ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಸ್‌ ಸೌಕರ್ಯವಿಲ್ಲದೆ ಶಾಲೆ ತೊರೆದ ಮಕ್ಕಳು ಕೂಲಿಗೆ

ಪೋಷಕರೊಂದಿಗೆ ಕಾಫಿ ಕೊಯ್ಲಿಗೆ ಹೋಗುತ್ತಿರುವ ವಿದ್ಯಾರ್ಥಿಗಳು
Published 11 ಡಿಸೆಂಬರ್ 2023, 16:16 IST
Last Updated 11 ಡಿಸೆಂಬರ್ 2023, 16:16 IST
ಅಕ್ಷರ ಗಾತ್ರ

ಮೂಡಿಗೆರೆ: ತಾಲ್ಲೂಕಿನ ಮಾಕೋನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾರಬೈಲ್ ಗ್ರಾಮಕ್ಕೆ ಬರುತ್ತಿದ್ದ ಕೆಎಸ್ಆರ್‌ಟಿಸಿ ಬಸ್ ಸಂಚಾರ ಎರಡು ತಿಂಗಳಿಂದ ಸ್ಥಗಿತಗೊಂಡಿದ್ದು, ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿಗಳು, ಬಸ್‌ ಸೌಕರ್ಯ ಇಲ್ಲದೆ ಶಾಲೆಗೆ ಹೋಗುವುದನ್ನು ನಿಲ್ಲಿಸಿ, ಪೋಷಕರೊಂದಿಗೆ ಕಾಫಿ ಕೊಯ್ಲಿನ ಕೂಲಿಗೆ ಹೋಗುತ್ತಿದ್ದಾರೆ.

ತಾಲ್ಲೂಕು ಕೇಂದ್ರದಿಂದ 15 ಕಿ.ಮೀ ದೂರದಲ್ಲಿರುವ ಕಾರಬೈಲ್ ಗ್ರಾಮಕ್ಕೆ ಪ್ರತಿ ದಿನ ಬೆಳಿಗ್ಗೆ ಮತ್ತು ಸಂಜೆ ಒಂದು ಕೆಎಸ್‌ಆರ್‌ಟಿಸಿ ಬಸ್‌ ಸೌಕರ್ಯ ಇತ್ತು. ಕಾರಬೈಲ್, ತುದಿಯಾಲ, ಮೂಡಸಸಿ ಸೇರಿದಂತೆ ಸುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳಿಗೆ ಶಾಲೆಗೆ ಹೋಗಲು ಇದೊಂದೇ ಬಸ್‌ ಆಸರೆಯಾಗಿತ್ತು. ಈಗ ಬಸ್ ಸೌಕರ್ಯವಿಲ್ಲದೆ ಮಕ್ಕಳ ಶಿಕ್ಷಣವೇ ಮೊಟಕುಗೊಂಡಂತಾಗಿದೆ.

6ರಿಂದ 10ನೇ ತರಗತಿಯವರೆಗೆ ಓದುತ್ತಿರುವ 25ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಈ ಭಾಗದಿಂದ ಪ್ರತಿನಿತ್ಯ ಮೂಡಿಗೆರೆ ಹಾಗೂ ಬೇಲೂರು ಶಾಲೆಗಳಿಗೆ ಹೋಗುತ್ತಿದ್ದರು. ಬಸ್‌ ಸೌಕರ್ಯ ಇಲ್ಲದ ಕಾರಣ ವಿದ್ಯಾರ್ಥಿಗಳು ಶಾಲೆ ತೊರೆಯುತ್ತಿದ್ದಾರೆ. ಇವರಲ್ಲಿ ಬಹುತೇಕರು ಪರಿಶಿಷ್ಟ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳಾಗಿದ್ದು, ಪೋಷಕರೊಂದಿಗೆ ಕಾಫಿ ಕೊಯ್ಲಿನ ಕೂಲಿಗೆ ಹೋಗುತ್ತಿದ್ದಾರೆ.  

‘ಗ್ರಾಮಕ್ಕೆ ಕೆಎಸ್ಆರ್‌ಟಿಸಿ ಬಸ್ ಸೌಕರ್ಯ ಬಿಟ್ಟರೆ ಬೇರೆ ಯಾವುದೇ ಸಾರಿಗೆ ಸೌಲಭ್ಯವಿಲ್ಲ. ಈ ಭಾಗದಲ್ಲಿ ಕಾಡಾನೆ ಹಾವಳಿ ಇರುವುದರಿಂದ ಕಾಡು ದಾರಿಯಲ್ಲಿ ನಡೆದು ಹೋಗಲು ಮಕ್ಕಳು ಹೆದರುತ್ತಿದ್ದಾರೆ. ಮಕ್ಕಳನ್ನು ಮನೆಗಳಲ್ಲಿ ಬಿಟ್ಟು ಕೂಲಿ ಕೆಲಸಕ್ಕೆ ಹೋಗಲು ಹೆದರುತ್ತಿರುವ ಪೋಷಕರು, ಅನಿವಾರ್ಯವಾಗಿ ಮಕ್ಕಳನ್ನೂ ತಮ್ಮೊಂದಿಗೆ ಕರೆದೊಯ್ಯುತ್ತಿದ್ದಾರೆ.

‘ಸ್ಥಳೀಯರು ಮಕ್ಕಳನ್ನು ಕೆಲಸಕ್ಕೆ ಸೇರಿಸಿಕೊಳ್ಳುತ್ತಿಲ್ಲ ಎಂಬ ಕಾರಣಕ್ಕೆ ಮಕ್ಕಳೊಂದಿಗೆ ಪೋಷಕರು ಕೂಡ ಹೊರ ಭಾಗದ ತೋಟಗಳಿಗೆ ತೆರಳುತ್ತಿದ್ದಾರೆ. ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಕ್ರಮ ಕೈಗೊಳ್ಳಬೇಕು’ ಎನ್ನುತ್ತಾರೆ ಕಾರಬೈಲ್ ಗ್ರಾಮದ ಜಗದೀಶ್.

‘ಕೆಎಸ್ಆರ್‌ಟಿಸಿ ಬಸ್ ಸಂಚಾರ ಸ್ಥಗಿತಗೊಳಿಸಿರುವುದಕ್ಕೆ ಕಾರಣ ನೀಡುತ್ತಿಲ್ಲ. ವಿಭಾಗ ಮಟ್ಟದಲ್ಲಿ ಕ್ರೀಡೆ, ಪ್ರತಿಭಾ ಕಾರಂಜಿಯಲ್ಲಿ ಪ್ರಶಸ್ತಿ ಪಡೆದ ಮಕ್ಕಳು ಕಾಫಿ ತೋಟದ ಕೆಲಸಕ್ಕೆ ಹೋಗುತ್ತಿರುವುದು ಶೋಚನೀಯ. ಕೂಡಲೇ ಬಸ್ ಸೌಲಭ್ಯ ಒದಗಿಸಿ ಮಕ್ಕಳ ಶಿಕ್ಷಣಕ್ಕೆ ಅನುವು ಮಾಡಿಕೊಡಬೇಕು’ ಎಂದು ಕನ್ನಾಪುರ ಗ್ರಾಮದ ಸುಂದರೇಶ್ ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT