ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಎತ್ತಿನಹೊಳೆಗೆ ಅಡಿಗಲ್ಲು ಬಿದ್ದು ದಶಕ ಪೂರ್ಣ

ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ 10 ವರ್ಷ ಮುಗಿದರೂ ಬಯಲು ಸೀಮೆಗೆ ಬರಲಿಲ್ಲ ನೀರು
ಡಿ.ಎಂ.ಕುರ್ಕೆ ಪ್ರಶಾಂತ್
Published 5 ಮಾರ್ಚ್ 2024, 6:25 IST
Last Updated 5 ಮಾರ್ಚ್ 2024, 6:25 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಅದು 2014ರ ಮಾ.3ರ ಸೋಮವಾರ, ಬೆಳಿಗ್ಗೆ 10 ಗಂಟೆ. ಅಪಾರ ಜನಸ್ತೋಮದ ನಡುವೆ ನಗರದ ಬಿಜಿಎಸ್ ವರ್ಲ್ಡ್ ಶಾಲೆ ಆವರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎತ್ತಿನಹೊಳೆ ನೀರಾವರಿ ಯೋಜನೆಗೆ ಅಡಿಗಲ್ಲು ಹಾಕುತ್ತಿದ್ದರೆ, ಬಯಲು ಸೀಮೆಯ ಜಿಲ್ಲೆಗಳ ರೈತರು ಮತ್ತು ನಾಗರಿಕರ ಮನಸ್ಸಿನಲ್ಲಿ ಪುಳಕ. ಮಹತ್ವದ ಯೋಜನೆಯೊಂದ ಬಯಲು ಸೀಮೆಯ ಜಿಲ್ಲೆಗಳಿಗೆ ಅನುಷ್ಠಾನವಾಗುತ್ತಿರುವ ಖುಷಿ. 

ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಕೇಂದ್ರ ಸಚಿವರುಗಳಾದ ಚಿಕ್ಕಬಳ್ಳಾಪುರ ಸಂಸದ ಎಂ.ವೀರಪ್ಪ ಮೊಯಿಲಿ, ಕೋಲಾರ ಸಂಸದ ಕೆ.ಎಚ್.ಮುನಿಯಪ್ಪ, ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಸೇರಿದಂತೆ ಹಲವು ಸಚಿವರು, ಬಯಲು ಸೀಮೆಯ ಜನಪ್ರತಿನಿಧಿಗಳು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು. 

ರಾಜ್ಯದ ಪ್ರಮುಖ ನೀರಾವರಿ ಯೋಜನೆ ಎನಿಸಿದ್ದ ಎತ್ತಿನಹೊಳೆಗೆ ಚಾಲನೆ ನೀಡುವ ಸಂದರ್ಭದಲ್ಲಿ ಕರಾವಳಿ ಭಾಗದಲ್ಲಿ ತೀವ್ರ ವಿರೋಧ ಸಹ ವ್ಯಕ್ತವಾಗಿತ್ತು. ಇದು ಅವೈಜ್ಞಾನಿಕ ಯೋಜನೆ. ಪರಮಶಿವಯ್ಯ ವರದಿ ಜಾರಿಗೊಳಿಸಿ ಎಂದು ಆಗ್ರಹಿಸುತ್ತಿದ್ದ ಮುಖಂಡರನ್ನು ಅಂದು ಬೆಳಿಗ್ಗೆಯೇ ಪೊಲೀಸರು ಜೈಲಿನಲ್ಲಿ ಇಟ್ಟಿದ್ದರು. ಯೋಜನೆಗೆ ನಿರ್ವಿಘ್ನವಾಗಿ ಅಡಿಗಲ್ಲು ಬಿತ್ತು. 

ಈ ಎಲ್ಲ ಪರ–ವಿರೋಧದ ನಡುವೆ ನಡೆದ ಶಂಕುಸ್ಥಾಪನೆಯು ಬಯಲು ಸೀಮೆಯ ಜನರಲ್ಲಿ ಸಂಭ್ರಮವನ್ನು ತಂದಿತ್ತು. ಹಲವು ದಶಕಗಳಿಂದ ಬರದ ಹಣೆಪಟ್ಟಿಯನ್ನು ಹೊತ್ತ ತುಮಕೂರು, ಕೋಲಾರ, ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರಕ್ಕೆ ‘ಎತ್ತಿನಹೊಳೆ’ ಹಸಿರಾಗಿ ಕಂಡಿತ್ತು. ಈ ಭಾಗದ ಜನರ ನೀರಿನ ಬವಣೆ ಕೆಲವೇ ವರ್ಷಗಳಲ್ಲಿ ತೀರಲಿದೆ ಎನ್ನುವ ಉತ್ಸಾಹದಲ್ಲಿಯೇ ಅಂದು ನಾಯಕರು ಮಾತನಾಡಿದ್ದರು. 

ಆದರೆ ಯೋಜನೆಗೆ ಅಡಿಗಲ್ಲು ಬಿದ್ದು 10 ವರ್ಷಗಳಾದರೂ ಈ ಜಿಲ್ಲೆಗಳಿಗೆ ಹನಿ ನೀರು ಹರಿದಿಲ್ಲ. ಕಾಮಗಾರಿಗಳಿಗಾಗಿ ಪೈಪ್‌ಲೈನ್ ತೋಡುತ್ತಲೇ ಇದ್ದಾರೆ. ಭೂಸ್ವಾಧೀನ ಪ್ರಕ್ರಿಯೆಗಳು ನಡೆಯುತ್ತಲೇ ಇವೆ. ಒಟ್ಟಾರೆ ಯೋಜನೆ ಚಾಲ್ತಿಯಲ್ಲಿದೆ! ವೇಗವಿಲ್ಲ.

2012ರಲ್ಲಿ ₹ 8,323.50 ಕೋಟಿ ವೆಚ್ಚದ ಯೋಜನಾ ಅಂದಾಜಿಗೆ ಅನುಮೋದನೆ ನೀಡಲಾಗಿತ್ತು. 2014ರಲ್ಲಿ ಯೋಜನಾ ವೆಚ್ಚವನ್ನು ₹ 12,912.36 ಕೋಟಿಗೆ ಹೆಚ್ಚಿಸಲಾಯಿತು. ಎತ್ತಿನಹೊಳೆ ಯೋಜನೆಯ ಕಾಮಗಾರಿ ವೆಚ್ಚ ಈಗ ₹ 24,000 ಕೋಟಿಗೆ ಮುಟ್ಟಿದೆ.

ಪಶ್ಚಿಮಾಭಿಮುಖವಾಗಿ ಹರಿಯುವ ಎತ್ತಿನಹೊಳೆಯ 24.01 ಟಿಎಂಸಿ ಅಡಿ ನೀರನ್ನು ತಿರುಗಿಸಿ  ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಯ 29 ತಾಲ್ಲೂಕುಗಳ 38 ಪಟ್ಟಣ ಪ್ರದೇಶ ಮತ್ತು 6,657 ಗ್ರಾಮಗಳ ಜನರಿಗೆ ಕುಡಿಯುವ ನೀರು ಒದಗಿಸುವುದು ಯೋಜನೆಯ ಗುರಿ.

ಜಿಲ್ಲೆಗೆ ಎತ್ತಿನಹೊಳೆ ನೀರು ಪ್ರವೇಶಿಸಲಿರುವ ಹೆಬ್ಬಾಗಿಲೇ ಗೌರಿಬಿದನೂರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 2022ರಲ್ಲಿ ಮಂಡಿಸಿದ ಬಜೆಟ್‌ನಲ್ಲಿ ‘ಎತ್ತಿನಹೊಳೆ ಯೋಜನೆಯ ಎರಡನೇ ಹಂತದ 260 ಕಿ.ಮೀ ಉದ್ದದ ಗುರುತ್ವ ಕಾಲುವೆ ಟಿ.ಜಿ. ಹಳ್ಳಿ-ರಾಮನಗರ ಫೀಡರ್,
ಮಧುಗಿರಿ ಫೀಡರ್ ಹಾಗೂ ಗೌರಿಬಿದನೂರು ಫೀಡರ್ ಕಾಲುವೆ ಕಾಮಗಾರಿಗಳನ್ನು ಪ್ರಸಕ್ತ ಸಾಲಿನಲ್ಲಿ ಪೂರ್ಣಗೊಳಿಸಿ, ಮುಂದಿನ ವರ್ಷದ ಮುಂಗಾರು ಹಂಗಾಮಿನಲ್ಲಿ ನೀರು ಪೂರೈಕೆಗೆ ಕ್ರಮ ಜರುಗಿಸಲಾಗುವುದು ಎಂದು ಪ್ರಕಟಿಸಿದ್ದರು. ಆದರೆ ಗೌರಿಬಿದನೂರು ಭಾಗದಲ್ಲಿ ಪೈಪ್ ಅಳವಡಿಸುವ ಕಾಮಗಾರಿಯಷ್ಟೇ ನಡೆಯುತ್ತಿದೆ.

ಶಾಸಕ ಕೆ.ಎಚ್‌.ಪುಟ್ಟಸ್ವಾಮಿಗೌಡ, 2024ರ ಡಿಸೆಂಬರ್ ಅಥವಾ 2025ರ ಆರಂಭದಲ್ಲಿ ಗೌರಿಬಿದನೂರಿನ ಎತ್ತಿನಹೊಳೆ ನೀರು ಹರಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ. ಯೋಜನೆಯ ರೂವಾರಿ ಎಂದು ಹೇಳಿಕೊಳ್ಳುವ ಮಾಜಿ ಸಂಸದ ಎಂ.ವೀರಪ್ಪ ಮೊಯಿಲಿ 2026ಕ್ಕೆ ಜಿಲ್ಲೆಗೆ ಎತ್ತಿನಹೊಳೆ ನೀರು ಬರಲಿದೆ ಎನ್ನುತ್ತಾರೆ. ಮತ್ತೊಂದು ಚುನಾವಣೆ ಎದುರಿಸಲು ಸಜ್ಜಾಗುತ್ತಿದ್ದಾರೆ. 

ಚುನಾವಣಾ ದಾಳ:

ಪ್ರತಿ ಚುನಾವಣೆಯ ಸಂದರ್ಭದಲ್ಲಿ ರಾಜಕಾರಣಿಗಳ ಮಾತುಗಳಲ್ಲಿ ಎತ್ತಿನಹೊಳೆ ಜೋರಾಗಿಯೇ ಹರಿಯುತ್ತದೆ. ಲೋಕಸಭೆ, ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿಗೆ ಎತ್ತಿನಹೊಳೆ ಯೋಜನೆಯು ರಾಜಕೀಯ ದಾಳವಾಗಿ ಬಳಕೆ ಆಗುತ್ತದೆ.

ಚುನಾವಣೆ ಸಮಯದಲ್ಲಿ ಜಿಲ್ಲೆಗೆ ಭೇಟಿ ನೀಡುವ ಆಡಳಿತ ಮತ್ತು ವಿರೋಧ ‍ಪಕ್ಷಗಳ ನಾಯಕರ ಮಾತುಗಳಲ್ಲಿ ಪದೇ ಪದೇ ಎತ್ತಿನಹೊಳೆ ಯೋಜನೆ ಇಣುಕುತ್ತಿದೆ. ‌ಯೋಜನೆಯ ಕ್ರೆಡಿಟ್‌ಗಾಗಿ ವಾಕ್ಸಮರಗಳು ತಾರಕಕ್ಕೇರುತ್ತದೆ.  

ಈ ವರ್ಷ ಎತ್ತಿನಹೊಳೆ ನೀರು ಜಿಲ್ಲೆಗೆ ಹರಿಯುತ್ತದೆ ಎಂದು ಪ್ರತಿ ವರ್ಷ ರಾಜಕೀಯ ನಾಯಕರು ಹೇಳುತ್ತಲೇ ಯೋಜನೆ ಜಾರಿಯಾಗಿ ದಶಕ ಪೂರ್ಣವಾಗಿವೆ. ಹೀಗೆ ಯೋಜನಾ ವೆಚ್ಚ ಹೆಚ್ಚಳ, ನೀರು ಹರಿಯುವ ಬಗ್ಗೆ ಪರ–ವಿರೋಧದ ವಾಕ್ಸಮರದ ನಡುವೆಯೇ ಮತ್ತೊಂದು ಲೋಕಸಭೆ ಚುನಾವಣೆಗೆ ವಿಷಯವಸ್ತುವಾಗುವುದು ನಿಚ್ಚಳವಾಗುತ್ತಿದೆ.

‘ಎರಡೇ ವರ್ಷದಲ್ಲಿ ನೀರು ನೀಡುತ್ತೇವೆ ಎಂದಿದ್ದರು’
ಎರಡೇ ವರ್ಷಗಳಲ್ಲಿ ನಮಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡುತ್ತೇವೆ ಎಂದು ನಂಬಿಸಿ ಎತ್ತಿನಹೊಳೆ ಯೋಜನೆಗೆ ಅಡಿಗಲ್ಲು ಹಾಕಿದರು. ಯೋಜನೆಗೆ ಅಡಿಗಲ್ಲು ಹಾಕಿ ಹತ್ತು ವರ್ಷಗಳಾಗಿವೆ. ಇದು ರಾಜಕಾರಣಿಗಳು ಮತ್ತು ಗುತ್ತಿಗೆದಾರರಿಗೆ ಮಾತ್ರ ಲಾಭ ತಂದಿತು’ ಎನ್ನುತ್ತಾರೆ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್.ಆಂಜನೇಯ ರೆಡ್ಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT