ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು | ಮುನ್ನೆಚ್ಚರಿಕೆ ಕೊರತೆ: ಅಪಘಾತ ನಿರಂತರ

Published 11 ಸೆಪ್ಟೆಂಬರ್ 2023, 7:09 IST
Last Updated 11 ಸೆಪ್ಟೆಂಬರ್ 2023, 7:09 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ರಸ್ತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ, ಅಪಘಾತಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಅಪಘಾತ ಹೆಚ್ಚಾಗಿ ಸಂಭವಿಸುತ್ತಿರುವ ಬ್ಲಾಕ್ ಸ್ಪಾಟ್‌ಗಳನ್ನು ಗುರುತಿಸಿ ಸರಿಪಡಿಸಲು ಪೊಲೀಸ್ ಇಲಾಖೆ ಪತ್ರ ಬರೆಯುತ್ತಲೇ ಇದೆ. ಹಲವು ಬ್ಲಾಕ್ ಸ್ಪಾಟ್‌ಗಳು ದುರಸ್ತಿಯಾಗಿದ್ದರೆ, ಇನ್ನೂ ಕೆಲವು ಹಾಗೇ ಉಳಿದುಕೊಂಡಿವೆ. ವರ್ಷದಲ್ಲಿ 150ಕ್ಕೂ ಹೆಚ್ಚು ಮಂದಿಯನ್ನು ಬಲಿ ಪಡೆಯುತ್ತಲೇ ಇವೆ.

ಅಪಘಾತ ಪ್ರಕರಣಗಳು ಅದರಲ್ಲೂ ಸಾವು ಸಂಭವಿಸಿರುವ ಅಪಘಾತ ಪ್ರಕರಣಗಳ ಸಂಖ್ಯೆಯನ್ನು ಗಮನಿಸಿದರೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೇ ಇವೆ. ಪ್ರತಿ ಪ್ರಕರಣದಲ್ಲಿ ಕನಿಷ್ಠ ಒಂದು ಸಾವು ಎಂದು ಅಂದಾಜಿಸಿದರೂ 165 ಮಂದಿ ಈ ವರ್ಷ(2023) ರಸ್ತೆಯಲ್ಲಿ ಪ್ರಾಣ ಬಿಟ್ಟಿದ್ದಾರೆ. ಬಹುತೇಕ ಪ್ರಕರಣಗಳಲ್ಲಿ ಸಾವಿನ ಸಂಖ್ಯೆ ಒಂದಿದ್ದರೆ, ಕೆಲವು ಪ್ರಕರಣಗಳಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ಮಂದಿ ಪ್ರಾಣ ಬಿಟ್ಟಿದ್ದಾರೆ. ಇದಲ್ಲದೇ ಸಾವು ಸಂಭವಿಸದೆ ಇರುವ ಅಪಘಾತಗಳು ಎರಡುಪಟ್ಟು ಇವೆ.

ಕಡೂರು–ಮೂಡಿಗೆರೆ–ಮಂಗಳೂರು, ತುಮಕೂರು–ಹೊನ್ನಾವರ, ಮಂಗಳೂರು–ಕಾರ್ಕಳ–ಶೃಂಗೇರಿ–ಕೊಪ್ಪ–ಶಿವಮೊಗ್ಗ ಸಂಪರ್ಕಿಸುವ ಮೂರು ರಾಷ್ಟ್ರೀಯ ಹೆದ್ದಾರಿಗಳು ಜಿಲ್ಲೆಯಲ್ಲಿ ಹಾದು ಹೋಗಿವೆ. ಬಹುತೇಕ ಅಪಘಾತಗಳು ರಾಷ್ಟ್ರೀಯ ಹೆದ್ದಾರಿಯಲ್ಲೇ ನಡೆದಿದ್ದು, ಅದರಲ್ಲೂ ಜಿಲ್ಲೆಯ ವ್ಯಾಪ್ತಿಯ ತುಮಕೂರು–ಹೊನ್ನಾವರ ರಾಷ್ಟ್ರೀಯ ಹೆದ್ದಾರಿಯಲ್ಲೆ ಹೆಚ್ಚು. ಜನವರಿಯಿಂದ ಈವರೆಗೆ 56 ಅಪಘಾತ ಪ್ರಕರಣಗಳು ಸಂಭವಿಸಿವೆ.

ಹೊಸದಾಗಿ ನಿರ್ಮಾಣವಾಗಿರುವ ಕಡೂರು–ಮೂಡಿಗೆರೆ–ಮಂಗಳೂರು ರಸ್ತೆಯಲ್ಲೂ ಹೆಚ್ಚಾಗಿ ಅಪಘಾತಗಳು ಸಂಭವಿಸುತ್ತಿವೆ. 2016ರಿಂದ 2018ರ ಅವಧಿಯಲ್ಲಿ 38 ಬ್ಲಾಕ್‌ಸ್ಪಾಟ್‌ಗಳನ್ನು ಪೊಲೀಸ್ ಇಲಾಖೆ ಗುರುತಿಸಿತ್ತು. ಅವುಗಳಲ್ಲಿ 33 ಬ್ಲಾಕ್‌ಸ್ಪಾಟ್‌ಗಳನ್ನು ಲೋಕೋಪಯೋಗಿ ಇಲಾಖೆ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಗಳು ಸರಿಪಡಿಸಿವೆ. ಕಡೂರು, ಬೀರೂರು ಮತ್ತು ಅಜ್ಜಂಪುರ ವ್ಯಾಪ್ತಿಯಲ್ಲಿ ತಲಾ ಎರಡು ಸ್ಥಳಗಳು ಇನ್ನೂ ಹಾಗೇ ಉಳಿದುಕೊಂಡಿವೆ.

‌2019ರಿಂದ 2021ರ ಅವಧಿಯಲ್ಲಿ ಮತ್ತೆ 22 ಸ್ಥಳಗಳನ್ನು ಪೊಲೀಸ್ ಇಲಾಖೆ ಬ್ಲಾಕ್ ಸ್ಪಾಟ್‌ಗಳು ಎಂದು ಗುರುತಿಸಿತು. ಅವುಗಳ ಪೈಕಿ 13 ಸ್ಥಳಗಳು ಸರಿಯಾಗಿದ್ದು, ಇನ್ನೂ 9 ಸ್ಥಳಗಳು ಹಾಗೇ ಉಳಿದುಕೊಂಡಿವೆ. ಈ ರೀತಿ ಆಗಾಗ ಪೊಲೀಸ್ ಇಲಾಖೆ ಬ್ಲಾಕ್‌ಸ್ಪಾಟ್‌ಗಳನ್ನು ಗುರುತಿಸುವ ಕೆಲಸ ಮಾಡುತ್ತಿದೆ. ಎರಡು ದಿನಗಳ ಹಿಂದೆ ಚಾರ್ಮಾಡಿ ಘಾಟಿಯಲ್ಲಿ ಸರಣಿ ಅಪಘಾತಗಳು ಸಂಭವಿಸಿದವು. ಅಲ್ಲಿ ತಡೆಗೋಡೆ ಹಳೆಯದಾಗಿದ್ದು, ಹೊಸದಾಗಿ ನಿರ್ಮಿಸುವ ಅಗತ್ಯವಿದೆ ಎಂದು ರಾಷ್ಟ್ರೀಯ ಹೆದ್ದಾರಿ ವಿಭಾಗದ ಅಧಿಕಾರಿಗಳಿಗೆ ಪೊಲೀಸ್ ಇಲಾಖೆ ಪತ್ರ ಬರೆದಿದೆ.

ಪೂರಕ ಮಾಹಿತಿ: ಕೆ.ವಿ.ನಾಗರಾಜ್, ರವಿಕುಮಾರ್ ಶೆಟ್ಟಿಹಡ್ಲು, ಎಚ್‌.ಎಂ.ರಾಜಶೇಖರಯ್ಯ, ಬಾಲು ಮಚ್ಚೇರಿ, ಜೆ.ಒ.ಉಮೇಶ್‌ಕುಮಾರ್

ಮೂಡಿಗೆರೆ ತಾಲ್ಲೂಕಿನಲ್ಲಿ ನೀರುಗಂಡಿ ಬಳಿ ರಸ್ತೆ ಬದಿ ತಡೆಗೋಡೆಯಿಲ್ಲದೆ ಕಂದಕಕ್ಕೆ ಉರುಳಿರುವ ಕಾರು
ಮೂಡಿಗೆರೆ ತಾಲ್ಲೂಕಿನಲ್ಲಿ ನೀರುಗಂಡಿ ಬಳಿ ರಸ್ತೆ ಬದಿ ತಡೆಗೋಡೆಯಿಲ್ಲದೆ ಕಂದಕಕ್ಕೆ ಉರುಳಿರುವ ಕಾರು
ನರಸಿಂಹರಾಜಪುರ ತಾಲ್ಲೂಕಿನ ಮೆಣಸೂರು ಗ್ರಾಮದ ಬೈಪಾಸ್ ರಸ್ತೆಯಲ್ಲಿ ಅಪಘಾತ ತಡೆಗಟ್ಟಲು ನಿರ್ಮಿಸಲಾಗಿರುವ ವೃತ್ತ
ನರಸಿಂಹರಾಜಪುರ ತಾಲ್ಲೂಕಿನ ಮೆಣಸೂರು ಗ್ರಾಮದ ಬೈಪಾಸ್ ರಸ್ತೆಯಲ್ಲಿ ಅಪಘಾತ ತಡೆಗಟ್ಟಲು ನಿರ್ಮಿಸಲಾಗಿರುವ ವೃತ್ತ
ಪದೇ ಪದೇ ಅಪಘಾತ
ನರಸಿಂಹರಾಜಪುರ: ತಾಲ್ಲೂಕಿನ ವ್ಯಾಪ್ತಿಯಲ್ಲಿ ಪದೇ ಪದೇ ಅಪಘಾತ ಸಂಭವಿಸುವ ಸ್ಥಳಗಳನ್ನು ಪೊಲೀಸ್ ಇಲಾಖೆ ಗುರುತು ಮಾಡಿದೆ.  ಪ್ರಮುಖವಾಗಿ ಪಟ್ಟಣದ ಅಗ್ರಹಾರ ರಸ್ತೆ ಶಿವಮೊಗ್ಗ ಮುಖ್ಯ ರಸ್ತೆಯಲ್ಲಿನ ಕರಗುಂದ ಗ್ರಾಮದ ಬಳಿ ಇಳಿಜಾರಿನಿಂದ ಕೂಡಿರುವ ರಸ್ತೆ ಮುತ್ತಿನಕೊಪ್ಪ ಗ್ರಾಮದ ವ್ಯಾಪ್ತಿಯ ಎಸ್‌ಇಡಬ್ಲ್ಯೂ ಕಚೇರಿಯ ಮುಂಭಾಗದ ಮುಖ್ಯ ರಸ್ತೆಯಿಂದ ಸಂಜೀವಿನಿ ಶಾಲೆಯ ಮುಂಭಾಗದ ರಸ್ತೆಯವರೆಗೆ ಇದೇ ವ್ಯಾಪ್ತಿಯ ಮುಖ್ಯ ರಸ್ತೆಗೆ ನಿರ್ಮಿಸಿರುವ ಕಿರಿದಾಗಿ ರುವ ಸೇತುವೆ ಗುಬ್ಬಿಗಾ ಗ್ರಾಮದ ವ್ಯಾಪ್ತಿಯಲ್ಲಿರುವ ತಿರುವಿನಬಿಂದ ಕೂಡಿರುವ ರಸ್ತೆಯ ವ್ಯಾಪ್ತಿಯನ್ನು ಪದೇ ಪದೇ ಅಪಘಾತ ಸಂಭವಿಸುತ್ತಿರುವ ಸ್ಥಳಗಳು ಎಂದು ಗುರುತಿಸಲಾಗಿದೆ. ಅಪಘಾತ ಸ್ಥಳಗಳಲ್ಲಿ ಎಚ್ಚರಿಕೆಯ ನಾಮಫಲಕಗಳು ರಿಪ್ಲೆಕ್ಟರ್ ದೀಪಗಳನ್ನು ಅಳವಡಿಸುವಂತೆ ಲೋಕೋಪಯೋಗಿ ಇಲಾಖೆಗೆ ಪತ್ರ ಬರೆಯಲಾಗಿದೆ. ಕೆಲವು ಕಡೆ ಎಚ್ಚರಿಕೆ ನಾಮಫಲಕಗಳು ಅಳವಡಿಸುವ ಆಗಿದೆ. ಮೆಣಸೂರು ಗ್ರಾಮದಲ್ಲಿ ಬೈಪಾಸ್‌ ರಸ್ತೆಗೆ ವೃತ್ತ ನಿರ್ಮಾಣ ಮಾಡಲಾಗಿದೆ. ಮಳೆಗಾಲದಲ್ಲಿ ಅಲ್ಲಲ್ಲಿ ರಸ್ತೆಗಳಲ್ಲಿ ಗುಂಡಿಗಳು ಬಿದ್ದು ಅಪಘಾತ ಸಂಭವಿಸಬಹುದು ಎಂದು ಇಲಾಖೆ ಅಂದಾಜು ಮಾಡಿದೆ. ರಸ್ತೆ ಅಪಘಾತಗಳನ್ನು ತಡೆಗಟ್ಟಲು ಪೊಲೀಸ್ ಇಲಾಖೆಯಿಂದ ಜನರಿಗೆ ಅರಿವು ಮೂಡಿಸಲು ಪಟ್ಟಣ ಮತ್ತು ಗ್ರಾಮ ಮಟ್ಟದಲ್ಲೂ ರಸ್ತೆ ಸುರಕ್ಷತಾ ಸಪ್ತಾಹ ಆಚರಿಸಲಾಗಿದೆ ಎಂದು ಪೊಲೀಸರು ಹೇಳುತ್ತಾರೆ.
ವೇಗಕ್ಕೆ ಇಲ್ಲ ಕಡಿವಾಣ
ಕೊಪ್ಪ: ತಾಲ್ಲೂಕಿನ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 169(ಮಂಗಳೂರು–ಶಿವಮೊಗ್ಗ) ಹಾಗೂ ಮಲ್ಪೆ ಮೊಳಕಾಲ್ಮೂರು ರಾಜ್ಯ ಹೆದ್ದಾರಿ 65ರಲ್ಲಿ ಹಲವು ಅಪಾಯಕಾರಿ ತಿರುವುಗಳಿದ್ದು ಆಗಾಗ ಅಪಘಾತಕ್ಕೆ ಸಂಭವಿಸುತ್ತಿವೆ. ನಾಗಲಾಪುರ ಬಳಿ ರಾಷ್ಟ್ರೀಯ ಹೆದ್ದಾರಿ 169ನಲ್ಲಿ ಹರಿಹರಪುರ ಕಡೆಯಿಂದ ಕೊಪ್ಪ ಕಡೆಗೆ ಸಾಗಿ ಬರುವಾಗ ತುಂಗಾ ನದಿ ಸೇತುವೆಯಿಂದ ಸುಮಾರು 1 ಕಿ.ಮೀ. ದೂರ ನೇರ ರಸ್ತೆಯಿದ್ದು ಸಿಗದಾಳು ಸಂಪರ್ಕಿಸುವಲ್ಲಿ ಸಿಗುವ ತಿರುವಿನಲ್ಲಿ ಅಪಘಾತ ಮರುಕಳಿಸಿವೆ. ಶೃಂಗೇರಿ ಕಡೆಗೆ ಹೋಗುವಾಗ ಸುರುಳಿ ವ್ಯಾಪ್ತಿಯಲ್ಲಿ ಅಪಘಾತ ಮರುಕಳಿಸಿವೆ. ಪಟ್ಟಣದಿಂದ ಎನ್.ಆರ್.ಪುರ ಕಡೆಗೆ ಹೋಗುವ ಮಾರ್ಗ ಮಧ್ಯೆ ತಲಮಕ್ಕಿ ಬಳಿ ಸುಮಾರು 1 ಕಿ.ಮೀ. ದೂರ ನೇರ ರಸ್ತೆಯಿದ್ದು ಗ್ರಾಮದ ಪರಿಮಿತಿಯಲ್ಲಿ ವೇಗ ನಿಯಂತ್ರಣಕ್ಕೆ ಬಾರದೆ ಆಗಾಗ್ಗೆ ಅಪಘಾತ ಮರುಕಳಿಸಿವೆ. ಮಲೆನಾಡು ಪ್ರದೇಶ ಆಗಿರುವುದರಿಂದ ಇಲ್ಲಿ ಏಕಾಏಕಿ ಸಿಗುವ ತಿರುವಿನಲ್ಲಿ ವಾಹನ ನಿಯಂತ್ರಣಕ್ಕೆ ಬಾರದೇ ಅಪಘಾತ ಸಂಭವಿಸಿವೆ. ಬಹುತೇಕ ರಸ್ತೆ ತಿರುವಿನ ಬಗ್ಗೆ ಸರಿಯಾದ ಸೂಚನಾ ಫಲಕವಿಲ್ಲ. ವೇಗ ನಿಯಂತ್ರಣಕ್ಕೆ ಸಮರ್ಪಕ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ.
ತಪ್ಪದ ಅಪಘಾತ: ಬೇಕಿದೆ ಸುಧಾರಣೆ
ಕಡೂರು: ಪಟ್ಟಣದಲ್ಲಿ ಗುರುತಿಸಿರುವ ಎರಡು ಬ್ಲಾಕ್ ಸ್ಪಾಟ್‌ಗಳ ಜೊತೆ ಪದೇ ಪದೇ ಅಫಘಾತ ಸಂಭವಿಸುತ್ತಿರುವ ಕೆಲ ಜಾಗಗಳಲ್ಲಿ ಪ್ರಾಣಹಾನಿ ಸಂಭವಿಸುತ್ತಿವೆ. ಪಟ್ಟಣದ ವ್ಯಾಪ್ತಿಯಲ್ಲಿ ಕೆ.ಎಲ್‌.ವಿ. ವೃತ್ತದಿಂದ ಬಸವೇಶ್ವರ ವೃತ್ತ ಮತ್ತು ಅನ್ನಪೂರ್ಣ ಕ್ಯಾಸಲ್‌ನಿಂದ ಮಸಾಲ ಡಾಬಾ ತನಕ ಬ್ಲಾಕ್ ಸ್ಪಾಟ್ ಎಂದು ಗುರುತಿಸಲಾಗಿದೆ. ಆದರೆ ಅವುಗಳ ಸುಧಾರಣೆ ಇನ್ನೂ ಆಗಿಲ್ಲ. ಎರಡು ರಾಷ್ಟ್ರೀಯ ಹೆದ್ದಾರಿಗಳು ಸೇರುವ ಬಸವೇಶ್ವರ ವೃತ್ತದ ಬಳಿ ವಾಹನ ಚಾಲಕರಿಗೆ ಗೊಂದಲವಾಗುವ ರೀತಿ ರಸ್ತೆ ವಿಭಜಕಗಳಿವೆ. ಯಾವ ಕಡೆ ಚಲಿಸಬೇಕೆಂದು ತಿಳಿಯದೆ ಅಫಘಾತಗಳಾಗುವ ಸಂಭವವಿರುವುದರಿಂದ ಈ ಜಾಗದಲ್ಲಿ ಸಂಚಾರ ನಿಯಮ ಪಾಲನೆ ಕಡ್ಡಾಯಗೊಳಿಸಬೇಕಿದೆ. ಬಸವೇಶ್ವರ ವೃತ್ತದಿಂದ ಕೆ.ಎಲ್.ವಿ.ವೃತ್ತದ ತನಕ ರಸ್ತೆ ಬದಿಯಲ್ಲಿ ಸದಾ ಲಾರಿಗಳು ಕ್ರೇನ್‌ಗಳನ್ನು ನಿಲ್ಲಿಸಿರುವುದರಿಂದಲೂ ಫಘಾತಗಳ ಸಂಭವ ಹೆಚ್ಚಿದೆ. ಬಿ.ಎಚ್. ರಸ್ತೆಯಿಂದ ಪಂಚನಹಳ್ಳಿಗೆ ಹೋಗುವ ಮರವಂಜಿ ರಸ್ತೆಯಲ್ಲಿರುವ ಅಂಬೇಡ್ಕರ್ ವೃತ್ತ ಸಹ ಅಫಘಾತ ವಲಯವೆಂದು ಗುರುತಿಸಿದ್ದು ಅಲ್ಲಿಯೂ ಸೂಚನಾ ಫಲಕ ಅಳವಡಿಸಬೇಕಿದೆ. ತಾಲ್ಲೂಕಿನ ಮರವಂಜಿ ರಸ್ತೆಯ ರಾಜ್ಯ ಹೆದ್ದಾರಿಯಲ್ಲಿ ವೇದಾವತಿ ನದಿ ಸೇತುವೆಗೆ ಮುನ್ನ ಒಂದು ಅಪಾಯಕಾರಿ ತಿರುವಿದೆ. ರಸ್ತೆಯ ಎರಡೂ ಬದಿ ಗಿಡಗಳು ದಟ್ಟವಾಗಿರುವುದರಿಂದ ಈ ತಿರುವಿನಲ್ಲಿ ವಾಹನಗಳು ಮುಖಾಮುಖಿ ಡಿಕ್ಕಿಯಾಗುವ ಸಾಧ್ಯತೆ ಹೆಚ್ಚಿದೆ. ಈ ಸ್ಥಳದಲ್ಲಿ ರೋಟರಿ ಕ್ಲಬ್ ಅಳವಡಿಸಿರುವ ಅಫಘಾತ ವಲಯ ಎಂಬ ಬೋರ್ಡ್ ಬಿಟ್ಟರೆ ಮತ್ತೇನೂ ಇಲ್ಲ. ಈ ಗಿಡಗಳನ್ನು ತೆರವುಗೊಳಿಸುವ ಕಾರ್ಯವಾಗಬೇಕಿದೆ. ಪಟ್ಟಣದ ಹೊರ ವಲಯದ ಮತಿಘಟ್ಟ ಬಳಿ‌ ಪದೇ ಪದೇ ಅಫಘಾತಗಳು ಸಂಭವಿಸುತ್ತಿವೆ. ಈ ಜಾಗದಲ್ಲಿ ಸಂಚಾರ ನಿಯಮ ಪಾಲನೆಗೆ ಪೊಲೀಸರು ಕಡ್ಡಾಯ ಕ್ರಮ ಕೈಗೊಂಡರೆ ಅಫಘಾತಗಳನ್ನು ತಪ್ಪಿಸಬಹುದು ಎಂಬುದು ಸ್ಥಳೀಯರ ಅಭಿಪ್ರಾಯ.
ಬೇಕಿದೆ ರಸ್ತೆ ವಿಭಜಕ
ತರೀಕೆರೆ: ಪಟ್ಟಣದಲ್ಲಿ ಹಾದೂ ಹೋಗಿರುವ ರಾಷ್ಟ್ರೀಯ ಹೆದ್ದಾರಿ ಕೊಡಿಕ್ಯಾಂಪ್ ವೃತ್ತ ಮೆಟ್ರೊ ಸರ್ಕಲ್ ನ್ಯಾಯಾಲಯದ ಮುಂಭಾಗದ ರಸ್ತೆಯಲ್ಲಿ ಅಪಘಾತಗಳು ಹೆಚ್ಚಾಗುತ್ತಿವೆ. ರಾಷ್ಟ್ರೀಯ ಹೆದ್ದಾರಿ 206 ಅರಮನೆ ಹೋಟೆಲ್ ಸಮೀಪ ವರ್ಷಕ್ಕೆ ಐದಕ್ಕೂ ಹೆಚ್ಚು ಅಪಘಾತಗಳು ಸಂಭವಿಸುತ್ತಿದ್ದು ಈ ಸ್ಥಳವನ್ನು ಬ್ಲಾಕ್ ಸ್ಪಾಟ್ ಎಂದು ಗುರುತಿಸಿ ಮುಂದಿನ ಕ್ರಮಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ. ಪಟ್ಟಣದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಅಗಲಗೊಳಿಸಿ ವಿಭಜಕಗಳನ್ನು ಅಳವಡಿಸಿದರೆ ಅಪಘಾತಗಳು ತಪ್ಪಲಿವೆ. ಈ ಕೆಲಸ ಆಗಬೇಕು ಎಂದು ಆಮ್ ಆದ್ಮಿ ಸಂಚಾಲಕ ಸುರೇಶ್ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT