ಐವರು ಆರೋಪಿಗಳ ಬಂಧನ

7
ಕಲಬೆರಕೆ ಹಾಲು ಪೂರೈಕೆ ಪ್ರಕರಣ

ಐವರು ಆರೋಪಿಗಳ ಬಂಧನ

Published:
Updated:

ಚಿಕ್ಕಮಗಳೂರು: ಕಲಬೆರಕೆ ಹಾಲನ್ನು ಕೆಎಂಎಫ್‌ಗೆ ಪೂರೈಕೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿ, ಕೋರ್ಟ್‌ಗೆ ಹಾಜರುಪಡಿಸಿದ್ದಾರೆ.

ಕುರುಬರಹಳ್ಳಿ ಶ್ರೀನಿವಾಸ್, ಮಾಚೇನಹಳ್ಳಿ ಅಶೋಕ, ಕೆ.ಬಿ.ಹಾಳ್ ಉದಯ, ನರಸೀಪುರದ ಸಣ್ಣಸ್ವಾಮಿ, ಹಾಲಿನ ವಾಹನದ ದಯಾನಂದ್ ಅವರನ್ನು ಬಂಧಿಸಿದ್ದಾರೆ. ಕೆಲವು ಆರೋಪಿಗಳು ತಲೆಮರೆಸಿಕೊಂಡಿದ್ದು, ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಕಲಬೆರಕೆ ಹಾಲು ಪೂರೈಕೆ ಬಗ್ಗೆ ಹಾಸನದ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಗೋಪಾಲಯ್ಯ ಅವರು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಅರಸೀಕೆರೆ ಶೀಥಲೀಕರಣ ಕೇಂದ್ರದಲ್ಲಿ ಮೊಬೈಲ್ ಟೆಸ್ಟಿಂಗ್ ವಾಹನದಲ್ಲಿ ಹಾಲನ್ನು ಪರೀಕ್ಷಿಸಿದಾಗ ಕಲಬೆರಕೆ ಆಗಿರುವುದು ಕಂಡು ಬಂದಿದೆ.

ತಾಲ್ಲೂಕಿನ ಕುರುಬರಹಳ್ಳಿ, ಮಾಚೇನಹಳ್ಳಿ, ಕೆ.ಬಿ.ಹಾಳ್, ನರಸೀಪುರ ಹಾಲು ಉತ್ಪಾದಕರ ಸಂಘಗಳಿಂದ ಹಾಲು ಕಲಬೆರಕೆ ಮಾಡಲಾಗಿದೆ ಎಂಬ ಸುಳಿವು ಸಿಕ್ಕಿತ್ತು.

ಕುರುಬರಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಂಘದ ಕಾರ್ಯದರ್ಶಿ ಪಾರ್ವತಮ್ಮ ಮತ್ತು ಪುತ್ರ ಶ್ರೀನಿವಾಸ್, ಕೆ.ಬಿ.ಹಾಳ್, ಮಾಚೇನಹಳ್ಳಿ ಸಂಘಗಳ ಕಾರ್ಯದರ್ಶಿಗಳು, ವಾಹನ ಸಿಬ್ಬಂದಿ, ಅರಸೀಕೆರೆಯ ಶೀಥಲೀಕರಣ ಕೇಂದ್ರದ ಕೆಲ ಸಿಬ್ಬಂದಿ, ಗುತ್ತಿಗೆ ನೌಕರರು ಶಾಮೀಲಾಗಿ ಕೃತ್ಯ ಎಸಗಿದ್ದಾರೆ. ಹಾಲು ಉತ್ಪಾದಕರ ನಕಲಿ ಹೆಸರು ಸೃಷ್ಟಿಸಿದ್ದಾರೆ. ಅರಸೀಕರೆ ಶೀಥಲೀಕರಣ ಕೇಂದ್ರದಲ್ಲಿಯೂ ಸಿಬ್ಬಂದಿ ಹಾಲನ್ನು ತಪಾಸಣೆ ಮಾಡದೆ ನೇರವಾಗಿ ಹಾಸನದ ಕೆಎಂಎಫ್‌ಗೆ ಕಳಿಸಿದ್ದಾರೆ. ಸುಮಾರು ಮೂರು ವರ್ಷಗಳಿಂದ ಈ ಕೃತ್ಯ ನಡೆದಿದೆ.

ನಂಬಿಸಿ ವಂಚನೆ (ಐಪಿಸಿ 417), ನಕಲಿ ದಾಖಲೆ ಸೃಷ್ಟಿ (418), ವಂಚನೆ (420), ದುಷ್ಕೃತ್ಯ (426), ನಂಬಿಕೆ ದ್ರೋಹ (408), ವಿಶ್ವಾಸ ದ್ರೋಹ (409), ಅಪರಾಧಕ್ಕೆ ಸಂಚು ರೂಪಿಸುವುದು (120–ಬಿ), ಸಮಾನ ಉದ್ದೇಶದ ಅಪರಾಧ (34) ಪ್ರಕರಣಗಳನ್ನು ದಾಖಲಿಸಲಾಗಿದೆ. ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !