ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಕಿ ಪ್ರಕರಣ ವಿಲೇವಾರಿಗೆ ಒತ್ತು

ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ
Last Updated 16 ನವೆಂಬರ್ 2019, 14:07 IST
ಅಕ್ಷರ ಗಾತ್ರ

ಚಿತ್ರದುರ್ಗ: ನ್ಯಾಯದಾನ ವಿಳಂಬವಾಗುವುದನ್ನು ತಪ್ಪಿಸುವ ಉದ್ದೇಶದಿಂದ ಬಾಕಿ ಪ್ರಕರಣಗಳ ವಿಲೇವಾರಿಗೆ ಆದ್ಯತೆ ನೀಡಲಾಗುತ್ತಿದೆ. ಐದು ಮತ್ತು ಹತ್ತು ವರ್ಷ ಹಳೆಯ ಪ್ರಕರಣಗಳ ವಿಲೇವಾರಿಗೆ ಕಾಲಮಿತಿ ನಿಗದಿಪಡಿಸಲಾಗಿದೆ. ಬಾಕಿ ಪ್ರಕರಣ ಇತ್ಯರ್ಥವಾದರೆ ಮಾತ್ರ ಸಾಮಾನ್ಯರಿಗೆ ನ್ಯಾಯ ಸಿಗುತ್ತದೆ ಎಂದು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಅಭಿಪ್ರಾಯಪಟ್ಟರು.

ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ವಕೀಲರ ಸಂಘ ಶನಿವಾರ ಆಯೋಜಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

‘ಹತ್ತು ವರ್ಷಗಳ ಹಿಂದಿನ ಪ್ರಕರಣಗಳನ್ನು ಇದೇ ಡಿಸೆಂಬರ್ ಅಂತ್ಯಕ್ಕೆ ಹಾಗೂ ಐದು ವರ್ಷಗಳ ಹಿಂದಿನ ಪ್ರರಕಣಗಳನ್ನು 2020ರ ವರ್ಷಾಂತ್ಯದ ಒಳಗೆ ಇತ್ಯರ್ಥಪಡಿಸಬೇಕು. ಇದಕ್ಕೆ ವಕೀಲರು ಕೂಡ ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.

‘ನ್ಯಾಯಾಂಗ ವ್ಯವಸ್ಥೆಯ ಮೇಲೆ ಜನಸಾಮಾನ್ಯರು ಅಪಾರ ನಂಬಿಕೆ ಇಟ್ಟುಕೊಂಡಿದ್ದಾರೆ. ನ್ಯಾಯಾಂಗ ಇಲಾಖೆಯನ್ನು ಸಬಲಗೊಳಿಸಲು ಸರ್ಕಾರವೂ ಸಾಕಷ್ಟು ಅನುದಾನ ನೀಡುತ್ತಿದೆ. ನ್ಯಾಯಾಂಗ ವ್ಯವಸ್ಥೆಯಲ್ಲಿ ಇರುವವರು ಸಾಮಾನ್ಯ ಜನರಿಗೆ ಉತ್ತರದಾಯಿಗಳಾಗಿರಬೇಕು. ಅವರ ವಿಶ್ವಾಸವನ್ನು ಉಳಿಸಿಕೊಳ್ಳಲು ಶ್ರಮಿಸಬೇಕು’ ಎಂದು ಕರೆ ನೀಡಿದರು.

‘ಇತ್ತೀಚೆಗೆ ವಕೀಲರು ಕಲಾಪದಿಂದ ಹೊರಗೆ ಉಳಿಯುವುದು, ಬಹಿಷ್ಕರಿಸುವುದು ಹೆಚ್ಚಾಗುತ್ತಿದೆ. ಮೋಟಾರು ವಾಹನ ಕಾಯ್ದೆ ಜಾರಿಯಾದಾಗಲೂ ವಕೀಲರು ಕಲಾಪ ಬಹಿಷ್ಕರಿಸಿದರೆ ಹೊರತು ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಲಿಲ್ಲ. ವಕೀಲರ ಹೋರಾಟ ಸಾಂವಿಧಾನಿಕ ಚೌಕಟ್ಟು ಮೀರಬಾರದು. ದೂರು, ಸಮಸ್ಯೆಗಳ ಬಗ್ಗೆ ಚರ್ಚಿಸಲು ನನ್ನ ಕಚೇರಿಯ ಬಾಗಿಲು ಸದಾ ತೆರೆದಿರುತ್ತದೆ’ ಎಂದು ಸಲಹೆ ನೀಡಿದರು.

‘ಸರ್ಕಾರಿ ವಕೀಲರ ಕೊರತೆಯ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ಹಲವು ನ್ಯಾಯಾಲಯಗಳಲ್ಲಿ ಈ ಕೊರತೆ ಇರುವುದು ಗಮನಕ್ಕೂ ಬಂದಿದೆ. ಸರ್ಕಾರಿ ವಕೀಲರ ನೇಮಕಾತಿ ವಿಚಾರವನ್ನು ಗಂಭೀರವಾಗಿ ಪರಿಗಣಿಸುವಂತೆ ಸರ್ಕಾರಕ್ಕೆ ಸೂಚಿಸಲಾಗಿದೆ. ಮಾರ್ಚ್‌ 31ರ ಒಳಗೆ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ’ ಎಂದು ವಕೀಲರ ಬೇಡಿಕೆಗೆ ಸ್ಪಂದಿಸಿದರು.

ಸಂವಿಧಾನ ಜಾತ್ಯತೀತ ತತ್ವದ ತಳಹದಿಯ ಮೇಲೆ ನಿರ್ಮಾಣವಾಗಿದೆ. ಈ ಮೌಲ್ಯವನ್ನು ಎತ್ತಿಹಿಡಿಯಲು ಪ್ರತಿಯೊಬ್ಬರು ಸಂವಿಧಾನಕ್ಕೆ ಮತ್ತೊಮ್ಮೆ ಭೇಟಿ ನೀಡಬೇಕು ಎಂದು ಓಕಾ ತಿಳಿಸಿದರು.

‘ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ರಚಿಸಿದ ಸಂವಿಧಾನ ವಾಕ್‌ ಸ್ವಾತಂತ್ರ್ಯ ಸೇರಿ ಹಲವು ಹಕ್ಕುಗಳನ್ನು ನೀಡಿದೆ. ನ್ಯಾಯಾಂಗ ವ್ಯವಸ್ಥೆಯ ಒಳಗೆ ಇರುವವರು ಸಂವಿಧಾನವನ್ನು ಮತ್ತೊಮ್ಮೆ ಅಧ್ಯಯನ ಮಾಡುವುದು ಸೂಕ್ತ. ನ.26 ಸಂವಿಧಾನದ ದಿನ. ಸಂವಿಧಾನದ ಮೌಲ್ಯಗಳನ್ನು ಎಲ್ಲರೂ ಸ್ಮರಿಸೋಣ’ ಎಂದು ಕರೆ ನೀಡಿದರು.

ಹೈಕೋರ್ಟ್ ರಿಜಿಸ್ಟ್ರಾರ್‌ ರಾಜೇಂದ್ರ ಎಂ. ಬಾದಾಮಿಕರ್, ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶ ಎಸ್.ವೈ. ವಟವಟಿ, ವಕೀಲರ ಸಂಘದ ಅಧ್ಯಕ್ಷ ವಿಜಯಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT