ವೃದ್ಧೆ ಸಮಯಪ್ರಜ್ಞೆ, ದರೋಡೆ ಯತ್ನ ವಿಫಲ

7

ವೃದ್ಧೆ ಸಮಯಪ್ರಜ್ಞೆ, ದರೋಡೆ ಯತ್ನ ವಿಫಲ

Published:
Updated:
ಮಾರ್ಗಾನುಕುಂಟೆ ಗ್ರಾಮದ ಸುರೇಂದ್ರ ಬಾಬು ಅವರ ಮನೆಯಲ್ಲಿ ದರೋಡೆಕೋರರು ಚೆಲ್ಲಾಪಿಲ್ಲಿ ಮಾಡಿದ ಬಟ್ಟೆಗಳು

ಬಾಗೇಪಲ್ಲಿ: ತಾಲ್ಲೂಕಿನ ಮಾರ್ಗಾನುಕುಂಟೆ ಗ್ರಾಮದಲ್ಲಿ ಗುರುವಾರ ರಾತ್ರಿ ದರೋಡೆಕೋರರ ತಂಡವೊಂದು ಮನೆಯೊಂದನ್ನು ದೋಚಲು ಮುಂದಾದ ವೇಳೆ ಪಕ್ಕದ ಮನೆಯ ವೃದ್ಧೆಯೊಬ್ಬರು ಸ್ಥಳೀಯರನ್ನು ಎಚ್ಚರಗೊಳಿಸಿ ದರೋಡೆಕೋರರ ಸಂಚು ವಿಫಲಗೊಳಿಸಿದ್ದಾರೆ.

ಗ್ರಾಮದ ಮುಖ್ಯರಸ್ತೆಯಲ್ಲಿ ಚಿಲ್ಲರೆ ಅಂಗಡಿ ಇಟ್ಟುಕೊಂಡಿರುವ ಆರ್.ಎಲ್.ಸುರೇಂದ್ರ ಬಾಬು ಎಂಬುವರ ಮನೆಯಲ್ಲಿ ಈ ಘಟನೆ ನಡೆದಿದೆ. ಈ ವೇಳೆ ಮನೆಯಲ್ಲಿ ಸುರೇಂದ್ರ ಬಾಬು ಮತ್ತು ಅವರ ತಾಯಿ ಆದಿಲಕ್ಷ್ಮಮ್ಮ ಇದ್ದರು.

‘ಗುರುವಾರ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಐದು ದರೋಡೆಕೋರರ ತಂಡ ಸುರೇಂದ್ರ ಬಾಬು ಅವರ ಮನೆಯ ಕಿಟಕಿಯನ್ನು ಮುರಿದು, ಅದರ ಮೂಲಕ ಒಳ ಪ್ರವೇಶಿಸಿದ್ದಾರೆ. ಸುರೇಂದ್ರ ಅವರ ಮೇಲೆ ಹಲ್ಲೆ ಮಾಡಿ, ಕೈ, ಕಾಲುಗಳು ಕಟ್ಟಿಹಾಕಿ, ಬಾಯಿಗೆ ಬಟ್ಟೆ ತುರುಕಿ ಮಲಗಿಸಿದ್ದಾರೆ. ಮನೆಯಲ್ಲಿದ್ದ ಮೂರು ಬೀರು ಹಾಗೂ ಕಬ್ಬಿಣದ ಪೆಟ್ಟಿಗೆಯನ್ನು ರಾಡುಗಳಿಂದ ಮೀಟಿ ತೆಗೆದು ಆಭರಣ, ಹಣಕ್ಕಾಗಿ ತಡಕಾಡಿ, ಬೀರುಗಳಲ್ಲಿದ್ದ ಬಟ್ಟೆಗಳನ್ನು ಚೆಲ್ಲಾಪಿಲ್ಲಿ ಎಸೆದಿದ್ದಾರೆ’ ಎಂದು ಪೊಲೀಸರು ತಿಳಿಸಿದರು.

‘ಸುರೇಂದ್ರ ಅವರ ಮನೆಯೊಳಗಿನ ಸದ್ದು ಕೇಳಿ ಎಚ್ಚರಗೊಂಡ ಪಕ್ಕದ ಮನೆಯ ವೃದ್ಧೆ ನಾರಾಯಣಮ್ಮ ಅವರು ಎದ್ದು ಹೋಗಿ ಸುರೇಂದ್ರ ಅವರ ಅಣ್ಣನ ಮಗ ರಾಜೇಂದ್ರ ಅವರನ್ನು ಕರೆದುಕೊಂಡು ಬಂದಿದ್ದಾರೆ. ಇವರನ್ನು ನೋಡಿದ ದರೋಡೆಕೋರರ ತಂಡ ಅಲ್ಲಿಂದ ಪರಾರಿಯಾಗಿದೆ’ ಎಂದು ಹೇಳಿದರು.

ಈ ಸಂಬಂಧ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ಡಿವೈಎಸ್ಪಿ ಪ್ರಭುಶಂಕರ್ ಭೇಟಿ ನೀಡಿ, ಪರಿಶೀಲಿಸಿ, ಸುರೇಂದ್ರ ಬಾಬು ಹಾಗೂ ನಾರಾಯಣಮ್ಮ ಅವರ ಬಳಿ ಘಟನೆಯ ಬಗ್ಗೆ ಮಾಹಿತಿ ಸಂಗ್ರಹಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾರ್ತಿಕ್ ರೆಡ್ಡಿ, ‘ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ಸುಳಿವು ದೊರೆತಿವೆ. ಆರೋಪಿಗಳ ಬಂಧನಕ್ಕೆ ಜಾಲ ಬೀಸಲಾಗಿದೆ’ ಎಂದು ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !