ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾದಕ ವಸ್ತುಗಳಿಂದ ಬಾಳು ಹಾಳು

‘ಅಂತರರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳ ಸಾಗಾಣಿಕೆ ವಿರೋಧಿ ಸಪ್ತಾಹ’ ಜಾಥಾಗೆ ಚಾಲನೆ
Last Updated 15 ಸೆಪ್ಟೆಂಬರ್ 2020, 13:59 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಯುವಜನರು ಕ್ಷಣಿಕ ಸುಖಕ್ಕಾಗಿ ಸೇವಿಸುವ ಮಾದಕ ವಸ್ತುಗಳು ಆರೋಗ್ಯ ಹಾಳು ಮಾಡುವ ಜತೆಗೆ ಸಮಾಜದ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತವೆ. ಆದ್ದರಿಂದ ಯಾರು ಕೂಡ ಮಾದಕ ವಸ್ತುಗಳ ಸೇವನೆಯ ಬಲೆಗೆ ಬೀಳಬಾರದು’ ಎಂದು ಜಿಲ್ಲಾಧಿಕಾರಿ ಆರ್.ಲತಾ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಇಲಾಖೆ, ಪೊಲೀಸ್‌ ಇಲಾಖೆ ವತಿಯಿಂದ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ‘ಅಂತರರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳ ಸಾಗಾಣಿಕೆ ವಿರೋಧಿ ಸಪ್ತಾಹ’ ಜಾಥಾಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಮಾದಕ ವಸ್ತುಗಳ ಸೇವನೆ ಸಾವಿಗೆ ಆಹ್ವಾನ ನೀಡಿದಂತೆ. ವ್ಯಸನಕ್ಕೆ ಬಲಿಯಾದರೆ ವ್ಯಕ್ತಿ ಹಣ, ಸಮಯ, ಜೀವನವನ್ನೇ ವ್ಯರ್ಥ ಮಾಡಿಕೊಳ್ಳುತ್ತಾನೆ. ನಮಗೆ ದೊರೆತಿರುವ ಜೀವನ ಅಮೂಲ್ಯವಾದ್ದದ್ದು. ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಲು ನಾಗರಿಕರು ಮಾದಕ ವ್ಯಸನದ ದಾಸರಾಗದೆ ಸಮಾಜದ ಮುಖ್ಯವಾಹಿನಿಗೆ ಬಂದು ಗೌರವಯುತ ಜೀವನ ನಡೆಸಬೇಕು’ ಎಂದು ತಿಳಿಸಿದರು.

‘ಮನುಷ್ಯನ ಜೀವನದಲ್ಲಿ ಆರೋಗ್ಯ ತುಂಬಾ ಮುಖ್ಯ ಪಾತ್ರ ವಹಿಸುತ್ತದೆ. ಮಾದಕ ವಸ್ತುಗಳ ಸೇವನೆಯಿಂದ ಆರೋಗ್ಯ ಹಾಳಾಗುವುದು ಮಾತ್ರವಲ್ಲದೇ ಕುಟುಂಬದ ನೆಮ್ಮದಿಯೂ ನಾಶವಾಗಿ, ಮಾನಸಿಕ ಖಿನ್ನತೆಗೆ ಎಡೆ ಮಾಡುತ್ತದೆ. ಯುವಕರು ಒಮ್ಮೆ ಮಾದಕ ವಸ್ತುಗಳಿಗೆ ಶರಣಾದರೆ ಅದನ್ನು ತ್ಯಜಿಸುವುದು ಕಷ್ಟ. ಆದ್ದರಿಂದ ಇಂತಹ ವಿಚಾರಗಳ ವಿರುದ್ಧ ಪ್ರತಿಯೊಬ್ಬರು ಜಾಗೃತಿ ಮೂಡಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ಜನರಿಗೆ ಹೆಚ್ಚಿನ ಅರಿವು ಮೂಡಿಸಬೇಕು’ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಫೌಜಿಯಾ ತರನ್ನುಮ್ ಮಾತನಾಡಿ, ‘ಮಾದಕ ವಸ್ತುಗಳ ಸೇವನೆಯಿಂದ ಹಾನಿ ಉಂಟಾಗುತ್ತದೆಯೇ ವಿನಾ ಲಾಭವಿಲ್ಲ. ವಿದ್ಯಾರ್ಥಿಗಳು ದುಶ್ಚಟಗಳನ್ನು ತ್ಯಜಿಸಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳುವತ್ತ ಗಮನ ಹರಿಸಬೇಕು. ಇತರರಲ್ಲಿಯೂ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಬೇಕು‘ ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ ಮಿಥುನ್ ಕುಮಾರ್ ಮಾತನಾಡಿ, ‘ಮಾದಕ ವಸ್ತುಗಳನ್ನು ಮಾರಾಟ ಮತ್ತು ಸೇವನೆ ಮಾಡುವುದು ಕಾನೂನು ಬಾಹಿರ. ಜಿಲ್ಲೆಯನ್ನು ಮಾದಕ ವಸ್ತುಗಳಿಂದ ಮುಕ್ತಗೊಳಿಸಲು ಸಾರ್ವಜನಿಕರು ಇಲಾಖೆಯೊಂದಿಗೆ ಕೈಜೋಡಿಸಬೇಕು‘ ಎಂದು ತಿಳಿಸಿದರು.

‘ಮಾದಕ ವಸ್ತುಗಳ ಚಟ ಒಮ್ಮೆ ಅಂಟಿಕೊಂಡರೆ ಬಿಡುವುದು ಕಷ್ಟ. ನಿರಂತರ ಸೇವನೆಯಿಂದ ಅನೇಕ ರೋಗಗಳಿಗೆ ತುತ್ತಾಗಬೇಕಾಗುತ್ತದೆ. ಮಾದಕ ಸೇವನೆಗಳಿಂದ ಶರೀರ ಬಲಹೀನಗೊಳ್ಳುತ್ತದೆ. ವ್ಯಕ್ತಿಯ ಮೇಲೆ ಭಾವನಾತ್ಮಕ, ದೈಹಿಕ ಮತ್ತು ಮಾನಸಿಕವಾಗಿ ಪ್ರಭಾವ ಬೀರುತ್ತದೆ. ಆದ್ದರಿಂದ ಯಾರೂ ಮಾದಕ ಪದಾರ್ಥಗಳನ್ನು ಸೇವಿಸಬಾರದು‘ ಎಂದರು.

ಆಶಾ ಕಾರ್ಯಕರ್ತೆಯರು, ಅಧಿಕಾರಿಗಳು, ಆರೋಗ್ಯ ಇಲಾಖೆ ಸಿಬ್ಬಂದಿ ನಗರದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT