ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯತ್ತ ವಾಲುತ್ತಿದೆ ದಲಿತ ಸಮುದಾಯ

ಕಾರ್ಯಕಾರಿಣಿ ಸಭೆಯಲ್ಲಿ ರಾಜ್ಯ ಕಾರ್ಯದರ್ಶಿ ಕೆ.ಎಸ್.ನವೀನ್ ಅಭಿಮತ
Last Updated 20 ಸೆಪ್ಟೆಂಬರ್ 2021, 16:20 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಬಿಜೆಪಿ ಪಾಳಯ ಸೇರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಪಕ್ಷದ ಸಂಘಟನೆ ದೃಷ್ಟಿಯಿಂದ ಇದು ಆಶಾದಾಯಕ ಬೆಳವಣಿಗೆ’ ಎಂದು ಪಕ್ಷದ ರಾಜ್ಯ ಘಟಕದ ಕಾರ್ಯದರ್ಶಿ ಕೆ.ಎಸ್.ನವೀನ್ ತಿಳಿಸಿದರು.

ಐಎಂಎ ಸಭಾಂಗಣದಲ್ಲಿ ಬಿಜೆಪಿ ಜಿಲ್ಲಾ ಎಸ್‌ಸಿ ಮೋರ್ಚಾದಿಂದ ಸೋಮವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಎರಡನೇ ಕಾರ್ಯಕಾರಣಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ‘ದಲಿತ ಸಮುದಾಯದವರನ್ನು ಕಾಂಗ್ರೆಸ್ ಮತಬ್ಯಾಂಕ್‌ ಆಗಿ ಮಾಡಿಕೊಂಡಿತ್ತು. ಇದರ ಪರಿಣಾಮ ಬಿಜೆಪಿಯತ್ತ ಹೆಚ್ಚಿನ ಸಂಖ್ಯೆಯಲ್ಲಿ ಸಮುದಾಯದವರು ವಾಲುತ್ತಿದ್ದಾರೆ’ ಎಂದರು.

‘ಕೇಂದ್ರ ಸಚಿವ ಸಂಪುಟಕ್ಕೆ ಪರಿಶಿಷ್ಟ ಜಾತಿಗೆ ಸೇರಿದ 17 ಮಂದಿಯನ್ನು ಒಮ್ಮೆಗೆ ಸೇರಿಸಿಕೊಂಡಿದ್ದು ಇತಿಹಾಸ. ಬಿಜೆಪಿ ಹೊರತುಪಡಿಸಿ ಯಾವ ಪಕ್ಷವೂ ಇಷ್ಟು ಜನರಿಗೆ ಸಚಿವ ಸ್ಥಾನ ನೀಡಿಲ್ಲ. ಹೀಗಾಗಿ ಸಮುದಾಯದವರು ಕೂಡ ಬದಲಾವಣೆ ಬಯಸಿ ಕಮಲದ ಕಡೆ ಮುಖ ಮಾಡುತ್ತಿದ್ದಾರೆ’ ಎಂದು ಹೇಳಿದರು.

‘ಯಾವುದೇ ಸಮುದಾಯದ ಯುವಕ–ಯುವತಿಯರು ಬಂದರು ಅವರ ಸಂಘಟನೆ, ಕಾರ್ಯಚಟುವಟಿಕೆ ಪರಿಗಣಿಸಿ ನಾಯಕತ್ವ ನೀಡುವ ಪಕ್ಷ ಬಿಜೆಪಿ ಮಾತ್ರ. ಬೇರೆ ಪಕ್ಷಗಳಲ್ಲಿ ಬೆಳವಣಿಗೆ ಸಹಿಸದೇ ಕಾಲೆಳೆಯುತ್ತಾರೆ. ನಮ್ಮಲ್ಲಿ ಮುಂಚೂಣಿಗೆ ತರಲು ಹಿರಿಯ ನಾಯಕರು ಆಶೀರ್ವದಿಸುತ್ತಾರೆ’ ಎಂದು ಹೇಳಿದರು.

‘ಕೇಂದ್ರ ಹಾಗೂ ರಾಜ್ಯ ಸರ್ಕಾರ ಈ ಸಮುದಾಯಕ್ಕೆ ಸಾಕಷ್ಟು ಉತ್ತಮ ಯೋಜನೆಗಳನ್ನು ರೂಪಿಸಿದೆ. ಅದನ್ನು ಸಮುದಾಯದವರು ಸದುಪಯೋಗಪಡಿಸಿಕೊಳ್ಳಬೇಕು. ಸಮುದಾಯದ ಯುವಕ–ಯುವತಿಯರು ಪಕ್ಷ ಬಲವರ್ಧನೆಯೊಂದಿಗೆ ಮುನ್ನೆಲೆಗೆ ಬರಬೇಕು’ ಎಂದು ಸಲಹೆ ನೀಡಿದರು.

ಎಸ್‌ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಬಸವರಾಜ್ ನಾಯ್ಕ್‌, ‘ವಸತಿ ಸೌಲಭ್ಯದಿಂದ ವಂಚಿತರಾದ ಎಸ್‌ಸಿ ಸಮುದಾಯದವರಿಗೆ ಮನೆ ನಿರ್ಮಿಸಿಕೊಳ್ಳಲು ಸರ್ಕಾರ ₹ 5 ಲಕ್ಷ ಘೋಷಿಸಿರುವುದು ಸ್ವಾಗತಾರ್ಹ ಬೆಳವಣಿಗೆ’ ಎಂದರು.

‘ದೇಶದಲ್ಲಿ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣಕ್ಕೆ ಅಡಿಪಾಯ ಹಾಕಿದ್ದು ಮಾಜಿ ಪ್ರಧಾನಿ ವಾಜಪೇಯಿ ನೇತೃತ್ವದ ಬಿಜೆಪಿ ಸರ್ಕಾರ. ಅದನ್ನು ಸಂಪೂರ್ಣವಾಗಿ ಈಡೇರಿಸುವಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಮುಂದಾಗಿದೆ. ಗ್ರಾಮೀಣ ಪ್ರದೇಶಗಳ ವಿವಿಧ ಕಾಲೊನಿಗಳಲ್ಲಿ ಕಾಂಕ್ರಿಟ್‌ ರಸ್ತೆ ಜತೆಗೆ ಇತರ ಅಭಿವೃದ್ಧಿ ಕಾರ್ಯ ಕೂಡ ಮಾಡಲಾಗುತ್ತಿದೆ’ ಎಂದು ತಿಳಿಸಿದರು.

ಮುಖಂಡ ಸಿದ್ದೇಶ್‌ ಯಾದವ್, ‘ಜಿಲ್ಲೆಯಲ್ಲಿ ಎಸ್‌ಸಿ ಮೋರ್ಚಾ ಬಲಿಷ್ಠವಾಗಿದೆ. ಮುಂದಿನ ದಿನಗಳಲ್ಲಿ ಶೇ 80ರಷ್ಟು ಸಮುದಾಯದ ಜನರನ್ನು ಬಿಜೆಪಿಗೆ ತರುವ ಕೆಲಸ ಮೋರ್ಚಾದಿಂದ ಆಗಬೇಕು. ಕಾಂಗ್ರೆಸ್‌ ಕಡೆ ಮುಖ ಮಾಡದಂತೆ ಬಿಜೆಪಿಯತ್ತ ಸೆಳೆಯಬೇಕು’ ಎಂದು ಸಲಹೆ ನೀಡಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎ.ಮುರಳಿ, ಮೋರ್ಚಾದ ಜಿಲ್ಲಾ ಘಟಕದ ಅಧ್ಯಕ್ಷ ಹಾಲಪ್ಪ, ರಾಜ್ಯ ಸಮಿತಿ ಸದಸ್ಯೆ ಭಾರ್ಗವಿ ದ್ರಾವಿಡ್, ಜಿಲ್ಲಾ ಉಸ್ತುವಾರಿ ಜಯಪ್ಪ, ಮುಖಂಡ ಜಯಪಾಲಯ್ಯ ಇದ್ದರು.

***

ಕೋವಿಡ್ ಲಸಿಕೆ ನೀಡುವಲ್ಲಿ ದೇಶ, ರಾಜ್ಯ, ಜಿಲ್ಲೆಯಲ್ಲಿ ಉತ್ತಮ ಪ್ರಗತಿಯಾಗಿದೆ. ಅಪಪ್ರಚಾರಗಳನ್ನು ಜಯಿಸುವಂಥ ಏಕೈಕ ಶಕ್ತಿ ಹೊಂದಿರುವ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದೆ.

ಡಾ.ಸಿದ್ದಾರ್ಥ ಗುಂಡಾರ್ಪಿ, ಲಸಿಕಾ ಅಭಿಯಾನದ ಜಿಲ್ಲಾ ಸಂಯೋಜಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT