿ ಯಂತ್ರಗಳನ್ನು (ವಿವಿ ಪ್ಯಾಟ್‌) ಬಳಕೆ ಮಾಡಲಾಗುತ್ತದೆ’ ಎಂದು ಹೇಳಿದರು.

‘ಚುನಾವಣೆಯನ್ನು ಅತ್ಯಂತ ಮುಕ್ತ ಹಾಗೂ ಪಾರದರ್ಶಕವಾಗಿ ನಡೆಸಲು ಜಿಲ್ಲೆಯಾದ್ಯಂತ 21 ಮಂದಿ ಸೆಕ್ಟರ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಪ್ರತಿ ಚೆಕ್‌ಪೋಸ್ಟ್‌ಗಳಲ್ಲಿ ತಲಾ 10 ಅಧಿಕಾರಿಗಳ ಮೂರು ತಂಡಗಳನ್ನು ರಚಿಸಲಾಗಿದೆ. ಮೂರು ವಿಡಿಯೊ ಕಣ್ಗಾವಲು ತಂಡಗಳು, ಎರಡು ವಿಡಿಯೋ ಪರಿವೀಕ್ಷಣೆ ತಂಡ, ಮೂರು ಸಿವಿಜಿಲ್ 3 ತಂಡಗಳನ್ನು ರಚಿಸಲಾಗಿದೆ’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ಮಾತನಾಡಿ, ‘ಜಿಲ್ಲೆಯಲ್ಲಿ ಸಮಗ್ರ ಮತದಾರರ ಪಟ್ಟಿಯ ಪರಿಷ್ಕರಣೆ ಕಾರ್ಯಕ್ರಮದ ಅನುಷ್ಠಾನವು ಉತ್ತಮವಾಗಿ ನಡೆದಿದೆ. ಈಗಾಗಲೇ ಮತದಾರರ ಪಟ್ಟಿಯಲ್ಲಿದ್ದ ಸಾಕಷ್ಟು ತಪ್ಪುಗಳನ್ನು ತಿದ್ದುಪಡಿ ಮಾಡಲಾಗಿದೆ. ಉಪ ಚುನಾವಣೆಯು ಮುಕ್ತ ಹಾಗೂ ನ್ಯಾಯೋಚಿತವಾಗಿ ನಡೆಯಲು ಸಾರ್ವಜನಿಕರು ಸಹಕರಿಸಬೇಕು’ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಆರತಿ ಆನಂದ್, ಉಪವಿಭಾಗಾಧಿಕಾರಿ ಎ.ಎನ್.ರಘನಂದನ್, ಚುನಾವಣಾ ತಹಶೀಲ್ದಾರ್ ಲಕ್ಷ್ಮೀನಾರಾಯಣರೆಡ್ಡಿ ಹಾಜರಿದ್ದರು. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ಉಪಚುನಾವಣೆಯ ನಾಮಪತ್ರ ಸಲ್ಲಿಕೆಯ ಮೊದಲ ದಿನವಾದ ಸೋಮವಾರ ನಾಮಪತ್ರಗಳು ಸಲ್ಲಿಕೆಯಾಗಲಿಲ್ಲ.

***
ಅಂಕಿಅಂಶಗಳು

99,825–ಪುರುಷ ಮತದಾರರು

1,00,776 –ಮಹಿಳಾ ಮತದಾರರು

21 –ತೃತೀಯ ಲಿಂಗಿ ಮತದಾರರು

2,00,622 –ಜಿಲ್ಲೆಯ ಒಟ್ಟು ಮತದಾರರು

254 –ಒಟ್ಟು ಮತಗಟ್ಟೆಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT