ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌರಿಬಿದನೂರು | ಹೆಚ್ಚಿದ ಬಿಸಿಲು: ಈಜಿಗೆ ಮೊರೆ ಹೋದ ಜನರು

ನರಸಿಂಹಮೂರ್ತಿ ಕೆ.ಎನ್
Published 30 ಏಪ್ರಿಲ್ 2024, 6:00 IST
Last Updated 30 ಏಪ್ರಿಲ್ 2024, 6:00 IST
ಅಕ್ಷರ ಗಾತ್ರ

ಗೌರಿಬಿದನೂರು: ದಿನದಿಂದ ದಿನಕ್ಕೆ ಬಿಸಿಲು ಹೆಚ್ಚುತ್ತಿದೆ. ಈ ಪರಿಣಾಮ ನಾಗರಿಕರು ತಣ್ಣನೆಯ ವಾತಾವರಣ ಬಯಸುತ್ತಿದ್ದಾರೆ. ಬೇಸಿಗೆ ರಜೆಯ ಈ ದಿನಗಳಲ್ಲಿ ಮಕ್ಕಳು ಬಿಸಿಲಿನಿಂದ ತಪ್ಪಿಸಿಕೊಳ್ಳಲು ಮತ್ತು ಖುಷಿಗಾಗಿ ಈಜಿನ ಮೊರೆ ಹೋಗುತ್ತಿದ್ದಾರೆ. 

ನಗರದಲ್ಲಿ ಮಕ್ಕಳು, ಯುವಕರು ಹಾಗೂ ಹಿರಿಯರು ಈಜುಕೊಳಗಳಲ್ಲಿ ಈಜಾಡಿ ಸಂಭ್ರಮ ಪಡುತ್ತಿದ್ದಾರೆ. ಗ್ರಾಮಾಂತರ ಭಾಗದಲ್ಲಿ ಬಾವಿಗಳಲ್ಲಿ ಈಜಾಡುತ್ತಿದ್ದಾರೆ. ನಗರದಲ್ಲಿ ಈಜುಕೊಳಗಳಲ್ಲಿ ಒಂದು ಗಂಟೆ ಈಜಿಗೆ ₹ 30 ರಿಂದ 50 ಶುಲ್ಕ ಪಡೆಯಲಾಗುತ್ತದೆ. ಅದೇ ಗ್ರಾಮಾಂತರದ ಬಾವಿಗಳಲ್ಲಿ ಉಚಿತವಾಗಿ ಈಜಾಡಲಾಗುತ್ತಿದೆ. 

ಬೆಳಿಗ್ಗೆ 10ರಿಂದಲೇ ಈಜು ಆರಂಭವಾಗುತ್ತಿದೆ. ಸಂಜೆಯವರೆಗೂ ಮಕ್ಕಳು, ಹಿರಿಯರು, ಯುವಕರು ಈಜಿನ ಖುಷಿ ಅನುಭವಿಸುತ್ತಿದ್ದಾರೆ. ಇನ್ನೂ ಕೆಲವು ಕಡೆಗಳಲ್ಲಿ ತೋಟ. ಹೊಲಗಳಲ್ಲಿರುವ ದೊಡ್ಡ ನೀರಿನ ಹೊಂಡ, ತೊಟ್ಟಿಗಳಲ್ಲಿ ಈಜಲಾಗುತ್ತಿದೆ.

ಬೇಸಿಗೆ ದೊಡ್ಡವರಷ್ಟೇ ಅಲ್ಲ, ಮಕ್ಕಳಿಗೂ ಕಿರಿಕಿರಿ ತರುತ್ತಿದೆ. ಸುಡುವ ಬಿಸಿಲು, ಬಿಸಿ ಗಾಳಿ, ವಿಪರೀತ ಸೆಖೆ, ಕೈ ಕೊಡುವ ವಿದ್ಯುತ್, ಕಾಡುವ ಆರೋಗ್ಯ ಸಮಸ್ಯೆಗಳು–ಹೀಗೆ ನಾನಾ ರೀತಿಯ ಸಮಸ್ಯೆಗಳನ್ನು ಬಿರು ಬಿಸಿಲು ತಂದೊಡ್ಡುತ್ತಿದೆ. 

ಬೇಸಿಗೆಯಲ್ಲಿ ಅತಿಯಾದ ಬೆವರು ನಿರ್ಜಲೀಕರಣ ಮತ್ತು ಅನೇಕ ಚರ್ಮದ ಸಮಸ್ಯೆಗಳನ್ನು ಉಂಟುಮಾಡುವ ಕಾರಣ ಆರೋಗ್ಯ ಕಡೆಗೆ ಕಾಳಜಿ ವಹಿಸುವುದು ಅಗತ್ಯ ಎನ್ನುತ್ತಾರೆ ವೈದ್ಯರು.

ಪ್ಯಾನ್ ನಡಿಯಲ್ಲಿ ಕುಳಿತರೂ ಬಿಸಿ ಗಾಳಿಯಿಂದ ಬಿಸಿ ಅನುಭವವಾಗುತ್ತದೆ.  ಮಧ್ಯಾಹ್ನದ ವೇಳೆ ಹೊರಗಡೆ ಓಡಾಡಲು ಜನ ಹಿಂದೇಟು ಹಾಕುತ್ತಿದ್ದಾರೆ. ಮಧ್ಯಾಹ್ನ ನಗರದ ರಸ್ತೆಗಳು, ಮಾರುಕಟ್ಟೆ ಪ್ರದೇಶ ಸೇರಿದಂತೆ ಜನನಿಬಿಡ ಪ್ರದೇಶಗಳು ಬಹುತೇಕ ಖಾಲಿ ಖಾಲಿಯಾಗಿವೆ.

ಸೂರ್ಯನ ಶಾಖದಿಂದ ರಕ್ಷಿಸಿಕೊಳ್ಳಲು ಜನ ಕರವಸ್ತ್ರ, ಛತ್ರಿಗಳ ಮೊರೆ ಹೋಗುತ್ತಿದ್ದಾರೆ. ಜನರು ಎಳನೀರು, ಕಬ್ಬಿನ ಹಾಲು ಸೇರಿ ತಂಪುಪಾನೀಯಗಳಿಗೆ ಮುಗಿಬೀಳುತ್ತಿದ್ದಾರೆ.

ಇನ್ನು ಮಕ್ಕಳ ಕಥೆಯಂತೂ ಹೇಳತೀರದು,ಸ್ವಲ್ಪ ಎಚ್ಚರ ತಪ್ಪಿದರೂ ಮಕ್ಕಳ ಆರೋಗ್ಯವು ಹದಗೆಡುತ್ತವೆ. ಮಕ್ಕಳಿಗೆ ಬೇಸಿಗೆ ರಜೆಯಿರುವ ಕಾರಣ ಹೊರಗಡೆ ಹೋಗಿ ಆಡಲು ಇಷ್ಟ ಪಡುತ್ತಾರೆ. ಬಿಸಿಲಿನ ಝಳವು ಹೆಚ್ಚಾಗಿರುವ ಕಾರಣ ಹೊರಾಂಗಣ ಆಟ ಮಕ್ಕಳನ್ನುಕಳುಹಿಸದೆ ಪಾಲಕರು ಒಳಾಂಗಣ ಆಟಗಳನ್ನು ಆಡಿಸುತ್ತಿದ್ದಾರೆ. ಮಕ್ಕಳು ಮನೆಯಲ್ಲಿ ಇರುವಂತೆ ನೋಡಿಕೊಳ್ಳುತ್ತಿದ್ದಾರೆ.

‘ಮಕ್ಕಳ ಬಗ್ಗೆ ಕಾಳಜಿವಹಿಸಿ’

ಸಾಕಷ್ಟು ಬಿಸಿಲು ಇರುವುದರಿಂದ ಮಕ್ಕಳನ್ನು ಹೊರಗಡೆ ಕಳುಹಿಸಬೇಡಿ. ಮಕ್ಕಳಿಗೆ ಸಾಕಷ್ಟು ನೀರು ಕುಡಿಸಿ.ಸರಳ ಅಥವಾ ಹತ್ತಿ ಬಟ್ಟೆಗಳನ್ನು ಧರಿಸಿ. ತಾಜಾ ಹಣ್ಣುಗಳು ತರಕಾರಿಗಳು ಮತ್ತು ವಿಟಮಿನ್ ‘ಸಿ’ ಯುಕ್ತ ಹಣ್ಣುಗಳನ್ನು ಹೆಚ್ಚಾಗಿ ನೀಡಬೇಕು. ಬೆಳಗ್ಗೆ ಮತ್ತು ಸಂಜೆ ಸಮಯ ಮಾತ್ರ ಆಟವಾಡಲು ಹೊರಗೆ ಕಳುಹಿಸಿ. ಪೋಷಕರು ಬೇಸಿಗೆಯ ಈ ದಿನಗಳಲ್ಲಿ ಮಕ್ಕಳ ಬಗ್ಗೆ ಹೆಚ್ಚು ಕಾಳಜಿವಹಿಸಿ ಎಂದು ಸಲಹೆ ನೀಡುತ್ತಾರೆ ಗೌರಿಬಿದನೂರಿನ ಮಕ್ಕಳ ವೈದ್ಯ ಡಾ. ರವಿ ಕುಮಾರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT