ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಾತುಕತೆಗೆ ಬನ್ನಿ, ಸಮಸ್ಯೆ ಬಗೆಹರಿಸುವೆ: ಡಿ.ಕೆ. ಶಿವಕುಮಾರ್

ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಪರಿಶೀಲಿಸಿದ ಡಿಕೆಶಿ
Published 3 ಮಾರ್ಚ್ 2024, 16:04 IST
Last Updated 3 ಮಾರ್ಚ್ 2024, 16:04 IST
ಅಕ್ಷರ ಗಾತ್ರ

ಅಜ್ಜಂಪುರ : ‘ಭದ್ರಾ ಮೇಲ್ದಂಡೆ ಯೋಜನೆ ಭೂ ಪರಿಹಾರ ತಾರತಮ್ಯ ಪರಿಹರಿಸಲಾಗುವುದು. ಅಲ್ಲಿಯವರೆಗೆ ಕಾಮಗಾರಿಗೆ ಅಡ್ಡಿಪಡಿಸಬಾರದು’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರೈತರಲ್ಲಿ ಮನವಿ ಮಾಡಿದರು.

ಸಮೀಪ ಅಬ್ಬಿನ ಹೊಳಲು ಗ್ರಾಮದ ಬಳಿ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಪರಿಶೀಲಿಸಿದ ಬಳಿಕ, ರೈತರೊಂದಿಗೆ ಅವರು ಸಂವಾದ ನಡೆಸಿದರು.

‘ಸ್ಥಳೀಯ ಶಾಸಕರು, ಸಂತ್ರಸ್ತ ರೈತರು ಹಾಗೂ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿರುವ ಕೃಷಿಕರು ಜೊತೆಯಾಗಿ ಬನ್ನಿ. ಎಲ್ಲರ ಅಭಿಪ್ರಾಯ ಪಡೆದು ಸೂಕ್ತ ಪರಿಹಾರ ನಿಗದಿಗೊಳಿಸುತ್ತೇನೆ. ಏಕಾಏಕಿ ಪರಿಹಾರ ಮೊತ್ತ ಹೆಚ್ಚಿಸಲು ಸಾಧ್ಯವಿಲ್ಲ. ಕಾನೂನು ಚೌಕಟ್ಟಿನಲ್ಲಿಯೇ ಅದನ್ನು ನಿಗದಿಗೊಳಿಸಬೇಕು. ಮೊದಲು ಕೋರ್ಟ್‌ನಲ್ಲಿ ದಾಖಲಿಸಿರುವ ಪ್ರಕರಣ ಹಿಂಪಡೆದು ಮಾತುಕತೆಗೆ ಬನ್ನಿ. ನನ್ನ ಮೇಲೆ ವಿಶ್ವಾಸ ಇಡಿ, ಗೌರವಯುತ ಪರಿಹಾರ ಕೊಡಿಸುತ್ತೇನೆ. ಕಾಮಗಾರಿ ತಡೆದರೆ, ನಿಮ್ಮ ಕಾನೂನು ನೀವು ಮಾಡಿ, ನಮ್ಮ ಕಾನೂನು ನಾನು ಮಾಮಾಡುತ್ತೇವೆ’ ಎಂದರು.

ಕಾಮಗಾರಿ ವಿಳಂಬದಿಂದ ಯೋಚನಾ ವೆಚ್ಚ ಹೆಚ್ಚುತ್ತಿದೆ. ಕಾಮಗಾರಿ ಶೀಘ್ರ ಆರಂಭಿಸಿ, ಇಲ್ಲವಾದರೆ ನಿಮ್ಮನ್ನು ಅಮಾನತುಗೊಳಿಸಲಾಗುವುದು ಎಂದು ವಿಶ್ವೇಶ್ವರಯ್ಯ ಜಲ ನಿಗಮ ಮುಖ್ಯ ಎಂಜಿನಿಯರ್‌ಗೆ ಶಿವಕುಮಾರ್‌ ಅವರು ಎಚ್ಚರಿಕೆ ನೀಡಿದರು.

ಚಿತ್ರದುರ್ಗ ಭಾಗಕ್ಕೆ ನೀರು ಹರಿಸಲು 1.7 ಕಿ.ಮೀ ಕಾಮಗಾರಿ ಬಾಕಿ ಇದೆ, ಭಾಗದ 44.20 ಎಕರೆಯ 27 ರೈತರು ಕೋರ್ಟ್ ಮೊರೆ ಹೋಗಿದ್ದಾರೆ. ಇದರಿಂದ ಕಾಮಗಾರಿ ವಿಳಂಬವಾಗಿದೆ ಎಂದು ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕ ಸಣ್ಣ ಚಿತ್ತಯ್ಯ ಮಾಹಿತಿ ನೀಡಿದರು.

ಪ್ರತಿ ಎಕರೆಗೆ ಮುಗುಳಿ ಭಾಗದಲ್ಲಿ ₹48 ಲಕ್ಷ, ಹೆಬ್ಬೂರು ಭಾಗದಲ್ಲಿ ₹28 ಲಕ್ಷ ಪರಿಹಾರ ನಿಗದಿ ಮಾಡಿದ್ದರೆ, ನಮ್ಮ ಗ್ರಾಮದಲ್ಲಿ ಕೇವಲ ₹4 ಲಕ್ಷ ನಿಗದಿಗೊಳಿಸಲಾಗಿದೆ. ನಮಗೆ ₹40 ಲಕ್ಷ ಪರಿಹಾರ ಕೊಡಿಸಿ ಎಂದು ರೈತ ಷಡಾಕ್ಷರಿ ಮನವಿ ಮಾಡಿದರು.

ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಸುಧಾಕರ್, ಶಾಸಕ ಬಿ.ಜಿ. ಗೋವಿಂದಪ್ಪ, ಗೋಪಾಲಕೃಷ್ಣ, ರಘುಮೂರ್ತಿ, ಜಯಚಂದ್ರ, ಸುರೇಶ್ ಬಾಬು, ಕೆ.ಎಸ್. ಆನಂದ್, ವೀರೇಂದ್ರ ಪಪ್ಪಿ, ತಮ್ಮಯ್ಯ, ರಾಜೇಗೌಡ, ಮಾಜಿ ಸಂಸದ ಬಿಎನ್ ಚಂದ್ರಪ್ಪ, ಕಾಡ ಅಧ್ಯಕ್ಷ ಅಂಶುಮಂತ್, ನಿಗಮ ಮಂಡಳಿ ಅಧ್ಯಕ್ಷ ಹರೀಶ್ ಇದ್ದರು.

ವಿಶ್ವೇಶ್ವರಯ್ಯ ಮುಖ್ಯ ಎಂಜಿನಿಯರ್ ಎಂ. ಶಿವಪ್ರಕಾಶ್, ಅಧೀಕ್ಷಕ ಎಂಜಿನಿಯರ್ ಎಫ್.ಎಚ್. ಲಮಾಣಿ, ಕಾರ್ಯಪಾಲಕ ಎಂಜಿನಿಯರ್ ಎಂ.ಪ್ರಕಾಶ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸಿದ್ದೇಶ್, ಕಾರ್ಯ ಪಾಲಕ ಎಂಜಿನಿಯರ್ ಹರ್ಷ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT