ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೌರಕಾರ್ಮಿಕರ ಅನಿರ್ದಿಷ್ಟಾವಧಿ ಮುಷ್ಕರ: ಶೃಂಗೇರಿ ಪಟ್ಟಣ ದುರ್ವಾಸನೆಯ ಕೊಂಪೆ

10 ದಿನಗಳಿಂದ ಪೌರಕಾರ್ಮಿಕರ ಅನಿರ್ದಿಷ್ಟಾವಧಿ ಮುಷ್ಕರ:
Published 15 ಡಿಸೆಂಬರ್ 2023, 7:41 IST
Last Updated 15 ಡಿಸೆಂಬರ್ 2023, 7:41 IST
ಅಕ್ಷರ ಗಾತ್ರ

ಶೃಂಗೇರಿ: ಪಟ್ಟಣದಲ್ಲಿ 10 ದಿನಗಳಿಂದ ನಡೆಯುತ್ತೀರುವ ಪೌರಕಾರ್ಮಿಕರ ಮುಷ್ಕರದಿಂದ ಸ್ವಚ್ಛತೆ ಇಲ್ಲದೆ ಗಲ್ಲಿಗಳಲ್ಲಿ ದುರ್ವಾಸನೆ ಬೀರುತ್ತಿದ್ದು ಜನರ ನೆಮ್ಮದಿ ಹಾಳಾಗಿದೆ.

ಪಟ್ಟಣದ ಭಾರತೀತೀರ್ಥ ರಸ್ತೆಯಲ್ಲಿ ಕಸದ ರಾಶಿ ಬಿದ್ದಿರುವುದು
ಪಟ್ಟಣದ ಭಾರತೀತೀರ್ಥ ರಸ್ತೆಯಲ್ಲಿ ಕಸದ ರಾಶಿ ಬಿದ್ದಿರುವುದು

ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 25 ವರ್ಷಗಳಿಂದ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಪೌರಕಾರ್ಮಿಕರು ನೇರಪಾವತಿ, ಹೊರಗುತ್ತಿಗೆ ಮತ್ತು ದಿನಗೂಲಿ ನೌಕರರನ್ನು ಕಾಯಂ ಮಾಡಬೇಕು ಎಂದು ಪಟ್ಟು ಹಿಡಿದು ಮುಷ್ಕರದಲ್ಲಿ ತೊಡಗಿದ್ದಾರೆ. ಹೀಗಾಗಿ ದಿನದಿಂದ ದಿನಕ್ಕೆ ಕಸದ ರಾಶಿ ಹೆಚ್ಚಾಗುತ್ತಿದೆ.

ಶೃಂಗೇರಿ, ಪ್ರಸಿದ್ಧ ಕ್ಷೇತ್ರ ಹಾಗೂ ದೊಡ್ಡ ಪ್ರವಾಸಿ ಕೇಂದ್ರವಾಗಿದೆ. ಪ್ರತಿ ವರ್ಷ 60ರಿಂದ 70 ಲಕ್ಷ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಹೀಗಾಗಿ ಪಟ್ಟಣ ಪಂಚಾಯಿತಿ ಸ್ವಚ್ಛತೆಗೆ ಆದ್ಯತೆ ನೀಡುತ್ತಿದೆ. ಪ್ರತಿದಿನ 2 ಟನ್ ಘನತ್ಯಾಜ್ಯ ಸಂಗ್ರಹಿಸಲಾಗುತ್ತಿದ್ದು ಹನುಮಂತ ನಗರದಲ್ಲಿರುವ 5 ಎಕ್ರೆ ವಿಸ್ತೀರ್ಣದ ಕಸವಿಲೇವಾರಿ ಘಟಕಕ್ಕೆ ಸಾಗಿಸಿ ಒಣ ಮತ್ತು ಹಸಿಕಸ ಬೇರ್ಪಡಿಸಲಾಗುತ್ತಿದೆ.

ನೇರ ಪಾವತಿ ಹೊರಗುತ್ತಿಗೆ ಮತ್ತು ದಿನಗೂಲಿ ನೌಕರರನ್ನು ಕಾಯಂಗೋಳಿಸುವಂತೆ ಪೌರಕಾರ್ಮಿಕರು ಮಷ್ಕರ ನಡೆಸುತ್ತೀರುವುದು
ನೇರ ಪಾವತಿ ಹೊರಗುತ್ತಿಗೆ ಮತ್ತು ದಿನಗೂಲಿ ನೌಕರರನ್ನು ಕಾಯಂಗೋಳಿಸುವಂತೆ ಪೌರಕಾರ್ಮಿಕರು ಮಷ್ಕರ ನಡೆಸುತ್ತೀರುವುದು

1300ಕ್ಕೂ ಹೆಚ್ಚು ಮನೆಗಳಿರುವ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 4000ಕ್ಕೂ ಹೆಚ್ಚು ಜನರು ವಾಸವಾಗಿದ್ದಾರೆ. ಕಳೆದ ಸೋಮವಾರ ನಡೆದ ಸಂತೆಯ ನಂತರ ತರಕಾರಿಗೆ ಸಂಬಂಧಿಸಿದ ಕಸ ಮಾರುಕಟ್ಟೆಯಲ್ಲೇ ಉಳಿದಿದೆ. ಹಸಿಕಸ ಕೊಳೆತು ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಸಾಂಕ್ರಮಿಕ ರೋಗ ಹರಡುವ ಭೀತಿ ಉಂಟಾಗಿದೆ.

(ಟಿ.ಡಿ ರಾಜೇಗೌಡ
(ಟಿ.ಡಿ ರಾಜೇಗೌಡ
ಪೌರಕಾರ್ಮಿಕರ ಸಮಸ್ಯೆ ಕುರಿತು ಬೆಳಗಾವಿ ಅಧಿವೇಶನದಲ್ಲಿ ಚರ್ಚಿಸಿದ್ದೇನೆ. ಸರ್ಕಾರದ ಮಟ್ಟದಲ್ಲಿ ತಿರ್ಮಾನ ಆಗಬೇಕಾಗಿದೆ. ಅತಿ ಶೀಘ್ರದಲ್ಲಿ ಸಮಸ್ಯೆ ಬಗೆಹರಿಯುವ ನಿರೀಕ್ಷೆ ಇದೆ.
–ಟಿ.ಡಿ ರಾಜೇಗೌಡ ಶಾಸಕ
ಗಣೇಶ್
ಗಣೇಶ್
ಪಟ್ಟಣದಲ್ಲಿ ಕಸ ವೀಲೆವಾರಿಯಾಗದೆ 10 ದಿನಗಳು ಕಳೆದಿವೆ. ಗಲ್ಲಿ ಗಲ್ಲಿಗಳಲ್ಲಿ ಕಸ ಬಿದ್ದುಕೊಂಡು ಕೊಳೆತ ವಾಸನೆಯಿಂದ ಮೂಗು ಮುಚ್ಚಿಕೊಂಡು ಹೋಗವ ಪರಿಸ್ಥಿತಿ ನಿರ್ಮಾಣವಾಗಿದೆ.
–ಗಣೇಶ್ ಸ್ಥಳೀಯ ನಿವಾಸಿ
ಖಾಯಂ ಹುದ್ದೆಗಳು 2 ಮಾತ್ರ
ಪಟ್ಟಣ ಪಂಚಾಯಿತಿಗೆ ಮಂಜೂರಾದ 15 ಪೌರಕಾರ್ಮಿಕರ ಹುದ್ದೆಯಲ್ಲಿ 2 ಹುದ್ದೆಗಳು ಮಾತ್ರ ಕಾಯಂ ಆಗಿವೆ. ಇದರಿಂದ ಸ್ವಚ್ಚತಾ ಕಾರ್ಯಕ್ಕೆ ತೊಂದರೆಯಾಗಿದೆ. ಪ್ರವಾಸಿಗರ ದಟ್ಟಣೆಯಿಂದಾಗಿ ಪಟ್ಟಣದಲ್ಲಿ ವಿಪರೀತ ಕಸ ಸಂಗ್ರಹವಾಗುತ್ತಿದ್ದು ಕಸವನ್ನು ವಿಲೇವಾರಿ ಮಾಡಲು ಕಷ್ಟವಾಗುತ್ತದೆ. ಹೊರಗುತ್ತಿಗೆ ನೌಕರರು ಕಸ ವಿಲೇವಾರಿ ಮತ್ತು ನೀರು ಸರಬರಾಜು ಮಾಡುವ ಟ್ರ್ಯಾಕ್ಟರ್‌ಗಳ ಚಾಲಕರ ಹುದ್ದೆಗಳನ್ನು ಕೂಡಲೆ ಕಾಯಂಗೊಳಿಸದಿದ್ದರೆ ಮುಷ್ಕರ ಕೈಬಿಡುವುದಿಲ್ಲ ಎಂದು ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ಸುಖೇಶ್ ಹೇಳಿದರು.
17ರಿಂದ ಉಪವಾಸ ಸತ್ಯಾಗ್ರಹ 
ಹೊರಗುತ್ತಿಗೆ ನೌಕರರನ್ನು ಕಾಯಂಗೊಳಿಸುವಂತೆ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಆಗಿದ್ದ ಡಿ.ಎನ್ ಜೀವರಾಜ್ ಮನೆಗೆ ಕಳೆದ ವರ್ಷ ಹೋಗಿ ಮನವಿ ಸಲ್ಲಿಸಲಾಗಿತ್ತು. ಇಲ್ಲಸಲ್ಲದ ಕಾರಣ ಹೇಳಿ ಅವರು ವಾಪಸ್‌ ಕಳುಹಿಸಿದ್ದರು. ಶಾಸಕ ಟಿ.ಡಿ ರಾಜೇಗೌಡ ಅವರನ್ನು 10 ವರ್ಷಗಳಿಂದ ಕೇಳುತ್ತಿದ್ದೇವೆ. 2 ತಿಂಗಳ ಹಿಂದೆ ಮುಷ್ಕರ ಮಾಡಲು ಹೊರಟಾಗ ಜಿಲ್ಲಾ ನಗರಭಿವೃದ್ಧಿ ಶಾಖೆಯ ಯೋಜನಾಧಿಕಾರಿ ನಾಗರತ್ನ ಅವರು 2 ತಿಂಗಳ ಒಳಗೆ ಕಾಯಂಗೊಳಿಸಲಾಗುವುದು ಎಂದು ಭರವಸೆ ನೀಡಿದ್ದರು. ಡಿಸೆಂಬರ್‌ 17ರಿಂದ ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗುವುದು ಎಂದು ಪೌರಕಾರ್ಮಿಕ ರಮೇಶ್ ಎಚ್ಚರ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT