‘ಜಿಂದಾಲ್‌ ಅಥವಾ ರಾಜಕೀಯ ಕಾರಣಕ್ಕೆ ಆನಂದ್‌ ಸಿಂಗ್‌ ರಾಜೀನಾಮೆ: ಸಿ.ಟಿ.ರವಿ

ಶನಿವಾರ, ಜೂಲೈ 20, 2019
22 °C

‘ಜಿಂದಾಲ್‌ ಅಥವಾ ರಾಜಕೀಯ ಕಾರಣಕ್ಕೆ ಆನಂದ್‌ ಸಿಂಗ್‌ ರಾಜೀನಾಮೆ: ಸಿ.ಟಿ.ರವಿ

Published:
Updated:
Prajavani

ಚಿಕ್ಕಮಗಳೂರು: ‘ಜಿಂದಾಲ್‌ ಕಂಪೆನಿಗೆ ಜಾಗ ಪರಭಾರೆ ಮಾಡುವುದನ್ನು ವಿರೋಧಿಸಿ ಅಥವಾ ರಾಜಕೀಯ ಕಾರಣಕ್ಕೆ ಕಾಂಗ್ರೆಸ್‌ ಶಾಸಕ ಆನಂದ್‌ ಸಿಂಗ್‌ ರಾಜೀನಾಮೆ ನೀಡಿರಬಹುದು’ ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಶಾಸಕ ಸಿ.ಟಿ.ರವಿ ಪ್ರತಿಕ್ರಿಯಿಸಿದರು. 

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಆನಂದ್‌ ಸಿಂಗ್‌ ನನಗೆ ಒಳ್ಳೆಯ ಸ್ನೇಹಿತರು. ಹಿಂದೆ ಬಿಜೆಪಿಯಲ್ಲಿ ಇದ್ದರು. ರಾಜೀನಾಮೆಗೆ ಕಾರಣ ತಿಳಿದುಕೊಳ್ಳಲು ಅವರನ್ನು ಫೋನ್‌ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದೆ, ಎರಡೂ ಫೋನ್‌ಗಳು ಸ್ವಿಚ್‌ ಆಫ್‌ ಆಗಿದ್ದವು’ ಎಂದರು.

‘ಕಾಂಗ್ರೆಸ್‌ ಹತಾಶ ಸ್ಥಿತಿಯಲ್ಲಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರೇ ರಾಜೀನಾಮೆ ನೀಡಿದ್ದಾರೆ. ಆ ಪಕ್ಷದಲ್ಲಿ ರಾಜೀನಾಮೆ ಸರಣಿ ಶುರುವಾಗಿದೆ. ಕಾಂಗ್ರೆಸ್‌ನಲ್ಲಿ ರಾಜಕೀಯ ಭವಿಷ್ಯ ಇಲ್ಲ ಅನಿಸಿಯೂ ರಾಜೀನಾಮೆ ಕೊಟ್ಟಿರಬಹುದು’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

‘ಬಿಜೆಪಿಯವರು ಹಗಲುಗನಸು ಕಾಣುವರಲ್ಲ, ಕನಸು ನನಸು ಮಾಡುವವರು. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರೇ ಹೇಳಿಕೊಂಡ ರೀತಿಯಲ್ಲಿ ಅವರು ಸಾಂದರ್ಭಿಕ ಶಿಶು. ಆ ಶಿಶುವಿಗೆ ಕನಸು ಬೀಳಲು ಸಾಧ್ಯ ಇಲ್ಲ. ನಾವು ಕನಸೂ ಕಾಣುತ್ತೇವೆ ಅದನ್ನು ನನಸು ಮಾಡುವ ಇಚ್ಛಾಶಕ್ತಿಯು ನಮಗೆ ಇದೆ’ ಎಂದು ಉತ್ತರಿಸಿದರು.

‘ಸಮ್ಮಿಶ್ರ ಸರ್ಕಾರವನ್ನು ಉರುಳಿಸಲು ಬಿಜೆಪಿ ಪ್ರಯತ್ನಿಸುತ್ತಿಲ್ಲ. ಸರ್ಕಾರವನ್ನು ಉಳಿಸುವುದು ನಮ್ಮ ಕೆಲಸವಲ್ಲ. ಕಾಂಗ್ರೆಸ್‌ ಮತ್ತು ಜೆಡಿಎಸ್‌ನವರು ಪರಸ್ಪರ ಟೀಕೆ ಮಾಡುತ್ತಾರೆ. ಸರ್ಕಾರ ಪತನವಾಗಲಿ ಎಂದು ನಾವು ಕಾಯುತ್ತಿದ್ದೇವೆ’ ಎಂದು ಮಾರ್ಮಿಕವಾಗಿ ನುಡಿದರು.

‘ವರ್ಷದ ನಂತರ ಸಚಿವರನ್ನಾಗಿ ಮಾಡುವುದಾಗಿ ಕೆಲವರ ಮೂಗಿಗೆ ತುಪ್ಪ ಸವರಿದ್ದರು. ಸಚಿವ ಸ್ಥಾನ ನೀಡಿಲ್ಲ ಎಂದು ಬಿ.ಸಿ.ಪಾಟೀಲ್‌ಗೆ ಅಸಮಾಧಾನ ಇದೆ. ಡಿ.ಕೆ.ಶಿವಕುಮಾರ್‌ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಶಾಸಕ ರಮೇಶ ಜಾರಕಿಹೊಳಿ ಅವರಿಗೆ ಅಸಮಾಧಾನ ಇದೆ. ಇದಕ್ಕೆಲ್ಲ ಬಿಜೆಪಿ ಹೊಣೆಯೇ’ ಎಂದು ಪ್ರಶ್ನಿಸಿದರು.

‘ಶ್ರೀಗುರುದತ್ತಾತ್ರೇಯ ಬಾಬಾಬುಡನ್‌ಸ್ವಾಮಿ ದರ್ಗಾ ವಿವಾದದ ವಿಚಾರಕ್ಕೆ ನಾವು ನೀಡಿದ ದಾಖಲೆಗಳನ್ನು ನ್ಯಾ.ಎಚ್‌.ಎನ್‌.ನಾಗಮೋಹನ್‌ದಾಸ್‌ ಪರಿಗಣಿಸಿಲ್ಲ. ದತ್ತಪೀಠದ ಅವರು ಬಗ್ಗೆ ಅಧ್ಯಯನ ಮಾಡಿಲ್ಲ. ಅವರು ಕಾಲೇಜು ದಿನಗಳಲ್ಲಿ ಕಮ್ಯುನಿಸ್ಟ್‌ ಕಾರ್ಯಕರ್ತರಾಗಿದ್ದರು. ಅವರು ಕಾಮ್ರೇಡ್‌ ರೀತಿಯಲ್ಲಿ ನೀಡಿದ ವರದಿಯನ್ನು ಒಪ್ಪಿಕೊಳ್ಳಲು ನಾವು ಸಿದ್ಧ ಇಲ್ಲ. ಹೀಗಾಗಿ, ವರದಿ ಪ್ರಶ್ನಿಸಿ ಕೋರ್ಟ್‌ ಮೆಟ್ಟಿಲು ಏರಿದ್ದೇವೆ’ ಎಂದು ಉತ್ತರಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !