ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಲಿಗೆ ಹೈರಾಣಾದ ಕುಕ್ಕುಟೋದ್ಯಮ

ಗೌರಿಬಿದನೂರು; ಫಾರಂಗಳಲ್ಲಿ ಸಾಯುತ್ತಿವೆ ಕೋಳಿಗಳು, ವಾತಾವರಣ ತಂಪಾಗಿಸಲು ಪ್ರಯತ್ನ
Published 8 ಮೇ 2024, 7:30 IST
Last Updated 8 ಮೇ 2024, 7:30 IST
ಅಕ್ಷರ ಗಾತ್ರ

ಗೌರಿಬಿದನೂರು: ತಾಲ್ಲೂಕಿನಲ್ಲಿ ದಿನೇ ದಿನೇ ಉಷ್ಣಾಂಶ ಹೆಚ್ಚಳವಾಗುತ್ತಿದೆ. ಬಿರು ಬಿಸಿಲಿಗೆ ಕುಕ್ಕುಟೋದ್ಯಮ ತತ್ತರಿಸುತ್ತಿದೆ. 

ಅತಿಯಾದ ಬಿಸಿ ವಾತಾವರಣದಿಂದ ಕೋಳಿಗಳು ಮೃತಪಡುತ್ತಿವೆ. ಈ ಕಾರಣದಿಂದ ಸಾಕಾಣಿಕೆದಾರರು ಅವಧಿಗೂ ಮುನ್ನವೇ ಕೋಳಿ ಮಾರಾಟ ಮಾಡುತ್ತಿದ್ದಾರೆ. ಅಲ್ಲದೆ ಬೇಸಿಗೆಯ ಕಾರಣದಿಂದ ಕೋಳಿಗಳ ರಕ್ಷಣೆಗೆ ನಾನಾ ತಂತ್ರಗಳ ಮೊರೆ ಹೋಗಿದ್ದಾರೆ. ಹೀಗೆ ಕೋಳಿಗಳ ಸಾವು, ಅವುಗಳ ರಕ್ಷಣೆಯು ಸಾಕಾಣಿಕೆಯನ್ನು ದುಬಾರಿಯಾಗಿಸಿದೆ.

ಮಳೆ ಬಾರದಿದ್ದರೆ ಮತ್ತು ಇದೇ ರೀತಿಯಲ್ಲಿ ಬಿಸಿ ಗಾಳಿ ಮತ್ತು ಬಿಸಿಲು ಮುಂದುವರಿದರೆ ಕುಕ್ಕುಟೋದ್ಯಮಕ್ಕೆ ಮತ್ತಷ್ಟು ಕುತ್ತು ಎನ್ನುತ್ತಾರೆ ಕೋಳಿ ಸಾಕಾಣಿಕೆದಾರರು.

ಕೋಳಿಗಳಿಗೆ ನೀರು ಸಂಪಡಿಸುವುದು, ವಾತಾವರಣವನ್ನು ತಣ್ಣಗೆ ಇಡುವ ಪ್ರಯತ್ನ ಮಾಡುತ್ತಿದ್ದಾರೆ. 

ಹೀಗೆ ಬಿಸಿಲಿನ ಝಳ ಹೆಚ್ಚಳದಿಂದ ಕೋಳಿ ಸಾಕಾಣಿಕೆಯ ಕೇಂದ್ರಗಳು ಖಾಲಿ ಖಾಲಿಯಾಗುತ್ತಿವೆ. ಫಾರಂಗಳಲ್ಲಿ ಈಗ ದೊಡ್ಡ ಪ್ರಮಾಣದಲ್ಲಿ ಕೋಳಿಗಳು ಕಂಡು ಬರುತ್ತಿಲ್ಲ. ಕೋಳಿಗಳ ಸಾವು ಚಿಕನ್ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ಆದರೆ ಸಾಕಾಣಿಕೆದಾರರು ಮಾತ್ರ ಬೆಲೆ ಇರಲಿ ಕೋಳಿಗಳು ಉಳಿದರೆ ಸಾಕು ಎನ್ನುವ ಮಾತನಾಡುತ್ತಿದ್ದಾರೆ.

ಕೋಳಿಗಳು ಇದ್ದರೂ ಅವುಗಳ ಆರೈಕೆ ಸಾಕಾಣಿಕೆದಾರರಿಗೆ ದೊಡ್ಡ ಸವಾಲಾಗಿದೆ. ಕೋಳಿ ಫಾರಂ ಮಾಡಿದವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿಪರೀತ ತಾಪಮಾನದಿಂದ ಕೋಳಿ ಫಾರಂಗಳಲ್ಲಿ 2 ತಿಂಗಳಿನಿಂದ ಸಾವಿರಾರು ಕೋಳಿಗಳು ಮೃತಪಟ್ಟಿವೆ. ಇದರಿಂದ ಕುಕ್ಕುಟೋದ್ಯಮಗಳಿಗೆ ನಷ್ಟ ಉಂಟಾಗುತ್ತಿದೆ.

ತಾಲ್ಲೂಕಿನಲ್ಲಿ 40 ಡಿಗ್ರಿ ಸೆಲ್ಸಿಯಸ್ ತಾಪಮಾನವಿದೆ. ಇತ್ತೀಚಿನ ವರ್ಷಗಳಲ್ಲಿ ಇದು ದಾಖಲೆಯಾಗಿದೆ. ಕೋಳಿ ಸಾಕಣೆದಾರರು ಕೋಳಿ ಫಾರಂಗೆ ಹವಾನಿಯಂತ್ರಿತ ವ್ಯವಸ್ಥೆ, ಫ್ಯಾನ್ ಅಳವಡಿಕೆ ಮಾಡುತ್ತಿದ್ದಾರೆ. ಆಗಾಗ್ಗೆ ನೀರು ಸಿಂಪಡಿಸುತ್ತ ತಂಪು ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ. ಮರಿಗಳು ಕುಡಿಯುವ ನೀರು ಬಿಸಿಯಾಗದಂತೆ ನೋಡಿಕೊಳ್ಳುತ್ತಿದ್ದಾರೆ. ಹೀಗೆ ಆರೈಕೆಯ ಬಗ್ಗೆ ನಿತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಲಾಗುತ್ತಿದೆ.

ಹೀಗಿದ್ದರೂ ಸಮಸ್ಯೆ ಮಾತ್ರ ಪರಿಹಾರವಾಗುತ್ತಿಲ್ಲ. ತಾಲ್ಲೂಕಿನಲ್ಲಿ ನೂರಾರು ಕೋಳಿ ಫಾರಂಗಳಿವೆ. ಅತಿಯಾದ ಬಿಸಿಲಿನಿಂದ ಕೋಳಿಗಳು ಆಹಾರ ತಿನ್ನುವುದು ಕಡಿಮೆಯಾಗಿದೆ. ಉಸಿರಾಟದ ತೊಂದರೆಯಾಗಿದೆ. ತೂಕದಲ್ಲಿ ಇಳಿಕೆಯಾಗುತ್ತಿದೆ. ಶೆಡ್ ಸುತ್ತಲೂ ಮರಗಳಿದ್ದು, ತಾಪಮಾನ ಕಡಿಮೆ ಮಾಡಲು ಸ್ಪಿಂಕ್ಲರ್ ಅಳವಡಿಸಿದ್ದರೂ ಸಹ ಕೋಳಿಗಳು ಸಾಯುತ್ತಿವೆ.

ಸುಮಾರು 10 ಸಾವಿರ ಕೋಳಿಗಳಿರುವ ಒಂದು ಶೆಡ್‌ನಲ್ಲಿ ಬಿಸಿಲ ತಾಪಕ್ಕೆ ಈಗ ನಿತ್ಯ 30ರಿಂದ 40 ಕೋಳಿಗಳು ಸಾಯುತ್ತಿವೆ. ಕಳೆದ 30 ದಿನಗಳಲ್ಲಿ ಸುಮಾರು 1000 ಕ್ಕೂ ಹೆಚ್ಚು ಕೋಳಿಗಳು ಸತ್ತು ಹೋಗಿವೆ ಎಂದು ಕೋಳಿ ಸಾಕಾಣಿಕೆದಾರ ಹಿರೇಬಿದನೂರು ಬಾಲರಾಜು ಅಳಲು ತೋಡಿಕೊಂಡರು.

ಕೂಲರ್, ನೀರು ಸಿಂಪಡಣೆ ಮಾಡುತ್ತಿರುವ ಸಾಕಾಣಿಕೆದಾರರು. ಸಾವಿರಾರು ಕೋಳಿಗಳ ಸಾವು; ಬಲಿಯುವ ಮುನ್ನವೇ ಮಾರಾಟ. ಬಿಸಿಲ ಝಳದ ಕಾರಣದಿಂದ ಖರ್ಚು ವೆಚ್ಚಗಳು ಅಧಿಕ

ತಂಪಾಗಿಸಲು ನಾನಾ ತಂತ್ರ ಕೋಳಿಗಳನ್ನು ಉಳಿಸಿಕೊಳ್ಳುವುದು ಸವಾಲಾಗಿದೆ. ಇದಕ್ಕಾಗಿ ಸ್ಪಿಂಕ್ಲರ್‌ಗಳು ತೆಂಗಿನ ಗರಿಗಳನ್ನು ಚಾವಣಿಗೆ ಹಾಕಿ ನಿರಂತರ ನೀರು ಎರಚುವುದು ನಡೆದಿದೆ. ಫ್ಯಾನ್‌ಗಳನ್ನು ಹಾಕಿ ತಾಪಮಾನ ತಗ್ಗಿಸುವ ಪ್ರಯತ್ನಗಳು ನಡೆದಿವೆ. ಕೆಲವರು ಮಿನಿ ಕೂಲರ್‌ ಯಂತ್ರಗಳನ್ನೂ ಅಳವಡಿಸಿದ್ದಾರೆ. ಇದರಿಂದ ಖರ್ಚಿನ ಪ್ರಮಾಣ ಹೆಚ್ಚಾಗಿದೆ. ಆದಿ ರೆಡ್ಡಿ ಕೋಳಿ ಸಾಕಾಣಿಕೆದಾರರು ಕೆಂಗೇನಹಳ್ಳಿ ಗೌರಿಬಿದನೂರು *** ಮುನ್ನೆಚ್ಚರಿಕೆ ಅಗತ್ಯ ಕೋಳಿ ಫಾರಂಗಳಿಗೆ ತೆರಳಿ ಪರಿಶೀಲಿಸಿದ್ದೇನೆ. ತಾಲ್ಲೂಕಿನಲ್ಲಿ ತಾಪಮಾನ ಹೆಚ್ಚಿರುವ ಕಾರಣ ತೊಂದರೆ ಉಂಟಾಗಿದೆ. ಕುಕ್ಕುಟೋದ್ಯಮಿಗಳು ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ಕೋಳಿ ಫಾರಂಗಳಲ್ಲಿ ತಂಪು ವಾತಾವರಣ ನಿರ್ಮಿಸಬೇಕು. ಡಾ. ಮಾರುತಿ ಪಶು ಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಗೌರಿಬಿದನೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT