ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಬಾಂಡ್ | ಜಾಗತಿಕವಾಗಿ ಬಿಜೆಪಿಯಿಂದ ಅತಿ ದೊಡ್ಡ ಹಗರಣ: ಸಂದೀಪ್ ಆರೋಪ

Published 2 ಏಪ್ರಿಲ್ 2024, 15:00 IST
Last Updated 2 ಏಪ್ರಿಲ್ 2024, 15:00 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಚುನಾವಣಾ ಬಾಂಡ್ ಹೆಸರಿನಲ್ಲಿ ಬಿಜೆಪಿ ವ್ಯಾಪಕ ಭ್ರಷ್ಟಚಾರದಲ್ಲಿ ತೊಡಗಿದ್ದು ಜಾಗತಿಕ ಮಟ್ಟದಲ್ಲಿ ಇದು ಅತಿ ದೊಡ್ಡ ಹಗರಣ ಎಂದು ಎಐಸಿಸಿ ಕಾರ್ಯದರ್ಶಿ ಬಿ.ಎಂ.ಸಂದೀಪ್‌ ಆಪಾದಿಸಿದರು.

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸೋಲಿನ ಭೀತಿ ಶುರುವಾಗಿದ್ದು ವಾಮಮಾರ್ಗದಿಂದ ಎದುರಿಸಲು ಕುತಂತ್ರ ರೂಪಿಸುತ್ತಿದೆ. ಜೂಜಾಟ ನಡೆಸುವ, ಔಷಧ ತಯಾರಿಕೆ ಕಂಪನಿ, ಗುತ್ತಿಗೆದಾರರು ಒಳಗೊಂಡಂತೆ ಹಲವು ಕಾರ್ಪೋರೇಟ್ ಸಂಸ್ಥೆಗಳಿಂದ ಚುನಾವಣಾ ಬಾಂಡ್‌ಗಳ ಮೂಲಕ ಬಿಜೆಪಿ ಕೋಟ್ಯಂತರ ದೇಣಿಗೆ ಪಡೆದಿದೆ. ಸುಪ್ರೀಂಕೋರ್ಟ್ ಛೀಮಾರಿ ಹಾಕಿದ ಬಳಿಕ ಎಸ್‌ಬಿಐ ಅದನ್ನು ಬಹಿರಂಗಪಡಿಸಿದೆ. ಇಂತಹ ಹಗರಣದಿಂದ ಬಿಜೆಪಿಯನ್ನು ಭ್ರಷ್ಟಾಚಾರಿಗಳ ಪಕ್ಷ ಎಂದು ಜನತೆ ದೂಷಿಸುತ್ತಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಟೀಕಿಸಿದರು.

ದೇಶದಲ್ಲಿ ಬಿಜೆಪಿ ಅಧಿಕಾರ ಪ್ರಭಾವದಿಂದ ಸಿಬಿಐ, ಇಡಿ, ಐಟಿ ತನಿಖಾಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಬೆದರಿಕೆ ಮೂಲಕ ಹಲವು ಹಗರಣಗಳ ಅಪವಾದ ಎದುರಿಸುತ್ತಿದ್ದ ಅಜಿತ್‌ ‍ಪವಾರ್, ಹಿಮಂತ್ ಬಿಸ್ವಾ ಶರ್ಮಾ, ಗಾಲಿ ಜನಾರ್ಧನ ರೆಡ್ಡಿ ಸೇರಿದಂತೆ ಹಲವು ನಾಯಕರನ್ನೇ ಬಿಜೆಪಿಗೆ ಸೇರ್ಪಡೆಮಾಡಿಕೊಂಡು ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದೆ. ಇದರಿಂದ ಪ್ರಜಾಪ್ರಭುತ್ವದ ಮೌಲ್ಯ ಕುಸಿದಂತಾಗಿದೆ ಎಂದರು.

ಸಂಸದರಿಂದ ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ ಹಾಗಾಗಿ ಶೋಭಾ ವಿರುದ್ಧ ಸ್ವಪಕ್ಷದವರೇ ಗೋಬ್ಯಾಕ್ ಘೋಷಣೆ ಕೂಗಿದ್ದರು. ಹಿಂದೆ ಸಂಸದರಾಗಿದ್ದ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಹೆದ್ದಾರಿ ನಿರ್ಮಾಣ, ರೈಲ್ವೆ ಕಾಮಗಾರಿ ಸಹಿತ ಹಲವು ಅಭಿವೃದ್ಧಿ ಕಾರ್ಯಕ್ಕೆ ಮುನ್ನುಡಿ ಬರೆದಿದ್ದರು. ಬಿಜೆಪಿಗೆ ಮೋದಿ ಹೆಸರಿನಲ್ಲಿ ಮತಯಾಚನೆ ಬಿಟ್ಟರೇ ಯಾವುದೇ ದಾರಿ ಇಲ್ಲ ಎಂದು ಕುಟುಕಿದರು.

ಮೋದಿ ಅಧಿಕಾರ ‍ಪೂರ್ವದಲ್ಲಿ ನಿರುದ್ಯೋಗ ನಿವಾರಣೆ, ರೈತರ ಆದಾಯ ದ್ವಿಗುಣ, ಕಪ್ಪುಹಣ ವಾಪಸ್ ಮೊದಲಾದ ಭರವಸೆ ನೀಡಿದ್ದರು. ಯಾವದನ್ನು ಈಡೇರಿಸಲ್ಲ. ರಾಜ್ಯದಲ್ಲಿ ಕಾಂಗ್ರೆಸ್‌ ಐದು ಗ್ಯಾರಂಟಿ ಯೋಜನೆಗಳು ಜನತೆಗೆ ವರವಾಗಿವೆ. ಸಾಲಮನ್ನಾ, ಅಂಗನವಾಡಿ, ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ಚಳ ಸಹಿತ ಅಭಿವೃದ್ಧಿಗೆ ಕಾಂಗ್ರೆಸ್ ಬದ್ಧವಾಗಿದ್ದು. ಜಯಪ್ರಕಾಶ ಹೆಗ್ಡೆ ಅಧಿಕ ಮತಗಳ ಅಂತರಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದರು.

ಗೋಷ್ಠಿಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರೇಖಾಹುಲಿಯಪ್ಪಗೌಡ, ವಿಜಯ್‌ಕುಮಾರ್, ಮುಖಂಡರಾದ ಶಿವಾನಂದಸ್ವಾಮಿ, ಮಂಜೇಗೌಡ, ಮಲ್ಲೇಶಸ್ವಾಮಿ, ತನೋಜ್‌, ರಸೂಲ್‌ಖಾನ್‌, ಲಕ್ಷ್ಮಣ, ನಯಾಜ್ ಅಹಮದ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT