ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳ್ಳಕೆರೆ | ಹಟ್ಟಿ ಜನರ ಬದುಕಿಗೆ ಆಸರೆಯಾದ ಕತ್ತಾಳೆ ನಾರು

Published 18 ಜನವರಿ 2024, 5:41 IST
Last Updated 18 ಜನವರಿ 2024, 5:41 IST
ಅಕ್ಷರ ಗಾತ್ರ

ಚಳ್ಳಕೆರೆ: ತಾಲ್ಲೂಕಿನ ರಾಮಜೋಗಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುರುಡಿಹಳ್ಳಿ ಲಂಬಾಣಿ ಹಟ್ಟಿಯ 15ಕ್ಕೂ ಹೆಚ್ಚು ಬಡ ಕುಟುಂಬಗಳು ಬಯಲುಸೀಮೆ ಪ್ರದೇಶದ ಹೊಲದ ಬದುಗಳಲ್ಲಿ ಬೆಳೆದ ಕತ್ತಾಳೆಯಿಂದ (ಪಟ್ಟೆ) ನಾರು ಉತ್ಪಾದಿಸುವ ಮೂಲಕ ಬದುಕು ಕಟ್ಟಿಕೊಂಡಿವೆ.

ಮನಮೈನಹಟ್ಟಿ, ಚನಗಾನಹಳ್ಳಿ, ತಳಕು ಗ್ರಾಮ ಅಲ್ಲದೆ ಹೆಚ್ಚು ಕತ್ತಾಳೆ ಹಾಳೆ ಸಿಗುವ ಕುಷ್ಠಗಿ, ಕೊಪ್ಪಳ, ಬಳ್ಳಾರಿ, ಕನಕಗಿರಿ ಹಾಗೂ ಆಂಧ್ರಪ್ರದೇಶದ ನಾಗಿರೆಡ್ಡಿಪಲ್ಲಿಯಲ್ಲಿ ಕತ್ತಾಳೆ ನಾರು ಉತ್ಪಾದಿಸುವ ಘಟಕಗಳಿವೆ.

ಟ್ರ್ಯಾಕ್ಟರ್ ಲೋಡ್ ಕತ್ತಾಳೆ ಹಾಳೆಗೆ ₹ 2,000ರಿಂದ ₹ 3,000 ಬೆಲೆ ಇದೆ. ಕೆಲವರಿಗೆ ಹಣದ ಬದಲಿಗೆ ತಾವು ಉತ್ಪಾದಿಸಿದ ನಾರು ನೀಡುತ್ತಾರೆ. ಪ್ರತಿದಿನ ಒಂದು ಯಂತ್ರದಲ್ಲಿ ನಾರು ಉತ್ಪಾದಿಸಲು ಕನಿಷ್ಠ 13ರಿಂದ 16 ಕಾರ್ಮಿಕರ ಅಗತ್ಯವಿದೆ.

ನಾರು ತೆಗೆಯುವ ವಿಧಾನ: ಹೊಲದ ಬದುವಿನಲ್ಲಿ ಬೆಳೆದ ಕತ್ತಾಳೆಯ ಹಸಿ ಹಾಳೆಗಳನ್ನು ಕತ್ತರಿಸಿ ತಂದು ಯಂತ್ರಕ್ಕೆ ಹಾಕಲಾಗುತ್ತದೆ. ನಂತರ ನಾರನ್ನು ಬಿಸಿಲಿನಲ್ಲಿ ಒಣಗಿಸಿ ಟ್ರ್ಯಾಕ್ಟರ್ ಮೂಲಕ ಅದನ್ನು ತುಳಿಸಿ ಹಿಂಜಿಸಲಾಗುತ್ತದೆ. ಆಗ ಅದು ಬಿಳಿ ನಾರಾಗಿ ಪರಿವರ್ತನೆಗೊಳ್ಳುತ್ತದೆ.

ಕತ್ತಾಳೆ ಹಸಿ ಹಾಳೆ ಯಂತ್ರಕ್ಕೆ ಹಾಕಿ ಎಳೆಯುವ ಮತ್ತು ನಾರಿನ ಗೊಬ್ಬರವನ್ನು ದೂರಕ್ಕೆ ಸಾಗಿಸುವ ಪುರುಷರಿಗೆ ₹ 600 ಮತ್ತು ಹಾಳೆ ಹೊತ್ತು ತರುವ ಹಾಗೂ ನಾರು ಬಿಸಿಲಿಗೆ ಒಣಗಿಸುವ ಮಹಿಳಾ ಕಾರ್ಮಿಕರಿಗೆ ಪ್ರತಿದಿನ ₹ 300ರಿಂದ ₹ 400 ಕೂಲಿ ಇದೆ.

‘ಲೋಡ್ ಹಾಳೆಗೆ 4ರಿಂದ 5 ಕ್ವಿಂಟಲ್ ನಾರು ದೊರೆಯುತ್ತದೆ. ಪ್ರತಿ ಕ್ವಿಂಟಲ್ ನಾರಿಗೆ ₹ 35,000ರಿಂದ ₹ 40,000 ಸಿಗುತ್ತದೆ. ಕತ್ತಾಳೆ ಹಾಳೆ, ವಾಹನ ಬಾಡಿಗೆ, ಡೀಸೆಲ್‌ ಹಾಗೂ 12 ಕಾರ್ಮಿಕರ ಕೂಲಿ ಸೇರಿ ದಿನಕ್ಕೆ ₹ 20,000 ಕಳೆದು ₹ 12,000 ಉಳಿಯುತ್ತದೆ’ ಎನ್ನುತ್ತಾರೆ ಘಟಕದ ಮಾಲೀಕ ಲಂಬಾಣಿಹಟ್ಟಿ ಗ್ರಾಮದ ಎಸ್.ಕುಮಾರ ನಾಯ್ಕ.

‘ನಾರು ಉತ್ಪಾದಿಸುವ ಕೆಲಸ ಬೇಸಿಗೆಯಲ್ಲಿ ಮೂರ್ನಾಲ್ಕು ತಿಂಗಳು ಮಾತ್ರ ಇರುತ್ತದೆ. ಉದ್ಯೋಗ ಖಾತ್ರಿ ಯೋಜನೆ ಅಡಿಯ ಕಾಮಗಾರಿಯನ್ನು ಯಂತ್ರದ ಮೂಲಕ ಮಾಡಿಸುತ್ತಾರೆ. ಹಾಗಾಗಿ ಇನ್ನುಳಿದ ದಿನಗಳಲ್ಲಿ ನಾವು ಕೂಲಿಗಾಗಿ ನಗರ ಪ್ರದೇಶಕ್ಕೆ ವಲಸೆ ಹೋಗುತ್ತೇವೆ’ ಎನ್ನುತ್ತಾರೆ ಕಾರ್ಮಿಕರಾದ ಸಾವಿತ್ರಿ ಬಾಯಿ.

ಆರೋಗ್ಯದ ಭಯ: ನಾರು ಉತ್ಪಾದನಾ ಘಟಕದಲ್ಲಿ ಕಾರ್ಯ ನಿರ್ವಹಿಸುವ ಕಾರ್ಮಿಕರಿಗೆ ಕತ್ತಾಳೆಯ ನಿರುಪಯುಕ್ತ ರಸ ಮತ್ತು ವಾಸನೆಯಿಂದ ಹಲವು ರೋಗಗಳು ಹರಡುವ ಸಾಧ್ಯತೆ ಹೆಚ್ಚಿದೆ. ಕತ್ತಾಳೆ ರಸ ಮೈಗೆ ಸೋಕಿದ ಜಾಗದಲ್ಲಿ ವಿಪರೀತ ತುರಿಕೆ (ನವೆ) ಜತೆಗೆ ಚರ್ಮರೋಗದ ಭೀತಿ ಕಾಡುತ್ತಿದೆ.

ಗುಡಿ ಕೈಗಾರಿಕೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಆರ್ಥಿಕ ನೆರವು ಕಲ್ಪಿಸಬೇಕು. ಹೊಲದ ಬದುಗಳಲ್ಲಿ ಕತ್ತಾಳೆ ಬೆಳೆಯಲು ರೈತರನ್ನು ಪ್ರೇರೇಪಿಸಬೇಕು. ಅರಣ್ಯ ಪ್ರದೇಶದಲ್ಲಿ ಕತ್ತಾಳೆ ಬೆಳೆದು ನಾರಿನ ಉದ್ಯಮಕ್ಕೆ ಕಚ್ಚಾವಸ್ತು ಪೂರೈಕೆ ಹೆಚ್ಚಿಸಲು ಸರ್ಕಾರ ಗಂಭೀರ ಚಿಂತನೆ ಮಾಡಬೇಕು ಎಂಬುವುದು ಇಲ್ಲಿನ ಕಾರ್ಮಿಕರ ಒತ್ತಾಯ.

ಹಡಗು ಕಟ್ಟುವ ಹಗ್ಗ ತಯಾರಿಸಲು ಬಳಕೆ

ಕತ್ತಾಳೆ ನಾರಿನಿಂದ ಹಗ್ಗಗಳನ್ನು ತಯಾರಿಸಲಾಗುವುದು. ಈ ಹಗ್ಗಗಳನ್ನು ಹಡಗುಗಳಿಗೆ, ಸೈನಿಕರ ತರಬೇತಿ ಮತ್ತು ಕೃಷಿ ಚಟುವಟಿಕೆಗೆ ಹೆಚ್ಚು ಬಳಕೆ ಮಾಡಲಾಗುತ್ತದೆ. ಗೃಹ ಬಳಕೆ ವಸ್ತುಗಳನ್ನು ಈ ನಾರಿನಿಂದ ತಯಾರಿಸಲಾಗುತ್ತದೆ. ಮನೆ ಸ್ವಚ್ಛಗೊಳಿಸುವ ಬ್ರಶ್, ಅಲಂಕಾರಿಕ ಮ್ಯಾಟ್, ಬ್ಯಾಗ್, ಗೋಡೆಗೆ ನೇತು ಹಾಕುವ ಚಿತ್ರಪಟ, ಮಣ್ಣಿನ ಮಡಿಕೆ ಸಿಂಬೆ ಮುಂತಾದ ಉತ್ಪನ್ನಗಳನ್ನು ನಾರಿನಿಂದ ತಯಾರಿಸಲಾಗುತ್ತದೆ. ಹಾಗಾಗಿ, ಈ ನಾರನ್ನು ಕೊಲ್ಕತ್ತ, ದುಬೈ, ಯೂರೋಪ್ ದೇಶಗಳಿಗೆ ಹೆಚ್ಚು ರಫ್ತು ಮಾಡಲಾಗುತ್ತಿದೆ.

ಚಳ್ಳಕೆರೆ ತಾಲ್ಲೂಕಿನ ಕುರುಡಿಹಳ್ಳಿ ಲಂಬಾಣಿಹಟ್ಟಿ ಗ್ರಾಮದ ಬಳಿಯ ಕತ್ತಾಳೆ ನಾರು ಉತ್ಪಾದನಾ ಘಟಕದಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರು

ಚಳ್ಳಕೆರೆ ತಾಲ್ಲೂಕಿನ ಕುರುಡಿಹಳ್ಳಿ ಲಂಬಾಣಿಹಟ್ಟಿ ಗ್ರಾಮದ ಬಳಿಯ ಕತ್ತಾಳೆ ನಾರು ಉತ್ಪಾದನಾ ಘಟಕದಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT