ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಕು ಸಾಗಣೆ ವಾಹನಗಳಲ್ಲಿ ಕೃಷಿ ಕಾರ್ಮಿಕರನ್ನು ಕರೆದೊಯ್ಯಲು ಅನುಮತಿಗೆ ಒತ್ತಾಯ

Last Updated 22 ಮೇ 2019, 14:30 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಸರಕು ಸಾಗಣೆ ವಾಹನಗಳಲ್ಲಿ ಕೃಷಿ ಕಾರ್ಮಿಕರನ್ನು ಕರೆದೊಯ್ಯಲು ಜಿಲ್ಲಾಡಳಿತ ಅನುಮತಿ ನೀಡಬೇಕು ಎಂದು ಜಿಲ್ಲಾ ಕೃಷಿ ಕೂಲಿ ಕಾರ್ಮಿಕರ ಸಂಘದ ಗೌರವ ಅಧ್ಯಕ್ಷ ಎಸ್.ವಿಜಯಕುಮಾರ್ ಇಲ್ಲಿ ಬುಧವಾರ ಒತ್ತಾಯಿಸಿದರು.

ಕೃಷಿ ಕಾರ್ಮಿಕರನ್ನು ಕರೆದೊಯ್ಯುವ ಸರಕು ಸಾಗಣೆ ವಾಹನಗಳಿಗೆ ಸಾರಿಗೆ ಇಲಾಖೆ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ₹15ರಿಂದ 20 ಸಾವಿರ ದಂಡ ಹಾಕುತ್ತಿದ್ದಾರೆ. ವಾಹನಗಳನ್ನು ಸೀಜ್ ಮಾಡುತ್ತಿದ್ದಾರೆ. ಅದರಿಂದ ಕೃಷಿ ಕಾರ್ಮಿಕರು ಕೂಲಿಗೆ ತೆರಳಲು ಸಾಧ್ಯವಾಗುತ್ತಿಲ್ಲ. ಅವರ ಬದುಕು ದುಸ್ಥಿರವಾಗುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.

ಜಿಲ್ಲೆ ಮಲೆನಾಡು ಮತ್ತು ಬಯಲು ಸೀಮೆ ಒಳಗೊಂಡಿದೆ. ಜಿಲ್ಲೆಯ ಬಹುತೇಕ ಕೃಷಿ ಕಾರ್ಮಿಕರು ಕೂಲಿಗಾಗಿ ಕಾಫಿ ತೋಟಗಳನ್ನೇ ಅವಲಂಭಿಸಿದ್ದಾರೆ. ಜೀಪಿನಲ್ಲಿ ಆರು ಕೃಷಿ ಕಾರ್ಮಿಕರನ್ನು ಕರೆದೊಯ್ಯಲು ₹3 ಸಾವಿರ ಬಾಡಿಗೆ ನೀಡಬೇಕು. ಅದು ಅವರ ಕೂಲಿಗಿನ್ನ ಹೆಚ್ಚಾಗುತ್ತದೆ. ಕಾಫಿ ತೋಟಗಳ ರಸ್ತೆಗಳಲ್ಲಿ ಪ್ರಯಾಣಿಕರ ವಾಹನಗಳು ಸರಾಗವಾಗಿ ಚಲಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.

ಈ ಹಿಂದೆ ಕರ್ನಾಟಕ ಮೋಟಾರು ವಾಹನ ಕಾಯ್ದೆ 1989ರ ನಿಯಮ100(2)ರ ಅನುಸಾರ ಕೃಷಿ ಕಾರ್ಮಿಕರನ್ನು ಕರೆದೊಯ್ಯುವ ಸರಕು ಸಾಗಾಣೆ ವಾಹನಗಳಿಗೆ ಪರವಾನಗಿ ನೀಡಲು ಪ್ರಾದೇಶಿಕ ಸಾರಿಗೆ ಇಲಾಖೆ ಅವಕಾಶ ನೀಡಿತ್ತು. ಆದರೆ ಅರ್ಜಿ ಸ್ವೀಕರಿಸಲು ಇಲಾಖೆ ಅಧಿಕಾರಿಗಳು ಅಸಹಕಾರ ನೀಡಿದರು. ಕೊಡಗು ಜಿಲ್ಲೆಯಲ್ಲಿ ಸರಕು ಸಾಗಾಣೆ ವಾಹನಗಳಲ್ಲಿ ಕೃಷಿ ಕಾರ್ಮಿಕರನ್ನು ಸಾಗಾಣೆ ಮಾಡಲು ಅನುಮತಿ ನೀಡಲಾಗಿದೆ. ಚಿಕ್ಕಮಗಳೂರಿನ ಅನಿವಾರ್ಯತೆ ಅರಿತು ಜಿಲ್ಲೆಯಲ್ಲೂ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.

ಜಿಲ್ಲೆಯ ಬಯಲು ಸೀಮೆಗೆ ನೀರಾವರಿ ಯೋಜನೆ ರೂಪಿಸಲು ಜನಪ್ರತಿನಿಧಿಗಳು ಮುಂದಾಗಬೇಕು. ಕೃಷಿ ಕಾರ್ಮಿಕರಿಗೆ ಸ್ಥಳೀಯವಾಗಿ ಕೆಲಸ ಸಿಗುವಂತೆ ಮಾಡಬೇಕು ಎಂದರು.

ಸಂಘದ ಅಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷ ವಿಜಯ್, ಕಾರ್ಯದರ್ಶಿ ನಾಗರಾಜ್, ಸದಸ್ಯರಾದ ವಾಜಿದ್, ಶ್ರೀನಿವಾಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT