ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಬಳ್ಳಾಪುರ: ನಿವೇಶನದ ಹಕ್ಕಿಗಾಗಿ 13 ವರ್ಷದಿಂದ ಅಲೆದಾಟ!

Published 19 ಜನವರಿ 2024, 7:26 IST
Last Updated 19 ಜನವರಿ 2024, 7:26 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಚಿಕ್ಕಬಳ್ಳಾಪುರ ನಗರಸಭೆಯಿಂದ ಐಡಿಎಸ್‌ಎಂಟಿ ಬಡಾವಣೆಯಲ್ಲಿ ನಮಗೆ ಮಂಜೂರಾಗಿರುವ ನಿವೇಶನವು ತಕರಾರಿನಲ್ಲಿ ಇರುವುದರಿಂದ ಬದಲಿ ನಿವೇಶನ ನೀಡಿ’–ಹೀಗೊಂದು ಅರ್ಜಿ ಹಿಡಿದು ಕಳೆದ 13 ವರ್ಷದಿಂದ ನಗರದ ಕೆ.ಎನ್.ಗೋಪಾಲಕೃಷ್ಣ, ಜಿಲ್ಲಾಧಿಕಾರಿ ಕಚೇರಿ, ನಗರಸಭೆ ಕಚೇರಿ ಅಲೆಯುತ್ತಲೇ ಇದ್ದಾರೆ. ಆದರೆ ಅವರ ಮನವಿಗೆ ಮಾತ್ರ ಮನ್ನಣೆ ಸಿಗುತ್ತಲೇ ಇಲ್ಲ. 

ಕೆ.ಎನ್.ಗೋಪಾಲಕೃಷ್ಣ ಅವರ ಅರ್ಜಿ ಚಿಕ್ಕಬಳ್ಳಾಪುರ ನಗರದ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದು ಎನಿಸಿರುವ ಐಡಿಎಸ್‌ಎಂಟಿ ಬಡಾವಣೆಯಲ್ಲಿ ನಿವೇಶನಗಳ ಹಂಚಿಕೆಯಲ್ಲಿ ಈ ಹಿಂದೆ ನಡೆದ ಅಧ್ವಾನಗಳಿಗೆ ಕೈಗನ್ನಡಿಯಂತೆ ಇದೆ. 

ಅಷ್ಟಕ್ಕೂ ಐಡಿಎಸ್‌ಎಂಟಿ ಬಡಾವಣೆಗೆ ಜಮೀನು ನೀಡಿದವರಲ್ಲಿ ಗೋಪಾಲಕೃಷ್ಣ ಸಹ ಒಬ್ಬರಾಗಿದ್ದಾರೆ. ಹೀಗೆ ಬಡಾವಣೆ ನಿರ್ಮಾಣಕ್ಕೆ ಜಮೀನು ನೀಡಿದ ವ್ಯಕ್ತಿಗೆ ನಿವೇಶನದ ಸಮಸ್ಯೆ ಪರಿಹಾರವಾಗಿಲ್ಲ!

ಏನಿದು ವಿವಾದ: ಚಿಕ್ಕಬಳ್ಳಾಪುರವು ಪುರಸಭೆಯಾಗಿದ್ದ 1989ರಲ್ಲಿ ಐಡಿಎಸ್‌ಎಂಟಿ ಬಡಾವಣೆಗಾಗಿ ಖಾಸಗಿ ಜಮೀನುಗಳನ್ನು ಸ್ವಾಧೀನಕ್ಕೆ ಪಡೆಯಿತು. ಆ ಪೈಕಿ ಗೋಪಾಲಕೃಷ್ಣ ಅವರ ತಂದೆಯ ಹೆಸರಿನಲ್ಲಿದ್ದ 1.11 ಎಕರೆಯನ್ನು ಸಹ ಸ್ವಾಧೀನಕ್ಕೆ ಪಡೆಯಲಾಯಿತು. ಇದಕ್ಕೆ ಪ್ರತಿಯಾಗಿ ಇವರ ಕುಟುಂಬ ₹ 78,952 ಹಣವನ್ನು ಪರಿಹಾರದ ರೂಪದಲ್ಲಿ ಪಡೆಯಿತು. 

ಜಮೀನು ಬಿಟ್ಟುಕೊಡುವ ವೇಳೆ ಪರಿಹಾರ ಧನದ ಜೊತೆಗೆ 9*12 ಮೀಟರ್ ಅಳತೆಯ ಎರಡು ನಿವೇಶನಗಳನ್ನು ಉಚಿತವಾಗಿ ನೀಡಬೇಕು ಎಂದು ಕೋರಿದ್ದರು. ಆದರೆ ನಿವೇಶನ ನೀಡುವ ವಿಚಾರದಲ್ಲಿ ತಕರಾರು ಎದುರಾಯಿತು. ಗೋಪಾಲಕೃಷ್ಣ ಕುಟುಂಬ ನ್ಯಾಯಾಲಯದ ಮೊರೆ ಹೋಯಿತು. ಅಂತಿಮವಾಗಿ ದಾವೆ ವಾಪಸ್ ಪಡೆಯುವ ಷರತ್ತಿಗೆ ಒಳಪಟ್ಟು ಒಂದು ನಿವೇಶನವನ್ನು ಉಚಿತವಾಗಿ ಮತ್ತು ಮತ್ತೊಂದು ನಿವೇಶನವನ್ನು ₹ 1.20 ಲಕ್ಷ ಪಡೆದು ನಗರಸಭೆಯು ಎನ್.ಗೋಪಾಲಕೃಷ್ಣ 459 ಮತ್ತು 460 ಸಂಖ್ಯೆಯ ಎರಡು ನಿವೇಶನಗಳನ್ನು ಅವರಿಗೆ ನೀಡಿತು. ನಗರಸಭೆ ಪೌರಾಯುಕ್ತರು ಈ ನಿವೇಶನಗಳನ್ನು ನೋಂದಣಿ ಸಹ ಮಾಡಿಕೊಟ್ಟರು. 

ಕಾಲಾನಂತರ ಹಣ ನೀಡಿ ಖರೀದಿಸಿದ 460 ಸಂಖ್ಯೆಯ ನಿವೇಶನವನ್ನು ಈ ಕುಟುಂಬ ಮಾರಾಟ ಮಾಡಿತು. ತಮಗೆ ಉಚಿತವಾಗಿ ನೀಡಿದ್ದ 459 ಸಂಖ್ಯೆಯ ನಿವೇಶನವನ್ನು ತಮ್ಮ ಹೆಸರಿಗೆ ಇ–ಖಾತೆ ಮಾಡಿಕೊಡುವಂತೆ ಪೌರಾಯುಕ್ತರಿಗೆ ಅರ್ಜಿ ಸಲ್ಲಿಸಿತು. 

ಪೌರಾಯುಕ್ತರು ನೋಂದಣಿ ಮಾಡಿಕೊಟ್ಟಿರುವ ನಿವೇಶನಗಳು ತಮಗೆ ಸೇರುತ್ತವೆ ಎಂದು ಖಾಸಗಿ ವ್ಯಕ್ತಿಯೊಬ್ಬರು ನ್ಯಾಯಾಲಯದಲ್ಲಿ ದಾವೆ ಹೂಡಿದರು. ನಿವೇಶನ ತಮ್ಮ ಹೆಸರಿನಲ್ಲಿ ಇದ್ದರೂ ‘ಹಕ್ಕು’ ಗೋಪಾಲಕೃಷ್ಣ ಅವರಿಗೆ ದೊರೆಯದಾಯಿತು. ಮನೆ ಕಟ್ಟಬೇಕು ಎನ್ನುವ ಅವರ ಆಸೆ ಈಡೇರಲೇ ಇಲ್ಲ. 

‘ನನಗೆ ಬದಲಿ ನಿವೇಶನ ನೀಡಿ. ಅನ್ಯಾಯ ಸರಿಪಡಿಸಿ’ ಎಂದು ಬಡಾವಣೆಗಾಗಿ ಜಮೀನು ನೀಡಿದ ಕುಟುಂಬ ಒಂದು ದಶಕದಿಂದ ಮನವಿ ಸಲ್ಲಿಸುತ್ತೇವೆ ಇದೆ. ಆದರೆ ಎರಡು ತಿಂಗಳಲ್ಲಿ ಸರ್ವೆ ಆಗುತ್ತದೆ, ಸಮಸ್ಯೆ ಪರಿಹಾರವಾಗುತ್ತದೆ, ನಿವೇಶನ ನೀಡುತ್ತೇವೆ ಎಂದು ಅಧಿಕಾರಿಗಳು ಕಾಲ ತಳ್ಳುತ್ತಲೇ ಬರುತ್ತಿದ್ದಾರೆ. ಅಧಿಕಾರಿಗಳು ಬದಲಾವಣೆಯಾದಂತೆ ಅರ್ಜಿ ಸಹ ಹಿಂದೆ ಬೀಳುತ್ತಿದೆ. ಗೋಪಾಲಕೃಷ್ಣ ಅವರು ಮಾತ್ರ ಕಚೇರಿಗೆ ಇಂದಿಗೂ ಅಲೆಯುತ್ತಲೇ ಇದ್ದಾರೆ. ಜನಸ್ಪಂದನ ಸಭೆಗಳಲ್ಲಿಯೂ ಜನಪ್ರತಿನಿಧಿಗಳಿಗೆ ಅರ್ಜಿ ನೀಡುತ್ತಲೇ ಇದ್ದಾರೆ.

ಬಡಾವಣೆ ನಿರ್ಮಾಣಕ್ಕಾಗಿ 1.11 ಎಕರೆ ಜಮೀನು ನೀಡಿದ್ದ ಕುಟುಂಬ ನಿವೇಶನಕ್ಕಾಗಿ ಕಚೇರಿಗೆ ಅಲೆಯುತ್ತಲೇ ಇರುವ ಗೋಪಾಲಕೃಷ್ಣ ಇಂದು, ನಾಳೆ ಎಂದು ಸಾಗಹಾಕುತ್ತಿರುವ ಅಧಿಕಾರಿಗಳು
‘ಬದಲಿ ನಿವೇಶನ ನೀಡಿ’
‘ಐಡಿಎಸ್‌ಎಂಟಿ ಬಡಾವಣೆಯ ಸರ್ವೆ ಆಗಿದೆ. ಇನ್ನು ಎರಡು ತಿಂಗಳಲ್ಲಿ ಸಮಸ್ಯೆ ಪರಿಹಾರವಾಗುತ್ತದೆ ಎಂದು ಈಗ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ 13 ವರ್ಷದಿಂದಲೂ ಒಂದಲ್ಲಾ ಒಂದು ಕಾರಣವನ್ನು ಹೇಳುತ್ತಲೇ ಇದ್ದಾರೆ. ನನ್ನ ಹೆಸರಿನಲ್ಲಿ ಉಚಿತ ನಿವೇಶನ ಇದ್ದರೂ ಹಕ್ಕು ದೊರೆಯುತ್ತಿಲ್ಲ. ಖಾಸಗಿಯವರು ಇದು ನಮ್ಮದು ಎನ್ನುತ್ತಿದ್ದಾರೆ’ ಎಂದು ಕೆ.ಎನ್.ಗೋಪಾಲಕೃಷ್ಣ ತಿಳಿಸಿದರು.  ತಕರಾರು ಇರುವುದರಿಂದ ಇ–ಸ್ವತ್ತು ಮಾಡುತ್ತಿಲ್ಲ. ಮನೆ ಕಟ್ಟಬೇಕು ಎನ್ನುವ ನಮ್ಮ ಆಸೆ ಈಡೇರಿಲ್ಲ. ನಮಗೆ ನಗರಸಭೆಯು ಬದಲಿ ನಿವೇಶನ ನೀಡಬೇಕು. ನಾವು ಬಡಾವಣೆ ನಿರ್ಮಾಣಕ್ಕಾಗಿ ಜಮೀನು ಕಳೆದುಕೊಂಡಿದ್ದೇವೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT