ಗುರುವಾರ , ಅಕ್ಟೋಬರ್ 21, 2021
28 °C
ಸಿಡಿಲು ಬಡಿದು ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಪ್ರಕರಣ

ಚಿಂತಾಮಣಿ: ಸರ್ಕಾರದ ನೆರವಿಗೆ ಸಂತ್ರಸ್ತೆ ಪರದಾಟ

ಎಂ.ರಾಮಕೃಷ್ಣಪ್ಪ Updated:

ಅಕ್ಷರ ಗಾತ್ರ : | |

Prajavani

ಚಿಂತಾಮಣಿ: ತಾಲ್ಲೂಕಿನ ಸೋಮಯಾಜಲಹಳ್ಳಿಯಲ್ಲಿ ಪ್ರಕೃತಿ ವಿಕೋಪದಿಂದ ಒಂದೇ ಕುಟುಂಬದ ನಾಲ್ವರು ಮೃತಪಟ್ಟು ಮೂವರು ಗಾಯಗೊಂಡ ಪ್ರಕರಣ ನಡೆದು ಆರು ತಿಂಗಳಾದರೂ ಸಂತ್ರಸ್ತರಿಗೆ ಇನ್ನೂ ನಯಾಪೈಸೆ ಪರಿಹಾರ ಸಿಕ್ಕಿಲ್ಲ.

ತಾಲ್ಲೂಕು ಆಡಳಿತ, ಜಿಲ್ಲಾಡಳಿತ, ಜನಪ್ರತಿನಿಧಿಗಳು ಆ ದಿನ ಸ್ಥಳಕ್ಕೆ ಭೇಟಿ ನೀಡಿ ಪ್ರಕೃತಿ ವಿಕೋಪದಡಿ ಪರಿಹಾರ ನೀಡಲಾಗುವುದು. ಪಂಚಾಯಿತಿಯಿಂದ ಮನೆ ನಿರ್ಮಿಸಿ ಕೊಡಲಾಗುವುದು. ಚಿಕಿತ್ಸಾ ವೆಚ್ಚ ಭರಿಸಲಾಗುವುದು ಎಂದು ಆಶ್ವಾಸನೆಗಳ ಸುರಿಮಳೆಯನ್ನೇ ಸುರಿಸಿ ಚಪ್ಪಾಳೆ ತಟ್ಟಿಸಿಕೊಂಡು ಹೋದವರು ಇಲ್ಲಿಯವರೆಗೆ ಕಣ್ಣೆತ್ತಿಯೂ ನೋಡುತ್ತಿಲ್ಲ. ಸಂತ್ರಸ್ತ ಮಹಿಳೆ ಜೀವನ ನಡೆಸಲು ಮತ್ತು ಚಿಕಿತ್ಸೆ ಪಡೆಯಲು ಹಣವಿಲ್ಲದೆ ಕಣ್ಣೀರು ಸುರಿಸುತ್ತಿದ್ದಾರೆ.

ಮುರುಗಮಲ್ಲ ಹೋಬಳಿಯ ಭೂಮಿಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಸೋಮಯಾಜಲಹಳ್ಳಿಯಲ್ಲಿ ಏ. 22ರಂದು ಸಿಡಿಲು ಬಡಿದು ಮನೆಯಲ್ಲಿದ್ದ 7 ಮಂದಿ ತೀವ್ರವಾಗಿ ಗಾಯಗೊಂಡಿದ್ದರು. ಮನೆ ಸಂಪೂರ್ಣವಾಗಿ ಕುಸಿದು ಬಿದ್ದಿತ್ತು. ಗ್ರಾಮದ ಅಂಬರೀಶ್ ಮತ್ತು ಗಾಯಿತ್ರಮ್ಮ ಕುಟುಂಬ ಘೋರ ದುರಂತಕ್ಕೆ ಈಡಾಗಿತ್ತು. ಕುಟುಂಬದ ಯಜಮಾನ ಅಂಬರೀಶ್, ಮಕ್ಕಳಾದ ವಾಣಿಶ್ರೀ, ಲಾವಣ್ಯ, ಗೌತಮ್ ಆಸ್ಪತ್ರೆಯಲ್ಲಿ ಮೃತಪಟ್ಟರು. ಪತ್ನಿ ಗಾಯಿತ್ರಮ್ಮ, ಆಕೆಯ ಮಾವ ಜಗನ್ನಾಥ್, ಸಾಕು ಮಗ ದರ್ಶನ್ ಚೇತರಿಸಿಕೊಂಡರು.

ಅಂಬರೀಶ್ ಸ್ಥಿತಿವಂತರಲ್ಲದಿದ್ದರೂ ಆಟೊ ಚಲಾಯಿಸಿಕೊಂಡು ನೆಮ್ಮದಿಯಿಂದ ಜೀವನ ನಡೆಸುತ್ತಿದ್ದರು. ತಂದೆ ಜಗನ್ನಾಥ್ ಕುರಿ ಮೇಯಿಸುತ್ತಿದ್ದರು. ಗಾಯಿತ್ರಮ್ಮ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ವಾಸಿಸಲು ಮನೆ ಮಾತ್ರ ಇತ್ತು. ಜಮೀನು ಇರಲಿಲ್ಲ. ಕಷ್ಟಪಟ್ಟು ದುಡಿದು ಮಕ್ಕಳೊಂದಿಗೆ ಸಂಸಾರ ನಡೆಸುತ್ತಿದ್ದರು. ಈ  ಕುಟುಂಬದ ಮೇಲೆ ಅನೀರೀಕ್ಷಿತವಾಗಿ ಜವರಾಯನ ದಾಳಿ ನಡೆದಿತ್ತು. ಅಂದು ಮಧ್ಯಾಹ್ನವೇ ಗುಡುಗು ಮಿಂಚಿನ ಸಹಿತ ಮಳೆ ಆರಂಭವಾಗಿದ್ದರಿಂದ ಎಲ್ಲರೂ ಮನೆ ಸೇರಿಕೊಂಡಿದ್ದರು.

‘ಮಧ್ಯಾಹ್ನದ ಊಟ ಮಾಡುತ್ತಿದ್ದೆವು. ಏನಾಯಿತು ಎಂಬುದು ಗೊತ್ತೇ ಆಗಲಿಲ್ಲ. ಪ್ರಜ್ಞೆ ಬರುವ ವೇಳೆಗೆ ಸುಟ್ಟಗಾಯಗಳಿಂದ ಆಸ್ಪತ್ರೆಯ ಹಾಸಿಗೆಯ ಮೇಲೆ ನರಳಾಡುತ್ತಿದ್ದೆವು’ ಎಂದು ದುರಂತವನ್ನು ಗಾಯಿತ್ರಮ್ಮ ನೆನಪಿಸಿಕೊಂಡು ಕಣ್ಣೀರು ಸುರಿಸುತ್ತಾರೆ.

ಶಾಸಕ ಎಂ. ಕೃಷ್ಣಾರೆಡ್ಡಿ, ತಹಶೀಲ್ದಾರ್ ಹನುಮಂತರಾಯಪ್ಪ ಹಾಗೂ ಇತರೆ ಅಧಿಕಾರಿಗಳು, ಜನಪ್ರತಿನಿಧಿಗಳು ಆಸ್ಪತ್ರೆ ಹಾಗೂ ಘಟನಾ ಸ್ಥಳಕ್ಕೆ ಭೇಟಿ ನೀಡಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು. ಮೃತಪಟ್ಟವರಿಗೆ ತಲಾ ₹ 50 ಸಾವಿರ ಹಾಗೂ ಸಂಪೂರ್ಣ ಚಿಕಿತ್ಸಾ ವೆಚ್ಚ ಭರಿಸಲಾಗುವುದು. ಪ್ರಕೃತಿ ವಿಕೋಪದಡಿ ಸರ್ಕಾರದಿಂದ ಪರಿಹಾರ ಕೊಡಿಸಲಾಗುವುದು ಎಂದು ಶಾಸಕರು ಭರವಸೆ ನೀಡಿ ಮುಂಗಡವಾಗಿ ₹ 1 ಲಕ್ಷ ನೀಡಿದ್ದರು. ಮನೆ ಕಟ್ಟಿಸಿಕೊಡುವುದು, ರೇಷನ್ ಕಾರ್ಡ್ ಮಾಡಿಕೊಡುವ ಭರವಸೆಯನ್ನು ಅಧಿಕಾರಿಗಳು ನೀಡಿದ್ದರು. ಶಾಸಕರಿಂದ ₹ 1 ಲಕ್ಷ ಹಾಗೂ ಅಂಬರೀಶ್ ಅಂತ್ಯಕ್ರಿಯೆಗೆ ₹ 10 ಸಾವಿರ ನೀಡಿರುವುದನ್ನು ಹೊರತುಪಡಿಸಿ, ಚಿಕಿತ್ಸೆ ವೆಚ್ಚ ಸೇರಿದಂತೆ ಯಾವುದೇ ಭರವಸೆಯೂ ಈಡೇರಿಸಿಲ್ಲ. ಮನೆ, ಪತಿ, ಮೂವರು ಮಕ್ಕಳನ್ನು ಕಳೆದುಕೊಂಡು ಅನಾಥಳಾಗಿರುವ ಗಾಯಿತ್ರಮ್ಮ ಜೀವನ ನಡೆಸಲು ಸಂಕಷ್ಟಪಡುತ್ತಿದ್ದಾರೆ. ಆಕೆಯೂ ಇನ್ನೂ ಚಿಕಿತ್ಸೆ ಪಡೆಯಬೇಕಾಗಿದೆ.  

‘ಚಿಕಿತ್ಸೆಯ ವೆಚ್ಚವನ್ನೂ ನೀಡಲಿಲ್ಲ. ಮನೆಯೂ ಇಲ್ಲ. ಕನಿಷ್ಠ ಊಟಕ್ಕಾಗಿ ಪಡಿತರ ಪಡೆಯಲು ರೇಷನ್ ಕಾರ್ಡ್, ವಿಧವಾ ವೇತನವೂ ಮಂಜೂರಾಗದೆ ಒಪ್ಪೊತ್ತಿನ ಊಟಕ್ಕೂ ಕಷ್ಟಪಡುತ್ತಿದ್ದೇನೆ. ಭರವಸೆ ನೀಡಿದ್ದ ಅಧಿಕಾರಿಗಳು, ಜನಪ್ರತಿನಿಧಿಗಳು ನಮ್ಮ ನೆರವಿಗೆ ಧಾವಿಸಬೇಕು’ ಎಂದು ಮನವಿ ಮಾಡುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.