ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಾಯಕನಹಟ್ಟಿ | ವಿದ್ಯುತ್ ಶಾಕ್‌: ಸುಟ್ಟು ಕರಕಲಾದ ತೆಂಗಿನ ಮರ

ಕೃಷಿ ಚಟುವಟಿಕೆಯಲ್ಲಿ ತೊಡಗಲು ರೈತರು ಹಿಂದೇಟು
Published 18 ಮೇ 2024, 13:21 IST
Last Updated 18 ಮೇ 2024, 13:21 IST
ಅಕ್ಷರ ಗಾತ್ರ

ನಾಯಕನಹಟ್ಟಿ: ಓಬಯ್ಯನಹಟ್ಟಿ ಗ್ರಾಮದ ಬೋರಮ್ಮ ದೊಡ್ಡ ಹುಚ್ಚಮಲ್ಲಯ್ಯ ಅವರ ಜಮೀನಿನ ಮೇಲೆ ಹಾದುಹೋಗಿರುವ ಹೈ ವೋಲ್ಟೇಜ್ ವಿದ್ಯುತ್ ಲೈನ್‌ನಿಂದ ವಿದ್ಯುತ್ ಪ್ರವಹಿಸಿ ಫಲಕ್ಕೆ ಬಂದಿದ್ದ ತೆಂಗಿನ ಮರ ಸುಟ್ಟು ಕರಕಲಾಗಿದೆ.

ನಾಯಕನಹಟ್ಟಿ ಹೋಬಳಿಯಲ್ಲಿ ಮಳೆ ಅಭಾವ, ಅಂತರ್ಜಲಮಟ್ಟ ಕುಸಿತ, ವಿದ್ಯುತ್ ಅಭಾವ ಸೇರಿ ಹಲವು ಸಮಸ್ಯೆಗಳ ನಡುವೆ ಕೊಳವೆಬಾವಿಯಲ್ಲಿ ದೊರೆಯುವ ಅತ್ಯಲ್ಪ ನೀರಿನಲ್ಲಿ ಹನಿ ನೀರಾವರಿ ಪದ್ಧತಿ ಮೂಲಕ ತೋಟಗಾರಿಕೆ ಬೆಳೆಗಳಾದ ಹಣ್ಣು, ಹೂವು, ತರಕಾರಿ, ವಾಣಿಜ್ಯ ಬೆಳೆಗಳಾದ ಅಡಿಕೆ, ತೆಂಗು, ದಾಳಿಂಬೆ, ಪಪ್ಪಾಯ ಬೆಳೆಗಳನ್ನು ರೈತರು ಬೆಳೆಯುತ್ತಿದ್ದಾರೆ. ಹೀಗಿರುವಾಗ ರೈತ ಮಹಿಳೆ ಬೋರಮ್ಮ ಅವರ ಫಲಕ್ಕೆ ಬಂದಿದ್ದ ತೆಂಗಿನ ಮರಕ್ಕೆ ವಿದ್ಯುತ್ ಪ್ರವಹಿಸಿ ಸುಟ್ಟು ಕರಕಲಾಗಿದ್ದರಿಂದ ತೀವ್ರ ನಷ್ಟವಾಗಿದೆ ಎಂದು ರೈತ ಡಿ.ಎಚ್.ಪರಮೇಶ್ವರಪ್ಪ ತಿಳಿಸಿದರು.

ಓಬಯ್ಯನಹಟ್ಟಿ ಗ್ರಾಮದ ರಿ.ಸ.22/ಪಿ2ರ 7.23 ಎಕರೆ ಜಮೀನಿನಲ್ಲಿ ಅಡಿಕೆ, ಹುಣಸೆ, ಮಾವು, ತೆಂಗಿನ ಮರಗಳನ್ನು ಬೆಳೆಸಲಾಗಿದೆ. 2018ರಲ್ಲಿ ರೈತರ ವಿರೋಧದ ನಡುವೆ ಕೆಪಿಟಿಸಿಎಲ್ ಅಧಿಕಾರಿಗಳು ಹೈ ವೋಲ್ಟೇಜ್ ವಿದ್ಯುತ್ ಮಾರ್ಗವನ್ನು ಇದೇ ಜಮೀನಿನ ಮೇಲೆ ಹಾಕಿದರು. ಅದಕ್ಕಾಗಿ ಅಲ್ಪಸ್ವಲ್ಪ ಪರಿಹಾರ ನೀಡಿ ಸುಮ್ಮನಾದರು. ಇಂದು ಜಮೀನಿನಲ್ಲಿ ಎಲ್ಲ ಗಿಡಗಳು ಬೆಳೆದು ದೊಡ್ಡ ಮರಗಳಾಗಿ ಫಲ ನೀಡಲು ಆರಂಭಿಸಿವೆ. ಆದರೆ, ಜಮೀನಿನ ಮೇಲೆ ಹಾದುಹೋಗಿರುವ ವಿದ್ಯುತ್ ತಂತಿಗಳಿಂದ ನಿರಂತರವಾಗಿ ವಿದ್ಯುತ್ ಪ್ರವಹಿಸುತ್ತಿರುವ ಪರಿಣಾಮ ಗಿಡಮರಗಳು ವಿದ್ಯುತ್ ಶಾಕ್‌ನಿಂದ ನಾಶವಾಗುತ್ತಿವೆ. ರೈತರು ಬೆಳೆಗಳಿಗೆ ನೀರು ಹಾಯಿಸಲು ಜಮೀನಿಗೆ ತೆರಳಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ ಎಂದು ಅಳಲು ತೋಡಿಕೊಂಡರು.

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಕೆಪಿಟಿಸಿಎಲ್ ದಾವಣಗೆರೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ವಿರುಪಾಕ್ಷಪ್ಪ, ರೈತರಿಗೆ ಎದುರಾಗಿರುವ ಸಮಸ್ಯೆಯನ್ನು ಪರಿಶೀಲಿಸಲಾಗಿದೆ. ರೈತರಿಗಾಗಿರುವ ನಷ್ಟದ ಬಗ್ಗೆ ಮೇಲಧಿಕಾರಿಗಳಿಗೆ ಮಾಹಿತಿ ನೀಡಲಾಗುವುದು ಎಂದರು.

ಕೆಪಿಟಿಸಿಎಲ್ ಚಿತ್ರದುರ್ಗದ ಸಹಾಯಕ ಎಂಜಿನಿಯರ್ ಬಿ.ಹರೀಶ್. ತಳಕು ಉಪವಿಭಾಗೀಯ ಎಂಜಿನಿಯರ್ ಪ್ರಶಾಂತ್, ನಾಯಕನಹಟ್ಟಿ ಬೆಸ್ಕಾಂ ಸಿಬ್ಬಂದಿ ಪಾಲಯ್ಯ, ಸಣ್ಣಪಾಲಯ್ಯ, ಕುಮಾರ, ರಾಮಕೃಷ್ಣ, ಮನೋಹರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT