ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಆರೋಗ್ಯವಂತರಾಗಿರಲು ಪೋಲಿಯೊ ಹನಿ ಹಾಕಿಸಿ: ಶಾಸಕ ಎಚ್‌.ಡಿ.ತಮ್ಮಯ್ಯ

ಐದು ವರ್ಷದೊಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೊ ಹನಿ ಕಾರ್ಯಕ್ರಮಕ್ಕೆ ಶಾಸಕ ತಮ್ಮಯ್ಯ ಚಾಲನೆ
Published 3 ಮಾರ್ಚ್ 2024, 12:58 IST
Last Updated 3 ಮಾರ್ಚ್ 2024, 12:58 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಮಕ್ಕಳ ಆರೋಗ್ಯದ ಜೊತೆಗೆ ದೇಶ ಸದೃಢವಾಗಿರಲು ಪ್ರತಿ ತಾಯಂದಿರು 5 ವರ್ಷದೊಳಗಿನ ತಮ್ಮ ಮಕ್ಕಳಿಗೆ ತಪ್ಪದೇ ಪಲ್ಸ್ ಪೋಲಿಯೊ ಹನಿ ಹಾಕಿಸಬೇಕು ಎಂದು ಶಾಸಕ ಎಚ್‌.ಡಿ.ತಮ್ಮಯ್ಯ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರೋಟರಿ ಇನ್ನರ್ ವೀಲ್ ಸಹಯೋಗದಲ್ಲಿ ನಗರದ ಜಿಲ್ಲಾಸ್ಪತ್ರೆ ಹೆರಿಗೆ ವಿಭಾಗದಲ್ಲಿ ಏರ್ಪಡಿಸಿದ್ದ ಪಲ್ಸ್ ಪೋಲಿಯೊ ಹನಿ ಹಾಕುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಭಾರತವನ್ನು ಪೋಲಿಯೊ ಮುಕ್ತವಾಗಿಸಬೇಕು ಎಂಬ ಉದ್ದೇಶದಿಂದ 1994–95ರ ಅವಧಿಯಲ್ಲಿ 5 ವರ್ಷದೊಳಗಿನ ಮಕ್ಕಳಿಗೆ ಉಚಿತವಾಗಿ ಪೋಲಿಯೊ ಹನಿ ಹಾಕಿಸುವ ಕಾರ್ಯಕ್ರಮ ಜಾರಿಗೆ ತರಲಾಯಿತು. ವಿಶ್ವ ಆರೋಗ್ಯ ಸಂಸ್ಥೆ ಸದ್ಯ ಭಾರತವನ್ನು ಪೋಲಿಯೊ ಮುಕ್ತ ದೇಶ ಎಂದು ಘೋಷಣೆ ಮಾಡಿರುವುದು ದೇಶದ ಸಾಧನೆ. ಪ್ರತಿ ಮಗು ಆರೋಗ್ಯವಾಗಿರಬೇಕು ಎಂಬುದು ಪೋಷಕರು ಹಾಗೂ ಕುಟುಂಬದ ಆಶಯ ಅದರಂತೆ ತಮ್ಮ ಮಕ್ಕಳಿಗೆ ತಪ್ಪದೇ ಪೋಲಿಯೊ ಹಾಕಿಸಿ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ಸಲಹೆ ನೀಡಿದರು.

ಜಿಲ್ಲೆಯಲ್ಲಿ ಒಟ್ಟು 879 ಪೋಲಿಯೊ ಬೂತ್‌ಗಳಿದ್ದು ಜಿಲ್ಲಾ ಆರೋಗ್ಯ ಇಲಾಖೆ ಒಟ್ಟು 74,592 ಮಕ್ಕಳಿಗೆ ಪೋಲಿಯೊ ಹನಿ ಹಾಕುವ ಗುರಿ ಹೊಂದಿದೆ. ಅಲ್ಲದೇ 75 ಸಂಚಾರಿ ಬೂತ್‌ಗಳಿದ್ದು, ಬಸ್‌ ನಿಲ್ದಾಣ, ಸಾರ್ವಜನಿಕ ಸ್ಥಳ, ಜನನಿಬೀಡ ಪ್ರದೇಶಗಳ 61 ಕಡೆಗಳಲ್ಲಿ ಒಟ್ಟು 1,894 ಮಂದಿ ತಂಡ ಮನೆಮನೆಗೆ ಭೇಟಿ ನೀಡಿ ಪೋಲಿಯೊ ಹನಿ ಹಾಕಿದ್ದಾರೆ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಬಿ.ಗೋಪಾಲಕೃಷ್ಣ ಮಾತನಾಡಿ, ಜಗತ್ತಿನ ಕೆಲವು ದೇಶಗಳು ಇಂದಿಗೂ ಪೋಲಿಯೊ ವಿರುದ್ಧ ಹೋರಾಡುತ್ತಿದೆ. ಆದ್ದರಿಂದ ಯಾವುದೇ ಮಗು ಪೋಲಿಯೊ ಹನಿಯಿಂದ ವಂಚಿತವಾಗಬಾರದು. ಇದಕ್ಕಾಗಿ ಸಂಘ– ಸಂಸ್ಥೆಗಳು ಕೈಜೋಡಿಸಿದ್ದು, ಸಾರ್ವಜನಿಕರ ಸಹಕಾರ ಅಗತ್ಯ ಎಂದರು.

ಜಿಲ್ಲೆಯಲ್ಲಿ ತೋಟಗಳಲ್ಲಿ ಕೆಲಸ ನಿರ್ವಹಿಸುವ, ವಲಸೆ ಕಾರ್ಮಿಕರ ಮಕ್ಕಳಿಗೆ ಪೋಲಿಯೊ ಹನಿ ಹಾಕುವ ತಂಡ ರಚಿಸಲಾಗಿದೆ. ಒಟ್ಟಾರೆ ಶೇ 95ರಷ್ಟು ಗುರಿ ಸಾಧಿಸುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಮೀನಾ ನಾಗರಾಜ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಶ್ವತ್ಥಬಾಬು, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸೀಮಾ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಗೀತಾ, ರೋಟರಿ ಇನ್ನರ್ ವೀಲ್ ಅಧ್ಯಕ್ಷ ಶ್ರೀವತ್ಸವ್, ಡಾ.ಮಂಜುನಾಥ್‌ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT