ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡಾನೆ ದಾಳಿಯಿಂದ ಮೃತಪಟ್ಟ ಕಾರ್ತಿಕ್‌ ಅಂತ್ಯಕ್ರಿಯೆ

ಕುಟುಂಬಕ್ಕೆ ₹25 ಲಕ್ಷ ಮೊತ್ತ ಪರಿಹಾರದ ಚೆಕ್ ವಿತರಿಸಿದ ಅರಣ್ಯ ಇಲಾಖೆ
Published 23 ನವೆಂಬರ್ 2023, 14:53 IST
Last Updated 23 ನವೆಂಬರ್ 2023, 14:53 IST
ಅಕ್ಷರ ಗಾತ್ರ

ಮೂಡಿಗೆರೆ: ತಾಲ್ಲೂಕಿನ ಹೊಸ್ಕೆರೆ ಗ್ರಾಮದಲ್ಲಿ ಬುಧವಾರ ಸಂಜೆ ಕಾಡಾನೆ ದಾಳಿಯಿಂದ ಮೃತಪಟ್ಟ ಕಾರ್ತಿಕ್ (26) ಅವರ ಅಂತ್ಯಕ್ರಿಯೆ ಗುರುವಾರ ಸಂಜೆ ಗೌಡಳ್ಳಿ ಸ್ಮಶಾನದಲ್ಲಿ ನಡೆಯಿತು.

‘ಕಾರ್ತಿಕ್ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡಬೇಕು, ಕೂಡಲೇ ಕಾಡಾನೆಗಳನ್ನು ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದ ಸ್ಥಳೀಯರು ಬುಧವಾರ ತಡರಾತ್ರಿವರೆಗೂ ಕಾರ್ತಿಕ್ ಮೃತದೇಹವನ್ನು ಸ್ಥಳದಿಂದ ತೆಗೆಯಲು ಬಿಟ್ಟಿರಲಿಲ್ಲ. ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯ  ಅಧಿಕಾರಿಗಳು ಸ್ಥಳೀಯರೊಂದಿಗೆ ಮಾತುಕತೆ ನಡೆಸಿ ಪರಿಹಾರದ ಭರವಸೆ ನೀಡಿ, ಮೃತದೇಹವನ್ನು ಎಂಜಿಎಂ ಆಸ್ಪತ್ರೆಗೆ ತರುವಲ್ಲಿ ಯಶಸ್ವಿಯಾದರು. ಸೂಕ್ತ ಪರಿಹಾರಕ್ಕಾಗಿ ಹಾಗೂ ಕಾಡಾನೆ ಸ್ಥಳಾಂತರಕ್ಕೆ ಒತ್ತಾಯಿಸಿ ಬೆಳೆಗಾರರ ಒಕ್ಕೂಟದ ನೇತೃತ್ವದಲ್ಲಿ ಗುರುವಾರ ಪ್ರತಿಭಟನೆ ನಡೆಸುವುದಾಗಿ ಸಂಘಸಂಸ್ಥೆಗಳು, ಸಾರ್ವಜನಿಕರು ಸಿದ್ಧರಾಗಿದ್ದರು. ಬೆಳಗಾಗುವಷ್ಟರಲ್ಲಿ ಮಹಾತ್ಮಗಾಂಧಿ ಸ್ಮಾರಕ ಸಾರ್ವಜನಿಕ ಆಸ್ಪತ್ರೆ, ಅರಣ್ಯ ಇಲಾಖೆ ಕಚೇರಿ ಸೇರಿದಂತೆ ಪಟ್ಟಣದಾದ್ಯಂತ ಪೊಲೀಸರ ಸರ್ಪಗಾವಲು ನಿಯೋಜಿಸಲಾಗಿತ್ತು. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಅರಣ್ಯ ಇಲಾಖೆ ಅಧಿಕಾರಿಗಳು ಬೆಳಿಗ್ಗೆ ಕಾರ್ತಿಕ ನಿವಾಸಕ್ಕೆ ಭೇಟಿ ನೀಡಿ, ಪರಿಹಾರದ ಚೆಕ್ ನೀಡುವುದಾಗಿ ಘೋಷಿಸಿದರು.

ಗ್ರಾಮಸ್ಥರು ಕಾಡಾನೆ ಹಾವಳಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮೃತ ಕಾರ್ತಿಕ್ ಕುಟುಂಬಕ್ಕೆ ₹50 ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ‘ಗ್ರಾಮಸ್ಥರೊಂದಿಗೆ ಮಾತನಾಡಿದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಯು.ಪಿ.ಸಿಂಗ್, ‘ದಾಳಿ ನಡೆಸುತ್ತಿರುವ ಕಾಡಾನೆಯನ್ನು ಹಿಡಿದು ಸಾಗಿಸಲು ಕ್ರಮ ಕೈಗೊಳ್ಳಲಾಗುವುದು. ಕಾಡಾನೆ ದಾಳಿಯಿಂದ ಸಾರ್ವಜನಿಕರು ಸಾವನ್ನಪ್ಪಿದರೆ ₹15 ಲಕ್ಷದ ಪರಿಹಾರ ನೀಡಲು ಅವಕಾಶವಿದೆ. ಮೃತ ವ್ಯಕ್ತಿ ಹೊರಗುತ್ತಿಗೆ ನೌಕರನಾಗಿದ್ದರಿಂದ ₹25 ಲಕ್ಷ ಪರಿಹಾರ ನೀಡಿದ್ದೇವೆ. ಮೃತರ ತಾಯಿಗೆ ಪ್ರತಿ ತಿಂಗಳು ₹4 ಸಾವಿರ ಪಿಂಚಣಿ ನೀಡಲಾಗುವುದು’ ಎಂದು ಗ್ರಾಮಸ್ಥರನ್ನು ಸಮಾಧಾನಪಡಿಸಿದರು. ಅರಣ್ಯ ಇಲಾಖೆಯಿಂದ ₹25 ಲಕ್ಷ ಮೊತ್ತದ ಪರಿಹಾರದ ಚೆಕ್ ಅನ್ನು  ಕಾರ್ತಿಕ್ ತಾಯಿ ಸರೋಜಮ್ಮ ಅವರಿಗೆ ಹಸ್ತಾಂತರಿಸಿದರು. ಪರಿಹಾರ ಲಭಿಸಿದ್ದರಿಂದ ಗುರುವಾರ ನಡೆಸಲು ಉದ್ದೇಶಿಸಿದ್ದ ಪ್ರತಿಭಟನೆಯನ್ನು ಕೈ ಬಿಡಲಾಯಿತು. ಎಂಜಿಎಂ ಆಸ್ಪತ್ರೆಯಲ್ಲಿದ್ದ ಕಾರ್ತಿಕ್‌ ಮೃತದೇಹವನನ್ನು  ಬೆಳಿಗ್ಗೆ ಅವರ ಸ್ವಗ್ರಾಮವಾದ ಗೌಡಳ್ಳಿಗೆ ತರಲಾಯಿತು. ಬಂಧು ಬಳಗದವರು, ಗ್ರಾಮಸ್ಥರ ಶೋಕದ  ನಡುವೆ ಮಧ್ಯಾಹ್ನ 3.30ಕ್ಕೆ ಅಂತ್ಯ ಸಂಸ್ಕಾರ ನಡೆಯಿತು.

ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ ಪ್ರಾಣೇಶ್, ಮಾಜಿ ಸಚಿವೆ ಮೋಟಮ್ಮ, ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ದೀಪಕ್ ದೊಡ್ಡಯ್ಯ, ರಂಜನ್ ಅಜಿತ್ ಕುಮಾರ್ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಕಾಡಾನೆ ದಾಳಿಯಿಂದ ಕಾರ್ತಿಕ ಎಂಬ ಹೊರಗುತ್ತಿಗೆ ನೌಕರ ಮೃತಪಟ್ಟ ಹಿನ್ನೆಲೆಯಲ್ಲಿ ಮೂಡಿಗೆರೆ ಅರಣ್ಯ ಇಲಾಖೆ ಕಛೇರಿ ಎದುರು ಪೊಲೀಸರು ಬ್ಯಾರಿಕೆಡ್ ಹಾಕಿ ಬಂದೋಬಸ್ತ್ ಏರ್ಪಡಿಸಿದ್ದರು
ಕಾಡಾನೆ ದಾಳಿಯಿಂದ ಕಾರ್ತಿಕ ಎಂಬ ಹೊರಗುತ್ತಿಗೆ ನೌಕರ ಮೃತಪಟ್ಟ ಹಿನ್ನೆಲೆಯಲ್ಲಿ ಮೂಡಿಗೆರೆ ಅರಣ್ಯ ಇಲಾಖೆ ಕಛೇರಿ ಎದುರು ಪೊಲೀಸರು ಬ್ಯಾರಿಕೆಡ್ ಹಾಕಿ ಬಂದೋಬಸ್ತ್ ಏರ್ಪಡಿಸಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT