ಮಳೆ ಬಂದರೂ ತುಂಬದ ಕೆರೆಗಳು

7

ಮಳೆ ಬಂದರೂ ತುಂಬದ ಕೆರೆಗಳು

Published:
Updated:
Deccan Herald

ತರೀಕೆರೆ ಪಟ್ಟಣ ಸೇರಿದಂತೆ ಕಸಬಾ ಹೋಬಳಿ ವ್ಯಾಪ್ತಿಯ ಗ್ರಾಮಾಂತರ ಪ್ರದೇಶದಲ್ಲಿ ಮಳೆ ಬಂದರೂ ಕೆರೆಗಳು ಭರ್ತಿಯಾಗದ ಕಾರಣ ರೈತರಲ್ಲಿ ಆತಂಕ ಮನೆ ಮಾಡಿದೆ.

ಈ ಸಾರಿ ವಾಡಿಕೆಗಿಂತಲೂ ಅತಿ ಹೆಚ್ಚು ದಟ್ಟವಾದ ಮಳೆ ಬಿದ್ದಿರುವುದಲ್ಲದೇ, ಸಮೀಪದ ಭದ್ರಾ ಜಲಾಶಯವು ಸಹ ತುಂಬಿ ಹರಿಯುತ್ತಿದೆ. ಆದರೆ, ಮೂರ್ನಾಲ್ಕು ವರ್ಷಗಳಿಂದ ಬಾಡಿ ಹೋಗಿರುವ ಈ ಭಾಗದ ಕೆರೆಗಳು ಮಾತ್ರ ತುಂಬಿಲ್ಲ. ಈ ಹಿಂದೆ ಮಲೆನಾಡೆಂಬ ಕೀರ್ತಿಗೆ ಪಾತ್ರವಾಗಿದ್ದ ಈ ಭೂ ಪ್ರದೇಶ ಮುಂದೊಂದು ದಿನ ಬಯಲು ಸೀಮೆಯಾಗುವ ಲಕ್ಷಣಗಳು ಕಾಣಿಸುತ್ತಿವೆ ಎಂದು ರೈತರು ಪತ್ರಿಕೆ ಮೂಲಕ ಆತಂಕ ತೋಡಿಕೊಳ್ಳುತ್ತಿದ್ದಾರೆ.

ಹಿಂದೆ ಇಲ್ಲಿನ ಹಿರಿಕರು ಕೆರೆಗಳನ್ನು ಸದಾ ಕಾಲ ತುಂಬಿಕೊಳ್ಳುವ ಪ್ರಯತ್ನದಿಂದ ಕೆರೆ ತುಂಬಿ ಹರಿವ ನೀರು ಇನ್ನೊಂದು ಕೆರೆಗೆ ಬಂದು ಸೇರುವಂತಾಗಲಿ ಎಂಬ ಮುಂದಾಲೋಚನೆಯಿಂದ ಕೆರೆಗಳನ್ನು ಕಟ್ಟಿಸಿದ್ದರು. ದಳವಾಯಿಕೆರೆ, ರಾಮನಾಯ್ಕನಕೆರೆ, ಚಿಕ್ಕಕೆರೆ, ದೊಡ್ಡಕೆರೆ, ಚಿಕ್ಕತ್ತೂರು ಕೆರೆಗಳು ಸೇರಿದಂತೆ ಇನ್ನಿತರೇ ಕೆರೆಗಳು ಮಳೆ ಆರಂಭವಾದ ಕೆಲ ದಿನಗಳಲ್ಲೇ ತುಂಬಿ ಕೋಡಿ ಬೀಳುತ್ತಿದ್ದವು. ಈ ಸಂಭ್ರಮ ಮಾತ್ರ ಇಂದು ನಾಗರಿಕರಲ್ಲಿ ನೆನಪಾಗಿ ಉಳಿಯುತ್ತಿದೆ.

ಕೆರೆಕಟ್ಟೆಗಳನ್ನು ಅತಿಯಾಗಿ ನಂಬಿಕೊಂಡಿದ್ದ ಇಲ್ಲಿನ ರೈತರು ಅಡಿಕೆ, ಬಾಳೆ, ತೆಂಗು, ವೀಳ್ಯದೆಲೆ ಸೇರಿದಂತೆ ಅನೇಕ ವಾಣಿಜ್ಯ ಬೆಳೆಗಳನ್ನು ಇಲ್ಲಿ ಬೆಳೆಯುತ್ತಾರೆ. ಕೆರೆಗಳು ಬತ್ತಿ ಹೋದರೆ ಮುಂದೇನು ಗತಿ ಎಂಬ ಆತಂಕ ರೈತರಲ್ಲಿ ಕಾಡುವಂತಾಗಿದೆ.

ಇಲ್ಲಿನ ಕೆರೆಗಳು ಕೇವಲ ಕೃಷಿ ಚಟುವಟಿಕೆಗಳಿಗೆ ಸಹಾಯವಾಗದೇ ಕುಡಿಯುವ ನೀರು ಕಲ್ಪಿಸುವಲ್ಲಿಯೂ ಸಹಕಾರಿಯಾಗಿದ್ದವು. ಪಟ್ಟಣದ ಕೆರೆಗಳಲ್ಲಿ ಒಂದೊಂದು ಕೆರೆಗಳು ಸುಮಾರು ಮೂರ್ನಾಲ್ಕು ವಾರ್ಡ್ ಗಳಲ್ಲಿನ ಜನವಸತಿ ಪ್ರದೇಶಗಳಿಗೆ ಕೊಳವೆಬಾವಿಯ ನೀರನ್ನು ಬಳಕೆಯಾಗುವಂತೆ ಅಂತರ್ಜಲ ವೃದ್ಧಿಗೆ ಕಾರಣವಾಗಿದ್ದವು. ಕೆರೆಗಳಲ್ಲಿ ನೀರು ಇಲ್ಲದ ಕಾರಣ ಕೊಳವೆ ಬಾವಿಗಳು ಬಳಕೆಯಾಗುತ್ತಿಲ್ಲ. ಇದು ಪಟ್ಟಣದ ನಾಗರಿಕರಲ್ಲಿ ಆತಂಕವನ್ನು ಉಂಟುಮಾಡಿದೆ.

ಭದ್ರಾ ಮೇಲ್ದಂಡೆ ಯೋಜನೆ ಹಾಗೂ ಜಂಬದಹಳ್ಳ ಪಥ ಪರಿವರ್ತನೆ ಯೋಜನೆ ಕಾಮಗಾರಿಗಾಗಿ ಕೈಗೊಂಡ ಬೃಹತ್ ಕಾಲುವೆಗಳನ್ನು ಕೊರೆಯಲಾಗಿದ್ದು, ಮಳೆಯ ನೀರು ಗುಡ್ಡ ಪ್ರದೇಶಗಳಿಂದ ಹರಿದು ನೇರವಾಗಿ ಈ ಕಾಲುವೆಗಳಿಗೆ ಹೋಗಿ ಸೇರುತ್ತಿದೆ. ಸಮೀಪದ ಭದ್ರಾ ಅಭಯಾರಣ್ಯ ಪ್ರದೇಶವು ಸಹ ಇದೇ ವ್ಯಾಪ್ತಿಗೆ ಹೊಂದಿ ಕೊಂಡಿರುವುದರಿಂದ ಅರಣ್ಯ ಇಲಾಖೆಯು ಕಾಡು ಪ್ರಾಣಿಗಳು ನಾಡಿಗೆ ಬರುವುದನ್ನು ತಡೆಯಲು ಹಾಗೂ ವನ್ಯ ಜೀವಿ ಕಳ್ಳ ಸಾಗಣೆ ತಡೆಯುವ ಉದ್ದೇಶದಿಂದಾಗಿ ಸುತ್ತಲೂ ಬೃಹತ್ ಕಂದಕಗಳನ್ನು ನಿರ್ಮಿಸಿರುವುದು ಮಳೆಯ ನೀರನ್ನು ತಡೆಹಿಡಿಯಲು ಕಾರಣವಾಗಿ ಕೆರೆಗಳು ಭರ್ತಿಯಾಗುತ್ತಿಲ್ಲ ಎಂದು ರೈತರು ವಿವರಿಸುತ್ತಾರೆ.

ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಯ ಕಾಲುವೆಯಲ್ಲಿ ಸಂಗ್ರಹವಾಗಿದ್ದ ಮಳೆಯ ನೀರನ್ನು ರೈತರು ಒಗ್ಗೂಡಿ ಸತತ ಪ್ರಯತ್ನದಿಂದ ದಳವಾಯಿಕೆರೆಗೆ ತುಂಬಿಸುವ ಹರಸಾಹಸವನ್ನು ಮಾಡುತ್ತಿದ್ದಾರೆ. ಸರ್ಕಾರ ಕೆರೆಗಳ ತುಂಬಿಸುವ ಕುರಿತು ಚಿಂತಿಸಲಿ. ಇಲ್ಲದಿದ್ದರೇ ಕೃಷಿ ಹಾಗೂ ಕುಡಿಯುವ ನೀರಿಗೂ ತತ್ವಾರ ಎದುರಾಗುತ್ತದೆ ಎಂದು ಪತ್ರಿಕೆ ಮೂಲಕ ಇಲ್ಲಿನ ಜನರು ಎಚ್ಚರಿಸಿದ್ದಾರೆ.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !