ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಮಗಳೂರು: ಕಾಲು ಸೇತುವೆ ಮೇಲೆ ಅಪಾಯದ ನಡಿಗೆ

ಕಿರು ಸೇತುವೆಗಾಗಿ ಅವಿರತ ಹೋರಾಟ: ಮನವಿ ಸಲ್ಲಿಸಿ ಸುಸ್ತಾಗಿರುವ ಜನ
Published 22 ಮೇ 2024, 7:04 IST
Last Updated 22 ಮೇ 2024, 7:04 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಬಿರುಕು ಬಿಟ್ಟ ಕಾಲು ಸೇತುವೆ, ಮನೆಗೆ ತಲುಪಲು ಇದೋಂದೇ ದಾರಿ, ಸೇತುವೆ ನಿರ್ಮಾಣಕ್ಕೆ ನಾಲ್ಕೈದು ವರ್ಷಗಳಿಂದ ಮನವಿ ಸಲ್ಲಿಸಿ ಸುಸ್ತಾಗಿರುವ ಗ್ರಾಮಸ್ಥರು, ಆಗಲೋ, ಈಗಲೋ ಕೊಚ್ಚಿ ಹೋಗುವ ಸ್ಥಿತಿಗಲ್ಲಿರುವ ಸಿಮೆಂಟ್‌ ಅಲಗಿನ ಮೇಲೆ ನಡಿಗೆ...

ಕೊಪ್ಪ ತಾಲ್ಲೂಕಿನ ಮಾರಿತೊಟ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೋಮ್ಲಾಪುರ ಗ್ರಾಮದ ಜನರ ಸ್ಥಿತಿ ಇದು. ಕುಂಬ್ರಿ ಉಬ್ಬುವಿನಿಂದ ಜೋಗಿಸರದ ಸಂಪರ್ಕ ರಸ್ತೆಯ ಮಧ್ಯ ನಿಲಗುಳಿ ರಸ್ತೆಗೆ ಒಂದೂವರೆ ಮೀಟರ್ ಅಗಲದ, 13.5 ಮೀಟರ್ ಉದ್ದದ ಕಾಲು ಸೇತುವೆ ಇದೆ. ಸಣ್ಣ ಹೊಳೆಯನ್ನು ದಾಟಿ ಮನೆ ಮತ್ತು ಜಮೀನಿಗೆ ಸಾಗಬೇಕೆಂದರೆ ಸದ್ಯ ಇರುವುದು ಇದೊಂದೇ ದಾರಿ.

ಪಾದಚಾರಿಗಳು, ದ್ವಿಚಕ್ರ ವಾಹನಗಳು ಮಾತ್ರ ಈ ಕಾಲು ಸೇತುವೆ ಮೇಲೆ ತೆರಳಬಹುದಾಗಿದೆ. ಜೋರು ಮಳೆ ಬಂದರೆ ಸೆತುವೆ ಮೇಲೆಯೇ ನೀರು ಹರಿಯುವುದರಿಂದ ಪಾದಚಾರಿಗಳು ದಾಟುವುದೇ ಕಷ್ಟದ ಕೆಲಸ. ಮನೆಗಳಿಗೆ ಬೇಕಾದ ವಸ್ತು, ಕೃಷಿ ಪರಿಕರಗಳನ್ನು ಜನ ಇದೇ ಅಪಾಯದ ಅಂಚಿನಲ್ಲಿರುವ ಕಾಲು ಸೇತುವೆಯ ಮೇಲೆ ಸಾಗಬೇಕು. ಶಾಲಾ–ಕಾಲೇಜಿಗೆ ವಿದ್ಯಾರ್ಥಿಗಳು ಇದೇ ಸೇತುವೆ ಮೇಲೆ ತೆರಳುತ್ತಿದ್ದಾರೆ.

ಜೋರು ಮಳೆ ಬಂದು ನೀರು ಹೆಚ್ಚಾದರೆ ಸಂಪರ್ಕ ಕಡಿತಗೊಳ್ಳುವ ಆತಂಕದಲ್ಲಿ ಜನರಿದ್ದಾರೆ. ಆ ಸಂದರ್ಭದಲ್ಲಿ ಅನಾರೋಗ್ಯಕ್ಕೆ ಈಡಾದರೆ ಆಸ್ಪತ್ರೆಗೆ ಕರೆದೊಯ್ಯುವುದು ಕಷ್ಟದ ಕೆಲಸ ಎಂದು ಸ್ಥಳೀಯರು ಹೇಳುತ್ತಾರೆ.

ಇದೇ ಜಾಗದಲ್ಲಿ ಕಿರು ಸೇತುವೆಯೊಂದನ್ನು ನಿರ್ಮಿಸಿ ಅಪಾಯದಿಂದ ಪಾರು ಮಾಡಬೇಕು ಎಂದು ಸ್ಥಳೀಯರು ನಾಲ್ಕೈದು ವರ್ಷಗಳಿಂದ ಕಚೇರಿಗಳನ್ನು ಎಡತಾಕಿ ಮನವಿ ಸಲ್ಲಿಸಿ ಸುಸ್ತಾಗಿದ್ದಾರೆ. ಗ್ರಾಮ ಪಂಚಾಯಿತಿ, ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗ, ತಾಲ್ಲೂಕು ಪಂಚಾಯಿತಿ, ಶಾಸಕ ಟಿ.ಡಿ. ರಾಜೇಗೌಡ, ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ, ಗೃಹ ಸಚಿವರಾಗಿದ್ದ ಆರಗ ಜ್ಞಾನೇಂದ್ರ, ಮೂಲಸೌಕರ್ಯ ಅಭಿವೃದ್ಧಿ ಸಚಿವರಾಗಿದ್ದ ವಿ.ಸೋಮಣ್ಣ ಅವರಿಗೆ ಮನವಿಗಳ ಮೇಲೆ ಮನವಿ ಸಲ್ಲಿಸಿದ್ದಾರೆ.

ಮತ್ತೊಂದು ಮಳೆಗಾಲ ಎದುರಾಗುತ್ತಿದ್ದು, ಹೇಗೆ ಕಳೆಯುವುದು ಎಂಬ ಚಿಂತೆಯಲ್ಲಿ ನಿವಾಸಿಗಳಿದ್ದಾರೆ. ಕಿರು ಸೇತುವೆಯೊಂದನ್ನು ಸರ್ಕಾರ ನಿರ್ಮಿಸಿದರೆ ಬಡವರ ಜೀವ ಉಳಿಯಲಿದೆ ಎಂದು ಹೇಳುತ್ತಾರೆ.

ಕೊಪ್ಪ ತಾಲ್ಲೂಕಿನ ಮಾರಿತೊಟ್ಲು ವ್ಯಾಪ್ತಿಯ ನಿಲಗುಳಿ ಕಾಲು ಸೇತುವೆ
ಕೊಪ್ಪ ತಾಲ್ಲೂಕಿನ ಮಾರಿತೊಟ್ಲು ವ್ಯಾಪ್ತಿಯ ನಿಲಗುಳಿ ಕಾಲು ಸೇತುವೆ

ಹಾಗೇ ಉಳಿದ ಅಂದಾಜು ಪಟ್ಟಿ

ಗ್ರಾಮಸ್ಥರು ನಡೆಸಿದ ಶತಾಯಗತಾಯ ಹೋರಾಟದ ಫಲವಾಗಿ 2023ರಲ್ಲಿ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ(ಕೆಆರ್‌ಡಿಸಿಎಲ್) ಅಂದಾಜು ಪಟ್ಟಿ ತಯಾರಿಸಿ ಸರ್ಕಾರಕ್ಕೆ ಕಳುಹಿಸಿದ್ದು ಅದು ಈಗ ಕಚೇರಿಗಳಲ್ಲಿ ದೂಳು ಹಿಡಿಯುತ್ತಿದೆ. 30 ಮೀಟರ್ ಉದ್ದ ಮತ್ತು 8.5 ಮೀಟರ್ ಅಗಲದ ಸೇತುವೆ ನಿರ್ಮಾಣಕ್ಕೆ ಭೂಸ್ವಾಧೀನ ವೆಚ್ಚ ಸೇರಿ ₹2.10 ಕೋಟಿ ಬೇಕಾಗಲಿದೆ ಎಂದು ಅಂದಾಜಿಸಲಾಗಿದೆ. ಆದರೆ ಸೇತುವೆ ನಿರ್ಮಾಣಕ್ಕೆ ಸರ್ಕಾರದ ಅನುಮೋದನೆ ಸಿಕ್ಕಿಲ್ಲ. ಇದರಿಂದಾಗಿ ಸೋಮ್ಲಾಪುರ ಗ್ರಾಮಸ್ಥರು ಅಪಾಯದ ನಡಿಗೆ ಮುಂದುವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT