ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆ ಬಂದಾಗ ಮೋದಿಯವರಿಗೆ ಕರ್ನಾಟಕ ನೆನಪಾಗುತ್ತದೆ: ಸಿದ್ದರಾಮಯ್ಯ

Published 22 ಏಪ್ರಿಲ್ 2024, 14:16 IST
Last Updated 22 ಏಪ್ರಿಲ್ 2024, 14:16 IST
ಅಕ್ಷರ ಗಾತ್ರ

ಕಡೂರು: ‘ಪ್ರಧಾನಿ ನರೇಂದ್ರ ಮೋದಿಯವರಿಗೆ ಕರ್ನಾಟಕ ನೆನಪಾಗುವುದು ಚುನಾವಣೆ ಸಂದರ್ಭದಲ್ಲಿ ಮಾತ್ರ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದರು.

ಕಡೂರಿನ ಎಪಿಎಂಸಿ ಆವರಣದಲ್ಲಿ ಸೋಮವಾರ ಹಾಸನ‌ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ರಾಜ್ಯಕ್ಕೆ ಬರಗಾಲ ಪರಿಹಾರ ನೀಡುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಿ 7 ತಿಂಗಳಾದರೂ ಪರಿಹಾರದ ಹಣ ಬಿಡುಗಡೆ ಮಾಡಿಲ್ಲ. ಇದಕ್ಕಾಗಿ ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಬೇಕಾಯಿತು. ಬರ ಪರಿಹಾರದ ವಿಚಾರವನ್ನು ಶೀಘ್ರ ಬಗೆಹರಿಸುವಂತೆ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿರುವುದು ನಮಗೆ ಸಂದ ಜಯ’ ಎಂದರು.

ಕೇಂದ್ರ ಸರ್ಕಾರ ನಮಗೆ ನೀಡಬೇಕಾದ ಜಿಎಸ್‌ಟಿ ಹಣವನ್ನೂ ನೀಡಲಿಲ್ಲ. ₹35  ಹಣ ಕೊಡುತ್ತೇವೆ ಅಕ್ಕಿ ಕೊಡಿ ಎಂದರೆ ಕೊಡದ ಇವರು ಈಗ ₹29ಕ್ಕೆ ಅಕ್ಕಿ ಮಾರುತ್ತಿದ್ದಾರೆ. ಅಧಿಕಾರಕ್ಕೆ ಬಂದ ಕೂಡಲೇ ನುಡಿದಂತೆ ನಡೆದಿದ್ದೇವೆ. ಮುಂದೆಯೂ ಬಡಜನರ, ರೈತರ ಪರವಾದ ಆಡಳಿತ ನೀಡಲಿದ್ದೇವೆ. ಈಗಾಗಲೇ ಜಾರಿಯಾಗಿರುವ ಗ್ಯಾರಂಟಿಗಳ ಜೊತೆ ಮತ್ತೆ ಎಐಸಿಸಿ 25 ಗ್ಯಾರಂಟಿಗಳನ್ನು ಸಹ ಅನುಷ್ಠಾನ ಮಾಡುತ್ತೇವೆ. ದಯಮಾಡಿ ಜನರು ಕಾಂಗ್ರೆಸ್‌ಗೆ ಮತ ನೀಡಿ ಶ್ರೇಯಸ್ ಪಟೇಲ್ ಅವರನ್ನು ಗೆಲ್ಲಿಸಿ. ಒಮ್ಮೆಯೂ ಕ್ಷೇತ್ರಕ್ಕೆ ಬಾರದ ಪ್ರಜ್ವಲ್ ರೇವಣ್ಣ ಅವರನ್ನು ಸೋಲಿಸಿ’ ಎಂದರು.

ಕಡೂರು ಕ್ಷೇತ್ರದ ಅಭಿವೃದ್ಧಿಗೆ ಆಗಿನ ಶಾಸಕ ಕೆ.ಎಂ.ಕೃಷ್ಣಮೂರ್ತಿ  ಬಹಳ ಶ್ರಮಿಸಿದ್ದರು. ಕಡೂರಿನ ಜನತೆ ನನ್ನನ್ನು ಯಾವಾಗಲೂ ಆಶೀರ್ವದಿಸಿದ್ದಾರೆ. ಹಾಗಾಗಿ ನನಗೂ ಕಡೂರಿಗೂ ಅವಿನಾಭಾವ ಸಂಬಂಧವಿದೆ. ಕಡೂರಿನ ಜನತೆಗೆ ನನ್ನ ಕೃತಜ್ಞತೆಗಳು ಎಂದು ಸಿದ್ದರಾಮಯ್ಯ ಹೇಳಿದಾಗ ಜನರು ಹರ್ಷೋದ್ಗಾರ ಮಾಡಿದರು.

ಶಾಸಕ ಕೆ.ಎಸ್.ಆನಂದ್ ಮಾತನಾಡಿ, ‘ಕಡೂರಿನ ಬಗ್ಗೆ ವಿಶೇಷ ಅಭಿಮಾನ ಇಟ್ಟುಕೊಂಡಿರುವ ಸಿದ್ದರಾಮಯ್ಯ ಅವರು ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಸದಾ ಸಕಾರಾತ್ಮಕವಾಗಿ ಸ್ಪಂದಿಸುತ್ತಾರೆ’ ಎಂದರು.

ಅರಸೀಕೆರೆ ಶಾಸಕ ಶಿವಲಿಂಗೇಗೌಡ, ಶ್ರೇಯಸ್ ಪಟೇಲ್ ಅವರ ತಾಯಿ ಅನುಪಮಾ, ಮುಖಂಡರಾದ ಬೀರೂರು ದೇವರಾಜ್, ಗಾಯತ್ರಿ ಶಾಂತೇಗೌಡ, ಬಿ.ಎಲ್.ಶಂಕರ್, ಆಯನೂರು ಮಂಜುನಾಥ್, ಅಂಶುಮಂತ್, ಪಿ.ಎಂ.ಪ್ರಸನ್ನ, ಕೆ.ಎಂ.ಮೋಹನ್ ಕುಮಾರ್, ಬಾಸೂರು ಚಂದ್ರಮೌಳಿ, ಆಸಂದಿ ಕಲ್ಲೇಶ್ ಇದ್ದರು.

Cut-off box - ‘ನಾಚಿಕೆಯಾಗುವುದಿಲ್ಲವೆ? ಹಿಂದೊಮ್ಮೆ ರಾಹುಲ್ ಗಾಂಧಿ ಜೆಡಿಎಸ್ ಬಿಜೆಪಿಯ ಬಿ ಟೀಂ ಎಂದಾಗ ಕೆಂಡಾಮಂಡಲವಾದ ದೇವೇಗೌಡರು ನರೇಂದ್ರ ಮೋದಿ‌ ಮತ್ತೊಮ್ಮೆ ಪ್ರಧಾನಿಯಾದರೆ ದೇಶ ಬಿಡುತ್ತೇನೆ. ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟುತ್ತೇನೆ ಎಂದೆಲ್ಲ ಹೇಳಿದರು. ಈಗ ಅವರೇ ಬಿಜೆಪಿ ಜೊತೆ ಭಾಯಿ ಭಾಯಿ ಎಂದಿದ್ದಾರೆ. ಅವರಿಗೆ ನಾಚಿಕೆಯಾಗುವುದಿಲ್ಲವೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ‘ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ದೇವೇಗೌಡರು ಕಾಂಗ್ರೆಸ್ ನೀಡಿದ್ದ ಖಾಲಿ ಚೊಂಬನ್ನು ಮೋದಿ ಅಕ್ಷಯ ಪಾತ್ರೆ ಮಾಡಿದ್ದಾರೆ. ಸಿದ್ದರಾಮಯ್ಯನ ಗರ್ವಭಂಗ ಮಾಡಿದ್ದಾರೆ ಎಂದರು. ಗೌಡರೇ ನನಗೆ ಗರ್ವವೇ ಇಲ್ಲ. ಇನ್ನು ಎಲ್ಲಿ ಭಂಗವಾಗುತ್ತೆ? ಬರೀ ಹಗಲು ಕನಸು ಕಾಣಬೇಡಿ. ವಿಜಯೇಂದ್ರ ಈಗಿನ್ನೂ ರಾಜಕೀಯಕ್ಕೆ ಬಂದಿದ್ದಾರೆ. ಈ ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ’ ಎಂದು ಸಿದ್ದರಾಮಯ್ಯ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT