ಸೋಮವಾರ, ಮಾರ್ಚ್ 8, 2021
30 °C

ಮೊಹರಂ, ಗೌರಿ–ಗಣೇಶ ಹಬ್ಬ ಆಚರಣೆ: ಶಾಂತಿ, ಸೌಹಾರ್ದ ಕಾಪಾಡಲು ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಚಿಕ್ಕಮಗಳೂರು: ಶಾಂತಿ, ಸೌಹಾರ್ದದಿಂದ ಹಬ್ಬ ಆಚರಿಸಬೇಕು. ಅಹಿತಕರ ಘಟನೆಗಳಿಗೆ ಎಡೆಮಾಡಿಕೊಡಬಾರದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ ಹೇಳಿದರು.

ಗೌರಿಗಣೇಶ ಹಬ್ಬ, ಮೊಹರಂ ಅಂಗವಾಗಿ ನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಶನಿವಾರ ಏರ್ಪಡಿಸಿದ್ದ ಶಾಂತಿಸೌಹಾರ್ದ ಸಭೆಯಲ್ಲಿ ಅವರು ಮಾತನಾಡಿದರು. ಗೌರಿಗಣೇಶ ಮತ್ತು ಮೊಹರಂ ಇದೇ ಮಾಸದಲ್ಲಿ ಬಂದಿವೆ. ಈ ಬಾರಿ ನಗರದಲ್ಲಿ 90 ಹಾಗೂ ಗ್ರಾಮಾಂತರ ಪ್ರದೇಶದಲ್ಲಿ 238ಗಣೇಶ ಮೂರ್ತಿಗಳು ಪ್ರತಿಷ್ಠಾಪಿಸುವುದಾಗಿ ವಿವಿಧ ಸಂಘಸಂಸ್ಥೆಗಳು ತಿಳಿಸಿವೆ. ಗಲಾಟೆ, ವಿರಸಗಳಿಗೆ ಆಸ್ಪದವಾಗದಂತೆ ಸಾಂಸ್ಕೃತಿಕ ಚಟುವಟಿಕೆ, ಹಬ್ಬ ಆಚರಿಸಬೇಕು ಎಂದು ಸಲಹೆ ನೀಡಿದರು.

ಈಗಾಗಲೇ ಕೆಲವು ಪೊಲೀಸ್‌ ಠಾಣೆಗಳಲ್ಲಿ ಸಭೆ ಏರ್ಪಡಿಸಿ ಸೂಚನೆಗಳನ್ನು ನೀಡಿದ್ದಾರೆ. ಪೊಲೀಸರು ನೀಡುವ ಪಟ್ಟಿಯಲ್ಲಿನ ಅಂಶಗಳನ್ನು ಪಾಲಿಸಬೇಕು. ನಿಗದಿ‍ಪಡಿಸಿದ ಸಮಯದೊಳಗೆ ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮುಗಿಸಬೇಕು. ಗಣಪತಿ ಮೂರ್ತಿ ವಿಸರ್ಜನೆ ಮೆರವಣಿಗೆ ಸಂದರ್ಭದಲ್ಲಿ ಯುವಪಡೆಯ್ನು ಮುಖಂಡರು ನಿಯಂತ್ರಿಸಬೇಕು ಎಂದು ಹೇಳಿದರು.

ವಿವಿಧೆಡೆ ಪ್ರತಿಷ್ಠಾಪಿಸುವ ಗಣೇಶ ಮೂರ್ತಿಗಳನ್ನು ಒಂದೇ ದಿನ ವಿಸರ್ಜಿಸುವುದು ಸಾಧ್ಯ ಇಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಬೇರೆಬೇರೆ ದಿನ ವಿಸರ್ಜಿಸಲು ಅವಕಾಶ ನೀಡಲಾಗುವುದು. ಸೂಚಿತ ಸ್ಥಳದಲ್ಲಿ ಮೂರ್ತಿಗಳನ್ನು ವಿಸರ್ಜನೆ ಮಾಡಬೇಕು ಎಂದು ತಿಳಿಸಿದರು.

ಪಿಒಪಿ ಮೂರ್ತಿಗಳನ್ನು ಬಳಸಬಾರದು ಎಂದು ನಗರಸಭೆ ಉಪಾಧ್ಯಕ್ಷ ಸುಧೀರ್‌ ಮನವಿ ಮಾಡಿದರು.

‘ಡಿಜೆ ಅವಕಾಶ ನೀಡಬೇಕು ಎಂದು ಕೋರಿಕೆ ಇಟ್ಟಿದ್ದಾರೆ. ಮಾರ್ಗ, ಸಮಯ, ಸ್ಥಳದ ಮಾಹಿತಿಯನ್ನು ಸಂಬಂಧಪಟ್ಟ ಠಾಣೆಗೆ ನೀಡಿದರೆ ಪರಿಶೀಲಿಸಿ ಕ್ರಮ ವಹಿಸಲಾಗುವುದು’ ಎಂದರು.

‘ಸಾಂಸ್ಕೃತಿಕ ಕಾರ್ಯಕ್ರಮ ಸಮಯ ನಿರ್ಬಂಧವನ್ನು ತುಸು ಸಡಿಲಿಸಬೇಕು’ ಎಂದು ಮುಖಂಡ ತೇಗೂರು ಜಗದೀಶ್‌ ಕೋರಿದರು.

‘ಡಿಜೆ ಅವಕಾಶ ನೀಡಬೇಕು. ಅನುಮತಿ ಪಡೆಯಲು ಏಕಗವಾಕ್ಷಿ ವ್ಯವಸ್ಥೆ ಕಲ್ಪಿಸಬೇಕು’ ಎಂದು ಮುಖಂಡ ಯೋಗೀಶರಾಜ್‌ ಅರಸ್‌ ಮನವಿ ಮಾಡಿದರು.

‘ಮಲೆನಾಡು ಭಾಗದಲ್ಲಿ ಅತಿವೃಷ್ಟಿಯಿಂದಾಗಿ ಜನರು ಸಂಕಷ್ಟದಲ್ಲಿ ಇದ್ದಾರೆ. ಹಬ್ಬವನ್ನು ಸರಳವಾಗಿ ಆಚರಣೆ ಮಾಡೋಣ’ ಎಂದು ಮುಖಂಡ ಕೃಷ್ಣಮೂರ್ತಿ ಸಲಹೆ ನೀಡಿದರು.

ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಣ್ಣಪ್ಪ ನಾಯಕ‌್,ಡಿವೈಎಸ್ಪಿ ಚಂದ್ರಶೇಖರ್‌, ನಗರಸಭೆ ಮಾಜಿ ಅಧ್ಯಕ್ಷ ದೇವರಾಜಶೆಟ್ಟಿ ಇದ್ದರು.

ಮೂರ್ತಿ ಪ್ರತಿಷ್ಠಾಪನೆ ಅನುಮತಿಗೆ ಏಕಗವಾಕ್ಷಿ ವ್ಯವಸ್ಥೆ

ಚೌತಿ ಹಬ್ಬಕ್ಕೆ ಸಾರ್ವಜನಿಕ ಸ್ಥಳಗಳಲ್ಲಿ ಮೂರ್ತಿ ಪ್ರತಿಷ್ಠಾಪನೆಗೆ ಸಂಘಸಂಸ್ಥೆಗಳವರು ಅನುಮತಿ ಪಡೆದುಕೊಳ್ಳಲು ನಗರಸಭೆಯಲ್ಲಿ ಏಕಗವಾಕ್ಷಿ ವ್ಯವಸ್ಥೆ ಕಲ್ಪಿಸಲಾಗಿದೆ. ಇದೇ 10 ಮತ್ತು 11ರಂದು (ಬೆಳಿಗ್ಗೆ 8 ರಿಂದ ಸಂಜೆ 6 ಗಂಟೆವರೆಗೆ) ಅನುಮತಿ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ನಗರಸಭೆ, ಪೊಲೀಸ್‌, ಮೆಸ್ಕಾಂ, ಅಗ್ನಿಶಾಮಕ ಅಧಿಕಾರಿಗಳು ನಗರಸಭೆಯಲ್ಲಿ ಮನವಿ ಪರಿಶೀಲಿಸಿ ಅನುಮತಿ ನೀಡಲು ಕ್ರಮವಹಿಸುವರು ಎಂದು ಅಣ್ಣಾಮಲೈ ತಿಳಿಸಿದರು.

ಸ್ಥಳಕ್ಕೆ ವಾಹನ

ತ್ಯಾಜ್ಯವನ್ನು ಕಸ ಸಂಗ್ರಹಣೆ ವಾಹನದಲ್ಲಿಯೇ ಹಾಕಬೇಕು. ಮೊ:9886078719, 9483947666 ಗೆ ಸಂದೇಶ ಕಳಿಸಿದರೆ, ಕಸ ಸಂಗ್ರಹ ವಾಹನವನ್ನು ಸ್ಥಳಕ್ಕೆ ಕಳಿಸಿಕೊಡಲು ವ್ಯವಸ್ಥೆ ಮಾಡಲಾಗುವುದು ಎಂದು ನಗರಸಭೆ ಆಯಕ್ತೆ ಎಂ.ವಿ.ತುಷಾರಮಣಿ ಹೇಳಿದರು.

ಬಣ್ಣರಹಿತ ಪರಿಸರ ಸ್ನೇಹಿ ಮೂರ್ತಿಗಳನ್ನು ಮಾತ್ರ ಬಳಸಬೇಕು.ಫ್ಲೆಕ್ಸ್‌, ಬ್ಯಾನರ್‌ಗಳ ಬಳಕೆಗೆ ನಿರ್ಬಂಧ ವಿಧಿಸಲಾಗಿದೆ. ಪ್ಲಾಸ್ಟಿಕ್‌ ಬಳಕೆಯನ್ನು ನಿಷೇಧಿಸಲಾಗಿದೆ. ಬಸವನಹಳ್ಳಿಯ ಕೆರೆಯಲ್ಲಿ ವ್ಯವಸ್ಥೆ ಮಾಡಿರುವ ಕೊಳದಲ್ಲಿ ಮೂರ್ತಿಗಳನ್ನು ವಿಸರ್ಜನೆ ಮಾಡಬೇಕು ಎಂದು ತಿಳಿಸಿದರು.

* ನೆರೆಹೊರೆಯವರಿಗೆ ತೊಂದರೆಯಾಗದಂತೆ ಹಬ್ಬ ಆಚರಿಸಬೇಕು. ಪರಿಸರಕ್ಕೆ ಹಾನಿಯಾಗದಂತೆ ಎಚ್ಚರವಹಿಸಬೇಕು. ಪರಿಸರಸ್ನೇಹಿ ವಿಗ್ರಹಗಳನ್ನೇ ಬಳಸಬೇಕು. ಶಾಂತಿಸುವ್ಯವಸ್ಥೆ ಕಾಪಾಡಬೇಕು.

–ಕೆ.ಎಂ.ಶಿಲ್ಪಾರಾಜಶೇಖರ್‌, ಅಧ್ಯಕ್ಷೆ, ನಗರಸಭೆ

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು