ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಡಿಗೆರೆ: ಕಾಡಾನೆ ಸೆರೆ ಕಾರ್ಯಾಚರಣೆ ಸ್ಥಗಿತ- ಆಕ್ರೋಶ

ಎರಡು ಆನೆಗಳ ಸೆರೆ, ಮೂರನೇ ಆನೆ ಸೆರೆ ಹಿಡಿಯದೇ ಶಿಬಿರ ತೆರವು: ಸ್ಥಳೀಯರ ಆರೋಪ
Last Updated 15 ಡಿಸೆಂಬರ್ 2022, 6:11 IST
ಅಕ್ಷರ ಗಾತ್ರ

ಮೂಡಿಗೆರೆ: ತಾಲ್ಲೂಕಿನ ಕುಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಳ್ಳ ಗ್ರಾಮದಲ್ಲಿ ಆರಂಭಿಸಿದ್ದ ಕಾಡಾನೆ ಸೆರೆ ಕಾರ್ಯಾಚರಣೆಯನ್ನು ದಿಢೀರ್ ಸ್ಥಗಿತಗೊಳಿಸಿದ್ದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಸ್ಟೇಟ್ ಕುಂದೂರು ಗ್ರಾಮದಲ್ಲಿ ಇಪ್ಪತ್ತು ದಿನಗಳ ಹಿಂದೆ ಕಾಡಾನೆ ದಾಳಿಯಿಂದ ಶೋಭಾ ಎಂಬುವವರು ಸಾವನ್ನಪ್ಪಿದ್ದರು. ಬಳಿಕ ಪ್ರತಿಭಟನೆ ನಡೆದಿದ್ದು, ಕುಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂರು ಕಾಡಾನೆಗಳನ್ನು ಹಿಡಿದು ಸ್ಥಳಾಂತರಿಸುವಂತೆ ಸರ್ಕಾರ ಆದೇಶ ಹೊರಡಿಸಿತ್ತು. ಬಳಿಕ ದೊಡ್ಡಳ್ಳ ಗ್ರಾಮದಲ್ಲಿ ಶಿಬಿರ ತೆರೆದಿದ್ದ ಅರಣ್ಯ ಇಲಾಖೆ, ಮತ್ತಿಗೋಡಿನಿಂದ ಸಾಕಾನೆಗಳನ್ನು ಕರೆತಂದು ಕಾರ್ಯಾಚರಣೆ ನಡೆಸಿತ್ತು. ಮೊದಲ ದಿನ ಒಂದು ಕಾಡಾನೆ ಹಾಗೂ ಎಂಟು ದಿನಗಳ ಬಳಿಕ ಮತ್ತೊಂದು ಕಾಡಾನೆಯನ್ನು ಹಿಡಿಯಲಾಗಿತ್ತು. ಇನ್ನೊಂದು ಕಾಡಾನೆಯನ್ನು ಹಿಡಿಯುವುದು ಬಾಕಿಯಿತ್ತು.

ಈ ನಡುವೆ ಬೈರಾಪುರದಲ್ಲಿ ಬೈರ ಎಂಬ ಕಾಡಾನೆ ಕಾಣಿಸಿಕೊಂಡಿದ್ದರಿಂದ, ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬೈರನನ್ನು ಸೆರೆ ಹಿಡಿಯಲಾಗಿತ್ತು. ಬೈರನನ್ನು ಸೆರೆ ಹಿಡಿದ ರಾತ್ರಿಯೇ ಶಿಬಿರವನ್ನು ಖಾಲಿ ಮಾಡಿದ್ದು, ಬೈರನನ್ನು ಮತ್ತಿಗೋಡಿಗೆ ಕರೆದೊಯ್ಯಲಾಗಿದೆ. ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿರುವುದು ಸ್ಥಳೀಯರ ಸಿಟ್ಟಿಗೆ ಕಾರಣವಾಗಿದೆ.

‘ಇಲ್ಲಿ ಕಾಡಾನೆಗಳ ಹಾವಳಿ ನಿಂತಿಲ್ಲ. ಕೆಂಜಿಗೆ ಗ್ರಾಮದ ಬಳಿ ನಡೆಸಿದ ಕಾರ್ಯಾಚರಣೆಯ ವೇಳೆ ಎರಡು ಕಾಡಾನೆಗಳು ಕಾಣಿಸಿಕೊಂಡಿದ್ದು, ಒಂದಕ್ಕೆ ಅರಿವಳಿಕೆ ಚುಚ್ಚುಮದ್ದು ನೀಡಲಾಗಿತ್ತು. ಆದರೆ ದುರ್ಗಮ ಪ್ರದೇಶ ಎಂಬ ಕಾರಣಕ್ಕೆ ಆ ಕಾಡಾನೆಯನ್ನು ಹಿಡಿಯದೇ ಬಿಡಲಾಯಿತು. ಈಗ ಕಾರ್ಯಾಚರಣೆಯನ್ನೇ ಸ್ಥಗಿತಗೊಳಿಸಿದ್ದು, ಆತಂಕ ಸೃಷ್ಟಿಸಿದೆ. ಮತ್ತೆ ಕಾಡಾನೆ ದಾಳಿ ನಡೆಸಿದರೆ, ಅರಣ್ಯ ಇಲಾಖೆಯೇ ಹೊಣೆ ’ ಎಂದು ಸ್ಥಳೀಯರು ದೂರಿದ್ದಾರೆ.

‘ಕಾರ್ಯಾಚರಣೆ ಸ್ಥಗಿತಕ್ಕೆ ಅಧಿಕಾರಿಗಳು ಮಳೆಯ ಕಾರಣ ನೀಡುತ್ತಿದ್ದಾರೆ. ಭತ್ತ ಕಟಾವಿಗೆ ಬಂದಿರುವುದರಿಂದ ಸುತ್ತಲಿನ ಅರಣ್ಯ ಪ್ರದೇಶದಲ್ಲಿರುವ ಕಾಡಾನೆಗಳು ದಾಳಿ ನಡೆಸುವ ಅಪಾಯ ಇದೆ. ಕಾರ್ಯಾಚರಣೆ ಮುಂದುವರಿಸಿ, ಮತ್ತೊಂದು ಕಾಡಾನೆಯನ್ನು ಹಿಡಿದು ಸ್ಥಳಾಂತರಿಸಬೇಕು’ ಎಂದು ತಳವಾರ ಅಶ್ವತ್ಥ್‌ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT