ನಿರಾಶ್ರಿತರಿಗೆ ತಲಾ 9.53 ಲಕ್ಷ ಪರಿಹಾರ ನೀಡಲು ಅವಕಾಶ

7
ಮಸಗಲಿ ಮೀಸಲು ಅರಣ್ಯದ ಒತ್ತುವರಿ ತೆರವು; ಪುನರ್ವಸತಿ ಪ್ಯಾಕೇಜ್‌

ನಿರಾಶ್ರಿತರಿಗೆ ತಲಾ 9.53 ಲಕ್ಷ ಪರಿಹಾರ ನೀಡಲು ಅವಕಾಶ

Published:
Updated:
Deccan Herald

ಚಿಕ್ಕಮಗಳೂರು: ಜಿಲ್ಲೆಯ ಮಸಗಲಿ ಮೀಸಲು ಅರಣ್ಯದಲ್ಲಿ ಒತ್ತುವರಿ ತೆರವುಗೊಳಿಸುವುದರಿಂದ ನಿರಾಶ್ರಿತರಾಗುವವರಿಗೆ (ಮನೆ ಮತ್ತು ಒತ್ತುವರಿ ಜಾಗ ಕಳೆದುಕೊಳ್ಳುವವರು) ಪುನರ್ವಸತಿ ಹೊಸ ಪ್ಯಾಕೇಜ್‌ನಡಿ ತಲಾ ₹ 9.53 ಲಕ್ಷ ಪರಿಹಾರ ನೀಡಲು ಅವಕಾಶ ಇದೆ. 82 ಕುಟುಂಬಗಳು ಪುನರ್ವಸತಿ ಸೌಲಭ್ಯಕ್ಕೆ ಅರ್ಹವಾಗಿವೆ ಎಂದು ಜಿಲ್ಲಾಧಿಕಾರ ಎಂ.ಕೆ.ಶ್ರೀರಂಗಯ್ಯ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮನೆ ಮಾತ್ರ ಕಳೆದುಕೊಳ್ಳುವವರಿಗೆ ನಾಲ್ಕು ಗುಂಟೆ ಜಾಗ ಮತ್ತು ₹ 2.50 ಲಕ್ಷ ನೆರವು ನೀಡಿ ರಾಜೀವ್‌ಗಾಂಧಿ ಯೋಜನೆಯಲ್ಲಿ ವಸತಿ ಮಂಜೂರು ಮಾಡಲಾಗುವುದು. ಜಮೀನು ಕಳೆದುಕೊಳ್ಳುವವರಿಗೆ ₹ 5 ಲಕ್ಷ ಪ್ಯಾಕೇಜ್‌ ನೀಡಲಾಗುವುದು ಎಂದು ತಿಳಿಸಿದರು.

ಉಪವಿಭಾಗಾಧಿಕಾರಿ ನೇತೃತ್ವದ ಪರಿಶೀಲನಾ ಸಮಿತಿಯು ಪರಿಶೀಲನೆ ಮಾಡಿ ಪುನರ್ವಸತಿಗೆ ಅರ್ಹವಾಗುವ ಕುಟುಂಬಗಳ ಪಟ್ಟಿ ಸಿದ್ಧಪಡಿಸಿದೆ. ಜಮೀನು ಮತ್ತು ಮನೆ ಕಳೆದುಕೊಳ್ಳುವ– 20, ಮನೆ ಮಾತ್ರ ಕಳೆದುಕೊಳ್ಳುವ ಕುಟುಂಬಗಳು 18, ಜಮೀನು ಮಾತ್ರ ಕಳೆದುಕೊಳ್ಳುವ 44 ಕುಟುಂಬಗಳು ಇವೆ ಎಂದು ಹೇಳಿದರು.

ಪುನರ್ವಸತಿಗೆ ಸಂಬಂಧಿಸಿದಂತೆ ಆ ಭಾಗದ ಸಾಗುವಳಿದಾರರು, ಜನಪ್ರತಿನಿಧಿಗಳೊಂದಿಗೆ ಸಭೆ ಮಾಡಿ ಚರ್ಚಿಸಲಾಗಿದೆ. ಕೆಲವರು ತಮ್ಮನ್ನು ಅಲ್ಲೇ ಉಳಿಸುವಂತ ಕೋರಿಕೆ ಸಲ್ಲಿಸಿದ್ದಾರೆ. ಎಲ್ಲರಿಗೂ ಒಂದೇ ರೀತಿಯ ಸಾಮಾನ್ಯ ಪ್ಯಾಕೇಜ್‌ ನೀಡುವಂತೆ ಕೆಲವರು ಮನವಿ ಮಾಡಿದ್ದಾರೆ. ಮಸಗಲಿ ಸಮೀಪದಲ್ಲಿಯೇ ಜಾಗ ಗುರುತಿಸಿ ಪುನರ್ವಸತಿಗೆ ಕಲ್ಪಿಸುವಂತೆ ಕೆಲವರು ಕೋರಿಕೆ ಸಲ್ಲಿಸಿದ್ದಾರೆ ಎಂದು ತಿಳಿಸಿದರು.

ಶಿರವಾಸೆ ಮತ್ತು ಇಂದಾವರ ಭಾಗದಲ್ಲಿ ನಿರಾಶ್ರಿತರಾಗುವವರಿಗೆ ಪುನರ್ವಸತಿ ಕಲ್ಪಿಸುವ ನಿಟ್ಟನಲ್ಲಿ ಜಾಗ ಗುರುತಿಸುವ ಪ್ರಕ್ರಿಯೆ ನಡೆಯುತ್ತಿದೆ. ತತ್ಕೊಳ ಮತ್ತು ಸಾರಗೋಡು ಸನಿಹದಲ್ಲಿ ನಿರಾಶ್ರಿತರಿಗೆ ಎರಡು ಎಕರೆ ಜಾಗ ಒದಗಿಸುವ ಕುರಿತು ಚರ್ಚಿಸಲಾಗಿದೆ ಎಂದರು.

ಸ್ವಂತ ಮನೆ, ಜಮೀನು ಇರುವವರನ್ನು ನಿರಾಶ್ರಿತರು ಎಂದು ಪರಿಗಣಿತರಾಗುವುದಿಲ್ಲ. ಗುರುತಿಸಿದ್ದ 301 ಪ್ರಕರಣಗಳಲ್ಲಿ ಕಂದಾಯ ಪರಿಷ್ಕರಣೆ ನಂತರ 269 ಆಗಿದೆ. 269ರಲ್ಲಿ 66 ಮೀಸಲು ಅರಣ್ಯ ಮಂಜೂರಿ ಪ್ರಕರಣಗಳಿವೆ. ಮೀಸಲು ಅರಣ್ಯ ಹೊರಗಡೆ ಹಿಡುವಳಿ ಜಮೀನು ಹೊಂದಿರುವ ಪ್ರಕರಣಗಳು 121 ಇವೆ. ಸಾರಗೋಡು ಮತ್ತು ತತ್ಕೋಳ ಮಾದರಿಯನ್ನೇ ಮಸಗಲಿ ನಿರಾಶ್ರಿತರಿಗೂ ಅನುಸರಿಸಲಾಗುತ್ತದೆ. ಈಗ ಪ್ಯಾಕೇಜ್‌ ಪರಿಹಾರ ಮೊತ್ತ ಹೆಚ್ಚಾಗಿದೆ ಎಂದು ಹೇಳಿದರು.

ಮಸಗಲಿ ಮೀಸಲು ಅರಣ್ಯದಲ್ಲಿ ಒತ್ತುವರಿ ತೆರವುಗೊಳಿಸಿ ಪುನರ್ವಸತಿ ಕಲ್ಪಿಸುವುದಕ್ಕೆ ಸಂಬಂಧಿಸಿದಂತ ಸುಪ್ರೀಂಕೋರ್ಟ್‌ ಗಡುವು ನೀಡಿದೆ. ಈ ತಿಂಗಳ ಅಂತ್ಯದಲ್ಲಿ ಸುಪ್ರೀಂ ಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಲಾಗುವುದು ಎಂದರು.

ಮಳಲೂರು ನೀರಾವರಿ ಯೋಜನೆ ಕಾಮಗಾರಿ ತೊಡಕು ನಿವಾರಣೆ ನಿಟ್ಟಿನಲ್ಲಿ ಸಭೆ ನಡೆಸಲಾಗಿದೆ. 19 ಎಕರೆ ಜಾಗ ನೀಡಲು ಜಮೀನಿನವರು ಒಪ್ಪಿದ್ದಾರೆ. ಇನ್ನು ಎಂಟೂವರೆ ಎಕರೆ ಸ್ವಾಧೀನಕ್ಕೆ ಕ್ರಮ ವಹಿಸಲಾಗುವುದು ಎಂದರು.

ಜಿಲ್ಲೆಯಲ್ಲಿ ಮಳೆಯಿಂದಾಗಿ ರಸ್ತೆ, ಸೇತುವೆ, ಮನೆ, ಕಟ್ಟಡ, ಬೆಳೆ ಹಾನಿಯಾಗಿದೆ. ನಾಲ್ಕು ಪ್ರಾಣಹಾನಿಯಾಗಿದೆ. ಈವರೆಗೆ ₹ 88.17 ಕೋಟಿ ನಷ್ಟ ಅಂದಾಜಿಸಲಾಗಿದೆ. ಇನ್ನಷ್ಟು ಸಮೀಕ್ಷೆ ಮಾಡಬೇಕಿದೆ. ನಷ್ಟ ಅಂದಾಜು ₹ 95 ಕೋಟಿ ಆಗಬಹುದು ಎಂದು ಪ್ರತಿಕ್ರಯಿಸಿದರು.

ಮಲೆನಾಡು ಭಾಗದಲ್ಲಿ ಕೆಲವು ಕಡೆ ವಿದ್ಯುತ್‌ ಕಂಬಗಳು ಮುರಿದು ಬಿದ್ದಿವೆ. ಹೊಸ ಕಂಬಗಳನ್ನು ಅಳವಡಿಸುವ ಪ್ರಕ್ರಿಯೆ ನಡೆಯುತ್ತಿದೆ.ಚಾರ್ಮಾಡಿ ಘಾಟಿ ಮಾರ್ಗದಲ್ಲಿ ಭಾರಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !