ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳು ಮರೆತ ಕಿತ್ಲಗುಳಿ ಶಾಪಗ್ರಸ್ತ ಕಾಲೊನಿ

Last Updated 12 ನವೆಂಬರ್ 2013, 9:12 IST
ಅಕ್ಷರ ಗಾತ್ರ

ಮೆಣಸಿನಾಡ್ಯ (ಬಾಳೆಹೊನ್ನೂರು): ಎರಡು ದಿನಕ್ಕೊಮ್ಮೆ ನೀರು ಸಿಕ್ಕರೆ ಅದೇ ಅದೃಷ್ಟ. ವರ್ಷದ ಕನಿಷ್ಠ ನಾಲ್ಕು ತಿಂಗಳು ವಿದ್ಯುತ್‌ಗೆ ರಜೆ.  ಮಳೆಗಾಲದಲ್ಲಿ ರಸ್ತೆ ಸಂಪರ್ಕ ಕಟ್‌. ಇನ್ನು ಬೀದಿ ದೀಪ ಇರುವುದು ಸ್ಥಳೀಯರಿಗೆ ಮರೆತೇ ಹೋಗಿದೆ. ಇದು ಕೊಪ್ಪ ತಾಲ್ಲೂಕಿನ ಅಗಳಗಂಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಕ್ಸಲ್ ಪೀಡಿತ  ಕಿತ್ಲಗುಳಿ ಕಾಲೊನಿಯ ದುಃಸ್ಥಿತಿ.

ಅಗಳಗಂಡಿಯಿಂದ ಸುಮಾರು 10 ಕಿಮೀ ದೂರದಲ್ಲಿರುವ ಕಿತ್ಲಗುಳಿ ಕಾಲೊನಿ ಎಲ್ಲ ಇದ್ದೂ ಏನೂ ಇಲ್ಲದಂ ತಾಗಿದೆ. ಸುಮಾರು 28ಕ್ಕೂ ಅಧಿಕ ಕಾರ್ಮಿಕರ ಮನೆ ಇರುವ ಇಲ್ಲಿ 100ಕ್ಕೂ ಹೆಚ್ಚು ಜನ ವಾಸಿಸುತ್ತಿ ದ್ದಾರೆ. ಕೂಲಿಯನ್ನೇ ಆಶ್ರಯಿಸಿ ಕೊಂಡಿರುವ ಇಲ್ಲಿನ ಜನ ಓಟಿನ ವೇಳೆಯಲ್ಲಿ ಮಾತ್ರ ರಾಜಕಾರಣಿಗಳ ಮುಖ ನೋಡುತ್ತಾರೆ.

ನಕ್ಸಲ್‌ ಪೀಡಿತ ವ್ಯಾಪ್ತಿಯಲ್ಲಿದ್ದರೂ, ಕಾಲೊನಿ ಸಂಪರ್ಕಿಸುವ ರಸ್ತೆ ಇದೂವರೆಗೂ ಡಾಂಬರು ಕಂಡಿಲ್ಲ. ಕೆಂಪು ಮಣ್ಣಿನ ಕಚ್ಚಾರಸ್ತೆ ಮಳೆಗಾಲ ದಲ್ಲಿ ಸಂಪೂರ್ಣ ಬಂದ್‌. ಯಾವುದೇ ವಾಹನ ಅತ್ತ ಸುಳಿಯವುದು ಆಸಾಧ್ಯ. ಇದರಿಂದಾಗಿ ಮಳೆಗಾಲ್ಲಕ್ಕೂ ಮುನ್ನ ಇಲ್ಲಿನ ಕಾರ್ಮಿರ್ಕರು ಅಹಾರ ಧಾನ್ಯಗಳನ್ನು ಸಂಗ್ರಹಿಸಿ ಇಡುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ.

ಕಾಲೊನಿಯಿಂದ ಕೂಗಳತೆ ದೂರದಲ್ಲಿದ್ದ ಸುಸಜ್ಜಿತ ಕಿರಿಯ ಪ್ರಾಥಮಿಕ ಪಾಠಶಾಲೆ ವಿದ್ಯಾರ್ಥಿಗಳ ಕೊರತೆಯಿಂದಾಗಿ ಬಾಗಿಲು ಮುಚ್ಚಿದೆ. ಇದೀಗ ವಿದ್ಯಾರ್ಥಿಗಳು ಸುಮಾರು ಎರಡು ಕೀಮಿ ನಡೆದು ಮೇಗೂರು ತಲುಪಿ ಅಲ್ಲಿಂದ ಶೃಂಗೇರಿ ಅಥವಾ ಅಗಳಗಂಡಿ ಶಾಲೆಗಳಿಗೆ ತೆರಳಬೇಕಾದ ಅನಿವಾರ್ಯತೆ ಉದ್ಭವಿಸಿದೆ. ಹೀಗೆ ತೆರಳುವ ವಿದ್ಯಾರ್ಥಿಗಳಿಗೆ ಸರ್ಕಾರ ಕನಿಷ್ಟ ಸಾರಿಗೆ ಭತ್ಯೆಯನ್ನೂ ನೀಡುತ್ತಿಲ್ಲ ಎನ್ನುತ್ತಾರೆ  ಶೃಂಗೇರಿಯ 9ನೇ ತರಗತಿ ವಿದ್ಯಾರ್ಥಿನಿ ಜಿ.ಪೃಥ್ವಿ
ಐದು ಸಾವಿರ ಸಾಮರ್ಥ್ಯ ಹೊಂದಿದ ಎರಡು ಟಾ್ಯಂಕ್‌ಗಳು ಒಡೆದು ನೀರಿನ ಸೋರಿಕೆಯಾಗುತ್ತಿದೆ. ಇಡೀ ಕಾಲೊನಿಗೆ 2000 ಲೀಟರ್‌ ಸಾಮ ರ್ಥ್ಯದ ನೀರಿನ ಟ್ಯಾಂಕ್‌ ನೀಡಲಾಗಿದೆ. ಇದು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ. ತ್ರೀ – ಫೇಸ್ ವಿದ್ಯುತ್‌ ಇದ್ದಾಗ ಮಾತ್ರ ನೀರು ಜನರ ಪಾಲಿಗೆ ಲಭ್ಯ. ಬೇಸಿಗೆಯಲ್ಲಿ ವಾರಕ್ಕೊಮ್ಮೆ ನೀರು ಸಿಕ್ಕರೆ ಅದೇ ಪುಣ್ಯ. ಕೊಳೆವೆ ಬಾವಿ ದುರಸ್ಥಿ ಕಾಣದೆ ದಶಕಗಳೆ ಕಳೆದಿದೆ. ದೊರೆಯುವ ನೀರೂ ಕೊಳಕಾಗಿದ್ದು ಕುಡಿಯಲು ಯೋಗ್ಯವಾಗಿಲ್ಲ. ಇನ್ನೊಂದು ರಿಂಗ್‌ ಬಾವಿಯಲ್ಲಿ ಕೊಳಕು, ಹೂಳು ತುಂಬಿ ನಿಂತಿದೆ. ಹೂಳು ತೆಗೆಯುವಂತೆ ಅಗಳಗಂಡಿ ಪಂಚಾಯಿತಿಗೆ ಸ್ಥಳೀಯರು ನೀಡಿದ ಮನವಿ ಮೂಲೆ ಗುಂಪಾಗಿದೆ. ಉಡುಪಿಯ ಪೇಜಾವರ ಮಠದಿಂದ ನೀಡಲಾದ ನೀರಿನ ಪೈಪುಗಳು ಮಾತ್ರ ಇಲ್ಲಿ ಸುಸಜ್ಜಿತವಾಗಿ ಅಳವಡಿಸಲಾ ಗಿದ್ದರೂ ಕುಡಿಯಲು ನೀರೆ ಇಲ್ಲದೆ ಬರಿದಾಗಿವೆ.

ವಿದ್ಯುತ್‌ ಮಾರ್ಗ ಮರಗಿಡಗಳ ನಡುವೆ ಹಾದು ಹೋಗಿರುವ ಕಾರಣ ವರ್ಷದ ನಾಲ್ಕು ತಿಂಗಳು ವಿದ್ಯುತ್‌ ಕಡಿತ ಅನಿವಾರ್ಯ. ವಿದ್ಯುತ್ ವ್ಯತ್ಯಯ ಉಂಟಾದರೂ ಲೈನ್ ಮ್ಯಾನ್‌ ದೂರದ ಜಯಪುರದಿಂದ ಇಲ್ಲಿಗೆ ಬಂದು ದುರಸ್ತಿಗೊಳಿಸಲು ಕನಿಷ್ಠ ಹತ್ತಾರು ಬಾರಿ ಕರೆ ಮಾಡಬೇಕು. ಅಗಳಗಂಡಿ ಪಂಚಾಯಿತಿ ಅಳವಡಿಸಿದ ಬೀದಿ ದೀಪಗಳು ಉರಿಯದೇ ಅದೆಷ್ಟು ಕಾಲವಾಯ್ತೋ ಎಂಬುದು ಸ್ಥಳೀಯರಿಗೆ ಗೊತ್ತಿಲ್ಲ.

ಕಾಲೊನಿಯತ್ತ ಸುಳಿಯದ ಅಧಿಕಾರಿಗಳು: ಎರಡು ತಿಂಗಳ ಹಿಂದೆ ಸುರಿದ ಭಾರಿ ಮಳೆಯ ಪರಿಣಾಮ ಆಶ್ರಯ ಯೋಜನೆ ಅಡಿಯಲ್ಲಿ 50 ಸಾವಿರಕ್ಕೂ ಅಧಿಕ ವ್ಯಯಿಸಿ ನಿರ್ಮಿಸಿದ್ದ ಮನೆ ಸಂಪೂರ್ಣ ನೆಲಸಮಗೊಂಡಿದೆ. ಶೇ 90 ಪೂರ್ಣಗೊಂಡಿದ್ದ ಸೀತಮ್ಮ ಎಂಬುವವರಿಗೆ ಸೇರಿದ ಮನೆ  ಧರೆಗುರುಳಿದಾಗ ಅವರು ಜಯಪುರದ ಕಂದಾಯ ನೀರಿಕ್ಷಕ ಹಾಗೂ ಅಗಳಗಂಡಿ  ಗ್ರಾಮ ಪಂಚಾಯಿತಿ ಗಮನ ಸೆಳೆದರು. ಆದರೆ ಅಧಿಕಾರಿ ಗಳು ಮಹಜರು ಪ್ರಕ್ರಿಯೆ ನಡೆಸು ವುದು ಬಿಡಿ, ಕನಿಷ್ಠ  ಅರ್ಜಿ ಪಡೆಯಲು ಹಿಂದೇಟು ಹಾಕಿದರು ಎಂದು ಅವರು ‘ಪ್ರಜಾವಾಣಿ’ಯೊಂದಿಗೆ ತಮ್ಮ ಗೋಳು ತೋಡಿಕೊಂಡರು. ಇದರ ಪರಿಣಾಮ ನೆಲಸಮಗೊಂಡ ಮನೆಯ ಅವಶೇಷ ತೆಗೆಯಲು ಹಣಕಾಸಿನ ಕೊರತೆ ಉಂಟಾಗಿದ್ದು ನೆಲಗಟ್ಟಿನಲ್ಲಿ ಮನೆಯ ಗೋಡೆ, ಬಾಗಿಲು, ಕಿಟಕಿ ಎಲ್ಲೆಂದರಲ್ಲಿ ಬಿದ್ದಿವೆ.

ಸ್ಥಳೀಯರು ಏನಂತಾರೆ...?
‘ಯಾವಾಗ್ಲೂ ಮೋಟಾರು ಹಾಳಾಗೋದು, ಲೋ ವೋಲ್ಟೇಜ್‌ ಸಮಸ್ಯೆಯಿಂದಾಗಿ ಕಾಲೊನಿಗೆ ನೀರು ಬಂದ್ರೆ ಬಂತು ಇಲ್ಲಾಂದ್ರೆ ಇಲ್ಲ. ನೀರು ಎತ್ತಲು 5ಎಚ್.ಪಿ. ಮೋಟಾರು ಹಾಕಿದಾರೆ. ಆದ್ರೆ ಅದರ ಶೆಡ್‌ ಈಗಲೋ ಆಗಲೋ ಬೀಳೋ ಹಾಂಗಿದೆ. ಶೆಡ್‌ ಒಳಗೆ ಹೊರಗೆ ಎಲ್ಲ ಕಡೇನೂ ಕರೆಂಟ್ ಹೊಡೀತದೆ. ಜೀವ ಕೈಲಿ ಹಿಡ್ಕೊಂಡು ಸ್ವಿಚ್‌ ಹಾಕಬೇಕು. ಇಲ್ಲಾಂದ್ರೆ ಗೊಟಕ್‌ ಆಗೋದು ಗ್ಯಾರಂಟಿ. ಪಂಚಾಯಿತಿಗೆ ಹೇಳಿ ಹೇಳಿ ಸಾಕಾಯ್ತು. ಇತ್ಲಾಗಿ ನೀರು ಬಿಡ್ತಿಲ್ಲ ಅಂತಾ ಕಾಲೊನಿ ಜನ ನಂಗೇ ಬೈಯ್ಯೋಕಾಯ್ತು. ಅತ್ಲಾಗಿ ಪಂಚಾಯಿತಿಯೋರು ನಮ್ಮ ಕಡೆ ಗಮನ ಕೊಡ್ತಿಲ್ಲ. ನಾನು ಏನು ಮಾಡ್ಬೇಕು ಹೆೇಳಿ’
ಕೆ.ಪಿ.ದಿನೇಶ್‌, ನೀರುಗಂಟಿ, ಕಿತ್ಲಗುಳಿ ಕಾಲೊನಿ, ಅಗಳಗಂಡಿ ಗ್ರಾಮ ಪಂಚಾಯಿತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT