ಬುಧವಾರ, ಡಿಸೆಂಬರ್ 11, 2019
26 °C

ಚಿತ್ರದುರ್ಗ: ಕೋಟೆ ವ್ಯಾಪ್ತಿಯೊಳಗೆ ನಿತ್ಯವೂ ಬೆಂಕಿ ಹಚ್ಚುತ್ತಿರುವ ದುಷ್ಕರ್ಮಿಗಳು

ಕೆ.ಎಸ್. ಪ್ರಣವಕುಮಾರ್ Updated:

ಅಕ್ಷರ ಗಾತ್ರ : | |

Deccan Herald

ಚಿತ್ರದುರ್ಗ: ಐತಿಹಾಸಿಕ ಕಲ್ಲಿನಕೋಟೆ ಒಳಗಿನ ಕೆಲ ಭಾಗಗಳಲ್ಲಿ ಕಿಡಿಗೇಡಿಗಳು ಬೆಂಕಿ ಹಚ್ಚುತ್ತಿದ್ದು, ಹುಲ್ಲಿನ ಜತೆಗೆ ಮರಗಳಿಗೂ ಹಾನಿಯಾಗುತ್ತಿದೆ.

ಏಳುಸುತ್ತಿನ ಕೋಟೆ ಎಂದೇ ಪ್ರಸಿದ್ಧಿಯಾಗಿರುವ ಇಲ್ಲಿನ ಸುಂದರ ಪರಿಸರವನ್ನು ಹಾಳು ಮಾಡಲು ದುಷ್ಕರ್ಮಿಗಳು ಯತ್ನಿಸುತ್ತಿರುವ ಕುರಿತು ವಾಯುವಿಹಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಪ್ರಾಚ್ಯವಸ್ತು ಮತ್ತು ಪುರಾತತ್ವ ಇಲಾಖೆ ಅನುಮತಿ ಪಡೆಯದೆ ಇಲ್ಲಿ ಏನೂ ಮಾಡುವಂತಿಲ್ಲ. ಹೀಗಿದ್ದರೂ ಕೆಲ ದಿನಗಳಿಂದ ಇಲ್ಲಿನ ಒಂಟಿಕಲ್ಲು ಬಸವಣ್ಣ ದೇಗುಲದ ಸಮೀಪ, ಸಂಪಿಗೆ ಸಿದ್ದೇಶ್ವರ ದೇಗುಲ ಹಿಂಭಾಗ ಹಾಗೂ ಇತರೆಡೆ ಹುಲ್ಲಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿ ದುಷ್ಕೃತ್ಯ ಎಸಗಿದ್ದಾರೆ.

‘ಕೋಟೆ ವ್ಯಾಪ್ತಿಯೊಳಗೆ ಚಿರತೆ, ನವಿಲು, ಕೋತಿ, ಅಳಿಲು, ಮೊಲ, ಸಣ್ಣಪುಟ್ಟ ಪ್ರಾಣಿ, ಪಕ್ಷಿ ಹಾಗೂ ಸರಿಸೃಪಗಳೂ ಜೀವಿಸುತ್ತಿವೆ. ಕಿಡಿಗೇಡಿಗಳು ಈ ರೀತಿ ಬೆಂಕಿ ಹಚ್ಚುವುದರಿಂದ ಅವುಗಳ ಜೀವಕ್ಕೂ ತೊಂದರೆಯಾಗುತ್ತಿದೆ’ ಎನ್ನುತ್ತಾರೆ ಕೋಟೆ ವಾಯುವಿಹಾರಿಗಳ ಸಂಘದ ಅಧ್ಯಕ್ಷ ಸತ್ಯಪ್ಪ.

‘ಕಿಡಿಗೇಡಿಗಳ ದುಷ್ಕೃತ್ಯ ಹೀಗೆ ಮುಂದುವರಿದರೆ ಮುಂದೊಂದು ದಿನ ಕಾಡ್ಗಿಚ್ಚಿನಂತೆ ಹಬ್ಬಿ ಇಡೀ ಕೋಟೆಗೆ ಬೆಂಕಿ ಹತ್ತಿಕೊಂಡರೆ ಅಚ್ಚರಿ ಪಡಬೇಕಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಈ ಕೃತ್ಯ ಎಸಗುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

‘ಕೋಟೆ ವ್ಯಾಪ್ತಿಯ ಕೆಲವೆಡೆ ಮದ್ಯದ ಬಾಟಲಿ, ಮಾಂಸದ ತುಂಡು ಕಣ್ಣಿಗೆ ಬೀಳುತ್ತವೆ. ಕೆಲವರು ಕುಡಿದ ಅಮಲಿನಲ್ಲಿ ಚಳಿಗೆ ಬೆಂಕಿ ಹಾಕುತ್ತಿದ್ದಾರೆ’ ಎಂದು ನಿತ್ಯವೂ ಕೋಟೆಗೆ ವಾಯುವಿಹಾರಕ್ಕೆ ಬರುವಂಥ ಕೆಲ ವಾಯುವಿಹಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಕೋಟೆಗೆ ಪ್ರತಿ ವರ್ಷ ಲಕ್ಷಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡುತ್ತಾರೆ. ವಿದೇಶಿಗರು, ಹೊರ ರಾಜ್ಯಗಳ ಪ್ರವಾಸಿಗರು ಕಲ್ಲಿನ ಕೋಟೆಯ ಸೌಂದರ್ಯ ಆಸ್ವಾದಿಸಲು ಬರುತ್ತಿದ್ದಾರೆ. ಆದರೆ, ಕೋಟೆಗೆ ರಕ್ಷಣೆಯೇ ಇಲ್ಲದಂತಾಗಿದೆ ಎಂದು ವಾಯುವಿಹಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

‘ಇಂತಹ ಕೃತ್ಯ ನಡೆಸುವವರಿಗೆ ಇಲಾಖೆಯ ನಿಯಮಾನುಸಾರ ₹ 1 ಲಕ್ಷಕ್ಕೂ ಅಧಿಕ ದಂಡ ವಿಧಿಸಬಹುದು. ಅಲ್ಲದೇ, ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸಲು ಅವಕಾಶವಿದೆ’ ಎಂದು ಕೇಂದ್ರ ಪ್ರಾಚ್ಯವಸ್ತು ಮತ್ತು ಪುರಾತತ್ವ ಇಲಾಖೆಯ ಹೆಸರೇಳಲು ಇಚ್ಛಿಸದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು