ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳನ್ನು ಉತ್ಕೃಷ್ಟ ವೈದ್ಯರಾಗಿಸಲು ಶ್ರಮಿಸಿ: ಸಿ.ಟಿ.ರವಿ

ಮೆಡಿಕಲ್‌ ಕಾಲೇಜು: ಎಂಬಿಬಿಎಸ್‌ ಮೊದಲ ವರ್ಷದ ತರಗತಿ ಆರಂಭ
Last Updated 6 ಡಿಸೆಂಬರ್ 2022, 4:43 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ‘ಹೊಸದಾಗಿ ಆರಂಭವಾಗಿರುವ ಚಿಕ್ಕಮಗಳೂರು ವೈದ್ಯಕೀಯ ವಿಜ್ಞಾನಗಳ ವಿದ್ಯಾಲಯದ (ಸಿಐಎಂಎಸ್‌) ಬೋಧಕರು ವಿದ್ಯಾರ್ಥಿಗಳನ್ನು ಉತ್ಕೃಷ್ಟ ವೈದ್ಯರಾಗಿ ತಯಾರು ಮಾಡಲು ಗಮನಹರಿಸಬೇಕು. ವಿದ್ಯಾರ್ಥಿಗಳು ಒಳ್ಳೆಯ ವೈದ್ಯರಾಗಿ ರೂಪುಗೊಂಡು ನಾಡಿಗೆ ಕೀರ್ತಿ ತರಬೇಕು’ ಎಂದು ಶಾಸಕ ಸಿ.ಟಿ.ರವಿ ಆಶಿಸಿದರು.

ತೇಗೂರು ಬಳಿ ನಿರ್ಮಾಣದ ಹಂತದಲ್ಲಿರುವ ಸಿಐಎಂಎಸ್‌ ಕಟ್ಟಡದಲ್ಲಿ ಸೋಮವಾರ ನಡೆದ ಎಂಬಿಬಿಎಸ್‌ ಮೊದಲ ವರ್ಷದ ತರಗತಿ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ವಿದ್ಯಾರ್ಥಿಗಳಿಗೆ ಶಿಕ್ಷಣ ಜೊತೆಗೆ ಮೌಲ್ಯಗಳನ್ನು ತುಂಬಬೇಕು. ಬೋಧನೆ ಜೊತೆಗೆ ಒಳ್ಳೆಯ ಮೌಲ್ಯಗಳನ್ನು ಕಲಿಸುವ ಹೊಣೆಗಾರಿಕೆ ಬೋಧಕರ ಮೇಲಿದೆ ಎಂದು ಹೇಳಿದರು.

‘ಯಾವುದೇ ಸಂಸ್ಥೆ ಆರಂಭಿಕ ಹಂತದಲ್ಲಿ ಸಣ್ಣ ಸಮಸ್ಯೆಗಳು ಇರುತ್ತವೆ. ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಎಲ್ಲರೂ ಒಗ್ಗೂಡಿ ಕ್ರಮ ವಹಿಸುತ್ತೇವೆ. ಪೋಷಕರಿಗೆ ಭಯ ಬೇಡಿ’ ಎಂದು ಹೇಳಿದರು.

ಚಿಕ್ಕಮಗಳೂರಿನಲ್ಲೊಂದು ಮೆಡಿಕಲ್‌ ಕಾಲೇಜು ಸ್ಥಾಪಿಸಬೇಕು ಎಂದು ಚಿಂತನೆಯ ಬೀಜವನ್ನು ಮೊದಲು ಬಿತ್ತಿದ್ದು ಸಿದ್ದಾರ್ಥ ಹೆಗ್ಡೆ. ಆ ಕಾರ್ಯ ಸಾಕಾರಕ್ಕೆ ಬಹಳಷ್ಟು ಮಂದಿ ಸಹಕಾರ ನೀಡಿದರು, ಜಿಲ್ಲೆಯ ಜನ ಬೆನ್ನೆಲುಬಾಗಿ ನಿಂತರು ಎಂದು ಸ್ಮರಿಸಿದರು.
ಇಲ್ಲಿ ನರ್ಸಿಂಗ್‌ ಕಾಲೇಜು ಇದೇ ವರ್ಷ ಆರಂಭವಾಗಲಿದೆ. ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಕಾಮಗಾರಿಯೂ ಆರಂಭವಾಗಿದೆ. ಉದ್ಯಮಿ ಕಿಶೋರ್‌ಕುಮಾರ್‌ ಹೆಗ್ಡೆ ಅವರು ಈ ಕಾಲೇಜಿಗೆ ಬಸ್‌ ದಾನ ನೀಡಿದ್ದಾರೆ. ರೋನಾಲ್ಡ್‌ ಎಂಬವರೂ ಬಸ್‌ ದಾನ ನೀಡಲು ಒಪ್ಪಿಕೊಂಡಿದ್ದಾರೆ. ದಾನಿಗಳ ನೆರವಿನಲ್ಲೂ ಕೆಲ ಸೌಕರ್ಯಗಳನ್ನು ಕಲ್ಪಿಸಲು ಕ್ರಮ ವಹಿಸಲಾಗುತ್ತಿದೆ ಎಂದರು.

‘ಮೆಡಿಕಲ್‌ ಕಾಲೇಜು ಭಾಗವನ್ನು ವಿದ್ಯಾನಗರವಾಗಿ ಪರಿವರ್ತಿಸುವ ಹಂಬಲ ಇದೆ. ಜಿಲ್ಲೆಯಲ್ಲಿ ಹೊಸ ವಿಶ್ವವಿದ್ಯಾಲಯ ಸ್ಥಾಪನೆ ಪ್ರಸ್ತಾವ ಸಂಪುಟದಲ್ಲಿ ಮಂಡಿಲಸು ಸಿದ್ಧತೆ ನಡೆದಿದೆ. ವಿಶ್ವವಿದ್ಯಾಲಯವನ್ನು ಭಾಗದಲ್ಲೇ ಸ್ಥಾಪಿಸುವ ಯೋಚನೆ ಇದೆ. ಇಲ್ಲಿಯೇ ಕ್ರೀಡಾಂಗಣ, ವಿಜ್ಞಾನ ಕೇಂದ್ರ, ಕ್ಯಾನ್ಸರ್‌ ಆಸ್ಪತ್ರೆ ಸ್ಥಾಪಿಸುವ ಉದ್ದೇಶ ಇದೆ. ಏರ್‌ ಸ್ಟ್ರಿಪ್‌ಗೂ ಮಂಜೂರಾತಿ ದೊರೆತಿದೆ’ ಎಂದು ಹೇಳಿದರು.

ಕೇಂದ್ರ ಮತ್ತು ರಾಜ್ಯ ಸೇವಾ ಆಯೋಗಗಳ ನೇಮಕಾತಿ ಪರೀಕ್ಷೆ ಸಹಿತ ವಿವಿಧ ಸ್ಪರ್ಧಾ ಪರೀಕ್ಷೆಗಳಿಗೆ ತರಬೇತಿ ನೀಡುವ ಕೋಚಿಂಗ್‌ ಕೇಂದ್ರವನ್ನು ಸಾರ್ವಜನಿಕ ಸಾರ್ವಜನಿಕ ಸಹಭಾಗಿತ್ವದಲ್ಲಿ ಆರಂಭಿಸುವ ಕನಸು ಇದೆ ಎಂದರು.

‘ಮೆಡಿಕಲ್‌ ಕಾಲೇಜು ಸ್ಥಾಪನೆಗೆ ಕೋರಿ ನಿಯೋಗ ತೆರಳಿ ಕೆಲ ವರ್ಷಗಳ ಹಿಂದೆ ಮುಖ್ಯಮಂತ್ರಿಯೊಬ್ಬರಿಗೆ ಮನವಿ ಮಾಡಿದ್ದೆವು. ಅದರೆ, ಅವರು ಸ್ಪಂದಿಸಿರಲಿಲ್ಲ ಎಂದು ಸಿದ್ದರಾಮಯ್ಯ ಹೆಸರು ಉಲ್ಲೇಖಿಸದೆ’ ಕುಟುಕಿದರು.
ಸಿಐಎಂಸ್‌ ಡೀನ್‌ ಡಾ.ಹರೀಶ್‌ ಪ್ರಾಸ್ತಾವಿಕವಾಗಿ ಮಾತನಾಡಿ, ವೈದ್ಯಕೀಯ ವಿಜ್ಞಾನ ಕಾಲೇಜು ಸ್ಥಾಪನೆಯ ಒಂದು ದಶಕದಿಂದ ಪ್ರಯತ್ನ ನಡೆದು, ಈಗ ಸಾಕಾರಗೊಂಡಿದೆ ಎಂದರು.

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಮೋಹನಕುಮಾರ್‌, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಉಮೇಶ್, ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ವೆಂಕಟೇಶ್‌, ಸಿಯುಡಿಎ ಅಧ್ಯಕ್ಷ ಆನಂದ್‌, ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್‌, ನಾರಾಯಣಗೌಡ, ಜಯಶ್ರೀ, ಎಚ್‌.ಡಿ.ತಮ್ಮಯ್ಯ, ಐಎಂಎ ಚಿಕ್ಕಮಗಳೂರು ಘಟಕದ ಅಧ್ಯಕ್ಷ ಚೈತನ್ಯ ಸವೂರ್‌, ಸಿಐಎಂಎಸ್‌ ಅಧಿಕಾರಿಗಳಾದ ಪರಮೇಶ್‌, ಲೋಕೇಶ್‌ ಇದ್ದರು.

****

ಮೆಡಿಕಲ್‌ ಕಾಲೇಜಿಗೆ ಬಸ್‌ ಒದಗಿಸಿದ್ದೇನೆ. ಉಪಕರಣ, ಇತ್ಯಾದಿ ನಿಟ್ಟಿನಲ್ಲಿ ನೆರವು ನೀಡಲು ಸಿದ್ಧ ಇದ್ದೇವೆ. ಕಾಲೇಜು ಅಭಿವೃದ್ಧಿಗೆ ಸಹಕಾರ ನೀಡುತ್ತೇವೆ.

ಕಿಶೋರ್‌ಕುಮಾರ ಹೆಗ್ಡೆ, ಉದ್ಯಮಿ, ಲೈಫ್‌ಲೈನ್‌ ಸಂಸ್ಥೆ

ರೋಗ ಬೇಗ ಗುಣಪಡಿಸುವ ಪ್ರಕ್ರಿಯೆಯಲ್ಲಿ ವೈದ್ಯರು ರೋಗಿಯೊಂದಿಗಿನ ಉತ್ತಮ ಒಡನಾಟವು ಪ್ರಮುಖವಾದುದು. ವಿದ್ಯಾರ್ಥಿಗಳು ಚೆನ್ನಾಗಿ ಓದಬೇಕು. ಕಲಿಕೆ ನಿರಂತರ, ಬದುಕಿನ ಕೊನೆವರೆಗೂ ಕಲಿಯುತ್ತಿರಬೇಕು.

ಕೆ.ಎನ್‌.ರಮೇಶ್‌, ಜಿಲ್ಲಾಧಿಕಾರಿ

***
ಆರೋಗ್ಯ ಮತ್ತು ಶಿಕ್ಷಣ ದೇಶದ ಬೆಳವಣಿಗೆಯನ್ನು ನಿರ್ಣಯಿಸುವ ಪ್ರಮುಖ ಕ್ಷೇತ್ರಗಳು. ವಿದ್ಯಾರ್ಥಿಗಳು ಚೆನ್ನಾಗಿ ಅಭ್ಯಾಸ ಮಾಡಿ ವೃತ್ತಿಯಲ್ಲಿ ಯಶಸ್ವಿಯಾಗಬೇಕು.

ಜಿ.ಪ್ರಭು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT