ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಗೇಪಲ್ಲಿ | ಹತ್ತು ದಿನಕ್ಕೊಮ್ಮೆ ನೀರು ಪೂರೈಕೆ

60ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಎದುರಾಗುವ ಆತಂಕ: ಮಿತ ಬಳಕೆಯೇ ಪರಿಹಾರ
Published 16 ಮಾರ್ಚ್ 2024, 7:13 IST
Last Updated 16 ಮಾರ್ಚ್ 2024, 7:13 IST
ಅಕ್ಷರ ಗಾತ್ರ

ಬಾಗೇಪಲ್ಲಿ: ತಾಲ್ಲೂಕಿನಲ್ಲಿ ಬೇಸಿಗೆ ಆರಂಭದಲ್ಲಿಯೇ ಕೆರೆ, ಕುಂಟೆ, ಚೆಕ್ ಡ್ಯಾಂಗಳು ಬರಿದಾಗುತ್ತಿದ್ದು, ಅಂತರ್ಜಲ ಕುಸಿದಿದೆ. ಜನ, ಜಾನುವಾರುಗಳಿಗೆ ಹಾಗೂ ಕೃಷಿಗೆ ನೀರಿನ ಸಮಸ್ಯೆ ತಲೆದೋರಿದೆ.

ಬಿಸಿಲ ಬೇಗೆ ಹೀಗೆಯೇ ಮುಂದುವರೆದರೆ ತಾಲ್ಲೂಕಿನ 60ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಎದುರಾಗಲಿದೆ ಎಂದು ಅಂದಾಜಿಸಲಾಗಿದೆ.

ತಾಲ್ಲೂಕಿನಲ್ಲಿ ಡಿಸೆಂಬರ್ 31ರ ಅಂತ್ಯಕ್ಕೆ 692 ಮಿ.ಮೀ. ವಾಡಿಕೆ ಮಳೆಯಾಗಬೇಕಿತ್ತು. ಆದರೆ ಈ ಬಾರಿ 560 ಮಿ.ಮೀಗೆ ಸೀಮಿತವಾಗಿದ್ದು, ಶೇ 19 ರಷ್ಟು ಮಳೆ ಕೊರತೆಯಾಗಿದೆ.

ಪುರಸಭಾ ವ್ಯಾಪ್ತಿಯ 23 ವಾರ್ಡ್‌ಗಳಲ್ಲಿ 21 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ತಾಲ್ಲೂಕಿನ ಪರಗೋಡು ಬಳಿಯ ಚಿತ್ರಾವತಿ ಜಲಾಶಯದಿಂದ ಪಟ್ಟಣಕ್ಕೆ ನೀರು ಸರಬರಾಜು ಮಾಡಲಾಗಿದೆ. ಪಟ್ಟಣದ ವ್ಯಾಪ್ತಿಯಲ್ಲಿ 111 ಕೊಳವೆಬಾವಿಗಳಿದ್ದು, 71 ಸುಸ್ಥಿತಿಯಲ್ಲಿವೆ. ಐದು ದುರಸ್ಥಿಯಲ್ಲಿವೆ. 25 ಬತ್ತಿ ಹೋಗಿವೆ.

ಪಟ್ಟಣದ 1, 2, 3, 7, 12, 13, 15ನೇ ವಾರ್ಡ್‌ಗಳಿಗೆ ನೀರು ಸರಬರಾಜು ಆಗಿಲ್ಲ. ಸದ್ಯ 10 ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ. 3 ಹಾಗೂ 4ನೇ ವಾರ್ಡ್‍ಗಳಿಗೆ ಚಿತ್ರಾವತಿ ಬ್ಯಾರೇಜ್‌ ನೀರು ಸರಬರಾಜು ಮಾಡಿಲ್ಲ. ಕೊಳವೆಬಾವಿಗಳ ನೆರವಿನಿಂದ ನೀರು ನೀಡಲಾಗುತ್ತಿದೆ. ಪಟ್ಟಣದಲ್ಲಿ ಸದ್ಯ ಒಂದನೇ ವಾರ್ಡ್‍ನಲ್ಲಿ ಟ್ಯಾಂಕರ್‌ನಿಂದ ನೀರು ನೀಡಲಾಗುತ್ತಿದೆ.

ಮಿಟ್ಟೇಮರಿ, ಗೂಳೂರು, ಪಾತಪಾಳ್ಯ, ಕಸಬಾ ಹೋಬಳಿಗಳಲ್ಲಿ ಕುಡಿಯಲು ಹಾಗೂ ಕೃಷಿ ಚಟುವಟಿಕೆಗಳಿಗೆ ನೀರಿನ ಅಭಾವ ತಲೆದೋರಿದೆ. ಕಳೆದ ಡಿಸೆಂಬರ್‌ನಲ್ಲಿ ಬಿದ್ದ ಭಾರಿ ಮಳೆಯಿಂದ ಇದೀಗ ಅಲ್ಪಸ್ವಲ್ಪ ನೀರು ಕೆರೆಗಳಲ್ಲಿ ಉಳಿದುಕೊಂಡಿದೆ. ತಾಲ್ಲೂಕಿನ ಚಿತ್ರಾವತಿ ಹಾಗೂ ವಂಡಮಾನ್ ಜಲಾಶಯಗಳಲ್ಲಿ ನೀರಿನ ಪ್ರಮಾಣ ಇಳಿಮುಖವಾಗಿದೆ. ಜಲಾಶಯಗಳಲ್ಲಿ ಹೂಳು ತುಂಬಿದ್ದರಿಂದ ಸಂಗ್ರಹ ಸಾಮರ್ಥ್ಯವೂ ಕಡಿಮೆ ಇದೆ.

ಕೊಳವೆಬಾವಿಗಳಲ್ಲಿ ನೀರಿನ ಮಟ್ಟ ಕುಸಿದಿರುವುದರಿಂದ ನೀರು ಪೂರೈಸಲಾಗದೆ ಬೆಳೆಗಳು ಒಣಗುತ್ತಿವೆ. ಸರ್ಕಾರ ನೀರಿನ ಬವಣೆ ತಪ್ಪಿಸಬೇಕು. - ಅಶ್ವತ್ಥರೆಡ್ಡಿ ಮಲ್ಲಸಂದ್ರ

ಪಟ್ಟಣದಲ್ಲಿ 10ರಿಂದ 15 ದಿನಕ್ಕೊಮ್ಮೆ ನೀರು ಸರಬರಾಜು ಮಾಡುತ್ತಿದ್ದಾರೆ. ದಿನಬಳಕೆಗೂ ಖಾಸಗಿಯವರಿಗೆ ಹಣ ನೀಡಿ ನೀರು ಖರೀದಿಸುವಂತಾಗಿದೆ. - ಶಾಂತಮ್ಮ

ಕೊಳವೆಬಾವಿ ದುರಸ್ತಿ ಮಾಡಿಸಬೇಕು. ಖಾಸಗಿ ಕೊಳವೆಬಾವಿಗಳಿಂದ ನೀರು ಸರಬರಾಜು ಮಾಡಬೇಕು. ಜಾನುವಾರುಗಳು ಕುಡಿಯಲು ಗ್ರಾಮಗಳ ತೊಟ್ಟಿಗಳಲ್ಲಿ ನೀರು ಸಂಗ್ರಹಿಸಬೇಕು.- ಕೃಷ್ಣಪ್ಪ ದಲಿತ ಹಕ್ಕುಗಳ ಸಮಿತಿ ಮುಖಂಡ

ಸದ್ಯ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇಲ್ಲ. ಮುಂದಿನ ದಿನಗಳಲ್ಲಿ 60 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉಲ್ಬಣ ಸಾಧ್ಯತೆ ಇದೆ. ನೀರನ್ನು ಪೋಲು ಮಾಡದೆ ಮಿತವಾಗಿ ಬಳಿಸಿ. - ಮಹೇಶ್ ಕುಡಿಯುವ ನೀರು ಸರಬರಾಜು ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌

ಗೃಹ ಬಳಕೆಗೆ ಉಪ್ಪು ನೀರು ಪಟ್ಟಣದಲ್ಲಿ ಶುದ್ಧ ಕುಡಿಯುವ ನೀರು ಸರಬರಾಜು ಕಡಿಮೆ ಇದೆ. ಗೃಹ ಬಳಕೆಗೆ ಉಪ್ಪು ನೀರು ಪೂರೈಸುತ್ತಿರುವುದರಿಂದ ಪಟ್ಟಣ ನಿವಾಸಿಗಳು ಖಾಸಗಿ ನೀರಿನ ಘಟಕಗಳಿಂದ ಕ್ಯಾನ್‌ ಒಂದಕ್ಕೆ ₹10 ನೀಡಿ ನೀರು ಹೊತ್ತು ತರುತ್ತಿದ್ದಾರೆ. ಮನೆಗಳ ಬಳಿ ಬರುವ ನೀರಿಗೆ ಕ್ಯಾನ್‌ ಒಂದಕ್ಕೆ ₹20 ನೀಡಿ ಖರೀದಿಸುವುದು ಅನಿವಾರ್ಯವಾಗಿದೆ.

ನೀರು ಸಂಗ್ರಹ ಯೋಜನೆಗಳಿಲ್ಲ ತಾಲ್ಲೂಕಿನ ಕೆರೆ ಕುಂಟೆ ಜಲಾಶಯ ಕೊಳವೆ ಬಾವಿಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿದೆ. ಅಂತರ್ಜಲವೂ ಕುಸಿದಿದೆ. ಮಳೆ ನೀರನ್ನು ಸಾಕಷ್ಟು ಪ್ರಮಾಣದಲ್ಲಿ ಹಿದಿಡಿಟ್ಟುಕೊಳ್ಳುವ ಯೋಜನೆಗಳು ತಾಲ್ಲೂಕಿನಲ್ಲಿಲ್ಲ.  ಕೆರೆ ಕುಂಟೆ ರಾಜಕಾಲುವೆ ಹಾಗೂ ಚಿತ್ರಾವತಿ ವಂಡಮಾನ್ ಜಲಾಶಯಗಳಲ್ಲಿ ಹೂಳು ತೆಗೆದಿಲ್ಲ. ನೀರು ಸಂಗ್ರಹ ಯೋಜನೆಗಳನ್ನು ಜಾರಿ ಮಾಡದಿರುವುದು ನೀರಿನ ಸಮಸ್ಯೆಯನ್ನು ಬಿಗಡಾಯಿಸಿದೆ. ಬಿಳ್ಳೂರು ನಾಗರಾಜ್ ಪ್ರಾಂತ ಕೃಷಿಕೂಲಿಕಾರರ ಸಂಘದ ರಾಜ್ಯ ಕಾರ್ಯದರ್ಶಿ  ವ್ಯಾಲಿ ನೀರು ಉಪಯೋಗಕ್ಕಿಲ್ಲ ಬಯಲುಸೀಮೆಯ ತಾಲ್ಲೂಕಿಗೆ ಡಾ.ಪರಮಶಿವಯ್ಯ ವರದಿ ಜಾರಿ ಹಾಗೂ ಕೃಷ್ಣಾ ನದಿಯಿಂದ ಪಾಲು ಸಿಕ್ಕಿದರೆ ಮಾತ್ರ ತಾಲ್ಲೂಕಿನ ಜನ ಜಾನುವಾರು ಕೃಷಿ ಚಟುವಟಿಕೆಗಳಿಗೆ ನೀರು ಸಿಗಲಿದೆ. ಉಳಿದಂತೆ ಯಾವುದೇ ವ್ಯಾಲಿಗಳಿಂದ ಕೆರೆಗಳಿಗೆ ನೀರು ಹರಿಸಿದರೂ ಪ್ರಯೋಜನ ಇಲ್ಲ. ನಿರ್ಮಲಮ್ಮ ಶಾಶ್ವತ ನೀರಾವರಿ ಹೋರಾಟಗಾರ್ತಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT