ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು | ವಿದ್ಯುತ್ ಕಣ್ಣಾಮುಚ್ಚಾಲೆ: ನೀರಿಗೆ ತೊಂದರೆ

ಯಗಚಿ ಜಲಾಶಯ, ಹಿರೇಕೊಳಲೆ ಕರೆಯಲ್ಲಿ ನೀರಿದೆ: ಮನೆಗಳಲ್ಲಿ ನೀರಿಲ್ಲ
Published 21 ಮಾರ್ಚ್ 2024, 7:02 IST
Last Updated 21 ಮಾರ್ಚ್ 2024, 7:02 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ನಗರಕ್ಕೆ ನೀರು ಪೂರೈಸುವ ಜಲಮೂಲಗಳಲ್ಲಿ ನೀರಿನ ಕೊರತೆ ಇಲ್ಲ. ಆದರೆ, ಅಂತರ್ಜಲ ಪಾತಾಳಕ್ಕೆ ಇಳಿದಿರುವುದು ಮತ್ತು ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ.

ಬೇಲೂರಿನ ಯಗಚಿ ಜಲಾಶಯ 3.06 ಟಿಎಂಟಿ ಅಡಿಗಳಷ್ಟು ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಸದ್ಯ 1.22 ಟಿಎಂಸಿ ಅಡಿಗಳಷ್ಟು ನೀರಿದೆ. ಜಲಾಶಯದಲ್ಲಿ ಬಹುತೇಕ ಅರ್ಧದಷ್ಟು ನೀರಿದೆ. ಇಡೀ ವರ್ಷಕ್ಕೆ ಚಿಕ್ಕಮಗಳೂರು ನಗರಕ್ಕೆ ಬೇಕಿರುವುದು 0.3 ಟಿಎಂಸಿ ಅಡಿಗಳಷ್ಟೇ. ಆದ್ದರಿಂದ ನೀರಿನ ಸಮಸ್ಯೆ ಇಲ್ಲ.

ಯಗಚಿ ಜಲಾಶಯದಲ್ಲಿ ಎರಡು ಜಾಕ್‌ವೆಲ್‌ಗಳನ್ನು ಅಳವಡಿಸಲಾಗಿದ್ದು, ಪ್ರತಿ ಜಾಕ್‌ವೆಲ್ 600 ಎಚ್‌ಪಿ ಸಾಮರ್ಥ್ಯವನ್ನು ಹೊಂದಿವೆ. ನಗರಕ್ಕೆ ಪ್ರತಿನಿತ್ಯ 24 ಎಂಎಲ್‌ಡಿ ನೀರು ಪೂರೈಸುವಷ್ಟು ಸಾಮರ್ಥ್ಯವನ್ನು ಜಾಕ್‌ವೆಲ್‌ ಹೊಂದಿದೆ. ಹಿರೆಕೊಳಲೆ ಜಲಾಶಯದಿಂದ 4 ಎಂಎಲ್‌ಡಿ ನೀರು ಪಡೆಯುತ್ತಿರುವುದರಿಂದ 16 ಎಂಎಲ್‌ಡಿ ನೀರನ್ನಷ್ಟೇ ಯಗಚಿ ಜಲಾಶಯದಿಂದ ಪಡೆಯಲಾಗುತ್ತಿದೆ. ಎರಡೂ ಕಡೆಯಿಂದ ನಗರದ ಹೌಸಿಂಗ್‌ ಬೋರ್ಡ್ ಬಡಾವಣೆಯಲ್ಲಿರುವ ನೀರು ಸರಬರಾಜು ಕೇಂದ್ರಕ್ಕೆ ಪೂರೈಕೆಯಾಗಲಿದೆ. ಎರಡೂ ಕಡೆ ವಿದ್ಯುತ್ ಸರಬರಾಜಿದ್ದರೆ ಮನೆಗಳಿಗೆ ನೀರು ಪೂರೈಕೆಯಾಗಲಿದೆ.

ಹಾಸನ ಜಿಲ್ಲೆಯ ಬೇಲೂರಿನ ಯಗಚಿ ಜಲಾಶಯ ಚೆಸ್ಕಾಂ ವ್ಯಾಪ್ತಿಯಲ್ಲಿದ್ದರೆ, ಚಿಕ್ಕಮಗಳೂರಿನ ನೀರು ಸರಬರಾಜು ಕೇಂದ್ರ ಮೆಸ್ಕಾಂ ವ್ಯಾಪ್ತಿಯಲ್ಲಿದೆ. ಬೇಲೂರಿನಲ್ಲಿ ಅನಿಯಮಿತಿ ವಿದ್ಯುತ್ ಕಡಿತದಿಂದ ನಗರದಲ್ಲಿ ನೀರು ಪೂರೈಕೆಯಾಗುತ್ತಿಲ್ಲ. ಬುಧವಾರ ಮಧ್ಯಾಹ್ನ ಕಳೆದರೂ ಜಾಕ್‌ವೆಲ್‌ಗಳು ಕಾರ್ಯಾರಂಭವೇ ಆಗಿರಲಿಲ್ಲ.

ಇದೇ ನೀರು ಅವಲಂಬಿಸಿರುವ ಬಡಾವಣೆಗಳಲ್ಲಿ ನೀರಿನ ಸಮಸ್ಯೆ ತಲೆದೋರಿದೆ. ಸಣ್ಣ ಮನೆಗಳಿರುವ ತಮಿಳು ಕಾಲೊನಿ, ಕಲ್ಲುದೊಡ್ಡಿ ರೀತಿಯ ಬಡಾವಣೆಗಳಲ್ಲಿ ಮನೆಯಲ್ಲಿ ನೀರು ಸಂಗ್ರಹ ಮಾಡಿಕೊಳ್ಳುವ ತೊಟ್ಟಿಗಳಿಲ್ಲ. ಎಲ್ಲರ ಮನೆಯ ಮುಂದೆ ಪ್ಲಾಸ್ಟಿಕ್ ಬ್ಯಾರಲ್‌ಗಳು ಕಾಣಿಸುತ್ತವೆ. ಆದರೆ, ಅವುಗಳಲ್ಲಿ ನೀರು ಮಾತ್ರ ಇಲ್ಲವಾಗಿದೆ.

ಈ ಬಡಾವಣೆಗಳಲ್ಲಿ ಬಹುತೇಕ ಕಾರ್ಮಿಕರೇ ನೆಲೆಸಿದ್ದು, ಬೆಳಿಗ್ಗೆ ಕೂಲಿಗೆ ಹೊರಟರೆ ರಾತ್ರಿ ಮನೆ ಸೇರುತ್ತಾರೆ. ಮಧ್ಯಾಹ್ನದ ವೇಳೆ ನೀರು ಪೂರೈಸಿದರೆ ಸಂಗ್ರಹ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ‘ಬೇಸಿಗೆಯಲ್ಲಿ ಸಮರ್ಪಕವಾಗಿ ನೀರು ಪೂರೈಕೆ ಮಾಡುತ್ತಿಲ್ಲ. ಮೂರು ದಿನವಾದರೂ ನೀರು ಬರುವುದೇ ಇಲ್ಲ. ನಾವು ಮನೆಯಲ್ಲಿ ಇಲ್ಲದ ಸಮಯದಲ್ಲಿ ನೀರು ಬಂದರೆ ಬಳಕೆಗೆ ನೀರಿಲ್ಲದೆ ಪರದಾಡುವ ಸ್ಥಿತಿ ಇದೆ’ ಎಂದು ನಿವಾಸಿಗಳು ಅಳಲು ತೋಡಿಕೊಳ್ಳುತ್ತಾರೆ.

ವಿದ್ಯುತ್ ಕಡಿತ ಮಾಡುತ್ತಿರುವುದರಿಂದ ಸಮಸ್ಯೆಯಾಗುತ್ತಿದೆ. ಎಕ್ಸ್‌ಪ್ರೆಸ್ ಲೈನ್ ಅಳವಡಿಕೆಯಾಗಿದ್ದರೂ, ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಇದರಿಂದ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ ಎಂದು ನಗರಸಭೆ ಅಧಿಕಾರಿಗಳು ಹೇಳುತ್ತಾರೆ.

ಮಂಜುಳಾ
ಮಂಜುಳಾ
ವರಸಿದ್ಧಿ ವೇಣುಗೋಪಾಲ್‌
ವರಸಿದ್ಧಿ ವೇಣುಗೋಪಾಲ್‌
ನೀರಿನ ಪೂರೈಕೆ ಸಮರ್ಪಕವಾಗಿಲ್ಲದೆ ಪರದಾಡುವ ಸ್ಥಿತಿ ಇದೆ. ನಿಗದಿತ ಸಮಯಕ್ಕೆ ನೀರು ಪೂರೈಸುವುದಿಲ್ಲ. ಕೆಲಸಕ್ಕೆ ಹೋದರೆ ಬರುವಷ್ಟರಲ್ಲಿ ನೀರಿರುವುದಿಲ್ಲ. ಸಕಾಲಕ್ಕೆ ನೀರು ಸರಬರಾಜು ಮಾಡಬೇಕು.
ಮಂಜುಳಾ ಎ.ಕೆ. ಕಾಲೊನಿ ನಿವಾಸಿ

ಅಂತರ್ಜಲ ಬತ್ತಿ ಸಂಕಷ್ಟ

ಹಲವು ಬಡಾವಣೆಗಳಲ್ಲಿ ನಿವಾಸಿಗಳು ಸ್ವಂತ ಕೊಳವೆ ಬಾವಿ ಹೊಂದಿದ್ದಾರೆ. ಅಂತರ್ಜಲ ಬತ್ತಿರುವುದರಿಂದ ಈಗ ಅವರು ನಗರಸಭೆ ನೀರಿನ ಸಂಪರ್ಕಕ್ಕೆ ಪ್ರಯತ್ನಿಸುತ್ತಿದ್ದಾರೆ. ಹೌಸಿಂಗ್‌ ಬೋರ್ಡ್‌ ಕಲ್ಯಾಣ ನಗರದಂತ ಪ್ರತಿಷ್ಠಿತ ಬಡಾವಣೆಯಲ್ಲಿ ಬಹುತೇಕ ಎಲ್ಲಾ ಮನೆಗಳಲ್ಲೂ ಕೊಳವೆ ಬಾವಿ ಇವೆ. ಮಳೆ ಕೊರತೆ ಆಗಿರುವುದರಿಂದ ಅಂತರ್ಜಲ ಕುಸಿತವಾಗಿದೆ. ನಗರಸಭೆ ನೀರಿನ ಸಂಪರ್ಕ ಪಡೆಯದವರಿಗೆ ತೊಂದರೆಯಾಗಿದೆ ಎಂದು ನಗರಸಭೆ ಅಧಿಕಾರಿಗಳು ಹೇಳುತ್ತಾರೆ.

ಅಮೃತ್ ಯೋಜನೆ: ತಪ್ಪದ ಪರದಾಟ

ಅಮೃತ್ ಯೋಜನೆಯಡಿ ಮನೆ–ಮನೆಗೆ ನೀರಿನ ಸಂಪರ್ಕ ಕಲ್ಪಿಸುವ ಯೋಜನೆ ಸಮರ್ಪಕವಾಗಿ ಅನುಷ್ಠಾನವಾಗದೆ ನಿವಾಸಿಗಳು ತೊಂದರೆ ಅನುಭವಿಸುವಂತಾಗಿದೆ. ಗುಣಮಟ್ಟದ ಕಾಮಗಾರಿ ನಿರ್ವಹಿಸದೆ ಪೈಪ್‌ ಅಲ್ಲಲ್ಲಿ ಹೊಡೆದು ಹಾಳಾಗುತ್ತಿದೆ. ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಈ ಯೋಜನೆ ಅನುಷ್ಠಾನಗೊಳಿಸುತ್ತಿದ್ದು ಹಸ್ತಾಂತರ ಮಾಡಿಕೊಂಡಿರುವುದರಿಂದ ಅವುಗಳ ದುರಸ್ತಿಯನ್ನು ನಗರಸಭೆಯಿಂದಲೇ ಮಾಡಬೇಕಾಗಿದೆ. ಗ್ರಾಮೀಣಾಭಿವೃದ್ಧಿ ಇಲಾಖೆ ಮೂಲಕ ಅನುಷ್ಠಾನವಾಗುತ್ತಿರುವ ಜಲಜೀವನ್ ಮಷಿನ್(ಜೆಜೆಎಂ) ಕಾಮಗಾರಿಗೆ ಹೋಲಿಸಿದರೆ ಅಮೃತ್ ಯೋಜನೆಯಡಿ ಗುಣಮಟ್ಟದ ಪೈಪ್‌ಲೈನ್ ಮತ್ತು ನಳ ಸಂಪರ್ಕ ಕಲ್ಪಿಸುತ್ತಿಲ್ಲ ಎಂದು ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಬೇಸರ ವ್ಯಕ್ತಪಡಿಸುತ್ತಾರೆ.

‘ನೀರಿನ ಕೊರತೆ ಇಲ್ಲ’

ನೀರಿನ ಕೊರತೆ ಇಲ್ಲ ವಿದ್ಯುತ್ ವ್ಯತ್ಯಯದಿಂದ ತೊಂದರೆಯಾಗುತ್ತಿದೆ ಎಂದು ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ತಿಳಿಸಿದರು. ‘ಯಗಚಿ ಜಲಾಶಯ ಮತ್ತು ಹಿರೇಕೊಳಲೆ ಕೆರೆಯಲ್ಲಿ ಸಾಕಷ್ಟು ನೀರಿದೆ. ನೀರಿನ ತೊಂದರೆ ಆಗುವುದಿಲ್ಲ. ಬರಗಾಲ ಆಗಿರುವುದರಿಂದ ನೀರು ಮಿತ ಬಳಕೆ ಬಗ್ಗೆ ಜನ ಜಾಗೃತಿ ವಹಿಸಬೇಕು’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT