ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯೂರು | ಟ್ಯಾಂಕರ್‌ ನೀರಿಗೆ ಹಿಂದೆಂದೂ ಇಲ್ಲದ ಬೇಡಿಕೆ

ತೆಂಗು–ಅಡಿಕೆ ತೋಟ ಉಳಿಸಿಕೊಳ್ಳಲು ರೈತರ ಹರಸಾಹಸ
Published 6 ಮೇ 2024, 6:48 IST
Last Updated 6 ಮೇ 2024, 6:48 IST
ಅಕ್ಷರ ಗಾತ್ರ

ಹಿರಿಯೂರು: ತಾಲ್ಲೂಕಿನ ಜವನಗೊಂಡನಹಳ್ಳಿ ಹೋಬಳಿ ವ್ಯಾಪ್ತಿಯ ಹಳ್ಳಿಗಳಲ್ಲಿ ತೆಂಗು–ಅಡಿಕೆ ತೋಟಗಳನ್ನು ಉಳಿಸಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದು, ಟ್ಯಾಂಕರ್‌ಗಳಿಗೆ ಹಿಂದೆಂದೂ ಇಲ್ಲದಷ್ಟು ಬೇಡಿಕೆ ಕಂಡುಬಂದಿದೆ.

ಜವನಗೊಂಡನಹಳ್ಳಿ ಹೋಬಳಿಯ ಕರಿಯಾಲ, ಕಾಟನಾಯಕನಹಳ್ಳಿ, ದಿಂಡಾವರ, ಪಿಲ್ಲಾಲಿ, ಗೌಡ್ನಹಳ್ಳಿ, ರಂಗಾಪುರ, ಯಲ್ಲದಕೆರೆ, ಪಿಲ್ಲಾಜನಹಳ್ಳಿ ಮೊದಲಾದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ 2–3 ತಿಂಗಳಿಂದ ಟ್ಯಾಂಕರ್ ಮೂಲಕ ನೀರು ಉಣಿಸಿ ತೋಟಗಳನ್ನು ಉಳಿಸಿಕೊಳ್ಳುವ ವ್ಯರ್ಥ ಪ್ರಯತ್ನವನ್ನು ರೈತರು ಮುಂದುವರಿಸಿದ್ದಾರೆ.

2017ರಲ್ಲಿ ವಾಣಿವಿಲಾಸ ಜಲಾಶಯ ಡೆಡ್ ಸ್ಟೋರೇಜ್ ತಲುಪಿದ್ದ ಸಂದರ್ಭ ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿನ 17,000 ಎಕರೆಗೂ ಹೆಚ್ಚು ತೆಂಗು, ಅಡಿಕೆ ತೋಟಗಳು ಒಣಗಿ ಹೋಗಿದ್ದವು. 2018ರಿಂದ ಜಲಾಶಯಕ್ಕೆ ಅಲ್ಪಸ್ವಲ್ಪ  ಒಳಹರಿವು ಇದ್ದು, 2022ರಲ್ಲಿ ಜಲಾಶಯ ಕೋಡಿ ಬಿದ್ದಿತ್ತು. ಜಲಾಶಯ ತುಂಬಿದ್ದೇ ತಡ ರೈತರು ಅಡಿಕೆ ಸಸಿ ನಾಟಿಗೆ ಮುಂದಾದರು. 2018–19ರಲ್ಲಿ 4,434 ಹೆಕ್ಟೇರ್‌ನಷ್ಟಿದ್ದ ಅಡಿಕೆ ಬೆಳೆಯ ವಿಸ್ತೀರ್ಣ 2022–23ರ ವೇಳೆಗೆ 9,883 ಹೆಕ್ಟೇರ್‌ಗೆ ಹೆಚ್ಚಿತು. ವೇದಾವತಿ ನದಿಯ ದಡದಲ್ಲಿನ ಹಾಗೂ ವಾಣಿವಿಲಾಸ ನಾಲೆಗೆ ಹೊಂದಿಕೊಂಡಿರುವ ಗ್ರಾಮಗಳ ರೈತರ ತೋಟಗಳಿಗೆ ಸದ್ಯಕ್ಕೆ ನೀರಿನ ತೊಂದರೆ ಕಾಣಿಸಿಕೊಂಡಿಲ್ಲ. 2022ರ ಸೆಪ್ಟೆಂಬರ್ ತಿಂಗಳಲ್ಲಿ 135 ಅಡಿಯಷ್ಟಿದ್ದ ವಾಣಿವಿಲಾಸ ಜಲಾಶಯದ ನೀರು ಇಲ್ಲಿವರೆಗೆ 23 ಅಡಿಗೆ ತಲುಪಿದೆ. ಬರಗಾಲದ ಸ್ಥಿತಿ ಮುಂದುವರಿದಲ್ಲಿ ಡೆಡ್ ಸ್ಟೋರೇಜ್ ತಲುಪುವ ಭಯ ಅಚ್ಚುಕಟ್ಟು ರೈತರನ್ನು ಕಾಡುತ್ತಿದೆ.

ಕೊಳವೆಬಾವಿ ವಿಫಲ:

ಜವನಗೊಂಡನಹಳ್ಳಿ ಹೋಬಳಿ ಅಂತರ್ಜಲ ಮಟ್ಟ ಕುಸಿತದಲ್ಲಿ ಪ್ರಥಮ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಐಮಂಗಲ, ಕಸಬಾ ಹಾಗೂ ಧರ್ಮಪುರ ಹೋಬಳಿಗಳು ಬರುತ್ತವೆ. ಜವನಗೊಂಡನಹಳ್ಳಿ ಹೋಬಳಿಯಲ್ಲಿ 1,000 ಅಡಿವರೆಗೆ ಕೊಳವೆಬಾವಿ ಕೊರೆಯಿಸಿದರೂ ನೀರು ಸಿಗುತ್ತಿಲ್ಲ. ಅಲ್ಪಸ್ವಲ್ಪ ನೀರು ಸಿಕ್ಕರೂ ಒಂದೆರಡು ದಿನಕ್ಕೆ ನಿಂತು ಹೋಗುತ್ತಿದೆ.

‘₹ 35ರಿಂದ ₹ 40 ಕೊಟ್ಟು ಅಡಿಕೆ ಸಸಿ ಖರೀದಿಸಿ ನಾಟಿ ಮಾಡಲಾಗಿದೆ. ಐದು ವರ್ಷಗಳವರೆಗೆ ಬೆಳೆಸುವ ವೇಳೆಗೆ ಪ್ರತಿ ಎಕರೆಗೆ ಏನಿಲ್ಲವೆಂದರೂ ₹ 1ರಿಂದ ₹ 2 ಲಕ್ಷ ಖರ್ಚಾಗುತ್ತದೆ. 500 ಅಡಿ ಕೊಳವೆ ಬಾವಿ ಕೊರೆಸಲು ₹ 70,000ದಿಂದ ₹ 80,000 ಖರ್ಚಾಗುತ್ತದೆ. ಟ್ಯಾಂಕರ್ ಮೂಲಕ ನೀರುಣಿಸಿದರೂ ಬಿಸಿಲಿನ ಬೇಗೆಗೆ ಸುಳಿಗಳು ಒಣಗಿ ಇಳಿ ಬೀಳುತ್ತಿವೆ. ಭೂಮಿ ಕಾದ ಕಾವಲಿಯಂತಾಗುವ ಕಾರಣ ಟ್ಯಾಂಕರ್ ಮೂಲಕ ನೀರು ಹರಿಸಿದರೂ ಪ್ರಯೋಜನಕ್ಕೆ ಬರುತ್ತಿಲ್ಲ’ ಎಂದು ಬಗ್ಗನಡು ಗ್ರಾಮದ ರೈತ ಮಯೂರ ತಿಳಿಸಿದರು.

‘ರಾಗಿ–ಜೋಳ, ಹತ್ತಿ, ತರಕಾರಿ ಬೆಳೆಯಲು ಖರ್ಚು ಹೆಚ್ಚು. ಅಡಿಕೆಗೆ ಉತ್ತಮ ಧಾರಣೆ ಇದೆ ಎಂದು ತೋಟ ಮಾಡಲು ಮುಂದಾದೆವು. ಅಷ್ಟು ಇಷ್ಟು ಜೋಪಾನ ಮಾಡಿ ಉಳಿಸಿದ್ದ ಹಣವೆಲ್ಲ ಟ್ಯಾಂಕರ್ ನೀರಿಗೆ ಖರ್ಚಾಗಿದೆ. ಮೇ ತಿಂಗಳು ಆರಂಭವಾದರೂ ಮಳೆಯ ಸುಳಿವಿಲ್ಲ. ಈಗ ಸಾಲ ಮಾಡಿ ತೋಟ ಉಳಿಸಿಕೊಳ್ಳುವ ದುಸ್ಸಾಹಸದ ಬದಲು ಒಣಗಲು ಬಿಡುವುದೇ ಲೇಸು ಎಂದು ಹೃದಯ ಕಲ್ಲು ಮಾಡಿಕೊಂಡು ಸುಮ್ಮನಾಗಿದ್ದೇನೆ’ ಎಂದು ಕರಿಯಾಲದ ರಾಮಣ್ಣ ತಿಳಿಸಿದರು.

ವಾಣಿವಿಲಾಸ ಅಣೆಕಟ್ಟೆ ಹಾಗೂ ಗಾಯತ್ರಿ ಜಲಾಶಯದ ತಳಭಾಗದಲ್ಲಿ ಹಾಸುಬಂಡೆ ಇರುವ ಕಾರಣ ಅಣೆಕಟ್ಟೆಗಳು ತುಂಬಿದ್ದರೂ ಸುತ್ತಮುತ್ತ ಅಂತರ್ಜಲ ವೃದ್ಧಿಯಾಗುವುದಿಲ್ಲ ಎಂದು ಭೂಗರ್ಭ ಶಾಸ್ತ್ರಜ್ಞರು ಹೇಳುತ್ತಿದ್ದಾರೆ. ಹೀಗಾಗಿ ಅಣೆಕಟ್ಟೆಯ ನೀರನ್ನು ನದಿ ಅಥವಾ ಹಳ್ಳಗಳ ಮೂಲಕ ಹರಿಸಿದಲ್ಲಿ ಕೊಳವೆಬಾವಿಗಳಲ್ಲಿ ನೀರು ಕಾಣಿಸಿಕೊಳ್ಳುತ್ತದೆ ಎಂದು ರೈತರು ಅಭಿಪ್ರಾಯಪಟ್ಟಿದ್ದಾರೆ.

‘ಜವನಗೊಂಡನಹಳ್ಳಿ ಹೋಬಳಿಯ ವಡ್ಡನಹಳ್ಳಿ, ಬಗ್ಗನಡು, ಕಾಟನಾಯಕನಹಳ್ಳಿ, ಮಾಳಗೊಂಡನಹಳ್ಳಿ, ದಿಂಡಾವರ, ಗೌಡ್ನಹಳ್ಳಿ, ರಂಗಾಪುರ, ಪಿಲ್ಲಾಲಿ, ಮಾವಿನಮಡು ಗ್ರಾಮದ ಕೆರೆಗಳಿಗೆ ಬಗ್ಗನಡು ಸಮೀಪ ಹಾದು ಹೋಗಿರುವ ವಾಣಿವಿಲಾಸ ಬಲನಾಲೆಯ ಹತ್ತಿರ ಪಂಪ್ ಹೌಸ್ ನಿರ್ಮಿಸಿ ನೀರು ಪಂಪ್ ಮಾಡಿ ತುಂಬಿಸಿದಲ್ಲಿ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತದೆ. ಭದ್ರಾ ಮೇಲ್ದಂಡೆ ಯೋಜನೆ ಮೂಲಕ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಫಲಪ್ರದವಾಗುತ್ತದೆ ಎಂಬ ನಂಬಿಕೆ ಇಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಭದ್ರಾ ಯೋಜನೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿದ್ದು, ರೈತರ ಹಿತ ಕಾಯುವುದು ಯಾರಿಗೂ ಬೇಡವಾಗಿದೆ. ನಾವೇ ಬೀದಿಗಿಳಿದು ನಮ್ಮ ನೀರಿನ ಹಕ್ಕನ್ನು ಪಡೆಯಬೇಕು’ ಎಂದು ರೈತರು ಸಲಹೆ ನೀಡಿದ್ದಾರೆ.

ಎರಡು ಪಟ್ಟು ಹೆಚ್ಚು:

2017ರಲ್ಲಿ 17,000 ಎಕರೆ ಪ್ರದೇಶದಲ್ಲಿನ ತೋಟಗಳು ಒಣಗಿದ್ದರೆ, ಪ್ರಸ್ತುತ ಒಣಗಿರುವ ಅಡಿಕೆ ತೋಟದ ವಿಸ್ತೀರ್ಣ 25,000 ಎಕರೆಗಿಂತ ಹೆಚ್ಚು ಎಂದು ರೈತರು ಹೇಳುತ್ತಿದ್ದಾರೆ.

ನೂರಾರು ಎಕರೆಯಲ್ಲಿನ ಬಾಳೆ, ದಾಳಿಂಬೆ, ಪಪ್ಪಾಯ ತೋಟಗಳು ಒಣಗಿ ಹೋಗಿವೆ. ತೆಂಗಿನ ಮರಗಳು ಜೀವ ಹಿಡಿದುಕೊಂಡಿವೆಯಷ್ಟೇ. ಆರ್ಥಿಕ ಸ್ಥಿತಿ ಸುಧಾರಿಸಿಕೊಳ್ಳಲು ತೋಟ ಮಾಡಿ ಸಾಲದ ಸುಳಿಗೆ ರೈತರು ಸಿಲುಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದೂ ಅವರು ಸಂಕಷ್ಟ ತೋಡಿಕೊಂಡಿದ್ದಾರೆ.

ಮಯೂರ
ಮಯೂರ
ರಾಮಣ್ಣ
ರಾಮಣ್ಣ

ಟ್ಯಾಂಕರ್‌ ಮಾಫಿಯಾಕ್ಕೆ ಕಡಿವಾಣ ಹಾಕಿ ಗಾಯತ್ರಿ ಜಲಾಶಯದಿಂದ ನಿತ್ಯ 200ಕ್ಕೂ ಹೆಚ್ಚು ಟ್ಯಾಂಕರ್‌ಗಳಲ್ಲಿ ನೀರು ತುಂಬಿ ತೋಟಗಳಿಗೆ ಪೂರೈಕೆ ಮಾಡಲಾಗುತ್ತಿದೆ. ಪ್ರತಿ ಟ್ಯಾಂಕರ್‌ಗೆ ₹ 100 ದರ ವಿಧಿಸಲಾಗುತ್ತಿದೆ. ಆದರೆ ಟ್ಯಾಂಕರ್‌ಗಳ ಮಾಲೀಕರು ರೈತರಿಂದ ₹ 1200 ವಸೂಲಿ ಮಾಡುತ್ತಿದ್ದಾರೆ. ಈ ರೀತಿ ಟ್ಯಾಂಕರ್ ಮಾಫಿಯಾಕ್ಕೆ ಅವಕಾಶ ಕೊಡುವ ಬದಲು ಸುವರ್ಣಮುಖಿ ನದಿ ಹಳ್ಳಕ್ಕೆ ಗಾಯತ್ರಿ ಜಲಾಶಯದ ನೀರು ಹರಿಸಬೇಕು ಎಂದು ರಾಮಣ್ಣ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT