ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಡೂರು | ನಿಯಂತ್ರಣಕ್ಕೆ ಬಾರದ ಗರಿ ರೋಗ

49 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆ
ಬಾಲುಮಚ್ಚೇರಿ
Published 30 ಜೂನ್ 2024, 7:34 IST
Last Updated 30 ಜೂನ್ 2024, 7:34 IST
ಅಕ್ಷರ ಗಾತ್ರ

ಕಡೂರು: ತಂಪು ವಾತಾವರಣದಲ್ಲಿ ತೆಂಗಿನ ಗರಿ ರೋಗ ಕಡಿಮೆಯಾಗುತ್ತದೆ ಎಂಬ ರೈತರ ನಿರೀಕ್ಷೆ ಹುಸಿಯಾಗಿದೆ. ಗರಿ ರೋಗ ಹೆಚ್ಚಳದಿಂದ ಇಡೀ ತೋಟಗಳೇ ಬಿಳಿ ಬಣ್ಣಕ್ಕೆ ತಿರುಗಿದ್ದು, ರೈತರು ಹತಾಶೆಗೊಂಡಿದ್ದಾರೆ.

ಈ ಭಾಗದ ಪ್ರಮುಖ ವಾಣಿಜ್ಯ ಬೆಳೆ ತೆಂಗು. 49 ಸಾವಿರ ಹೆಕ್ಟೇರ್ ಪ್ರದೇಶದಲ್ಲಿದೆ. ತೆಂಗು ಬೆಳೆಗೆ ನುಸಿ ರೋಗ, ಕಾಂಡ ಸೋರುವ ರೋಗ, ಬೆಂಕಿ ರೋಗ, ಗರಿ ಒಣಗುವ ರೋಗಗಳ ಬಾಧೆ ಹೆಚ್ಚು. ಆದರೆ, ಇತ್ತೀಚೆಗೆ ಬಿಳಿ ನೊಣಗಳ ಪೀಡೆ ಹೆಚ್ಚಾಗಿದೆ. ತೆಂಗಿನ ಗರಿಗಳ ನಡುವೆ ಕೊರೆದು ರಸ ಹೀರುವ ವೈಟ್ ಫ್ಲೈ ಕೀಟಗಳ ಬಾಧೆಯಿಂದ ತೆಂಗಿನ ಗರಿಗಳು ಸಂಪೂರ್ಣ ಬಿಳಿಯ ಬಣ್ಣಕ್ಕೆ ತಿರುಗಿವೆ. ಮರಗಳಲ್ಲಿ ಬಲವೇ ಇಲ್ಲದಂತಾಗಿ ಹೊಂಬಾಳೆಯೇ ಉದುರುತ್ತಿವೆ.

ಈ ವೈಟ್ ಫ್ಲೈ ಕೀಟಗಳು ವಾತಾವರಣದಲ್ಲಿ ನೈಸರ್ಗಿಕವಾಗಿಯೇ ನಿಯಂತ್ರಣಗೊಳ್ಳುತ್ತವೆ ಎಂದು ಹೇಳಲಾಗಿತ್ತು. ಆದರೆ, ವಾತಾವರಣ ತಂಪಾಗಿ ಸುಮಾರು ಎರಡು ತಿಂಗಳಾದರೂ ಈ ಕೀಟಗಳ ಪ್ರಸಾರ ಕಡಿಮೆಯಾಗಿಲ್ಲ. ಬದಲಿಗೆ ಮತ್ತಷ್ಟು ಹೆಚ್ಚಿರುವುದು ರೈತರಿಗೆ ತಲೆನೋವು ತಂದಿದೆ‌.

ತೆಂಗಿನ ತೋಟಗಳಲ್ಲಿ ಸಾಂಪ್ರದಾಯಿಕ ಉಳುಮೆ ಕಡಿಮೆಯಾಗಿರುವುದು ಈ ರೋಗದ ಹೆಚ್ಚಳಕ್ಕೆ ಮತ್ತೊಂದು ಕಾರಣವಾಗಿದೆ. ಇದರ ಜೊತೆ ಅಗತ್ಯ ಪೋಷಕಾಂಶಗಳ ಕೊರತೆ, ರೋಗನಿರೋಧಕ ಶಕ್ತಿ ಕುಂದುವಿಕೆ ಮುಂತಾದವುಗಳು ತೆಂಗಿನ ಬೆಳೆ ಇಳುವರಿ ಕಡಿಮೆಯಾಗಲು‌ ಕಾರಣ ಎಂಬ ಅಭಿಪ್ರಾಯವನ್ನು ರೈತರು ವ್ಯಕ್ತಪಡಿಸುತ್ತಾರೆ‌.

ಈ ವೈಟ್ ಫ್ಲೈ ಕೀಟಗಳು ಹೆಚ್ಚಿನ ಮಳೆಯಾದರೆ ಪೂರ್ಣ ನಿಯಂತ್ರಣಗೊಳ್ಳುತ್ತವೆ. ಪೂರ್ವ ಮುಂಗಾರು ಮಳೆಯಾಗಿ ಬಿಸಿ ವಾತಾವರಣ ತುಸು ಕಡಿಮೆಯಾದರೂ ಅದು ಈ ಕೀಟ ಬಾಧೆ ನಿಯಂತ್ರಣ ಮಾಡುವಷ್ಟು ಕಡಿಮೆ ಆಗಿಲ್ಲ. ರೈತರು ತಮ್ಮ ತೋಟಗಳಲ್ಲಿ ಹ್ಯೂಮಸ್ (ತಂಪು ವಾತಾವರಣ) ವಾತಾವರಣವನ್ನು ಜೈವಿಕವಾಗಿ ನಿರ್ಮಿಸಲು ಮುಂದಾಗಬೇಕು. ತೋಟದಲ್ಲಿ ಹಸಿರು ಹೊದಿಕೆ (ಮಲ್ಚಿಂಗ್) ಮಾಡಬೇಕು. ಹೆಚ್ಚು ತಂಪಾದಷ್ಟು ಈ ಕೀಟ ನಿಯಂತ್ರಣವಾಗುತ್ತದೆ. ಔಷಧಿಗಳ ಸಲಹೆಗಾಗಿ ತೋಟಗಾರಿಕೆ ಇಲಾಖೆಯನ್ನು ರೈತರು ಸಂಪರ್ಕಿಸಬೇಕು ಎನ್ನುತ್ತಾರೆ ಹಿರಿಯ ಸಹಾಯಕ ನಿರ್ದೇಶಕ ಜಯದೇವ್.  

ತಾಲ್ಲೂಕಿನ ಹಿರೇನಲ್ಲೂರು ಹೋಬಳಿ, ಜಿಗಣೇಹಳ್ಳಿ, ಪಟ್ಟಣಗೆರೆ, ಎರೇಹಳ್ಳಿ, ಮಲ್ಲೇಶ್ವರ, ಮಚ್ಚೇರಿ, ಮಲ್ಲಿದೇವಿಹಳ್ಳಿ, ತುರುವನಹಳ್ಳಿ, ಬಿಳವಾಲ, ಚಿಕ್ಕ ಮತ್ತು ದೊಡ್ಡಬಾಸೂರು, ಪಂಚನಹಳ್ಳಿ, ಸಿಂಗಟಗೆರೆ ಹೋಬಳಿಯ ಕೆಲ ಭಾಗಗಳಲ್ಲಿ ಮತ್ತಿತರ ಹಳ್ಳಿಗಳಲ್ಲಿ ತೆಂಗಿನ ಮರಗಳಿಗೆ ರೋಗಬಾಧೆ ತೀವ್ರವಾಗಿದೆ.

ಈ ಕೀಟಬಾದೆಯಿಂದ ಇಡೀ ತೋಟ ಬಿಳಿ ಬಣ್ಣಕ್ಕೆ ತಿರುಗಿದೆ. ಯಾವಾಗ ಕಡಿಮೆಯಾಗುತ್ತದೆಯೋ ಎಂದು ಕಾಯುತ್ತಿದ್ದೇವೆ.

-ಶಂಕರಾನಾಯ್ಕ.ರೈತ.ಎಂ‌.ಕೋಡಿಹಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT