ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗನಕಾಯಿಲೆ; ಮುನ್ನೆಚ್ಚರಿಕೆಗೆ ಸೂಚನೆ

ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಶಾಸಕ ಟಿ.ಡಿ.ರಾಜೇಗೌಡ
Published 28 ನವೆಂಬರ್ 2023, 14:06 IST
Last Updated 28 ನವೆಂಬರ್ 2023, 14:06 IST
ಅಕ್ಷರ ಗಾತ್ರ

ನರಸಿಂಹರಾಜಪುರ: ಮಂಗನ ಕಾಯಿಲೆ ಹರಡದಂತೆ ಆರೋಗ್ಯ ಇಲಾಖೆ  ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಟಿ.ಡಿ.ರಾಜೇಗೌಡ ತಾಲ್ಲೂಕು ವೈದ್ಯಾಧಿಕಾರಿ ವಿಜಯಕುಮಾರ್‌ಗೆ ಸೂಚಿಸಿದರು.

ಇಲ್ಲಿನ ತಾಲ್ಲೂಕು ಪಂಚಾಯಿತಿ ಸಾಮರ್ಥ್ಯ ಸೌಧದಲ್ಲಿ ಮಂಗಳವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಕಾಡಂಚಿನ ಜನರಿಗೆ ಮಂಗನಕಾಯಿಲೆ ತಗುಲದಂತೆ ತೈಲ ವಿತರಿಸಬೇಕು. ಮುತ್ತಿನಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರಾತ್ರಿ ವೇಳೆ ವೈದ್ಯರು ಉಳಿಯುತ್ತಿಲ್ಲ. ಉಳಿಯುವ ವ್ಯವಸ್ಥೆ ಮಾಡಬೇಕೆಂದು ಕೃಷಿಕ ಸಮಾಜದ ಅಧ್ಯಕ್ಷ ನಿಲೇಶ್ ಹೇಳಿದರು. ಕುದುರೆಗುಂಡಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸಬೇಕೆಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಸಂದೀಪ್ ಮನವಿ ಮಾಡಿದರು. ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕರು ತಿಳಿಸಿದರು.

ಮಳೆ ಕೊರತೆಯಿಂದ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಗಮನಹರಿಸಬೇಕು. ಇದಕ್ಕಾಗಿ ಖಾಸಗಿ ಕೊಳವೆಬಾವಿ, ಟ್ಯಾಂಕರ್ ಮಾಲೀಕರ ಮಾಹಿತಿಯನ್ನು ಸಂಬಂಧಪಟ್ಟ ಇಲಾಖೆಯವರು ಇಟ್ಟುಕೊಳ್ಳಬೇಕು. ಕುಡಿಯುವ ನೀರಿಗಾಗಿ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ₹50ಲಕ್ಷ ಮೀಸಲಿಡಲಾಗಿದೆ ಎಂದು ಶಾಸಕರು ಹೇಳಿದರು.

ಬಾಳಗಡಿ,ಮೇಲ್ಪಾಲ್ ಬಾಳೆಹೊನ್ನೂರು ರಸ್ತೆಯಿಂದ ರಂಭಾಪುರಿ ಪೀಠದ ಮೆಣಸು ಕೊಡಿಗೆ ಸಂರ್ಪ ರಸ್ತೆ ಅಭಿವೃದ್ಧಿಗೆ ₹ 4ಕೋಟಿ, ಹೊನ್ನೆಕೂಡಿಗೆ ಪಂಚಾಯಿತಿ ಹಂದೂರುನಿಂದ ಹಂತುವಾನಿ ಸಂಪರ್ಕ ರಸ್ತೆ ಅಭಿವೃದ್ಧಿ ₹50 ಲಕ್ಷ, ಕಡಹಿನಬೈಲು ನವಗ್ರಾಮದಿಂದ ಸೂಸಲವಾನಿ ಸಂಪರ್ಕ ರಸ್ತೆಗೆ ₹1ಕೋಟಿ, ಬಾಳಗಡಿ,ಮೇಲ್ಪಾಲ್, ಬಾಳೆಹೊನ್ನೂರು ರಸ್ತೆಗೆ ₹ 2ಕೋಟಿ, ಬಾಳಗಡಿ, ಮೇಲ್ಪಾಲ್, ಬಾಳೆಹೊನ್ನೂರು 4ಪಥದ ರಸ್ತೆ ಅಭಿವೃದ್ಧಿಗೆ ₹ 4ಕೋಟಿ, 9 ಜಿಲ್ಲಾ ಮುಖ್ಯರಸ್ತೆಗಳ ಅಭಿವೃದ್ಧಿ ,ಹಲವು ಶಾಲೆಗಳ ಕೊಠಡಿ ದುರಸ್ತಿ ಸೇರಿ ಸುಮಾರು ₹100 ಕೋಟಿ ಅನುದಾನ ಬಿಡುಗಡೆಯಾಗಿದ್ದು ಕಾಮಗಾರಿ ಪ್ರಗತಿಯಲ್ಲಿದೆ ಎಂದು ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಕುಮಾರ್ ಮಾಹಿತಿ ನೀಡಿದರು.

ಮಳೆ ಕಡಿಮೆಯಾದ ಕೂಡಲೇ ಗುಂಡಿಬಿದ್ದಿರುವ ರಸ್ತೆಗಳನ್ನು ಗುಣಮಟ್ಟದ ಕಾಮಗಾರಿ ಕೈಗೊಂಡು ಮುಚ್ಚುವ ಕೆಲಸ ಮಾಡಬೇಕು ಎಂದು ಶಾಸಕರು ಸೂಚಿಸಿದರು. ಬಿ.ಎಚ್.ಕೈಮರದಿಂದ ಬಾಳೆಹೊನ್ನೂರು ರಸ್ತೆ ಅಭಿವೃದ್ಧಿ ₹3ಕೋಟಿ ಬಿಡುಗಡೆಯಾಗಿದೆ ಎಂದು ಶಾಸಕರು ತಿಳಿಸಿದರು.

ಅಡಿಕೆಗೆ ತಗುಲಿರುವ ಹಳದಿ ಎಲೆ ರೋಗ ಹಾಗೂ ಎಲೆಚುಕ್ಕಿ ರೋಗ ನಿಯಂತ್ರಣಕ್ಕೆ ಔಷಧಿ ವಿತರಿಸಲಾಗುತ್ತಿದೆ ಎಂದು ತೋಟಗಾರಿಕೆ ಅಧಿಕಾರಿ ರೋಹಿತ್ ಮಾಹಿತಿ ನೀಡಿದರು. ತಾಲ್ಲೂಕಿನ 1925 ರೈತರಿಗೆ ಒಟ್ಟು ₹10.80 ಕೋಟಿ ಬೆಳೆವಿಮೆ ಪರಿಹಾರ ಬಂದಿದೆ. ಎನ್.ಆರ್.ಪುರ ಮುತ್ತಿನಕೊಪ್ಪ ಕಸಬಾ ಹೋಬಳಿ ವ್ಯಾಪ್ತಿಯ ಅಡಿಕೆ ಬೆಳೆಗಾರರಿಗೆ ತಾಂತ್ರಿಕ ಸಮಸ್ಯೆಯಿಂದ ಪರಿಹಾರ ಬಂದಿಲ್ಲ. ಕೆಲವೇ ದಿನದಲ್ಲಿ ಪರಿಹಾರ ಬರಲಿದೆ ಎಂದು ಮಾಹಿತಿ ನೀಡಿದರು.

ಭತ್ತ ಖರೀದಿ ಕೇಂದ್ರ ಶೀಘ್ರದಲ್ಲೇ ಆರಂಭಿಸಲು ಕ್ರಮಕೈಗೊಳ್ಳಬೇಕು. ಮೇವಿನ ಹುಲ್ಲು ತಾಲ್ಲೂಕಿನಿಂದ ಹೊರಹೋಗದ ರೀತಿಯಲ್ಲಿ ಕ್ರಮಕೈಗೊಳ್ಳುವಂತೆ ಸಭೆ ಕೃಷಿ ಅಧಿಕಾರಿಗೆ ಸೂಚಿಸಿತು.

ಪಟ್ಟಣದ ಕ್ಷೇತ್ರಶಿಕ್ಷಣಾಧಿಕಾರಿಗಳ ಕಚೇರಿಯ ಪಕ್ಕದಲ್ಲಿರುವ ಕೆಪಿಎಸ್‌ಸಿ ಶಾಲೆಯಲ್ಲಿ ಶಿಕ್ಷಕರ ನಡುವೆ ಸಮನ್ವತೆಯ ಕೊರತೆಯಿದ್ದು ಸಮಸ್ಯೆ ಬಗೆಹರಿಸಲು ಬಿಇಓ ಕ್ರಮಕೈಗೊಳ್ಳುವಂತೆ ಶಾಸಕರು ಸೂಚಿಸಿದರು. ಮಕ್ಕಳ ಸಂಖ್ಯೆ ಹೆಚ್ಚಾಗಿರುವ ಹಾಗೂ ಮೂಲ ಸೌಕರ್ಯವಿರುವ ಶಾಲೆಯನ್ನು ಕೆಪಿಎಸ್‌ಸಿಗೆ ಉನ್ನತೀಕರಿಸಲು ಸಮಗ್ರವಾಗಿ ಪರಿಶೀಲಿಸಿ ವರದಿ ನೀಡುವಂತೆ ಸಭೆ ಬಿಇಓಗೆ ಸೂಚಿಸಿತು.

ಮೆಸ್ಕಾಂ ಇಲಾಖೆಯವರು ಮನೆಯ ವಿದ್ಯುತ್ ಸಂಪರ್ಕದಲ್ಲಿ ಅಡಿಕೆ ಯಂತ್ರ ಬಳಸುವವರ ವಿರುದ್ಧ ಯಾವುದೇ ಕಾರಣಕ್ಕೂ ಕ್ರಮ ಕೈಗೊಳ್ಳಬಾರದು ಎಂದು ಸಭೆ ಸೂಚಿಸಿತು.  ತಾಲ್ಲೂಕು ಪಂಚಾಯಿತಿ ಇಓ ನವೀನ್ ಕುಮಾರ್, ಡಿಎಫ್ ಓ ಎಲ್.ನಂದೀಶ್, ಕೆಡಿಪಿ ನೋಡಲ್ ಅಧಿಕಾರಿ ಉಮೇಶ್ ಇದ್ದರು.

ಆನೆ ಹಾವಳಿ ತಡೆಗೆ ರೈಲ್ವೆ ಬ್ಯಾರಿಕೇಡ್‌ ಅಳವಡಿಸಿ

ಆನೆಗಳ ಹಾವಳಿ ತಡೆಗಟ್ಟಲು ಸೌರ ತೂಗು ಬೇಲಿಗಿಂತಲೂ (ಟ್ಯಾಂಟಕಲ್‌ ಸೋಲಾರ್‌ ಫೆನ್ಸಿಂಗ್‌)  ರೈಲ್ವೆ ಬ್ಯಾರಿಕೇಡ್‌ ಅಳವಡಿಸಲು ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕು. ಇದಕ್ಕೆ ಮುಂದಿನ ಬಜೆಟ್‌ನಲ್ಲಿ ಹೆಚ್ಚುವರಿ ಅನುದಾನ ನೀಡುವ ಬಗ್ಗೆ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ. ನರಸಿಂಹರಾಜಪುರ ಹೆಚ್ಚುವರಿ ಆನೆ ಟಾಸ್ಕ್ ಪೋರ್ಸ್ ಮಂಜೂರು ಮಾಡಲು ಪ್ರಸ್ತಾವನೆ ಸಲ್ಲಿಸುವಂತೆ ಶಾಸಕ ಟಿ.ಡಿ.ರಾಜೇಗೌಡ ಡಿಎಫ್‌ಒಗೆ ಸೂಚಿಸಿದರು. ಅರಣ್ಯ ಮತ್ತು ಕಂದಾಯ ಜಂಟಿ ಸಮೀಕ್ಷೆಗೆ ಸರ್ಕಾರ ಆದೇಶ ಹೊರಡಿಸಲಿದೆ ಎಂದರು. ಜಂಟಿ ಸಮೀಕ್ಷೆಗೆ 4ಜನ ಸರ್ವೆಯರ್‌ಗಳನ್ನು ನಿಯೋಜಿಸಲಾಗಿದೆ ಎಂದು ತಹಶೀಲ್ದಾರ್ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT